ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಮೇ 30ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಯೋಜಕ ಓಂಪ್ರಕಾಶ ರೊಟ್ಟೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತ ಸಮುದಾಯದ ವಿವಿಧ ಸಂಘಟನೆಗಳು, ದಲಿತ ಸಂಘಟನೆಗಳು, ಹಿಂದುಳಿದ ವರ್ಗಗಳ ಮುಖಂಡರು ಸೇರಿದಂತೆ ಸುಮಾರು 39ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ. ಪ್ರತಿಭಟನೆ ಬಳಿಕ ಬೀದರ್ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.
ʼರಾಜ್ಯವ್ಯಾಪಿ ʼಕರ್ನಾಟಕ ಪ್ರತಿರೋಧʼ ಪ್ರತಿಭಟನೆಗೆ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಹಂತದ ಪ್ರತಿಭಟನೆ ನಡೆಯಲಿದೆ. ಇದು ಬಿಹಾರವೂ ಅಲ್ಲ, ಬಂಗಾಳವೂ ಅಲ್ಲ, ಬಸವಣ್ಣನವರ ಕರ್ನಾಟಕ ಎಂಬ ಸಂದೇಶವನ್ನು ಜನರಿಗೆ ರವಾನಿಸಲಾಗುವುದುʼ ಎಂದು ಹೇಳಿದರು.
“ಕೇಂದ್ರ ಚುನಾವಣಾ ಆಯೋಗವು ಎಸ್‌ಐಆರ್ ಹೆಸರಿನಲ್ಲಿ ಕೋಟ್ಯಾಂತರ ಜನರ ಮತದಾನದ ಹಕ್ಕು ಕಸಿಯುವ ಕೆಲಸಕ್ಕೆ ಮುಂದಾಗಿದೆ, ಈಗಾಗಲೇ 13 ರಾಜ್ಯಗಳಲ್ಲಿ ನಡೆದ ಪ್ರಕ್ರಿಯೆಯಿಂದ ಸುಮಾರು 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆಗೆ ವಿರೋಧವಿಲ್ಲ. ಆದರೆ ಪ್ರತಿಯೊಬ್ಬರನ್ನೂ ಅನುಮಾನಾಸ್ಪದರಂತೆ ಕಾಣುವ ಹಾಗೂ ಸಣ್ಣಪುಟ್ಟ ಕಾರಣಗಳನ್ನು ಹೇಳಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ಟೀಕಿಸಿದರು.
‘ಜನವಿರೋಧಿ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು, “ಲಾಜಿಕಲ್ ಡಿಸ್ಕ್ರಿಪೆನ್ಸಿ” ಸಾಫ್ಟ್‌ವೇರ್ ಬಳಕೆಯನ್ನು ನಿಷೇಧಿಸಬೇಕು, ಮತದಾರರ ಪಟ್ಟಿಯನ್ನು ಪಾರದರ್ಶಕ ಹಾಗೂ ಮೆಷಿನ್-ರೀಡಬಲ್ ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯ ಮಾಡಬೇಕು, ಕರಡು ಪಟ್ಟಿಗೆ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳ ಮೂಲಕ ಪರಿಶೀಲನೆ ನಡೆಸಬೇಕು, ದಾಖಲೆ ಸಲ್ಲಿಕೆ ಹಾಗೂ ಮೇಲ್ಮನವಿಗೆ ಕನಿಷ್ಠ ಆರು ತಿಂಗಳ ಅವಧಿ ನೀಡಬೇಕು ಮತ್ತು ಅರ್ಹ ಮತದಾರರಿಗೆ “ಸ್ಮಾರ್ಟ್ ಕಾರ್ಡ್” ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಎದ್ದೇಳು ಕರ್ನಾಟಕ’ ಸಂಘಟನೆಯ ಸಲಹಾ ಮಂಡಳಿ ಸದಸ್ಯ ಮಹಮ್ಮದ್ ನಿಜಾಮುದ್ದಿನ್ ಮಾತನಾಡಿ, ‘ಬಿಹಾರದಲ್ಲಿ ದಾಖಲೆಗಳಿದ್ದರೂ “ಲಾಜಿಕಲ್ ಡಿಸ್ಕ್ರಿಪೆನ್ಸಿ” ಹೆಸರಿನಲ್ಲಿ ಸಾವಿರಾರು ಜನರಿಗೆ ಮತದಾನದ ಹಕ್ಕು ನಿರಾಕರಿಸಲಾಗಿದೆ. ವಿವಾಹಿತ ಮಹಿಳೆಯರು, ಅಲೆಮಾರಿ ಸಮುದಾಯಗಳು, ಆದಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರು ಈ ಪ್ರಕ್ರಿಯೆಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.
ಮುಖಂಡ ಪ್ರೊ.ವಿಠಲದಾಸ ಪ್ಯಾಗೆ ಮಾತನಾಡಿ, ʼಎಸ್‌ಐಆರ್ ಪ್ರಕ್ರಿಯೆಯ ಉದ್ದೇಶ ನುಸುಳುಕೋರರನ್ನು ಪತ್ತೆಹಚ್ಚುವುದು ಅಲ್ಲ, ವಿರೋಧ ಪಕ್ಷಗಳಿಗೆ ಬೆಂಬಲ ನೀಡುವ ಸಮುದಾಯಗಳ ಮತಗಳನ್ನು ಕಡಿತಗೊಳಿಸುವುದಾಗಿದೆʼ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ದೆ ಮಾತನಾಡಿ, ʼಕರ್ನಾಟಕ ಪ್ರತಿರೋಧ ಹೋರಾಟದ ಮೂಲಕ ಜನವಿರೋಧಿ ನೀತಿಗಳನ್ನು ಕರ್ನಾಟಕ ಒಪ್ಪುವುದಿಲ್ಲ ಎಂಬ ಸಂದೇಶ ನೀಡಲಾಗುವುದು ಎಂದರು. ಸಾಹಿತಿಗಳು, ಚಿಂತಕರು, ಕಲಾವಿದರು ಹಾಗೂ ಜಾತ್ಯಾತೀತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆʼ ಎಂದು ಹೇಳಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಂಬೇಡ್ಕರ್) ರಾಜ್ಯ ಸಂಯೋಜಕ ಮಹೇಶ ಗೋರನಾಳಕರ್ ಮಾತನಾಡಿ, “ಕರ್ನಾಟಕ ಪ್ರತಿರೋಧ”ವು ಮತದಾನದ ಹಕ್ಕು ಹಾಗೂ ಬದುಕುವ ಹಕ್ಕು ರಕ್ಷಿಸುವ ಪ್ರಜಾತಾಂತ್ರಿಕ ಹೋರಾಟವಾಗಿದ್ದು, ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ : ಬೀದರ್ | ತೈಲ, ರಸಗೊಬ್ಬರ ದರ ಏರಿಕೆಯಿಂದ ರೈತರಿಗೆ ಸಂಕಷ್ಟ
ಈ ಸಂದರ್ಭದಲ್ಲಿ ಪ್ರಮುಖರಾದ ಬಸವಕುಮಾರ ಪಾಟೀಲ್, ಅಬ್ದುಲ್ ಮನ್ನಾನ್ ಸೇಠ್, ಹಣಮಂತ ಮಟ್ಟೆ, ಸಿದ್ದಪ್ಪಾ ಫುಲಾರಿ, ಮೊಹಮ್ಮದ್ ಮೊಸೀನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.




