ಜನಸಂಖ್ಯೆ ಕುಸಿತ ಕಾಣುತ್ತಿರುವ ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿಸುವ ಕ್ರಮಕೈಗೊಳ್ಳಲು ಮುಂದಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, “ಮೂರನೇ ಮಗುವಿಗೆ ಜನನ ನೀಡಿದವರಿಗೆ 30,000 ರೂ. ಪ್ರೋತ್ಸಾಹ ಧನ, ನಾಲ್ಕನೇ ಮಗುವಿನ ಜನನ ನೀಡಿದವರಿಗೆ 40,000 ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಗುವುದು” ಎಂದು ಘೋಷಿಸಿದ್ದಾರೆ.
ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ನಾಯ್ಡು, “ಜನನ ಪ್ರಮಾಣವನ್ನು ಹೆಚ್ಚಿಸಲು ಸಮಾಜ ಒಟ್ಟಾಗಿ ಕೆಲಸ ಮಾಡುವ ಸಮಯ ಈಗ ಬಂದಿದೆ. ಸರ್ಕಾರವು ಒಂದು ತಿಂಗಳೊಳಗೆ ಹೆಚ್ಚಿನ ವಿವರಗಳನ್ನು ಪ್ರಕಟಿಸಲಿದೆ. ಇದು ಸರಿಯಾದ ನಿರ್ಧಾರವಲ್ಲವೇ” ಎಂದು ಸಭಿಕರನ್ನು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಮೂರನೇ ಮಗುವಿಗೆ ಜನ್ಮ ನೀಡಿದರೆ 50,000 ರೂ., ಗಂಡು ಮಗು ಜನಿಸಿದರೆ ಹಸು ನೀಡುತ್ತೇವೆ: ಆಂಧ್ರಪ್ರದೇಶ ಸಂಸದ ಘೋಷಣೆ
“ಕೆಲವು ದಂಪತಿಗಳು ತಮ್ಮ ಆದಾಯ ಹೆಚ್ಚಾದಂತೆ ಕೇವಲ ಒಂದು ಮಗುವಿಗೆ ಜನನ ನೀಡಲು ನಿರ್ಧರಿಸುತ್ತಾರೆ, ಆದರೆ ಇತರರು ತಮ್ಮ ಮೊದಲ ಮಗು ಗಂಡಲ್ಲದಿದ್ದರೆ ಮಾತ್ರ ಎರಡನೇ ಮಗುವಿಗೆ ಜನನ ನೀಡುವ ನಿರ್ಧಾರ ಮಾಡುತ್ತಾರೆ. ಜನರ ಈ ನಿರ್ಧಾರದಿಂದಾಗಿ ರಾಜ್ಯದ ಜನಸಂಖ್ಯಾ ಬೆಳವಣಿಗೆಯ ದರ ಕಡಿಮೆಯಾಗುತ್ತಿದೆ. ಒಟ್ಟು ಫಲವತ್ತತೆ ದರ (ಟಿಎಫ್‌ಆರ್) 2.1 ಅನ್ನು ಕಾಯ್ದುಕೊಳ್ಳುವುದು ಮುಖ್ಯ” ಎಂದು ಆಂಧ್ರ ಸಿಎಂ ಈ ಹಿಂದೆಯೂ ಹೇಳಿದ್ದಾರೆ.
ಇನ್ನು ಮಾರ್ಚ್ 5ರಂದು ಎರಡನೇ ಮಗುವಿಗೆ ಜನನ ನೀಡಿದರೆ 25,000 ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ಘೋಷಿಸಿತ್ತು. ಅದಾದ ಬಳಿಕ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಪಿಟಿಐಗೆ ಪ್ರತಿಕ್ರಿಯಿಸಿ ಸರ್ಕಾರ ಮೂರನೇ ಮಗುವನ್ನು ಹೊಂದಿರುವ ಕುಟುಂಬಗಳಿಗೆ ಮತ್ತು ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಪ್ರೋತ್ಸಾಹ ಧನವನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದರು.
ಜನಸಂಖ್ಯೆ ನಿಯಂತ್ರಣಕ್ಕೆ ಕೊಡುಗೆ ನೀಡಿದ ರಾಜ್ಯಗಳು
ದೇಶದಲ್ಲಿ ಜನಸಂಖ್ಯೆ ಹೆಚ್ಚಾದಾಗ ಜನಸಂಖ್ಯೆ ನಿಯಂತ್ರಣ ಮತ್ತು ಜನಸಂಖ್ಯಾ ಸ್ಥಿರೀಕರಣದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಅತ್ಯಂತ ಪ್ರಮುಖ ಮತ್ತು ಮಾದರಿ ಕೊಡುಗೆಯನ್ನು ನೀಡಿವೆ. ಮುಖ್ಯವಾಗಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಸುಧಾರಣೆ ಮತ್ತು ಜಾಗೃತಿಯ ಮೂಲಕ ಈ ರಾಜ್ಯಗಳು ಒಟ್ಟು ಫಲವತ್ತತೆ ದರವನ್ನು (Total Fertility Rate – TFR) ಗಣನೀಯವಾಗಿ ಕಡಿಮೆ ಮಾಡಿವೆ.
ಇದನ್ನು ಓದಿದ್ದೀರಾ? Delimitation | ದಕ್ಷಿಣದ ರಾಜ್ಯಗಳಿಗೆ ಕಂಟಕವಾಗಿರುವ ಸಂಸದೀಯ ಕ್ಷೇತ್ರ ಮರುವಿಂಗಡಣೆ
ದೇಶದಲ್ಲೇ ಮೊದಲ ಬಾರಿಗೆ 1988ರಲ್ಲೇ ಜನಸಂಖ್ಯಾ ಸ್ಥಿರೀಕರಣದ ಬದಲಿ ಮಟ್ಟವನ್ನು (Replacement Level – TFR 2.1) ಸಾಧಿಸಿದ ಹೆಗ್ಗಳಿಕೆ ಕೇರಳದ್ದಾಗಿದೆ. ಮಹಿಳಾ ಸಾಕ್ಷರತೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ಇದಕ್ಕೆ ಮುಖ್ಯ ಕಾರಣಗಳಾಗಿವೆ. ಕರ್ನಾಟಕವು 2005 ರ ಸುಮಾರಿಗೆ ಬದಲಿ ಮಟ್ಟದ ಫಲವತ್ತತೆ ದರವನ್ನು ಯಶಸ್ವಿಯಾಗಿ ತಲುಪುವ ಮೂಲಕ ಜನಸಂಖ್ಯಾ ಸ್ಥಿರೀಕರಣಕ್ಕೆ ದೊಡ್ಡ ಕೊಡುಗೆ ನೀಡಿದೆ.
ಆಂಧ್ರಪ್ರದೇಶವು 2001ರ ವೇಳೆಗೆ ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿ ಬದಲಿ ಮಟ್ಟವನ್ನು ತಲುಪಿದೆ. ಆದರೆ ಬಳಿಕ ಕ್ರಮೇಣ ಆಂಧ್ರಪ್ರದೇಶದಲ್ಲಿ ಜನಸಂಖ್ಯೆ ಕುಸಿತ ಕಾಣುತ್ತಿದೆ. ಆಂಧ್ರಪ್ರದೇಶದ ಒಟ್ಟು ಫಲವತ್ತತೆ ದರ (TFR) ಪ್ರಸ್ತುತ 1.5 ಕ್ಕೆ ಕುಸಿದಿದೆ. 1993ರಲ್ಲಿ ಇದು 3.0ರಷ್ಟಿತ್ತು. ಜನನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಯುವಕರ ಸಂಖ್ಯೆ ಇಳಿಕೆಯಾಗಿ, ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ. 2047ರ ವೇಳೆಗೆ ಆಂಧ್ರದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ 23 ರಷ್ಟು ಜನ ವೃದ್ಧರಾಗಿರುತ್ತಾರೆ ಎಂದು ಅಂದಾಜಿಸಲಾಗಿದೆ.
ಅಷ್ಟು ಮಾತ್ರವಲ್ಲದೆ ಜನಸಂಖ್ಯೆ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ನಡೆದರೆ, ಜನಸಂಖ್ಯೆ ಕಡಿಮೆ ಇರುವ ಆಂಧ್ರಪ್ರದೇಶದಂತಹ ದಕ್ಷಿಣದ ರಾಜ್ಯಗಳು ಸಂಸತ್ತಿನಲ್ಲಿ ತಮ್ಮ ರಾಜಕೀಯ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವ ಆತಂಕವಿದೆ.




