ಮತದಾರರ ಪಟ್ಟಿಯಿಂದ ಹೊರಹಾಕುವ ಅವೈಜ್ಞಾನಿಕ, ಅಪ್ರಜಾಸತ್ತಾತ್ಮಕ ಪ್ರಕ್ರಿಯೆಯಾದ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಹಾಗೂ ಇವಿಎಂ ಸಂಪೂರ್ಣ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಸಿಂಗ್ ಠಾಕೂರ್ ಅವರು ಏಕಾಂಗಿಯಾಗಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶನಿವಾರ (ಮೇ 16) 14ನೇ ದಿನ ಪೂರೈಸಿದೆ.
“ವೋಟ್ ಸತ್ಯಾಗ್ರಹ” ಹೆಸರಿಲ್ಲಿ ನಡೆಯುತ್ತಿರುವ ಪ್ರಸ್ತಾಪಿಸಿರುವ ಗಂಭೀರ ವಿಷಯಗಳು ಹಾಗೂ ಶಾಂತಿಯುತ ಸತ್ಯಾಗ್ರಹದ ಕುರಿತು ಭಾರತದ ರಾಷ್ಟ್ರಪತಿಗಳಿಗೆ ಜಿಲ್ಲಾಡಳಿತದ ಮುಖಾಂತರ ಹಕ್ಕೊತ್ತಾಯ ಪತ್ರವನ್ನು ರವಾನಿಸಲಾಗಿದೆ. ಆದರೆ, 14 ದಿನ ಕಳೆದರೂ ರಾಷ್ಟ್ರಪತಿಗಳಿಂದ ಯಾವುದೇ ಉತ್ತರ ದೊರಕದಿರುವ ಹಿನ್ನೆಲೆಯಲ್ಲಿ ದೇಶದ ಅತ್ಯುನ್ನತ ಸಂವಿಧಾನಾತ್ಮಕ ಕಚೇರಿಯಿಂದ ಅಧಿಕೃತ ಪ್ರತಿಕ್ರಿಯೆ ದೊರಕುವವರೆಗೆ ನನ್ನ ಉಪವಾಸ ಸತ್ಯಾಗ್ರಹವನ್ನು ಅನಿರ್ದಿಷ್ಟಾವಧಿ ಮುಂದುವರಿಸಲು ನಾನು ನಿರ್ಧರಿಸಿದ್ದೇನೆʼ ಎಂದು ಶನಿವಾರ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಭಾರತದ ರಾಷ್ಟ್ರಪತಿಗಳ ಹೆಸರಿಗೆ ಬರೆದ ಮನವಿಯನ್ನು ಗ್ರೇಡ್-2 ತಹಸೀಲ್ದಾರ್ ಸಂಗಯ್ಯ ಸ್ವಾಮಿ ಅವರಿಗೆ ಶನಿವಾರ ಸಲ್ಲಿಸಿದ್ದಾರೆ. ಈ ಹಿಂದೆ 21 ದಿನಗಳವರೆಗೆ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತೇನೆಂದು ತಿಳಿಸಿದ್ದೇನೆ, ರಾಷ್ಟ್ರಪತಿಗಳ ಕಚೇರಿಯಿಂದ ನನ್ನ ಮನವಿಗೆ ಪ್ರತಿಕ್ರಿಯೆ ಬಾರದಕ್ಕೆ ನನ್ನ ಹೋರಾಟ ನಿರಂತರವಾಗಿ ಮುಂದುವರೆಯಲಿದೆʼ ಎಂದರು.
“ʼವೋಟ್ ಸತ್ಯಾಗ್ರಹʼ ಎಂಬ ಹೆಸರಿನಲ್ಲಿ ಔರಾದ ತಾಲ್ಲೂಕು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಶಾಂತಿಯುತ, ಅಹಿಂಸಾತ್ಮಕ ಹಾಗೂ ಗಾಂಧೀವಾದದ ಸತ್ಯಾಗ್ರಹದ ರೂಪದಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿರುವುದಾಗಿ ಹಿಂದೆಯೇ ರಾಷ್ಟ್ರಪತಿ ಕಚೇರಿಗೆ ಅಧಿಕೃತ ನೋಟಿಸ್ ಸಲ್ಲಿಸಿದ್ದೇನೆ. ಈ ಸತ್ಯಾಗ್ರಹವನ್ನು ಚುನಾವಣಾ ಪಾರದರ್ಶಕತೆ, ಸಂವಿಧಾನಿಕ ಸಂಸ್ಥೆಗಳ ಜವಾಬ್ದಾರಿತ್ವ, ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಇಲೆಕ್ಟ್ರಾನಿಕ್ ವೋಟಿಂಗ್ ಮಷೀನ್‌ಗಳ (ಇವಿಎಂ) ಬದಲು ಸಂಪ್ರದಾಯಬದ್ಧ ಮತಪತ್ರ (ಬ್ಯಾಲೆಟ್ ಪತ್ರ) ಮತದಾನ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸುವ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರಾರಂಭಿಸಲಾಗಿದೆʼ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ʼಈದಿನʼದ 5 ಸಣ್ಣ ಸುದ್ದಿಗಳು ಓದಿರಿ
ʼನನ್ನ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹದ 14ನೇ ದಿನ ಪೂರೈಸಿದೆ. ಸತ್ಯಾಗ್ರಹ ಆರಂಭವಾದ ದಿನದಿಂದ ನಾನು ಕೇವಲ ನೀರು ಸೇವಿಸಿ ಸತ್ಯಾಗ್ರಹ ಮುಂದುವರೆಸಿದ್ದೇನೆ. ಬಿಸಿಲು, ಮಳೆ, ಗಾಳಿ ಎನ್ನದೆ ಧರಣಿ ಸ್ಥಳದಲ್ಲಿಯೇ ವಾಸ್ತವ್ಯ ಮಾಡುತ್ತಿದ್ದೇನೆ. ಯಾವುದೇ ಆಹಾರ ಸೇವಿಸದೇ ಶಾಂತಿಯುತ ಸಂವಿಧಾನಾತ್ಮಕ ಹೋರಾಟ ಮುಂದುವರಿಸುತ್ತಿದ್ದೇನೆʼ ಎಂದರು.
ʼಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ದೇಶದ ಅತ್ಯುನ್ನತ ಕಚೇರಿಯಿಂದ ಪ್ರತಿಕ್ರಿಯೆ ಪಡೆಯುವುದು ನನ್ನ ಸಂವಿಧಾನಾತ್ಮಕ ಮತ್ತು ಪ್ರಜಾಪ್ರಭುತ್ವ ಹಕ್ಕಾಗಿದೆ, ವಿಶೇಷವಾಗಿ ದೇಶದ ಪ್ರಜಾಪ್ರಭುತ್ವದ ಅಖಂಡತೆ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ನಾನು ಉಲ್ಲೇಖಿಸಿದ ವಿಷಯಗಳ ಕುರಿತು ತಕ್ಷಣ ಗಮನ ಹರಿಸಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಬದ್ಧನಾದ ಸಾಮಾನ್ಯ ನಾಗರಿಕನ ಧ್ವನಿಯನ್ನು ನಿರ್ಲಕ್ಷಿಸದಂತೆ ರಾಷ್ಟ್ರಪತಿ ಕಚೇರಿ ಕ್ರಮ ಕೈಗೊಳ್ಳಬೇಕುʼ ಎಂದು ಅವರು ವಿನಂತಿಸಿದ್ದಾರೆ.
ವಿವಿಧ ಸಂಘಟನೆಗಳು ಬೆಂಬಲ :
ಔರಾದ್ ಪಟ್ಟಣದ ನಿವಾಸಿಯಾದ ಗೋಪಾಲ್ ಸಿಂಗ್ ಠಾಕೂರ್ ಅವರು ಮೇ 3ರಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಚಿಂತಕರು ಭೇಟಿ ನೀಡಿ ʼನಾವು ನಿಮ್ಮೊಂದಿಗೆ ಇದ್ದೇವೆʼ ಎಂದು ಧೈರ್ಯ ತುಂಬಿದ್ದಾರೆ.

ಬೀದರ್ ಜಿಲ್ಲಾ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ಅಬ್ದುಲ್ ಮನ್ನಾನ್ ಸೇಠ್, ನಿಜಾಮೋದ್ದಿನ್, ಜಗದೀಶ್ವರ ಬಿರಾದರ್, ಓಂಪ್ರಕಾಶ ರೊಟ್ಟೆ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ, ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಹಾಗೂ ಸಾಮಾಜಿಕ ಚಿಂತಕರಾದ ಸುಧಾಕರ ಕೊಳ್ಳೂರ, ರಾಹುಲ್ ಖಂದಾರೆ, ಸುಭಾಷ ಲಾಧಾ, ಬಂಟಿ ದರ್ಬಾರೆ, ರಾಮಣ್ಣಾ ಒಡೆಯಾರ್, ಸಾಯಿ ಸಿಂಧೆ, ಸುನೀಲ್ ಮಿತ್ರಾ ಸೇರಿದಂತೆ ಅನೇಕರು ಭೇಟಿ ನೀಡಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದಾರೆ.




