ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರದ (ಕೆಕೆಆರ್‌ಡಿಬಿ) ₹13 ಕೋಟಿ ಆರ್ಥಿಕ ಬೆಂಬಲದಿಂದ ಪುನಾರಂಭಗೊಂಡಿರುವ ಬೀದರ್ -ಬೆಂಗಳೂರು ನಾಗರಿಕ ವಿಮಾನಯಾನ ಸೇವೆಯನ್ನು ಮುಂದುವರಿಸುವಂತೆ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಬೀದರ್ ನಗರದ ಝೀರಾ ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿರುವ 2 ದಿನಗಳ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ʼಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ನೀಡುತ್ತಿದ್ದ ಸಬ್ಸಿಡಿ ನಿಲ್ಲಿಸಿದ ಪರಿಣಾಮ ಸ್ಥಗಿತವಾಗಿದ್ದ ವಿಮಾನ ಯಾನ ಸೇವೆಗೆ ಕಳೆದ ವರ್ಷ ಏ.16ರಂದು ನೀವೇ ಮರು ಚಾಲನೆ ನೀಡಿದ್ದಿರಿ. ಈಗ ಅದು ನಿರಂತರ ಸೇವೆಯಾಗಿ ಮುಂದುವರಿಸಿ ಎಂದು ಜಿಲ್ಲೆಯ ಜನತೆಯ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ʼಶತಮಾನಗಳ ಶಾಪದಿಂದ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಮತ್ತು ಬೀದರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಬೆಂಬಲ ಅಭೂತಪೂರ್ವ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಾರ್ಷಿಕ ₹5 ಸಾವಿರ ಕೋಟಿ ನೀಡುವುದಾಗಿ ಪಕ್ಷ ನೀಡಿದ್ದ ಭರವಸೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ. ಈ ಪೈಕಿ ಕಳೆದ 3 ವರ್ಷದಲ್ಲಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ₹8000 ಕೋಟಿ ಲಭ್ಯವಾಗಿದೆʼ ಎಂದರು.
ʼಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟ ಬಸವಕಲ್ಯಾಣದಲ್ಲಿ ಅತ್ಯಾಧುನಿಕ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂಬ ಕೋರಿದಾಗ, ಹಿರಿಯ ಚಿಂತಕ ಗೊ.ರು.ಚನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಬಜೆಟ್ ನಲ್ಲಿ ಘೋಷಣೆ ಮಾಡಿದರು. ಅನುಭವ ಮಂಟಪ ಕಾಮಗಾರಿಯನ್ನು ಮುಂದಿನ ವರ್ಷದೊಳಗೆ ಪೂರ್ಣಗೊಳಿಸಿ ಸಿಎಂ ಸಿದ್ದರಾಮಯ್ಯ ಅವರಿಂದಲೇ ಲೋಕಾರ್ಪಣೆಗೊಳಿಸಲು ಸರ್ಕಾರ ಸಂಕಲ್ಪಿಸಿದ್ದು, 2023ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಒಟ್ಟು ₹280 ಕೋಟಿ ಅನುದಾನ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆʼ ಎಂದರು.
ಇದನ್ನೂ ಓದಿ : ಬೀದರ್ | ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿ: ಸಿಎಂ ಸಿದ್ದರಾಮಯ್ಯ
ʼಬಸವಕಲ್ಯಾಣದಲ್ಲಿ ಅನುಭವ ಮಂಟಪದ ಶೇ 70ರಷ್ಟು ಕಾಮಗಾರಿ ಮುಗಿದಿದ್ದು, ಉಳಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಅನುಭವ ಮಂಟಪದಲ್ಲಿ ವರ್ಣಭೇದ, ಲಿಂಗಭೇದವಿಲ್ಲದ ಸಮಾಜಕ್ಕಾಗಿ ಶ್ರಮಿಸಿದ 770 ಅಮರ ಗಣಂಗಳ ಹೆಸರಲ್ಲಿ ಕಂಬಗಳನ್ನು ನಿರ್ಮಿಸಿ ಅದರಲ್ಲಿ ಅವರ ಚಿತ್ರ ಮತ್ತು ವಚನಗಳನ್ನು ಕೆತ್ತಿಸಲಾಗುತ್ತಿದೆ. ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆ ಮಾಡುವ ವಿಧಾನ ಮತ್ತು ಅದರ ಶಕ್ತಿಯ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯೂ ಇರುವ ಆಧುನಿಕ ಅನುಭವ ಮಂಟಪ ಜಗತ್ತಿನ ಆಕರ್ಷಕ ಮತ್ತು ಪ್ರಮುಖ ಆಧ್ಯಾತ್ಮಿಕ ತಾಣವಾಗಿ ಹೊರಹೊಮ್ಮಲಿದೆʼ ಎಂದು ಹೇಳಿದರು.





