ನಾಡು-ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ ಯುವ ಪೀಳಿಗೆಗೆ ಜನಪದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಪರಿಚಯಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ ಹೇಳಿದರು.
ಬೀದರ ನಗರದ ಮೈಲೂರ ಕ್ರಾಸ್ ಬಳಿಯ ಮಹಾಲಕ್ಷ್ಮೀ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರದಲ್ಲಿ 2025-26ನೇ ಸಾಲಿನ ಸಾಮಾನ್ಯ ಸಂಘ-ಸಂಸ್ಥೆಗಳ ಸಾಂಸ್ಕೃತಿ ಚಟುವಟಿಕೆಗೆ ಧನ ಸಹಾಯ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮ, ಕವಿಗೋಷ್ಠಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼನಾವೆಲ್ಲರೂ ರಾಜ್ಯ, ಭಾಷೆ, ಪ್ರಾಂತ್ಯ, ನಾಡು-ನುಡಿಯ ಮೇಲೆ ಇರುವ ಅಭಿಮಾನದಂತೆ ನಮ್ಮ ಗಡಿ ಭಾಗದ ಸಂಸ್ಕೃತಿ, ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂದಿನ ಆಧುನಿಕ ತಂತ್ರಜ್ಞಾನ ಹಾಗೂ ಮೊಬೈಲ್ ಅತಿಯಾದ ಬಳಕೆಯಿಂದ ಸಂಸ್ಕೃತಿ ಹಾಳಾಗುತ್ತಿದೆʼ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ʼಜನಪದ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕಲಾವಿದರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಯೋಜನೆಗಳನ್ನು ತಲುಪಿಸಲು ಇಲಾಖೆ ಸದಾ ಬದ್ಧವಾಗಿದೆʼ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮನೋಹರ ಮಾತನಾಡಿ, ʼಸಾಹಿತ್ಯ ಮತ್ತು ಸಂಸ್ಕೃತಿ ಸಮಾಜದ ಅಸ್ತಿತ್ವವನ್ನು ಉಳಿಸುವ ಶಕ್ತಿಯಾಗಿದ್ದು, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡ ನಾಡಿನ ಪರಂಪರೆ ಹಾಗೂ ಜನಪದ ಕಲೆಯನ್ನು ಜೀವಂತವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಧನಸಹಾಯ ನೀಡುವ ದಾನಿಗಳು ಮುಂದೆ ಬಂದರೆ ನಮ್ಮ ಸಂಘ ಇರುವರೆಗೂ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಪ್ರತಿವರ್ಷ ಒಂದು ಪುಸ್ತಕ ಪ್ರಕಟಿಸುವ ಕಾರ್ಯ ಮಾಡಲಾಗುವುದುʼ ಎಂದು ಹೇಳಿದರು.
ಪಂಚಾಯತ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಖಚಾಂಚಿ ಶರತಕುಮಾರ ಅಭಿಮಾನ, ಜೆಸ್ಕಾಂ ಬೀದರನ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ, ಹಿರಿಯ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿದರು,
ಬಳಿಕ ನಡೆದ ಪ್ರಚಲಿತ ವಿದ್ಯಮಾನಗಳ ಕುರಿತು ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಉದ್ಘಾಟಿಸಿದರು, ಹಿರಿಯ ಸಾಹಿತಿ ಗುರುನಾಥ ಅಕ್ಕಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ ಮಾತನಾಡಿದರು.

ಬೀದರ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಸುಭಾಷ ರತ್ನ, ಪ್ರವೀಣ ಚಂದ್ರ ಸ್ವಾಗತಿಸಿದರು, ಪ್ರೇಮ ಅವಿನಾಶ, ಸಮೃತ ಸೂರ್ಯವಂಶಿ ಸೇರಿದಂತೆ ಸಾಹಿತಾಸಕ್ತರು ಭಾಗವಹಿಸಿದ್ದರು. ಯುವ ಬರಹಗಾರರು ಕವಿಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನ ವಾಚಿಸಿದರು.
ಇದನ್ನೂ ಓದಿ : ಬೀದರ್ | ಗರಿಗೆದರಿದ ಕೃಷಿ ಚಟುವಟಿಕೆ: 4.13 ಲಕ್ಷ ಹೆಕ್ಟೇರ್ ಬಿತ್ತನೆಗೆ ಸಜ್ಜು!
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾ ತಂಡಗಳಾದ ಪ್ರಿಯಾಂಕ ಗುರುದೇವ ಮತ್ತು ತಂಡದಿಂದ ಜನಪದ ಗೀತೆ, ರಾಣಿ ಸತ್ಯಮೂರ್ತಿ ಮತ್ತು ತಂಡದಿಂದ ಭರತ ನಾಟ್ಯ, ಮಹೇಶಕುಮಾರ ಕುಂಬಾರ ಸಾರಿಗಮಪ ಕಲಾ ತಂಡದಿಂದ ತತ್ವಪದ, ಚಿನ್ನಮ್ಮಾ ಲಾಧಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ಸೋಬಾನ ಪದ ಡಿಲ್ಲೆಮ್ಮಾ ಮತ್ತು ತಂಡದಿಂದ ಸೋಬಾನ ಪದ, ರಮೇಶ ಅಮಲಾಪೂರ ಮತ್ತು ತಂಡದಿಂದ ಬೌದ್ಧ ಗೀತೆ, ಸೀಮಾ ಮತ್ತು ತಂಡದಿಂದ ಲಮಾಣಿ ನೃತ್ಯ, ಕೀರ್ತಿ ಮತ್ತು ತಂಡದಿಂದ ಭುಲಾಯಿ ಹಾಡು, ಕುಮಾರಿ ಜಯಲಕ್ಷ್ಮಿ ಕಟ್ಟಿಮನಿ ಮತ್ತು ತಂಡದಿಂದ ಭರತ ನಾಟ್ಯ, ದೇವಪ್ಪ ಮತ್ತು ತಂಡದಿಂದ, ಕನ್ನಡ ಗೀತೆ, ಡಾ. ಜೈ ಭಾರತ ಮಂಗೆಸ್ಕರ್ ತಂಡದಿಂದ ದೇಶ ಭಕ್ತಿಗೀತೆ, ಸುನೀತಾ ಸಿ.ಬಿ. ಬಸವ ಪ್ರಸಾದ ಕಲಾ ತಂಡದಿಂದ ವಚನ ಗಾಯನ, ರಾಜಕುಮಾರ ಕರುಣಾ ಸಾಗರ ಮತ್ತು ತಂಡದಿಂದ ಅಂಬೇಡ್ಕರ್ ಗೀತೆಗಳು, ಕಂಟೆಪ್ಪಾ ಪೂಜಾರಿ ಮತ್ತು ತಂಡದಿಂದ ಸುಗಮ ಸಂಗೀತೆ, ಶಿವಾಜ ಮಾನಕರೆ ಮತ್ತು ತಂಡದಿಂದ ಕ್ರಾಂತಿಗೀತೆ, ತುಕಾರಾಮ ನಾಗೂರೆ ತಂಡದಿಂದ ಜಾನಪದ ಜಾದು, ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆದವು.




