ವಿದ್ಯಾರ್ಥಿಗಳು ಪ್ರಾಮಾಣಿಕ ಜೀವನಶೈಲಿ ರೂಢಿಸಿಕೊಂಡು ಭಾರತದ ಆಶಾಕಿರಣ ಆಗಬೇಕೆಂದು ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ ಪಿ.ಎಸ್ ಹೇಳಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ ಅನ್ವೇಷಣೆ-2026 ಮಹಾವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಶಿಕ್ಷಣದ ಜೊತೆಗೆ ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಸತ್ಯ, ನ್ಯಾಯ, ಪ್ರಾಮಾಣಿಕತೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇದೇ ಕಾಲೇಜಿನ ವಿದ್ಯಾರ್ಥಿಯಾದ ನಾನು ಈ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿದ್ದು ಸಂತಸ ತಂದಿದೆʼ ಎಂದು ತಿಳಿಸಿದರು.
ಸಂಸ್ಥೆಯ ಖಜಾಂಚಿ ಲಿಂಗರಾಜ ಪಾಟೀಲ ಅಟ್ಟೂರ ಮಾತನಾಡಿ, ʼಬಸವಕಲ್ಯಾಣ ಕ್ಷೇತ್ರವು ಧಾರ್ಮಿಕ. ಶೈಕ್ಷಣಿಕ ಸಿದ್ಧಾಂತದ ನೆಲೆಯಾಗಿದೆ. ವಚನಗಳು ಮಾನವನ ಏಳಿಗೆಗೆ ಆಧಾರಸ್ಥಂಭವಾಗಿವೆ. ವಿದ್ಯಾರ್ಥಿಗಳು ಬಸವಾದಿ ಶರಣರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರವಂತರಾಗಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕುʼ ಎಂದು ಹೇಳಿದರು.
ಭಾಲ್ಕಿಯ ಬೆಕೆಐಟಿ ಕಾಲೇಜಿನ ಪ್ರಾಚಾರ್ಯ ಡಾ.ಉದಯಕುಮಾರ ಕಲ್ಯಾಣಿ ಮಾತನಾಡಿ, ʼಕನಸುಗಳನ್ನೇ ಗುರಿಯಾಗಿ ಹಿಡಿದು ಶ್ರಮದ ಹಾದಿಯಲ್ಲಿ ಹೆಜ್ಜೆಯಿಡಬೇಕು. ಬದುಕಿನಲ್ಲಿ ಬರುವ ಎಲ್ಲ ಸವಾಲುಗಳನ್ನು ಜಯಿಸಿ ಯಶಸ್ಸಿನ ಶಿಖರ ತಲುಪಬೇಕು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕುʼ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಸವಕಲ್ಯಾಣ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರೂ ಮಾಜಿ ಮಂತ್ರಿ ಬಸವರಾಜ ಪಾಟೀಲ ಅಟ್ಟೂರ ಅವರು ಮಾತನಾಡಿ, ʼಕಷ್ಟದ ಹಾದಿಯಲ್ಲಿ ಯಶಸ್ಸು ಲಭಿಸುತ್ತದೆ. ಸತತ ಪ್ರಯತ್ನದಿಂದ ನಮ್ಮ ಭವಿಷ್ಯ ನಾವೇ ರೂಪಿಸಿಕೊಳ್ಳಬಹುದುʼ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಮತ್ತು ಟ್ರಸ್ಟ ನಿರ್ದೇಶಕರೂ ಆದ ಡಾ. ಅಶೋಕಕುಮಾರ ವಣಗೇರಿ ಮಾತನಾಡಿ, ʼಬದುಕಿನಲ್ಲಿ ಕನಸುಗಳ ಜೊತೆ ಹೆಜ್ಜೆ ಹಾಕಬೇಕು. ಜ್ಞಾನದ ದೀಪ ಬೆಳಗಿಸಿ ಸಾಧನೆಯ ದಾರಿಯಲ್ಲಿ ಮುನ್ನಡೆದರೆ ಯಶಸ್ಸಿನ ಶಿಖರ ತಲುಪಬಹುದುʼ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಇತರೆ ಸ್ಪರ್ಧೆಗಳಲ್ಲಿ ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳು ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ನಡೆಸಿಕೊಟ್ಟರು.
ಇದನ್ನೂ ಓದಿ : ಬೀದರ್ | ಬಿಸಿಲಿನ ಝಳ : ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲು
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾಸಾಗರ ಮೂಲಗೆ ನಿರೂಪಿಸಿದರು, ಡಾ.ಅನೀಲಕುಮಾರ ಪಾಟೀಲ ವಂದಿಸಿದರು.





