ದುರುಳರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಮೂರು ದಿನಗಳ ಕಾಲ ಸೆರೆಯಾಳಗಿಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ದೆಹಲಿ ಪೊಲೀಸರು ವರ್ಗಾಯಿಸಿದ ಶೂನ್ಯ ಎಫ್‌ಐಆರ್ ಆಧಾರದ ಮೇಲೆ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೇ 22ರಂದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆನಂದ್ ವಿಹಾರ್ ಸರ್ಕಾರಿ ರೈಲ್ವೆ ಪೊಲೀಸ್ ಠಾಣೆಯಿಂದ ಶೂನ್ಯ ಎಫ್‌ಐಆ ವರ್ಗಾವಣೆಯಾಗಿದೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಅಪ್ರಾಪ್ತೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಈ ಬಗ್ಗೆ ಮಾಹಿತಿ ನೀಡಿದ ಲಕ್ನೋದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ದಕ್ಷಿಣ) ರಲ್ಲಪಳ್ಳಿ ವಸಂತ್ ಕುಮಾರ್, “ಜೌನ್‌ಪುರ ಜಿಲ್ಲೆಯ ನಿವಾಸಿಗಳಾದ ಶಿವಂ ಯಾದವ್ ಮತ್ತು ಸನ್ನಿ ಯಾದವ್ ಎಂದು ಗುರುತಿಸಲಾದ ಇಬ್ಬರು, ಮತ್ತೆ ಇತರರು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಈ ಘಟನೆ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಎಫ್‌ಐಆರ್ ದಾಖಲಿಸಿ, ತನಿಖೆ ಶುರು ಮಾಡಲಾಗಿದೆ. “ಆರೋಪಿಯನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸಾಕ್ಷ್ಯ ಸಂಗ್ರಹ ಮತ್ತು ಇತರ ಕಾನೂನು ವಿಧಿವಿಧಾನಗಳು ನಡೆಯುತ್ತಿವೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೌನ್‌ಪುರ ಜಿಲ್ಲೆಯವಳಾದ ಮಹಿಳೆ ಮೇ 15ರಂದು ದೆಹಲಿಯಿಂದ ಸುಹೇಲ್‌ದೇವ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಪ್ರಯಾಣದ ಸಮಯದಲ್ಲಿ ಪರಿಚಯಸ್ಥ ಶಿವಂ ಯಾದವ್ ಅವರನ್ನು ವಾಟ್ಸಾಪ್‌ನಲ್ಲಿ ಸಂಪರ್ಕಿಸಿದ್ದರು. ಲಕ್ನೋದ ಚಾರ್‌ಬಾಗ್ ರೈಲ್ವೆ ನಿಲ್ದಾಣಕ್ಕೆ ಬಂದಾಗ, ಶಿವಂ ಆಕೆಯನ್ನು ಭೇಟಿಯಾಗಿ ಸುಶಾಂತ್ ಗಾಲ್ಫ್ ಸಿಟಿ ಪ್ರದೇಶದಲ್ಲಿ ಬಾಡಿಗೆಗೆ ಮನೆಯೊಂದನ್ನು ಪಡೆಯಲು ಸಹಾಯ ಮಾಡುವಂತೆ, ತನ್ನೊಂದಿಗೆ ಬರುವಂತೆ ಮನವೊಲಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿಲ್ದಾಣದಲ್ಲಿ ಭೇಟಿಯಾದಾಗ ಸನ್ನಿ ಯಾದವ್ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿ ಕೂಡ ಇದ್ದ. ಮೂವರು ಬಾಡಿಗೆ ಕೋಣೆಗೆ ಕ್ಯಾಬ್‌ನಲ್ಲಿ ಹೋಗಿದ್ದರು. ಅಲ್ಲಿ ಕಾಫಿ ಕುಡಿದ ನಂತರ ತನಗೆ ತಲೆ ತಿರುಗಿದ್ದಂತೆ ಆಗಿದೆ, ನಿದ್ರೆ ಬಂದಿದೆ. ನಂತರ ಶಿವಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮರುದಿನ ಸನ್ನಿ ಯಾದವ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮೇ 17ರಂದು ಮತ್ತೊಬ್ಬನೂ ಸೇರಿ ಒಟ್ಟು ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆಯ ಸ್ಥಿತಿ ಹದಗೆಟ್ಟ ನಂತರ, ಆರೋಪಿಯು ಆಕೆಯನ್ನು ಚಾರ್‌ಬಾಗ್ ರೈಲು ನಿಲ್ದಾಣಕ್ಕೆ ಕರೆದೊಯ್ದು, ಸುಹೇಲ್‌ದೇವ್ ಎಕ್ಸ್‌ಪ್ರೆಸ್‌ನಲ್ಲಿ ಸ್ಲೀಪರ್-ಕ್ಲಾಸ್ ಟಿಕೆಟ್ ವ್ಯವಸ್ಥೆ ಮಾಡಿ ದೆಹಲಿಗೆ ಕಳುಹಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು | ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ರೈಲಿನಲ್ಲಿರುವಾಗ, ಆಕೆ ತನ್ನ ತಂದೆಗೆ ಫೋನ್ ಮೂಲಕ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಇದರಿಂದಾಗಿ ಆಕೆಯ ಕುಟುಂಬವು ಸಹಾಯಕ್ಕಾಗಿ ರೈಲ್ವೆ ಸಹಾಯವಾಣಿಯನ್ನು ಸಂಪರ್ಕಿಸಿದೆ. ಸರ್ಕಾರಿ ರೈಲ್ವೆ ಪೊಲೀಸರು ದೆಹಲಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದು ಮಹಿಳೆಯ ಹೇಳಿಕೆಯನ್ನು ದಾಖಲಿಸಿದ್ದಾರೆ. ಬಳಿಕ ಪ್ರಕರಣವನ್ನು ಲಕ್ನೋಗೆ ವರ್ಗಾಯಿಸುವ ಮೊದಲು ಶೂನ್ಯ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮುಖ್ಯವಾಗಿ ಪ್ರಮುಖ ಆರೋಪಿಗಳು ಸುಮಾರು ನಾಲ್ಕು-ಐದು ವರ್ಷಗಳಿಂದ ಪರಿಚಯಸ್ಥರು. ದೂರದ ಸಂಬಂಧಿಗಳು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿಕರಿಂದಲೇ ಅತ್ಯಾಚಾರ ಪ್ರಕರಣ ಹೆಚ್ಚಳ
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಬಿಡುಗಡೆ ಮಾಡುವ ವಾರ್ಷಿಕ ‘ಕ್ರೈಮ್ ಇನ್ ಇಂಡಿಯಾ’ (Crime in India) ವರದಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಳವಳಕಾರಿ ಅಂಕಿ-ಅಂಶಗಳು ಸತತವಾಗಿ ಮುನ್ನಲೆಗೆ ಬರುತ್ತಿವೆ. ಅದರಲ್ಲಿಯೂ ವಿಶೇಷವಾಗಿ, ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಚಿತರಾದವರು ಮತ್ತು ಹತ್ತಿರದ ಸಂಬಂಧಿಕರೇ ಭಾಗಿಯಾಗಿರುವ ಶೇಕಡಾವಾರು ಪ್ರಮಾಣ ಅತಿ ಹೆಚ್ಚಾಗಿದೆ.
NCRBಯ ವರದಿಗಳ ಪ್ರಕಾರ, ದೇಶದಲ್ಲಿ ದಾಖಲಾಗುವ ಒಟ್ಟು ಅತ್ಯಾಚಾರ ಪ್ರಕರಣಗಳ ಪೈಕಿ ಶೇಕಡ 90ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ಮೊದಲೇ ಪರಿಚಿತರಾಗಿರುತ್ತಾರೆ. ಹತ್ತಿರದ ಕುಟುಂಬಸ್ಥರು ಮತ್ತು ಸಂಬಂಧಿಕರು ಆಗಿರುತ್ತಾರೆ. ಕುಟುಂಬಕ್ಕೆ ಆಪ್ತರಾಗಿರುವ ನೆರೆಹೊರೆಯವರಾಗಿರುತ್ತಾರೆ.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.




