ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

1

- Advertisement -

‘ಮಧುರಾ ನಗರದಲ್ಲಿ ನಗರದೇವಿಯನ್ನು ಬುದ್ಧ ಸರಿ ರಾತ್ರಿಯಲ್ಲಿ ಭೇಟಿಯಾದ. ನಗರದ ದೋಷಗಳ ಏನೆಂದು ತೀರ್ಮಾನಿಸಿದ.’

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

ಕಾರು ಮಹಾನಗರವನ್ನು ಪ್ರವೇಶಿಸಿದಾಗ ಗೌತಮನಿಗೆ ಮಂಪರು. ಎಡೆಬಿಡದೆ ಹತ್ತು ಗಂಟೆ ಕಾರಲ್ಲೇ ಕುಳಿತಿದ್ದುದರಿಂದ ಸಮಸ್ತ ನರ ಮಂಡಲ ತನ್ನ ಶಕ್ತಿ ಕಳೆದುಕೊಂಡಂತಿತ್ತು. ದಿನವುದ್ದಕ್ಕೂ ಧಗೆಯಲ್ಲೇ ಪ್ರಯಾಣ. ಎದುರಿಗೆ, ಅಕ್ಕಪಕ್ಕಕ್ಕೆ ಕೊನೆಯೇ ಇರದ ಬೆಂಗಾಡು ಬಯಲುಗಳನ್ನು ನೋಡಿ ನೋಡಿ ಗೌತಮ ಸುಸ್ತಾಗಿದ್ದ. ಮಲೆನಾಡಿನ ದಟ್ಟ ಅರಣ್ಯದ ನಡುವಿನ ಹಳ್ಳಿಯೊಂದರ ವ್ಯಕ್ತಿ ಗೌತಮನಿಗೆ ಕಾರು ಮೊದಲು ಬಯಲು ಸೀಮೆಗೆ ಬಂದಾಗ ಅದೇ ಮೊದಲ ಬಾರಿಗೆ ಎಂಬಂತೆ ಆ ಕಪ್ಪು ಬಯಲನ್ನು ನೆಟ್ಟ ನೋಟದಿಂದ ನೋಡಲಾರಂಭಿಸಿದ. ಮಲೆನಾಡಿನ ದೃಷ್ಟಿ ಅಗೋ ಪಕ್ಕದ ಗುಡ್ಡಕ್ಕೊ, ಇಲ್ಲ ಮರಗಳ ಗೋಡೆಗೋ ತಗುಲಿ ಅಲ್ಲಿಯೇ ನಿಂತು ಹೋಗುತ್ತದೆ ಎನ್ನಿಸಿತು. ಇಲ್ಲ ಎತ್ತರಕ್ಕೆ ದೈತ್ಯ ಪರ್ವತದ ಮೇಲೇರಿ ದಿಗಂತವನ್ನು ಕಾಣಬೇಕು. ಮಹಾನಗರ ಮುಂಬಯಿಗೆ ಹೊರಟಾಗ ಗೌತಮನಿಗೆ, ಹೀಗಾಗಿ, ಸಹಜವಾಗೇ ತಾನು ಸ್ವಾತಂತ್ರ್ಯದ ಕಡೆಗೆ ಹೊರಟಿದ್ದೇನೆ ಅನ್ನಿಸಿತ್ತು. ಬಯಲುಸೀಮೆಯ ದಿಗಂತ ನೋಟದ ಸ್ವಾತಂತ್ರ್ಯ ಮಾತ್ರ ಅಲ್ಲ ಅದು. ಇನ್ನು ದೊಡ್ಡ ಮಟ್ಟದ, ಹೆಚ್ಚು ಆಳವಾದ ಸ್ವಾತಂತ್ರ್ಯ ಪಥ ಎಂದು ಅವನಿಗೆ ಅನ್ನಿಸಿತ್ತು. ಸುತ್ತ ಅವನ ಹಳೆ ಗೆಳೆಯರು ಹರಟೆ ಹೊಡೆದು ಹೊ ಹೊ ಎಂದು ನಕ್ಕು ಬೊಬ್ಬೆ ಹೊಡೆಯುತ್ತಿದ್ದರು. ಬಿಸಿಲಿಗೆ ತಡೆಯಲಾಗದೆ ಗೌತಮನಿಗೆ ನಿದ್ದೆ, ಅಲ್ಲ ಎಂಥದೋ ಮಂಪರು ಆವರಿಸಿತ್ತು. ಜತೆಗಿದ್ದ ಮಾಯಾನಗರಿಯ ಗೆಳೆಯರು ಗದ್ದಲ ನಡೆಸುತ್ತಲೇ ಇದ್ದರು.

ಕಾರಿನಲ್ಲಿ ಎಚ್ಚರವಾದಾಗ ಅವನಿಗೆ ಬೆಚ್ಚಿಸುವ ಮೌನ. ಕಾರಿನ ಸದ್ದು ಮಾತ್ರ ಮರ ಕೊಯ್ಯುವ ಸಾಮಿಲ್ಲಿನಂಥ ಶಬ್ದ ಮಾತ್ರ. ಒಂದು ಕ್ಷಣ ಬೆಚ್ಚಿ ತಾನೆಲ್ಲಿದ್ದೇನೆ ಎಂದುಕೊಂಡ. ನೆಲದ ಮಬ್ಬು ಕಪ್ಪು ಮೇಲೆದ್ದು ಹಬ್ಬತೊಡಗಿತ್ತು. ಗೆಳೆಯರು ಎಲ್ಲ ಜೋಕುಗಳನ್ನು ಮುಗಿಸಿ ಮುಂದೆ ಮಾತಿಲ್ಲದೆ ಹಾಗೇ ಒರಗಿದ್ದರು.

‘ಬಾಂಬೆ ತಲಪಕ್ಕೆ ಇನ್ನು ಐದು ಗಂಟೆ ಬೇಕು’ ಎಂದ ಕುಮಾರ್.

‘ಗಂಧರ್ವ ನಗರಿಗೆ ಹೋಗಕ್ಕೆ ಮಧ್ಯರಾತ್ರಿಯೇ ಸರಿ’ ಎಂದ ಕಮಲ್.

ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…

‘ಬಹಳ ಲೇಟಾಗಿ ಹೋದ್ರೆ ಒಳೊಳ್ಳೇ ಅಪ್ಸರೆಯರೆಲ್ಲಾ ಹಾರಿ ಹೋಗಿರ್‍ತಾರೆ ಕಣ್ರೋ’ ಎಂದ ಕುಮಾರ್.

‘ಊಟ ಊಟ’ ಎಂದ ತಿಂಡಿ ಪೋತ ಸಾಗರ್.

‘ಚೌಪಾತಿ ಹತ್ತಿರ ಫಸ್ಟ್ ಕ್ಲಾಸ್ ಬಿರ್ಯಾನಿ ಕೊಡಿಸ್ತೀನ್ರೊ. ಇಡೀ ರಾತ್ರೆ ಹೋಟೆಲ್ ತೆಗೆದಿರುತ್ತೆ’ ಅಂದ ಕುಮಾರ್.

ಇಷ್ಟಾದ ಮೇಲೆ ಗೌತಮನಿಗೆ ಎಚ್ಚರಾದದ್ದು ಮಹಾರಾಷ್ಟ್ರದ ಹಳ್ಳಿಯೊಂದರ ಹತ್ತಿರ. ಗೌತಮನಿಗೆ ಮಾತ್ರ ಇನ್ನೂ ಮಂಪರು. ಕಾರಿನೊಳಗೆ ಎಂಥದೊ ರಟ್ಟಿನ ಪೆಟ್ಟಿಗೆ ಬಂದಂತಾಯಿತು. ಬಾಟಲುಗಳ ಗಡಗಡ ಶಬ್ದ. ಬಿಯರ್ ಬಾಟಲೊಂದನ್ನು ಒಡೆದು ಯಾರೊ ಇವನ ಬಾಯಿಗಿಟ್ಟರು. ಎರಡೊ, ಮೂರೊ ಆದ ನಂತರ ಗೌತಮ ಹೆಚ್ಚು ಚುರುಕಾದ. ಹಳ್ಳಿಯಲ್ಲಿದ್ದಾಗ ಅವನು ಕುಡಿಯುವುದಿಲ್ಲವಾದ್ದರಿಂದ ಹೆಚ್ಚು ಆರ್ತನೂ, ಭಾವುಕನೂ ಆಗಿಬಿಟ್ಟ.

‘ಗುರೂ, ಲೇಟಾಗಿ ಹೋದ್ರೆ ಅಪ್ಸರೆಯರೆಲ್ಲಾ ಹಾರಿ ಹೋಗ್ತಾರೆ ಅಂತಿಯಾ’ ಅಂದು ಬಿಟ್ಟ ಗೌತಮ ಇದ್ದಕ್ಕಿದ್ದಂತೆ ಗಾಬರಿಗೊಳಗಾದ. ತಾನೇನು ಹೇಳಿದೆ ಎಂಬುದು ಅವನಿಗೆ ಪೂರ್ಣವಾಗಿ ಹೊಳೆಯುವಷ್ಟರಲ್ಲೇ ಸುತ್ತಲಿನ ಗೆಳೆಯರು ಕಡಲಿನಿಂದ ಭರ್ಜರಿ ಅಲೆ ನುಗ್ಗಿದಂತೆ ಹೊ ಹೊ ಎಂದು ನಕ್ಕರು. ಗೌತಮ ಪೆಚ್ಚಾಗಿ ಕೂತ.

ಈ ಪ್ರಯಾಣ ಸೂಚಿಸುತ್ತಿರುವ ತಾನು ಆರ್ತನಾಗಿ ಅರಸುತ್ತಿರುವ ಸ್ವಾತಂತ್ರ್ಯದ ಅಂತಿಮ ಅರ್ಥ ಇದೇ ಇರಬಹುದೆ ಎನ್ನಿಸಿ ವಿಷಾದದಲ್ಲಿ ಮುಳುಗಿಬಿಟ್ಟ. ಹೆಚ್ಚು ದಟ್ಟವಾಗಿ ಕರೆಯುವ ಅಮೂರ್ತಗಳು ಯಾವಾಗಲೂ ಹೀಗೆ ಇಷ್ಟು ಹೀನ ರೂಪಗಳಲ್ಲಿ ಹುಟ್ಟಿಬಿಡಬಾರದು. ಕಟವಾಯಿಂದ ಸುರಿಯುತ್ತಿರುವ ಜೊಲ್ಲು ಒರೆಸಿಕೊಂಡು ಅಂದುಕೊಂಡ; ಎಷ್ಟೇ ಹೀನ ರೂಪಗಳಲ್ಲಿ ಕಂಡರೂ ಸ್ವಾತಂತ್ರ್ಯವೇ ನೀನೇ ಹೆಚ್ಚು ಆಕರ್ಷಕ.

ಇದನ್ನು ಓದಿದ್ದೀರಾ?: ಕುಂ. ವೀರಭದ್ರಪ್ಪ ಅವರ ಕತೆ | ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ

ಮತ್ತೆ ಅವನಿಗೆ ಸಂಪೂರ್ಣ ತಿಳಿವು ಬರುವ ಹೊತ್ತಿಗೆ ಅವನು ಮುಂಬಯಿಯ ಬಾಂದ್ರಾದಲ್ಲಿನ ದೊಡ್ಡ ಹೋಟೆಲೊಂದರ ನಾಲ್ಕನೆ ಮಹಡಿಯ ರೂಮೊಂದರಲ್ಲಿದ್ದ. ಎದ್ದು ಕಿಟಕಿ ತೆಗೆದು ಹೊರಕ್ಕೆ ಮುಖ ಹಾಕಿ ಕಂಡ ದೃಶ್ಯದಿಂದ ಒಂದು ಕ್ಷಣ ದಿಗ್ಭ್ರಾಂತನಾಗಿ ಬಿಟ್ಟ. ಕೆಳಗೆ ಹೋಟೆಲ್ಲಿನ ಪಾರ್ಕಿಂಗ್ ಜಾಗದಲ್ಲಿನ ಒಂದು ಕಡೆಗೆ ಸಾಲಾಗಿ ನಿಲ್ಲಿಸಿದ್ದ ಕಾರುಗಳು, ಪಕ್ಕದಲ್ಲಿ ಸ್ಕೂಟರ್, ಮೋಟಾರ್ ಬೈಸಿಕಲ್‌ಗಳು. ಒಂದು ಕ್ಷಣ ಅವನಿಗೆ ದೈತ್ಯ ಮಿಡತೆಗಳ ಹಾಗೆ ಕಂಡವು. ಊರಿಂದ ಬರುವಾಗಷ್ಟೇ ಅವನು ಕಂಡಿದ್ದ ಗೊದ್ದಗಳ ಗೂಡಿನ ಹಾಗೂ ಅದು ಕಂಡಿತು. ಮೂಲೆಯಲ್ಲಿ ವಿಚಿತ್ರ ಬಣ್ಣದ ಯೂನಿಫಾರ್ಮ್ ಹಾಕಿ ಗೂಡಿನಲ್ಲಿ ನಿಂತಿದ್ದ ವಾಚ್‌ಮೆನ್ ಕೂಡಾ ಒಂದು ಬಗೆಯ ಮಿಡತೆಯ ಹಾಗೇ ಕಂಡ.

ಅವನು ಮತ್ತು ಗೆಳೆಯರು ಇಳಿದು ಬಂದು ನಡೆಯತೊಡಗಿದರು. ಸಮುದ್ರದ ಪಕ್ಕದಲ್ಲೇ ನಡೆಯತೊಡಗಿದರು. ಮಲೆನಾಡಿನವನಾದ ಅವನಿಗೆ ಹೊಳೆ, ಹಳ್ಳ ಝರಿ ನದಿ ಗೊತ್ತೇ ಹೊರತು ಕಡಲು ಗೊತ್ತಿರಲಿಲ್ಲ. ಅರೆ ಬೆಳ್ದಿಂಗಳಲ್ಲಿ ಕಡಲು ತೆವಳಿದಂತೆ ಕಾಣುತ್ತಿತ್ತು. ಒಂದು ಕ್ಷಣ ಮೌನವಾಗಿ ಅದನ್ನೇ ನೋಡುತ್ತಾ ನಿಂತು ಬಿಟ್ಟ. ಸಮುದ್ರ ನೀರಿನಂತೆ ಕಾಣುತ್ತಿರಲಿಲ್ಲ. ಎಂಥದೊ ನೀಲಿ ಎಣ್ಣೆ ಸುತ್ತ ಚೆಲ್ಲಿದಂತೆ ಉಕ್ಕಿ ಉಕ್ಕಿ ಹರಿದಂತೆ ಕಾಣುತ್ತಿತ್ತು. ಆದರೂ ಏನೊ ಮತ್ತೇರಿದವನಂತೆ ನೀರಿನೊಳಕ್ಕೆ ನಡೆಯಲು ಹೋದ. ಮರಳ ಮೇಲೆ ಕಾಲಿಟ್ಟಾಗಲೇ ಏನೊ ಪಿಚಪಿಚ ಎನ್ನಿಸಿ ಅಸಹ್ಯವಾಗಿ ವಾಪಸ್ಸು ಬಂದ. ಪಕ್ಕದಲ್ಲಿ ಬಂಡೆಗಳು ನೆಲಕ್ಕೆ ಬಂದ ಬೊಕ್ಕೆಗಳು ಎನ್ನಿಸಿ ಅವುಗಳ ಮೇಲೆ ಹತ್ತಲು ಹೋದ. ಒಂದು ಬಂಡೆಗೆ ಹಾರಿದಾಗಲೇ ಕಿವಿಗೆ ನೀರಿನ ಶಬ್ದ ಬಂದು ಬಡಿಯ ಹತ್ತಿತ್ತು. ಎದುರಿಗೆ ದೂರದಲ್ಲೆಲ್ಲೊ ತೇಲುವ ದೀಪಗಳು, ಹಾರ ಹಾಕಿದಂತೆ, ಸುಮ್ಮನೆ ಅತ್ತಿತ್ತ ಚೆಲ್ಲಿ ಬಿಸಾಡಿದಂಥ ದೀಪಗಳು. ಇನ್ನೊಂದು ಬಂಡೆಗೆ ಹಾರುವಾಗ ಪಕ್ಕದ ಬಂಡೆಯಿಂದ ಯಾರೋ ಗಾಬರಿಯಿಂದ ಎದ್ದ ಶಬ್ದ. ಪಕ್ಕಕ್ಕೆ ಕಣ್ಣು ಹಾಯಿಸಿದ, ಆ ಬಂಡೆಗಳಿಂದಲೇ ಉದ್ಭವಿಸಿದಂಥ ಅರೆಬೆತ್ತಲೆ ಹೆಣ್ಣೊಬ್ಬಳು ಜತೆಗೆ ಅಂಥದೇ ಗಂಡೊಂದು. ಇವನೇ ಬೆದರಿ ‘ನೈನೈ’ ಎಂದು ತನ್ನ ಹಿಂದಿಯಲ್ಲಿ ಏನೋ ತೊದಲಿದ. ಆ ಹೆಣ್ಣು ಕಿಲಕಿಲ ನಕ್ಕಳು. ಇವನು ಮುಂದಿನ ಬಂಡೆಗೆ ಹಾರುವ ಹೊತ್ತಿಗೆ ಗಂಡು ಮೊಣಕಾಲೂರಿದ್ದನ್ನು ವಾರೆಗಣ್ಣಿನಲ್ಲೇ ಗಮನಿಸಿದ.

ಇದನ್ನು ಓದಿದ್ದೀರಾ?: ಬೊಳುವಾರು ಮಹಮ್ಮದ್‌ ಕುಂಞಿ ಅವರ ಕತೆ | ಒಂದು ತುಂಡು ಗೋಡೆ

ಆ ಗಂಡು ಮತ್ತೆ ಅಷ್ಟು ಬೇಗ ಮೊಣಕಾಲೂರಿದ್ದನ್ನು ಆ ಹೆಣ್ಣು ಹಾಗೆ ಬಂಡೆಗೆ ಒರಗಿದ್ದನ್ನು ಗಮನಿಸಿದಾಗ ಇವನಿಗೆ ಏಕೊ ಒಂದು ಬಗೆಯ ಸಮಾಧಾನವಾದಂತಾಗಿ ಇನ್ನೊಂದು ಸ್ವಲ್ಪ ದೂರ ಹೋಗಿ ಇನ್ನೊಂದು ಬಂಡೆಯ ಮೇಲೆ ನಿಂತ. ಹಿಂದುಗಡೆಗೆ ಕೊಂಚ ದೂರಕ್ಕೆ ತನ್ನ ಗೆಳೆಯರು ಇನ್ನೊಂದು ಬಂಡೆಯ ಮೇಲೆ ಕೂತು ವಿಸ್ಕಿ ಬಾಟಲ್ ಓಪನ್ ಮಾಡುತ್ತಿದ್ದಾರೆ ಎಂದು ಅನ್ನಿಸಿದರೂ ಅವರ ಕಡೆಗೆ ತಿರುಗಿ ನೋಡಲಿಲ್ಲ. ಆ ಬಂಡೆಗಳ ಮಧ್ಯೆ ದೊಡ್ಡ ವಂಡರುಕಪ್ಪೆಗಳಂತೆ ಕಂಡ ಗಂಡು-ಹೆಣ್ಣುಗಳು ಅವನನ್ನು ಆಳವಾಗಿ ತಟ್ಟಿದ್ದರು. ಹಿಂದಿನ ದಿನ ತಾನೆ ತನ್ನ ತೋಟದಲ್ಲಿದ್ದ ಪಾಳು ಮಂಟಪದಲ್ಲಿ ತನ್ನ ಪ್ರೇಯಸಿ ಕಲಾವತಿಯನ್ನು ಹಿಡಿದು ಚುಂಬಿಸಿ, ಆಕೆಯ ಬಟ್ಟೆ ಬಿಚ್ಚಿಸುವ ತನ್ನ ನೂರೊಂದನೇ ಪ್ರಯತ್ನದಲ್ಲಿ ಇನ್ನೇನು ಪೂರ್ಣ ವಿಫಲನಾಗುವ ಹೊತ್ತಿಗೇ ತನ್ನೂರಿನ ರಾಮಣ್ಣನ ಕೈಗೆ ಸಿಕ್ಕಿಬಿದ್ದಿದ್ದ. ಅವನು ನೆಲಕ್ಕೆ ಕ್ಯಾಕರಿಸಿ ಉಗಿದು ಜೋರು ದನಿಯಲ್ಲಿ ಬೈಯುತ್ತಾ ಕೈಲಿದ್ದ ಕುಡುಗೋಲಿನಿಂದ ಅಕ್ಕ ಪಕ್ಕದ ಗಿಡ ಸೊಪ್ಪು ಸದೆಯನ್ನು ಕತ್ತರಿಸುತ್ತಾ ಹೋದ. ಕಲಾವತಿ ಹೋ ಎಂದು ಬಿಕ್ಕುತ್ತಾ ದನಿ ತೆಗೆದು ಅಳತೊಡಗಿದಳು. ‘ನಾನು ಬೇಡ ಬೇಡ ಎಂದರೂ ನೀನು ಕೇಳಿದ್ಯಾ, ಶುದ್ಧ ಮೃಗ ನೀನು’ ಎಂದು ಕೂಗಿದಳು. ಸಂಜೆ ಆಚಾರಿ ಹೋಟೆಲ್ ಹತ್ತಿರ ಹೋಗುವ ಹೊತ್ತಿಗೆ ಸುತ್ತಲಿನ ನೂರು ಮನೆಗಳಿಗೆ ವಿಷಯ ಹೋಗಿರುತ್ತೆ ಎಂದು ಸುಸ್ತಾಗಿ ಹೋಗಿ ತತ್ತರಿಸಿದ್ದ. ಪ್ರೇಮದ ಬಗೆಗಿನ ಅದನೆಲ್ಲಾ ಆಧ್ಯಾತ್ಮಿಕ ಸಮಸ್ಯೆಗಳೆಲ್ಲ ಈಗ ಹೀನ ಅಪರಾಧವನ್ನು ಎದುರಿಸುವ ಸಮಸ್ಯೆಯಾಗಿ ಮಾತ್ರ ಮಾರ್ಪಾಟಾಗಿತ್ತು. ಈಗ ಅದು ನೆನಪಾಗಿ ದೊಡ್ಡ ಆಧ್ಯಾತ್ಮಿಕ ಸಮಸ್ಯೆಗಳು ಎಲ್ಲೊ ಕೆಟ್ಟ ಸೀಮಿತ ಸಾಮಾಜಿಕ ವರ್ತನೆಯಾಗಿ ಮಾರ್ಪಾಡಾಗಿಬಿಡುತ್ತದಲ್ಲ ಎಂದು ಗೊಣಗಿಕೊಂಡ. ಕಲಾಳಿಗೆ ಸುತ್ತಿದ್ದ ಬಟ್ಟೆ ಮಾತ್ರ ಬಿಚ್ಚುವುದು ಸಮಸ್ಯೆಯಲ್ಲ. ದ್ರೌಪದಿಯ ಅಕ್ಷಯ ವಸ್ತ್ರದಂತೆ ಸುತ್ತಿಕೊಂಡಿರುವ ನೂರಾರು ಸಾಂಪ್ರದಾಯಕ ಮೌಲ್ಯಗಳ ಹೊರೆ ಅದು.

‘ನೀನು ನನ್ನ ದೇವಿ, ನನ್ನ ಆಧ್ಯಾತ್ಮಿಕ ಅಗತ್ಯ’ ಎನ್ನುತ್ತಾನೆ ಗೌತಮ.

‘ಸರಿಸರಿ ಹೇಳೋದು ಆಧ್ಯಾತ್ಮಿಕ ಅಗತ್ಯ ಅಂತ. ಕೈ ಬಾಯಲ್ಲಿ ಮಾತ್ರ ಬರೀ ಪೋಲಿತನ’ ಅಂತ ಸಿಡುಕಿ ಹಾರುತ್ತಾಳೆ ಕಲಾ.

ಏನೋ ದೀರ್ಘವಾಗಿ ಹೇಳಬೇಕೆಂದು ಹೊರಟವನು ಮೈಯಲ್ಲಿ ವಿದ್ಯುತ್ ಹಾರಿ ಹೋದಂತಾಗಿ ಸುಮ್ಮನೆ ಕೂರುತ್ತಾನೆ. ಹಾಗೇ ನೂರಾರು ದಿನದಿಂದ ಆಗಿದೆ. ಅವನು ಕನಸಿದ್ದ ಹಾಡಿ ಹಾಡಿ ಹಂಬಲಿಸಿದ್ದ ದಿವ್ಯ ತಾದಾತ್ಮ್ಯದ ಆದರ್ಶ ಎಂದೂ ಸಾಕಾರವಾಗಿರಲೇ ಇಲ್ಲ. ಅದಕ್ಕೆ ಕಾರಣ ಆ ದರಿದ್ರ ಕಾಡು, ಬೆಟ್ಟ ಆ ಹಳ್ಳಿ ಅದರ ಸಾಂಪ್ರದಾಯಕತೆ ಅದರ ಮೌಡ್ಯ ಎಂದು ಬೈದುಕೊಳ್ಳುತ್ತಾ ಮತ್ತೊಂದು ಬಂಡೆಗೆ ಹಾರಿದ. ಅದೊಂದು ತುಸು ಕುಳ್ಳಗಿನ ಬಂಡೆ. ಬಂಡೆಗಳ ಗೊಂಚಲು ಅದು.

ಇದನ್ನು ಓದಿದ್ದೀರಾ?: ಎಸ್.ಎಫ್. ಯೋಗಪ್ಪನವರ್ ಅವರ ಕತೆ | ಆರಾಮ ಕುರ್ಚಿ

ಸಮುದ್ರವೇ ನೀನು ಕಪ್ಪು ಲೋಳೆಯ ಬಟ್ಟೆ. ಎತ್ತ ಕಡೆಗೆ ಬೇಕಾದರೂ ಹರಿವ ಅಮೀಬಾ. ಒಡೆದು ಬಿದ್ದ ಎಣ್ಣೆಯ ಗಡಿಗೆ. ಸಮುದ್ರವೇ ನೀನು ವಕ್ರಪಾದಿ. ಹಿಸ್ಸೆಂದು ಪೂತ್ಕರಿಸುವ ಕಪ್ಪು ಹಾವು. ಅಸಂಖ್ಯ ಹೆಡೆಗಳ ಹಾವು. ಹೀಗೆ ಯೋಚಿಸುತ್ತಾ ಹೋಗುತ್ತಿದ್ದವನಿಗೆ ಹಿಂದುಗಡೆಯಿಂದ ದನಿ ಬಂತು.

‘ಗೌತಮ, ಸತ್ಯದರ್ಶನಕ್ಕೆ ಲೇಟಾಯ್ತು, ಬಾ’ ಎಂದರು ಗೆಳೆಯರು.

2

ಗೌತಮನ ತಲೆ ತಿರುಗಿ ವಾಸ್ತವದ ಸಂಪರ್ಕವನ್ನು ಗ್ರಹಿಸುವಿಕೆಯ ಕ್ರಮವೇ ಪೂರಾ ಪಲ್ಲಟವಾಗಿತ್ತು. ಮೈಯೆಲ್ಲ ಕೆಟ್ಟ ಕಣ್ಣುಗಳಂತೆ ಹೊಳೆಯುತ್ತಿರುವ ದೊಡ್ಡ ಹೋಟೆಲೊಂದಕ್ಕೆ ಹೋದರು. ಗೌತಮನ ಮುಖ ಸತ್ಯದರ್ಶನದ ಆಸೆಯಿಂದಲೋ ಎಂಬಂತೆ ಗಂಭೀರವೂ ಉತ್ಕಟವೂ ಆಗಿಬಿಟ್ಟಿತ್ತು.

ಎತ್ತರದ ಬೆಟ್ಟಗಳ ನಡುವೆ ಕಿರು ಕಣಿವೆಯಂಥ ದಾರಿ. ಎರಡೂ ಕಡೆಗೆ ಬೆಟ್ಟಗಳದ್ದೇ ಎಫೆಕ್ಟ್ ಬರಲು ಅಂಟಿಸಿದ ವಾಲ್ ಪೇಪರ್‍‌ಗಳು. ತಡೆಯಲಾಗದೆ ಗೌತಮ ಅತ್ತಿತ್ತ ನೋಡಿ ಒಂದಷ್ಟು ವಾಲ್ ಪೇಪರನ್ನು ಹರಿದ. ಅದು ಪರ್‍ರಂತ ಹರಿದ ಕ್ಷಣ ಆಚೆಗೆ ಗವ್ವಂತ ಕತ್ತಲು. ಆಚೆಗೆ ಇರುವುದೇನು? ತಿಳಿಯಲಿಲ್ಲ. ಮೂಲೆಯ ಕಿಂಡಿಯಂಥ ಬಾಗಿಲು ತೆಗೆದ, ಗಿರಲು ಮೀಸೆಯ ವಾಚ್‌ಮನ್ ಹಿಂದಿಯಲ್ಲಿ ಕೂಗಿದ ಏನೊ. ಇವನು ಸರಸರನೆ ಮುಂದೆ ನಡೆದ.

ಹಾಗೇ ಕತ್ತಲಲ್ಲೆ ತಡಕುತ್ತ ತಡಕುತ್ತ ಗೌತಮ ನಡೆದ. ಆಗಲೇ ಅವಳು ಕಂಡದ್ದು. ಅರೆಗತ್ತಲಲ್ಲಿ ಭವ್ಯವಾಗಿ.

‘ನೀನು ಯಾರು?’ ಎಂದ ಗೌತಮ ಎದುರಿಗಿನ ಹುಡುಗಿಗೆ.

‘ನಾನು ಬೊಂಬಾಯಿಯ ಹುಡುಗಿ, ನೋಡಿದ್ರೆ ಗೊತ್ತಾಗಲ್ವ, ಹೆಸರು ದೇವಿ’ ಅಂತ ಕಿಲಕಿಲ ನಕ್ಕಳು.

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು

ನಾನು ‘ನಗರದೇವಿ’ ಎಂದಂತಾಯಿತು ಗೌತಮನಿಗೆ. ಮನಸ್ಸಿನೊಳಗೆ ಯಾವ್ಯಾವುದೋ ವೈರುಗಳು ತಗುಲಿ ಕಿಡಿ ಭಗ್ಗನೆ ಒಳಗೆ ಹೊತ್ತಿಕೊಂಡಂತಾಯಿತು. ಎಲ್ಲ ನಗರಗಳಿಗೂ ದೇವಿಯರಿರುತ್ತಾರೆ. ನಗರದೇವಿಯರು ಆ ನಗರಗಳ ದೈವೀರಾಣಿಯರು. ಮಥುರೆಗೆ ಮಥುರಾ, ಬೆಂಗಳೂರಿಗೆ ಅಣ್ಣಮ್ಮ, ಮೈಸೂರಿಗೆ ಚಾಮುಂಡಿ, ಕಲ್ಕತ್ತೆಗೆ ಕಾಳಿ. ಈಕೆ ಈ ಮಾಯಾನಗರಿಯ ದೇವಿ. ಅವನಿಗೆ ಈ ದೇವಿಯರ ಹುಚ್ಚು ಹಳೆಯದು. ಕಾಡಿಗೊಬ್ಬ ದೇವಿ, ಬೆಟ್ಟಕ್ಕೊಬ್ಬಳು ದೇವಿ ಇರುವ ನಂಬಿಕೆ ಅವನ ಆಧುನಿಕ ಪ್ರಜ್ಞೆಯೊಳಕ್ಕು ಇಳಿದು ಭದ್ರವಾಗಿ ಕೂತು ಬಿಟ್ಟಿತ್ತು. ಅವನು ಅದನ್ನು ಸೌಂದರ್ಯಾತ್ಮಕ ರೂಪಕವಾಗಿ ಮಾತ್ರ ಗ್ರಹಿಸಿದ್ದ.

ಆದರೆ, ಈ ರಾತ್ರಿ ಅದು ಸೌಂದರ್ಯಾತ್ಮಕ ರೂಪಕದಂತೆ, ಬರೇ ಅಮೂರ್ತ ನಂಬಿಕೆಯಂತೆ ಮಾತ್ರ ಕಾಣಲಿಲ್ಲ. ಎದುರಿಗೇ ಕಿಟಕಿ ಹತ್ತಿರ ಆಕೆ ನಿಂತ ಭಂಗಿಗೆ ವಾಸ್ತವಕತೆಗೆ ಮೀರಿದ ವಾಸ್ತವ ರೂಪ ಬಂದು ಬಿಟ್ಟಿತ್ತು. ಆಕೆಯೇ ಪಕ್ಕಕ್ಕೆ ಹೋಗಿ ಟಕ್ ಟಕ್ ಎಂದು ಎರಡು ದೀಪಗಳನ್ನು ಆರಿಸಿದಳು. ಆಕೆ ಈ ಎಲ್ಲಾ ವಿಲಾಸಕ್ಕೆ ಉಪಕರಣಗಳಿಗೆ ಅತಿ ಪರಿಚಿತಳೇ ಇರಬೇಕು. ರೂಮೊಳಗೆ ಸಣ್ಣ ಕೆಂಪು ದೀಪವೊಂದು ಮಾತ್ರ ಉರಿಯುತ್ತಿತ್ತು. ತೂಗು ದೀಪ ಬೇರೆ ಅದು. ಆಕೆಯೇ ಹೋಗಿ ಎಲ್ಲಾ ಕಿಟಕಿಗಳನ್ನು ತೆರೆದಳು.

ಇದ್ದಕ್ಕಿದ್ದಂತೆ ಗಾಳಿ ಭರೋ ಎಂದು ಬೀಸತೊಡಗಿತ್ತು. ಕಿಟಕಿ ಗಾಜುಗಳು ಫಡಫಡನೆ ಬಡಿದುಕೊಂಡವು. ಎದುರಿಗೆ ಗುಡ್ಡಗಳ ಮೇಲಿನ ಮನೆಗಳ ದೀಪಗಳು ಅತ್ತಿತ್ತ ಉಯ್ಯಾಲೆಯಾಡಿದವು. ಆಗ ಪ್ರತಿಯೊಂದು ಪದಾರ್ಥವು ತನ್ನ ತಾತ್ ಕ್ಷಣಿಕ ರೂಪದಿಂದ ಬಿಡಿಸಿಕೊಂಡು ಸಂಕೇತಗಳೆಂಬಂತೆ ಗೌತಮನಿಗೆ ಕಾಣತೊಡಗಿತು. ಮೂರು ಕಡೆಗೆ ಕಿಟಕಿಗಳಿದ್ದ ಕೋಣೆ. ಎರಡು ಕಡೆಗೆ ಗುಡ್ಡಗಳು, ಒಂದು ಕಡೆಗೆ ಸಮುದ್ರ. ಏಕೋ ಅವನಿಗೆ ತಾನು ಸಹ್ಯಾದ್ರಿಯ ಕಣಿವೆಯೊಂದರಲ್ಲಿ ತಾನು ಇದ್ದಂತೆ ಅನ್ನಿಸತೊಡಗಿತು. ದೇವಿ ನಿಧಾನಕ್ಕೆ ಆದರೆ, ಅಪಾರ ಆತ್ಮವಿಶ್ವಾಸದಿಂದ ನಡೆದು ಬಂದು ಕುರ್ಚಿಯ ಮೇಲೆ ಕೂತಳು. ಮೇಲೆ ಹೊದ್ದಿದ್ದ ಶಾಲನ್ನು ಮಂಚದ ಮೇಲೆಸೆದು ಕೂತಳು. ಸಡಿಲವಾದ ಬನೀನಂತಹ ಪಟ್ಟಾಪಟ್ಟಿ ಬಟ್ಟೆ. ದಂತದ ಬಣ್ಣದ ಹುಡುಗಿ. ಇದ್ದಕ್ಕಿದ್ದಂತೆ ಮೊದಲಿಗೆ ಜಡವಾಗಿ ಬೆಳಕಿಲ್ಲದೆ ಮಂಕಾಗಿದ್ದ ಅವಳ ಕಣ್ಣುಗಳು ಉಜ್ವಲವಾಗಿ ಬೆಳಗತೊಡಗಿದಂತೆ ಕಂಡಿತು ಗೌತಮನಿಗೆ. ಬ್ಯಾಗಿನಿಂದ ಸಿಗರೇಟು ಹಚ್ಚಿದಳು. ಹೊಗೆ ಇದ್ದಕ್ಕಿದ್ದಂತೆ ದಟ್ಟವಾದಂತೆ ಅಲೆಅಲೆಯಾಗಿ ಬೆಳೆದು ಚಕ್ರಚಕ್ರಗಳಾಗಿ ಹಬ್ಬಿದಂತಾಯಿತು.

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

‘ಕುಡಿಯಕ್ಕೆ ಏನೂ ಇಟ್ಟಿಲ್ವಾ ರೂಮಲ್ಲಿ’ ಎಂದಳು.

‘ನೀರಿದೆ ನೀರು, ಬೇಕಾ’ ಎಂದ ಗೌತಮ.

‘ನೀರಾ? ರಾತ್ರಿ ಏಳು ಗಂಟೆಯಾದ ಮೇಲೆ ನಾನು ಮುಖ ತೊಳೆಯಕ್ಕೂ ನೀರು ಬಳಸಲ್ಲ’ ಎಂದು ಗಹಗಹಿಸಿ ನಕ್ಕಳು. ಇವನ ಕಣ್ಣಲ್ಲೇ ಕಣ್ಣಿಟ್ಟು ಮಾತು ಮುಂದುವರಿಸಿದಳು. ಸಮುದ್ರದ ಕಡೆಗೆ ಕೈತೋರಿಸಿದಳು. ‘ಈ ನಗರದಲ್ಲಿ ನೀರು ಕುಡಿಯೋಕಲ್ರಿ ಇರೋದು, ನಗರದ ನೀರು ಕುಡೀಬಾರದು, ಇಲ್ಲಿ ಸಿಗೋ ನೀರು ಬೇರೇನೇ.’

ಗೌತಮ ಪೆದ್ದು ಪದ್ದಾಗಿ ನಕ್ಕ. ಮುಂದೆ ಏನು ಹೇಳಬೇಕು ಅಥವಾ ಮಾಡಬೇಕು ಅಂತ ತೋಚದೆ ಹಾಗೇ ಕೂತ. ಧಡಕ್ಕನೆ ಪಕ್ಕದ ರೂಮು ಬಾಗಿಲು ತೆಗೆದಂತಾಯಿತು. ಕುಮಾರ ಏನೊ ಜೋರಾಗಿ ಮತ್ತಿನಲ್ಲಿ ನಗುತ್ತಾ ಕೂಗುತ್ತಾ ಹೊರಗೆ ಹೋದಂತಾಯಿತು. ಅವನಾದರೂ ಜತೆಯಲ್ಲಿದ್ದರೆ ಚೆನ್ನಾಗಿತ್ತು.

‘ಸಿಟಿಗೆ ಹೊಸಬರೇನು? ಏನಕ್ಕೆ ಬಂದಿದೀರ?’ ಎಂದಳು. ತಾನು ಬಂದಿರೋದು ರೈತರ ಸಮ್ಮೇಳನಕ್ಕೆ ಅಂತ ಹೇಳಲು ಹೊರಟವನು ತಕ್ಷಣ ತಡೆದುಕೊಂಡು ಹೇಳಿದ. ‘ಸ್ಟೂಡೆಂಟ್ಸ್ ಓದಕ್ಕೆ ಅಂತ ಈ ಸಿಟಿಗೆ ಬಂದಿದೀವಿ, ಕಾಲೇಜಿಗೆ ಸೇರಕ್ಕೆ ಅಂತ బంದಿದೀವಿ.’

‘ಓದೋದಕ್ಕೆ! ಈ ಸಿಟಿಗೆ ಯಾರೂ ಓದೋಕೆ ಬರಲ್ಲ. ಸಿಟೀಲಿ ಸಾಯಂಕಾಲ ವಾಕಿಂಗ್ ಹೊರಟರೆ ಓದಿರೋದು ಎಲ್ಲಾ ಮರೆತು ಹೋಗುತ್ತೆ. ಅದನ್ನು ನಿಮ್ಮಂತಹ ಹುಡುಗರು ಮರೀಲಿ ಅಂತಲೇ ನಮ್ಮಂಥವರು ಇರೋದು’ ಎಂದಳು.

ಇದನ್ನು ಓದಿದ್ದೀರಾ?: ನಿರಂಜನ ಅವರ ಕತೆ | ಕೊನೆಯ ಗಿರಾಕಿ

ಹೊರಗಡೆ ಕಾರಿಡಾರಿನಿಂದ ಇದ್ದಕ್ಕಿದ್ದಂತೆ ಹಲವಾರು ಹುಡುಗಿಯರು ಕುಣಿಯುತ್ತಾ ಬಂದಂತಾಯಿತು. ಜತೆಗೆ ಕುಮಾರ್, ಕಮಲ್, ಆಚಾರ್ಯನ ಧ್ವನಿ. ಕಾರಿಡಾರ್‍‌ನಲ್ಲೇ ಅವರು ಕುಣಿಯುತ್ತಿದ್ದಂತೆ ಭಾಸವಾಯಿತು. ಗಮನಿಸಿದ ತನ್ನ ರೂಮಿನ ಸ್ಪೀಕರಿನಿಂದಲೂ ಸಂಗೀತ. ಅವರ ಕುಣಿತಕ್ಕೆ ತಕ್ಕ ತಾಳದ ಸಂಗೀತ. ಅವರ ಶರೀರಗಳು ತುಯ್ಯುವಗತಿ, ಸದ್ದು ಇವನ ರೂಮೊಳಗೆ ಬಂದಂತಾಯಿತು. ಹೋಟೆಲಿನ ಎಲ್ಲಾ ಕೋಣೆಗಳಿಂದಲೂ ಹಾಡು, ಕೂಗಾಟ ಕುಣಿದಾಟಗಳು ಒಟ್ಟಿಗೇ ನುಗ್ಗಿ ಆಕಾಶಕ್ಕೆ ನುಗ್ಗಿದಂತಾಯಿತು. ಹೋಟೆಲಿನ ನೆಲಮಾಳಿಗೆಯಿಂದ ನೂರು ಸಾವಿರ ಸಂಗೀತದ ರಾಗಗಳು ಒಟ್ಟಿಗೇ ಸಿಡಿದಂತೆ.

‘ಓ ಕಡೇ ಸೈರನ್ – ಜಾಮ್ ಸೈರನ್’ ಅಂದಳು ದೇವಿ.

ಹಾಗೇ ಅಂದವಳೇ ನಿಧಾನಕ್ಕೆ ಎದ್ದು ಬಂದಳು. ಇವನು ಕೂತಿದ್ದ ಕುರ್ಚಿಯ ಮೇಲೆ ಕೂತು ತೋಳುಗಳಿಂದ ಬಳಸಿದಳು. ನೀಲಮೇಘ ಶಾಮ, ನೀಲವಸನೆ ಆಕೆ. ಆದರೆ ಪಟ್ಟೆ ಪಟ್ಟೆಗಳ ಬಟ್ಟೆಯ ಆಕೆ ಇವನನ್ನು ಸುತ್ತಿಕೊಂಡಾಗ ಆಕೆ ಹೆಣ್ಣು ಹುಲಿ ಎಂದುಕೊಂಡ. ತಾನೂ ಕಾಡಿನವನು. ಒಂದು ಕ್ಷಣ ತಾನು ಜಿಂಕೆ ಎಂದುಕೊಂಡ. ಇಲ್ಲಾ ನಾನು ಗಂಡು ಹುಲಿ ಎಂದುಕೊಂಡ. ರಕ್ತದಲ್ಲಿ ಉದ್ರೇಕ ಶಕ್ತಿ ಸ್ಥಿತಿಗಳು ಒಟ್ಟಿಗೇ ಉಕ್ಕಿ ಬಂದು ಅವಳನ್ನು ಅನಾಮತ್ತಾಗಿ ಎತ್ತಿಕೊಂಡು ಮಂಚದ ಮೇಲೆ ಬಂದು ಬಿದ್ದ.

ಇದು ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿ. ಎಲ್ಲಾ ಬಂಧನಗಳೂ ಕಳಚಿ ಹೋದ ಸ್ಥಿತಿ. ಕಣಿವೆಗಳ ಸೀಮಿತ ಸ್ಥಿತಿಯಲ್ಲ. ವಿಸ್ತಾರ ಕಡಲಿನ ಸ್ಥಿತಿ. ಹಿಡಿದು ತಬ್ಬಿದಳು. ದೇವಿಯ ಪ್ರಧಾನ ಲಕ್ಷಣಗಳೇನು? ಉನ್ಮತ್ತತೆ. ಆಕಾರವೇ ಇರದ, ಗಡಿಯೇ ಇರದ ಉನ್ಮತ್ತತೆ. ಗುರಿಯೇ ಇರದ ಹುಚ್ಚು ಪ್ರಯಾಣ. ಎಲ್ಲ ಸೃಜನಶೀಲ ಪ್ರೇಮ ಕಾಮಗಳಲ್ಲೂ ಉನ್ಮತ್ತತೆಗೊಂದು ಆಕಾರವಿರುತ್ತದೆ. ಅರ್ಥವಿರುತ್ತದೆ. ಅದರ ಹುಚ್ಚುತನಕ್ಕೆ ಜಾಣತನದ ಚೌಕಟ್ಟಿರುತ್ತದೆ. ಅಲ್ಲಿಯ ಅಲೌಕಿಕತೆಗೆ ಲೌಕಿಕ ಹಿಡಿತವಿರುತ್ತದೆ. ದೇವಿ ಇವನನ್ನು ಹಿಡಿದು ಹಳೆ ಬಟ್ಟೆ ಹಿಂಡಿದಂತೆ ಹಿಂಡಿದ್ದಳು. ಬಾಲ್ಯದಲ್ಲಿ ಹುಚ್ಚು ಹೆಂಗಸಿನ ಕೈಗೆ ಸಿಕ್ಕಿ ಕೀರುತ್ತಿದ್ದ ನಾಯಿ ಮರಿಯ ನೆನಪು ನುಗ್ಗಿ ಬಂತು. ತನ್ನ ದೇಹ ಚಲನೆಯ ಲಯಗಳು ತನ್ನವಲ್ಲ ಎನ್ನಿಸಿತು. ತನ್ನೊಳಗಿನ ಆಸೆಗೆ ಸುಖಾಭಿಲಾಷೆಯ ತಾಳಕ್ಕೆ ನುಡಿದಂಥ ಕುಣಿದಂಥ ವಿಲಾಸವಲ್ಲ ಅದು.

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಆಕೆಯ ಕಣ್ಣುಗಳನ್ನೇ ದಿಟ್ಟಿಸಿದ. ಮಂಕಾಗಿ ಆರಿ ಹೋಗುತ್ತಿದ್ದ ತನ್ನ ನೈತಿಕ ಬೆಳಕಿನಲ್ಲಿ ಅವನ್ನು ಅರ್ಥೈಸಲು ಪ್ರಯತ್ನಿಸಿದ. ಕಂಡದ್ದು ಬರೀ ಹುಚ್ಚು. ಕರಿಯ ಪಾಪೆಗಳಾಳದಲ್ಲಿ ಕುಣಿದದ್ದು ಕಪ್ಪು ಟಾರಿನಂಥ ರಕ್ತಪಾದಿ ಸಮುದ್ರ. ಇತಿಹಾಸ ಪೂರ್ವ ರೂಪಿ ಹೆಬ್ಬಂಡೆಗಳು. ಸಂಭೋಗದ ಸಮಯದ ಶಬ್ದಗಳಿಗೆ ಚೀರಾಟಗಳಿಗೆ ವಿಚಿತ್ರ ಸಂಗೀತದ ಶಕ್ತಿ ಇರುವುದನ್ನು ಹಿಂದೆ ಗಮನಿಸಿದ್ದ. ಅದೇ ದಿವ್ಯ ತಾದಾತ್ಮ್ಯದ ಗಳಿಗೆ ಎಂದು ನಂಬಿದ್ದ. ಆದರೆ ಈಗ ಆ ಶಬ್ದ ಸುತ್ತಲಿನ ಜನಾರಣ್ಯದ ಹಿಂಸ್ರಕ ಶಬ್ದ. ಅಲೆಅಲೆಯಾಗಿ ಎದ್ದು ಸುತ್ತಲೆಲ್ಲಾ ತುಂಬಿತು. ಹೊರಗೆ ಮೂರು ಕಿಟಕಿಗಳಾಚೆಗೆ ನೋಡಲು ಪ್ರಯತ್ನಿಸಿದ. ಸುತ್ತ ಹಬ್ಬಿರುವ ಕಣ್ಣು ಸೋಲುವ ತನಕ ಹಬ್ಬಿರುವ ನಗರಾರಣ್ಯ. ಆಕಾಶಕ್ಕೆ ಆಕಾಶದ ಬಣ್ಣವಿಲ್ಲ. ಕಟ್ಟಡಗಳಿಗೆ ಮಾನವ ಸಂಬಂಧವಿಲ್ಲ. ನೀರಿಗೆ ತೊಳೆಯುವ ಗುಣವಿಲ್ಲ. ನಗರದೇವಿಗೆ ಸಂತೈಸುವ ಶಕ್ತಿಯಿಲ್ಲ ಎನಿಸಿ ವಿಹ್ವಲನಾದ. ಕೆಳಗೆ ಮಲಗಿರುವ ಹೆಣ್ಣು ವಿಸ್ತಾರ ವಿಸ್ತಾರವಾದ ನೀಲ ಸಮುದ್ರ. ತಾನೊಂದು ಪುಟ್ಟ ಬಂಡೆ. ಬೆರಳುಗಳು ಹರಿದಾಡಿದಾಗ ಮೈ ಮೇಲೆ ಅವು ಆ ನಗರ ಸಮುದ್ರದ ಕಸ, ಎಣ್ಣೆ, ತೇಲುವ ಗಲೀಜಂತೆ.

ಇದ್ದಕ್ಕಿದ್ದಂತೆ ದೀಪ ಆರಿ ಹೋಯಿತು. ಹೊರಗೆ ನೋಡಿ ಬೆಚ್ಚಿದ. ಕೆಳಗೆ ಸಮುದ್ರ ನರಳುತ್ತಿತ್ತು, ಊಳಿಡುತ್ತಿತ್ತು. ರೂಮಿನ ಕಿಟಕಿಗೆ ಹೊಂದಿಕೊಂಡಂತಿದ್ದ ಮರದಲ್ಲಿ ಆ ಕತ್ತಲಲ್ಲಿ ಹತ್ತಾರು ಅಲ್ಲ ನೂರಾರು ಮಿಂಚು ಹುಳುಗಳು. ಅಲ್ಲಲ್ಲಿ ಎಲೆಗಳೇ ಮಿಂಚು ಹುಳುಗಳಾದಂತೆ. ಒಂದೋ ಎರಡೋ ರೂಮಿಗೂ ಬಂದವು. ಇವನ ಸುತ್ತುಲೂ ನುಗ್ಗಿದವು.

ಆ ಮಿಂಚು ಹುಳುಗಳು ಇವನೊಳಗೇ ಏನೋ ಕತ್ತರಿಸಿದಂತಾಯಿತು. ಧಡಕ್ಕನೆ ಎದ್ದ. ‘ಏನದು’ ಎಂದಳು ದೇವಿ. ‘ಬೆಳಕಿನ ಹುಳ ಕಚ್ಚಿತು ‘ ಎಂದ. ‘ಅಯ್ಯೋ ಈ ಕತ್ತಲಿಗೆ ಅದರ ಕಚ್ಚುವಿಕೆ ಎಂಥಾ ಲೆಕ್ಕ ಬಾ, ಇಡೀ ರಾತ್ರಿ ಇದ್ದು ಬಿಡು. ಯಾಕೆ, ಇಡೀ ಜೀವನ ಇದ್ದು ಬಿಡು. ಇಡೀ ಲೈಫು ಬಾಂಬೆಲೇ ಇರಬೇಕು ಅಂತ ಅನ್ನಸ್ತಾ ಇಲ್ವಾ’ ಎಂದಳು.

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

ಎದ್ದವನೇ ಏತರಿಂದಲೊ ತಪ್ಪಿಸಿಕೊಳ್ಳುವವನ ಹಾಗೆ ಭೀತನಾಗಿ ಏನನ್ನೊ ಬಯಸುವವನ ಹಾಗೆ ಆರ್ತನಾಗಿ ಎದುರಿಗಿನ ರೂಮಿಗೆ ಓಡಿದ. ಅಲ್ಲಿಂದ ಮೂವರು ಹುಡುಗಿಯರು ಹೊರಬಂದರು. ಅದೇ ಪಟ್ಟಾಪಟ್ಟಿ ಬಣ್ಣದ ದೊಗಲ ಅಂಗಿ. ಅಗಲವಾದ ಕುಂಕುಮ. ಎತ್ತರದ ತುರುಬು. ಕಣ್ಣುಗಳಲ್ಲಿ ಎಣ್ಣೆಯ ಸಮುದ್ರ. ಕಿಲಕಿಲದ ಆರ್ಭಟ. ಎಲ್ಲರೂ ಒಂದೇ ಥರ.

ರೂಮಿನೊಳಕ್ಕೆ ಹೋದ. ಹೊಗೆ ದಟ್ಟವಾಗಿ ಹಿಮದ ಹಾಗೆ ಎಲ್ಲ ತುಂಬಿ ಬಿಟ್ಟಿತ್ತು. ಮೂಲೆಯಲ್ಲೊಂದು ಮೇಣದ ಬತ್ತಿ. ವಿಕಾರ ಫಿರಳುಗಳು, ಪ್ಲೇಟುಗಳಲ್ಲಿ ಬಿರಿಯಾನಿ, ಮಾಂಸದ ಚೂರು, ಗಬಗಬನೆ ತಿಂದ.

‘ಗಂಟೆ ಮೂರು ಮಲಗೋಣ’ ಎಂದ ಕುಮಾರ್. ಗಬಗಬನೆ ಮುಕ್ಕುತ್ತಿದ್ದ ಗೌತಮನಿಗೆ ವಾಂತಿ ಉಕ್ಕಿ ಬಂದಂತಾಗಿ ಹೊರಗೆ ಬಾಲ್ಕನಿಗೆ ಓಡಿದ. ತಿಂದ ಎಲ್ಲವನ್ನೂ ಕಕ್ಕಿದ. ಅಷ್ಟೇ ಅಲ್ಲ ತನ್ನ ಸಮಸ್ತ ನರಮಂಡಲವನ್ನು ತೊಳೆಯುವುದಕ್ಕೋ ಏನೊ ಎಂಬಂತೆ ಮತ್ತೆ ಮತ್ತೆ ಕಕ್ಕಿದ. ಗೆಳೆಯರು ಹೊರ ಬಂದರು. ಯಾರಿಗೂ ಅಂಥ ಗಾಬರಿಯಾಗಲಿಲ್ಲ. ‘ನೀರು ಕುಡಿಯೊ’ ಅಂದರು. ಬಾಲ್ಕನಿಯ ಕಂಬಿ ಹಿಡಿದು ಆಚೆ ನೋಡಿದ. ಮತ್ತೆ ಅದೇ ಸಮುದ್ರ. ಹಿಮ ಸುತ್ತುವರಿದ ಆ ತೆಳು ನೀಹಾರಿಗಳಾಚೆಗೆ ಗೆರೆ ಕೊರೆದ ಚಂದ್ರ. ಅದು ಚಂದ್ರನೊ ಇಲ್ಲ ಯಾವುದಾದರೂ ದೋಣಿಯ ದೀಪವೋ? ಅದು ಚಂದ್ರನಾಗಿದ್ದರೆ ಇದು ನಿಜವಾಗಿದ್ದರೂ ನೀಹಾರಿಕೆಯಾಗಿದ್ದರೆ ಅದಕ್ಕೊಂದು ಹೊಸ ಎಚ್ಚರದ ಸಾಂಕೇತಿಕಾರ್ಥವನು ಕಲ್ಪಿಸಿಕೊಳ್ಳುತ್ತಿದ್ದ. ಈಗ ಅಂಥ ಸ್ಪಷ್ಟ ಸ್ಥಿತಿ ಸಾಧ್ಯವಿಲ್ಲ. ಆದರೆ, ಮಿಂಚು ಹುಳ ಮಾತ್ರ ಕೋಣೆಗೆ ಬಂದದ್ದು ಸತ್ಯ. ನಗರ ದೇವಿಯಿಂದ ಬಿಡಿಸಿಕೊಂಡದ್ದಷ್ಟಾದರೂ ಸತ್ಯ. ಅದು ನಿಜವಾಗಿಯೂ ಚಂದ್ರನೇ ಏನು? ನಾವು ಬಯಸುವ ಸಂಕೇತಗಳು ನಮಗೆ ಆಳವಾದ ನಂಬಿಕೆ ಹುಟ್ಟಿಸುವಷ್ಟು ನಿಜವಾಗಿ ಕಾಣುವುದಿಲ್ಲವೇಕೆ.

ಇದನ್ನು ಓದಿದ್ದೀರಾ?: ಕುವೆಂಪು ಅವರ ಕತೆ | ಧನ್ವಂತರಿಯ ಚಿಕಿತ್ಸೆ

ತಲೆ ತಿರುಗುತ್ತಿದ್ದರೂ ಒಳಕ್ಕೆ ಬಂದ. ಹೊಗೆ, ಹಿಮ, ಗೆಳೆಯರು ಕೇಳಿದರು- ‘ಗುರೂ ಈ ಮಹಾನಗರ ಏನನ್ನಿಸಿತು?’

ಗೌತಮ ಆತಂಕದಲ್ಲೇ ಉತ್ತರ ಕೊಟ್ಟ, ನಿಧಾನವಾಗಿ, ವಿಸ್ತಾರವಾಗಿ.

-ಈ ನಗರದ ದೋಷಗಳು ನಾಲ್ಕು-

‘ದಂಡೆಗಳ ಮೇಲಿಂದ ಹರಿದು ಹೋಗುವ ನೀರು, ಗೂಟ ಮತ್ತು ಮುಳ್ಳುಗಳಿಂದ ತುಂಬಿ ನಾಡು, ಮರಳು ಮತ್ತು ನರಜುಗಲ್ಲುಗಳ ನೆಲ, ರಾತ್ರಿಯ ಕಡೆಯ ಜಾವದಲ್ಲಿ ಊಟ. ಮತ್ತು ಬಹಳ ಜನ ಸ್ತ್ರೀಯರು.’

ಗೆಳೆಯರು ಜೋರಾಗಿ ನಕ್ಕು ಚಪ್ಪಾಳೆ ಹೊಡೆದರು. ಮತ್ತೆ ಏಕೊ ಅವನ್ನು ಹೇಳಿದ್ದನ್ನೆ ನೆನೆಸಿಕೊಂಡಂತೆ ಅದು ಹೊಸದೊಂದು ಸತ್ಯ ಹೊಳೆಸಿದಂತೆ ಭೀತರಾದರು.

ಗೌತಮ ತಣ್ಣಗೆ ಮುಂದುವರೆಸಿದ.

‘ಎಲ್ಲಕ್ಕಿಂತ ದೊಡ್ಡ ಕರಾಳ ಶಕ್ತಿ ಎಂದರೆ ಈ ನಗರದೇವಿ, ಅವಳು ಅದರ ಆತ್ಮ. ಆಕೆಯ ಜತೆಗಿದ್ದು ನಾನು ಕಂಗಾಲಾಗಿ ಹೋದೆ, ನಮ್ಮ ಹಳ್ಳಿಗೆ ನಾನು ನಾಳೆ ವಾಪಸು.’

ಗೆಳೆಯರು ಮತ್ತಷ್ಟು ಬೆಚ್ಚಿದಂತೆ ಕಂಡಿತು. ಇವನನ್ನೇ ಅಸೂಯೆಯಿಂದ, ಪ್ರೀತಿ ಗೌರವ ಮಿಶ್ರಿತ ಆರ್ತತೆಯಿಂದ ನೋಡಿದರು. ಅವರಿಗೆ ವಾಪಸು ಹೋಗಲು ಹಳ್ಳಿಯೂ ಇಲ್ಲ. ಈ ಮಾಯಾ ನಗರಿಯಿಂದ ಬಿಡುಗಡೆಯೂ ಇಲ್ಲ.

ಅವರು ಹಾಗೆ ನೋಡುತ್ತಿದ್ದ ಹಾಗೆಯೇ ಗೌತಮ ಹೊರಕ್ಕೆ ನಡೆದ.

(ಕೃಪೆ: ಏಕಾಂಗಿ ಮತ್ತು ಇತರ ಕಥೆಗಳು, ಲೇ: ಡಾ. ಡಿ.ಆರ್. ನಾಗರಾಜ್, ವಸಂತ ಪ್ರಕಾಶನ, ಬೆಂಗಳೂರು)

DR Nagaraj

ಡಿ.ಆರ್. ನಾಗರಾಜ್(1954–1998): ಕನ್ನಡದ ಖ್ಯಾತ ವಿಮರ್ಶಕ ಹಾಗೂ ಚಿಂತಕ. ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಬಿಎ, ಎಂಎ ಪದವಿ ಪಡೆದು ಕನ್ನಡ ಅಧ್ಯಾಪಕರಾದರು. ಪ್ರವಾಚಕರಾದರು. ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರಾದರು. ನಂತರ ಅಮೆರಿಕದ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಹಾಗೂ ಅಕ್ಷರ ಪ್ರಕಾಶನದ ಅಕ್ಷರ ಚಿಂತನ ಮಾಲೆಯ ಸಂಪಾದಕರಾಗಿಯೂ ದುಡಿದರು. ಮಾರ್ಕ್ಸ್, ಲೋಹಿಯಾ, ಗಾಂಧೀವಾದಿಯಾಗಿದ್ದರು. ಅಮೃತ ಮತ್ತು ಗರುಡ (1983), ಶಕ್ತಿ ಶಾರದೆಯ ಮೇಳ (1987), ಸಾಹಿತ್ಯ ಕಥನ (1996), ಅಲ್ಲಮ್ಮ ಮತ್ತು ಶೈವ ಪ್ರತಿಭೆ (1999), ಸಂಸ್ಕೃತಿ ಕಥನ (2001), ಪಾಶ್ಚಾತ್ಯ ಸಾಹಿತ್ಯ ಮಾರ್ಗದರ್ಶಿ ಸಂಪುಟ-1 ಗ್ರೀಕ್ ಸಾಹಿತ್ಯ (1981), ವಸಂತ ಸ್ಮೃತಿ (ಪರ್ಶಿಯನ್ ಸೂಫಿ ಕವಿ ರೂಮಿಯ ಕಾವ್ಯಾನುವಾದ-1992), ಉರ್ದು ಸಾಹಿತ್ಯ ಸಂಕಲನ 1990, ಕತ್ತಲೆ ದಾರಿ ಬಹು ದೂರ(ನಾಟಕ), ಏಕಾಂಗಿ ಮತ್ತು ಇತರ ಕಥೆಗಳು(ಕಥಾ ಸಂಕಲನ), The flaming feet (ಉರಿ ಚಮ್ಮಾಳಿಗೆ) 1993, Recreating each other, Shiva’s plight 1987(ಇಂಗ್ಲಿಷ್) ಇವು ಇವರ ಪ್ರಕಟಿತ ಕೃತಿಗಳು. ಕನ್ನಡದ ಮೂಲಕವೇ ಸಮಸ್ತ ವಿಶ್ವವನ್ನು ಕಂಡುಕೊಳ್ಳುವ ಮಹತ್ವಾಕಾಂಕ್ಷೆಯ ಅಕ್ಷರ ಚಿಂತನ ಮಾಲೆಯ ಸಂಪಾದಕರಾಗಿ ಸತ್ಯದ ನವದರ್ಶನ, ಆಶೀಶ್‍ನಂದಿ ವಿಚಾರಗಳು, ವಾಕ್ಯಪದೀಯ, ದಾರಾಶಿಖೊ, ದಾವ್‍ದಜಂಗ್, ಅಭಿನವಗುಪ್ತ, ಭಾರತೀಯ ಸ್ತ್ರೀವಾದ, ಆನಂದಕುಮಾರಸ್ವಾಮಿ, ಪ್ರತಿಭೆಯ ಒಂದು ಪ್ರವಾಹ ಮೊದಲಾದ ಅನೇಕ ಅಮೂಲ್ಯ ಪುಸ್ತಿಕೆಗಳನ್ನು ಹೊರತಂದಿದ್ದಾರೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಪ್ರಶಸ್ತಿಗಳು ಸಂದಿವೆ. 1998ರಲ್ಲಿ ಬೆಂಗಳೂರಿನಲ್ಲಿ ನಿಧನರಾದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ವಿವೇಕ ಶಾನಭಾಗ ಅವರ ಕತೆ | ಲಂಗರು

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಉಮಾ ರಾವ್ ಅವರ ಕತೆ | ಅಗಸ್ತ್ಯ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಬಿ.ಟಿ. ಜಾಹ್ನವಿ ಅವರ ಕತೆ | ದೂಪ್ದಳ್ಳಿ ಸೆಕ್ಸಿ ದುರುಗ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...