ವಿದ್ಯಾರ್ಥಿಗಳು ಬಾಲ್ಯದಿಂದಲೇ ತಂಬಾಕು, ಧೂಮಪಾನ, ಗುಟ್ಕಾ, ಮದ್ಯಪಾನ ಸೇರಿದಂತೆ ಎಲ್ಲ ರೀತಿಯ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಪತ್ರಕರ್ತ ಬಾಲಾಜಿ ಕುಂಬಾರ ಹೇಳಿದರು.
ಬೀದರ ತಾಲೂಕಿನ ಕಾಡವಾದ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಸನ ಮುಕ್ತ ದಿನಾಚರಣೆಯ ಅಂಗವಾಗಿ ಆದಿತ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ‘ವ್ಯಸನ ಬಿಡಿ–ಜೀವನ ಗೆಲ್ಲಿ’ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ತಂಬಾಕು, ಧೂಮಪಾನ ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ, ಆರ್ಥಿಕ, ಕೌಟುಂಬಿಕ ಕೇಡು ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳಿಗೆ ದಾರಿ ಮಾಡಿ ಕೊಡುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಆದಿತ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ದೇವಿದಾಸ ತುಮಕುಂಟೆ ಮಾತನಾಡಿ, “ಯುವಕರು ತಂಬಾಕು ಮತ್ತು ಮಾದಕ ವಸ್ತುಗಳಷ್ಟೇ ಅಲ್ಲದೆ ಮೊಬೈಲ್ ಫೋನ್‌ನ ಅತಿಯಾದ ಬಳಕೆಯಂತಹ ವ್ಯಸನಗಳಿಂದಲೂ ದೂರವಿರಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು, ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಆದ್ಯತೆ ನೀಡಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ” ಎಂದರು.

ಕಾರ್ಯಕ್ರಮದ ಅಂಗವಾಗಿ ʼವ್ಯಸನ ಬಿಡಿ – ಜೀವನ ಗೆಲ್ಲಿʼ ಹಾಗೂ ʼತಂಬಾಕು ಮುಕ್ತ ಸಮಾಜ ನಿರ್ಮಾಣʼ ಎಂಬ ವಿಷಯಗಳ ಕುರಿತು ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವ್ಯಸನದ ದುಷ್ಪರಿಣಾಮಗಳು, ವ್ಯಸನಮುಕ್ತ ಜೀವನದ ಅಗತ್ಯತೆ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಇದನ್ನೂ ಓದಿ : ಸಾಹಿತ್ಯರತ್ನ ಅಣ್ಣಾಭಾವು ಸಾಠೆ : ಶೋಷಿತರ ಬದುಕಿಗೆ ಧ್ವನಿಯಾದ ಜನಪದ ಸಾಹಿತಿ
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಡಿ.ಟಿ. ಅಧ್ಯಕ್ಷತೆ ವಹಿಸಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ತುಳಸಿರಾಮ ಸೇರಿದಂತೆ ಶಾಲೆಯ ಶಿಕ್ಷಕರಾದ ಚಂದ್ರಕಾಂತ, ವಸಂತ, ಶ್ರೀಕಾಂತ್, ಲತಾ ಕೋರಿ, ಲತಾ ಕುಲಕರ್ಣಿ, ನಾಜೀಮಾ, ಸುವರ್ಣ ಹಾಗೂ ಸುನೇನಾ, ಆದಿತ್ಯ ಚಾರಿಟೇಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.




