ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ದೌರ್ಜನ್ಯ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಡೆಸುತ್ತಿರುವ ತನಿಖೆಯ ಪ್ರಗತಿಯ ಕುರಿತು ಸಂತ್ರಸ್ತ ವೈದ್ಯೆಯ ತಾಯಿ ಹಾಗೂ ಬಿಜೆಪಿ ಶಾಸಕಿ ರತ್ನ ದೇಬ್‌ನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳು ಇನ್ನೂ ನಿಂತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಮತ್ತು ರಾಜ್ಯದಲ್ಲಿ ಪರಿವರ್ತನೆ ತರಲು ರಾಜಕೀಯವೇ ಸೂಕ್ತ ಮಾರ್ಗ ಎಂದು ನಿರ್ಧರಿಸಿದ್ದ ರತ್ನ ದೇಬ್‌ನಾಥ್ ಅವರು ಬಿಜೆಪಿ ಸೇರಿದ್ದರು. 2026ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ‘ಪಾನಿಹಾಟಿ’ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಆರ್‌ಜಿ ಕರ್ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಮರು ತನಿಖೆಗೆ ಬಂಗಾಳ ಸರ್ಕಾರ ಆದೇಶ
ಶಾಸಕಿಯಾದ ನಂತರವೂ ತಮ್ಮ ಮಗಳ ಪ್ರಕರಣದ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ರತ್ನ ಅವರು ಬೇಸರ ವ್ಯಕ್ತಪಡಿಸಿದ್ದಾರೆ. “ಆಡಳಿತ ಅಥವಾ ಸರ್ಕಾರದಲ್ಲಿ ಬದಲಾವಣೆಗಳಾಗಿದ್ದರೂ, ಅದೇ ಹಳೆಯ ವ್ಯಕ್ತಿಗಳು ಇಂದಿಗೂ ವೈದ್ಯಕೀಯ ವ್ಯವಸ್ಥೆಯಲ್ಲಿ ಮುಂದುವರಿದಿದ್ದಾರೆ. ವೈದ್ಯಕೀಯ ಕಾಲೇಜುಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗಿಲ್ಲ” ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ರತ್ನ ದೇಬ್‌ನಾಥ್ ಹೇಳಿದ್ದಾರೆ.
ತನಿಖೆಯನ್ನು ಪೂರ್ಣಗೊಳಿಸಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಸಿಬಿಐಗೆ ಸಾಧ್ಯವಾಗದಿದ್ದರೆ, ಅವರು ತನಿಖೆಯಿಂದ ಪಕ್ಕಕ್ಕೆ ಸರಿಯಲಿ ಎಂಬ ಭಾವನೆಯನ್ನೂ ಈ ಸಂದರ್ಭದಲ್ಲೇ ವ್ಯಕ್ತಪಡಿಸಿದ್ದಾರೆ.
ತಮ್ಮ ಮಗಳ ಕೊಲೆ ಪ್ರಕರಣದಲ್ಲಿ ಪೂರ್ಣ ಪ್ರಮಾಣದ ನ್ಯಾಯ ದೊರಕಿಸುವ ಕುರಿತು ಮತ್ತು ವೈದ್ಯಕೀಯ ಶಿಕ್ಷಣ, ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿಗಳ ಬಳಿ ನಿಯೋಗದ ಮೂಲಕ ಚರ್ಚಿಸುವುದಾಗಿ ರತ್ನ ದೇಬ್‌ನಾಥ್ ತಿಳಿಸಿದ್ದಾರೆ.




