ವಿಶ್ವವೇ ಒಂದು ಕುಟುಂಬವೆಂಬ ಬಸವಾದಿ ಶರಣರ ತತ್ವ ಪಾಲಿಸಿದರೆ ದ್ವೇಷ, ಹಿಂಸೆ ಹಾಗೂ ಕ್ರೌರ್ಯ ಕೊನೆಗೊಳ್ಳುತ್ತದೆ ಎಂದು ಡಾ.ವಿಜಯಶ್ರೀ ಬಶೆಟ್ಟಿ ಅಭಿಪ್ರಾಯಪಟ್ಟರು.
ವಚನಾಮೃತ ಕನ್ನಡ ಸಂಘದಿಂದ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ಕೃಷ್ಣ ದರ್ಶಿನಿ ಹೋಟೆಲ್‍ನ ಮಹಾಲಕ್ಷ್ಮಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಶರಣ ನಗೆಮಾರಿ ತಂದೆ ಹಾಗೂ ಕುಂಬಾರ ಗುಂಡಯ್ಯ ಅವರ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ʼಶರಣರ ತತ್ವಗಳಲ್ಲಿ ಮನುಕುಲ ಉದ್ಧಾರದ ಸೂತ್ರ ಅಡಗಿದೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಹಾಗೂ ಇತರ ಶರಣರು ಸರ್ವ ಸಮುದಾಯಕ್ಕೆ ಮಾನವೀಯ ಮೌಲ್ಯಗಳ ಅರಿವು ನೀಡಿದ್ದರುʼ ಎಂದು ಹೇಳಿದರು.
ʼನಗೆಮಾರಿ ತಂದೆ ಕುರಿತು ಉಪನ್ಯಾಸ ನೀಡಿದ ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಅವರು, ನಗೆಮಾರಿ ತಂದೆ ಅವರು ಶರಣರನ್ನು ನಗಿಸುವ ಕಾಯಕ ಮಾಡುತ್ತಿದ್ದರು. ಅವರ ಮಾತಿಗೆ ಅಲ್ಲಮಪ್ರಭುದೇವರು, ಬಸವಣ್ಣನವರು ಆದಿಯಾಗಿ ಎಲ್ಲ ಶರಣರು ನಕ್ಕು ನಲಿಯುತ್ತಿದ್ದರು. ನಗೆಮಾರಿ ತಂದೆ ಅವರು 111 ವಚನಗಳನ್ನು ರಚಿಸಿದ್ದಾರೆʼ ಎಂದು ಹೇಳಿದರು.
ಕುಂಬಾರ ಗುಂಡಯ್ಯ ಅವರ ಕುರಿತು ಉಪನ್ಯಾಸ ನೀಡಿದ ಶಿಕ್ಷಕಿ ಸ್ವರೂಪರಾಣಿ ನಾಗೂರೆ ಅವರು, ʼಕುಂಬಾರ ಗುಂಡಯ್ಯ ಭಲ್ಲುಂಕೆ(ಇಂದಿನ ಭಾಲ್ಕಿ) ಗ್ರಾಮದಲ್ಲಿ ಜನಿಸಿದ್ದರು. ಶರಣರ ವಿಚಾರದಂತೆ ಕುಂಬಾರಿಕೆ ಪವಿತ್ರ ಕಾಯಕವೆಂದು ಭಾವಿಸಿದ್ದರು. ದೇವರ ಧ್ಯಾನ ಮಾಡುತ್ತಾ ಮಣ್ಣು ಹದ ಮಾಡುತ್ತಾ ಮಡಿಕೆ ಕಾಯಕ ಮಾಡುತ್ತಿದ್ದರು. ಗುಂಡಯ್ಯನವರ ಯಾವುದೇ ವಚನ ಲಭ್ಯವಿಲ್ಲ. ಆದರೆ, ಶರಣರ ವಚನಗಳನ್ನು ಹಾಡುತ್ತಾ ಕಾಯಕದಲ್ಲಿ ನಿರತರಾಗುತ್ತಿದ್ದರು. ಗುಂಡಯ್ಯ ಅವರ ಪತ್ನಿ ಕೇತಲಾದೇವಿ ಬರೆದ ಎರಡು ವಚನಗಳು ದೊರೆತಿವೆʼ ಎಂದು ಹೇಳಿದರು.
ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಸಂಘವು ಬದುಕಿಗೆ ಮಾರ್ಗದರ್ಶಿಯಾದ ಬಸವಾದಿ ಶರಣರ ವಚನ ಹಾಗೂ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ. ಬರುವ ದಿನಗಳಲ್ಲಿ ಸಂಘದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿ ಬಳಕೆ : ಭೀಮಣ್ಣ ಮೇಟಿ
ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣಪತಿ ಸೋಲಪುರೆ, ಶಿಕ್ಷಕ ಪರಮೇಶ್ವರ ಭೂಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಪ್ರವೀಣ್ ನಾಡಗೀತೆ ನಡೆಸಿಕೊಟ್ಟರು. ರೇಣುಕಾ ಎನ್.ಬಿ. ಹಾಗೂ ಶ್ರೀಕಾಂತ ಬಿರಾದಾರ ಸುಶ್ರಾವ್ಯವಾಗಿ ವಚನ ಗಾಯನ ಹಾಡಿದರು. ಬಸವರಾಜ ಬಿರಾದಾರ ನಿರೂಪಿಸಿದರು. ಶಿಲ್ಪಾ ಮಜಗೆ ಸ್ವಾಗತಿಸಿದರು. ಶ್ರೀಕಾಂತ ಬಿರಾದಾರ ವಂದಿಸಿದರು.




