ಕಮಲನಗರ ತಾಲೂಕಿನ ಗ್ರಾಮವೊಂದರ ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿ, ತಪ್ಪಿತಸ್ಥ ಆರೋಪಿ ವಿರುದ್ಧ ಅಪಹರಣ, ಪೋಕ್ಸೊ ಹಾಗೂ ಕೊಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಪ್ರಗತಿಪರ ಮತ್ತು ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರು ಹುಮನಾಬಾದ್ ಡಿವೈಎಸ್ಪಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಹುಮನಾಬಾದ್ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮುಖಾಂತರ ತೆರಳಿದ ಮುಖಂಡರುಡಿವೈಎಸ್ಪಿ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಘೋಷಣೆ ಕೂಗಿದರು. ಬಳಿಕ ಗೃಹ ಸಚಿವ ಜಿ.ಪರಮೇಶ್ವರ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಡಿಸೈಎಸ್ಪಿ ಮಡೋಳಪ್ಪ ಪಿ.ಎಸ್. ಅವರಿಗೆ ಸಲ್ಲಿಸಿದರು.
ʼಕುಸ್ತಿ ಹಾಗೂ ಕಬ್ಬಡಿ ಕ್ರೀಡಾಪಟುವಾಗಿದ್ದ ಬಾಲಕಿಗೆ ತರಬೇತಿ ನೀಡುತ್ತೇನೆ ಎಂದು ಪೋಷಕರಿಗೆ ಪುಸಲಾಯಿಸಿ ಔರಾದ್ ತಾಲೂಕಿನ 35 ವರ್ಷದ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ 2 ವರ್ಷಗಳ ಕಾಲ ಜೀತದಾಳಾಗಿ ದುಡಿಸಿಕೊಂಡಿದ್ದಾನೆ. ಬಳಿಕ ತರಬೇತಿಯ 1.30 ಲಕ್ಷ ಹಣ ಕೊಡುವಂತೆ ಪೋಷಕರಿಗೆ ಬೆದರಿಕೆ ಹಾಕಿದ್ದಾನೆ. ಆತನ ಅಸಭ್ಯ ವರ್ತನೆಯಿಂದ ಗಾಬರಿಗೊಂಡ ಬಾಲಕಿ ಏಪ್ರಿಲ್ ತಿಂಗಳಲ್ಲಿ ಮನೆಗೆ ಮರಳಿದ್ದಳು. ಬಳಿಕ ಪೋಷಕರು ಆತನಿಗೆ 60 ಸಾವಿರ ತರಬೇತಿಯ ಹಣ ಕೊಟ್ಟಿದ್ದಾರೆ. ಆದರೂ, ಉಳಿದ ಹಣ ತರುವಂತೆ ಆರೋಪಿ ಬಾಲಕಿಗೆ ಕಿರುಕುಳ ನೀಡಿದ್ದಾನೆʼ ಎಂದು ಪ್ರತಿಭಟನಾಕಾರರು ದೂರಿದರು.
ʼಮೇ 8 ರಂದು ಬಾಲಕಿಯನ್ನು ಲೈಂಗಿಕ ದೌರ್ಜನ್ಯ ಎಸಗಿ ಕ್ರೂರವಾಗಿ ಮನಬಂದಂತೆ ಹಲ್ಲೆಗೈದು, ಹರಿತವಾದ ವಸ್ತುಗಳಿಂದ ಬಾಲಕಿಗೆ ಚುಚ್ಚಿ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಬಾಲಕಿ ಪೋಷಕರು ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ ಎಂದು ಆರೋಪಿ ವಿರುದ್ಧ ಹೇಳಿಕೆ ನೀಡಿದರೂ ಪ್ರಕರಣವನ್ನು ಮುಚ್ಚಿಹಾಕಲು ಬಾಲಕಿ ಮನೆ ಮೇಲಿಂದ ಬಿದ್ದು ಆಕಸ್ಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುಡಿಆರ್ ವರದಿ ಸಿದ್ಧಪಡಿಸಿ, ಬಾಲಕಿಯ ತಾಯಿಯಿಂದ ಒತ್ತಾಯಪೂರ್ವಕವಾಗಿ ಸಹಿ ಪಡೆಯಲಾಗಿದೆ. ಆರೋಪಿ ಹಾಗೂ ಬಾಲಕಿಯ ಪೋಷಕರೊಂದಿಗೆ ಎಸ್ಪಿ ಪ್ರದೀಪ ಗುಂಟಿ ಅವರು ರಾಜಿ ಸಂಧಾನಕ್ಕೆ ನಡೆಸಿದರು. ಅದು ಆಗದೇ ಇರುವುದರಿಂದ ಮೇ 13ರಂದು ಎಫ್‌ಐಆರ್ ದಾಖಲಿಸಲಾಗಿದೆ. ಆದರೂ ಅದರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆʼ ಎಂದು ಆರೋಪಿಸಲಾಗಿದೆ.
ʼಅಪ್ರಾಪ್ತ ದಲಿತ ಬಾಲಕಿಯ ಕೊಲೆಗಡುಕನ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರ ಮೇಲೆ ಪ್ರಕರಣ ದಾಖಲಿಸಿ, ಅಮಾನತುಗೊಳಿಸಬೇಕು. ಕೊಲೆ ಆರೋಪಿ ವಿರುದ್ಧ ಅಪಹರಣ, ಪೋಕ್ಸೊ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು. ಈ ಪ್ರಕರಣವನ್ನು ತನಿಖೆಗೆ ಎಸ್‌ಐಟಿ ತಂಡ ರಚಿಸಬೇಕು. ಬಾಲಕಿಯ ಶವ ಮರುಪರೀಕ್ಷೆ ಆದೇಶಿಸಬೇಕು. ಮೃತ ಬಾಲಕಿಯ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕುʼ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಎಸ್‌ಐಆರ್, ಇವಿಎಂಗೆ ವಿರೋಧ : ಬಾರದ ಪ್ರತಿಕ್ರಿಯೆ; ಮುಂದುವರೆದ ಏಕಾಂಗಿ ಉಪವಾಸ ಸತ್ಯಾಗ್ರಹ
ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಮುಖರಾದ ಅಂಕುಶ ಗೋಖಲೆ, ಶಿವರಾಜ್ ಚಿನಕೇರಿ, ಗಜೇಂದ್ರ ಕನಕಟ್ಟಾಕರ್, ಗೌತಮ್ ಚೌವ್ಹಾಣ್, ಗಣಪತಿ ಅಷ್ಟೂರೆ, ದಿಲೀಪಕುಮಾರ್ ಮರಪಳ್ಳಿ, ಜಮೀರ್ ಖಾನ್, ರಾಜಕುಮಾರ್ ಮೂಲಭಾರತಿ, ಕಪಿಲ್ ಗೋಡಬೋಲೆ, ವಿಷ್ಣುವರ್ಧನ್ ವಾಲ್ಗೊಡ್ಡಿ, ಶಶಿಕಾಂತ ಡಾಂಗೆ, ಹರ್ಷಿತ್ ದಾಂಡೆಕರ್, ರಾಹುಲ ಖಂದಾರೆ ಹಾಗೂ ರಾಜಕುಮಾರ್ ಶಿಂಧೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.




