ಮಳೆ ಕೊರತೆಯಿಂದ ಬೆಳೆ ಬಾಡುತ್ತಿರುವುದನ್ನು ಕಂಡು ನಿರಾಸೆಗೊಂಡ ರೈತರೊಬ್ಬರು, ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಸೋಯಾಬೀನ್ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿರುವ ಘಟನೆ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.
ಭಾಲ್ಕಿ ತಾಲೂಕಿನ ಕಾಸರತೂಗಾಂವ್ ಗ್ರಾಮದ ರೈತ ದಿಗಂಬರ ಬಿರಾದರ್ ಅವರು ತಮ್ಮ ಸ್ವಂತಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ಸೋಯಾಬೀನ್, ಹೆಸರು ಹಾಗೂ ಉದ್ದು ಬೆಳೆದಿದ್ದರು. ಆದರೆ, ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಬೆಳೆ ದಿನದಿಂದ ದಿನಕ್ಕೆ ಬಾಡತೊಡಗಿದೆ. ಇದರಿಂದ ಬೇಸರಗೊಂಡ ಅವರು ಮೂರು ಎಕರೆ ಪ್ರದೇಶದಲ್ಲಿನ ಸೋಯಾಬೀನ್ ಬೆಳೆಯನ್ನು ಟ್ರ್ಯಾಕ್ಟರ್ ಹರಿಸುವ ಮೂಲಕ ನಾಶಪಡಿಸಿದ್ದಾರೆ.
ಈ ಬಗ್ಗೆ ರೈತ ದಿಗಂಬರ ಬಿರಾದರ್ ʼಈದಿನʼ ಜೊತೆ ಮಾತನಾಡಿ, “ಕೃಷಿಗೆ ಬೀಜ, ಗೊಬ್ಬರ, ಕೀಟನಾಶಕ, ಔಷಧಿ ಹಾಗೂ ಕೂಲಿ ಸೇರಿ ಇಲ್ಲಿಯವರೆಗೆ ₹50 ರಿಂದ ₹60 ಸಾವಿರ ಹಣ ವ್ಯಯಿಸಿದ್ದೇನೆ. ಮಳೆ ಕೈಕೊಟ್ಟ ಪರಿಣಾಮ ಬೆಳೆ ಒಣಗುತ್ತಿದ್ದು ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಮಾಂಜ್ರಾ ನದಿ ಪ್ರವಾಹದಿಂದ ಸಂಪೂರ್ಣ ಬೆಳೆ ನಾಶವಾಗಿತ್ತು. ಈ ಬಾರಿ ಅನಾವೃಷ್ಟಿಯಿಂದ ಬೆಳೆ ಒಣಗಿ ಹಾಳಾಗಿದೆ. ಸಾಲಶೂಲ ಮಾಡಿ ಬಿತ್ತನೆ ಮಾಡಿದರೂ ಮಳೆ ಅಭಾವದಿಂದ ನಿರೀಕ್ಷೆಯಂತೆ ಫಸಲು ಬಂದಿಲ್ಲ. ಇತ್ತ ಸಾಲಗಾರರ ಕಾಟದಿಂದ ಬೇಸರಗೊಂಡು ಈ ನಿರ್ಧಾರಕ್ಕೆ ಬಂದಿದ್ದೇನೆ. ಇನ್ನೆರಡು ಎಕರೆಯಲ್ಲಿ ಇರುವ ಸೋಯಾ ಬೆಳೆಯೂ ನಾಶಪಡಿಸುವೆ ಎಂದು ಹೇಳಿದರು.
ಇದನ್ನೂ ಓದಿ : ಹುಲಸೂರ ತಾಲೂಕು ಬರ ಘೋಷಣೆಗೆ ಆಗ್ರಹ : 5ನೇ ದಿನ ಪೂರೈಸಿದ ಧರಣಿ ಸತ್ಯಾಗ್ರಹ
ಮಳೆ ಕೊರತೆ ಹಾಗೂ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಧಾವಿಸಿ, ತಕ್ಷಣ ಪರಿಹಾರ ಒದಗಿಸಬೇಕು. ರೈತರು ಶ್ರಮಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಸಿಗುವಂತೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಭೂಮಿಗೆ ಹಾಕಿದ ಬೀಜ, ಗೊಬ್ಬರ, ಔಷಧಿ ಹಾಗೂ ಕೂಲಿ ಸೇರಿದಂತೆ ಕೃಷಿಗೆ ಹಾಕಿದ ಬಂಡವಾಳವೂ ಮರಳಿ ಬಾರದಿದ್ದರೆ ರೈತರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.





