ಕಾವ್ಯ ಮತ್ತು ಸಂಗೀತವು ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಕಾವ್ಯ ಆತ್ಮವಾದರೆ, ಸಂಗೀತ ಅದರ ಶರೀರವಾಗಿದೆ ಎಂದು ಕವಯಿತ್ರಿ ಡಾ.ಶ್ರೇಯಾ ಮಹೇಂದ್ರಕರ ಹೇಳಿದರು.
ಬೀದರ್ ನಗರದ ಮೈಲೂರು ಕ್ರಾಸ್ ಸಮೀಪದ ಮಹಾಲಕ್ಷ್ಮಿ ಸಭಾಂಗಣದಲ್ಲಿ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ, ಗೌರವ ಸನ್ಮಾನ ಹಾಗೂ ಸಂಗೀತ ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಕಾವ್ಯವು ಅನುಭವ ಮತ್ತು ಅಧ್ಯಯನದಿಂದ ಮೂಡಿಬಂದಾಗ ಮಾತ್ರ ಅದಕ್ಕೆ ಮೌಲ್ಯ ಸಿಗುತ್ತದೆ. ಸಂಗೀತದೊಂದಿಗೆ ಒಡನಾಡಿದ ಕವಿತೆಗಳು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಇಂದಿನ ಒತ್ತಡದ ಬದುಕಿನಲ್ಲಿ ಸಂಗೀತ ಅತ್ಯಂತ ಅಗತ್ಯವಾಗಿದ್ದು, ಸಂಗೀತ ಆಲಿಸುವುದರಿಂದ ಬದುಕಿಗೆ ನೆಮ್ಮದಿ ದೊರೆಯುತ್ತದೆ. ಅಶ್ಲೀಲ, ಅಸಭ್ಯ ಸಂಗೀತ ಭವಿಷ್ಯದ ಬದುಕಿಗೆ ಮಾರಕವಾಗಬಹುದು” ಎಂದು ಎಚ್ಚರಿಕೆ ನೀಡಿದರು.
ಸಾಹಿತಿ ಡಾ.ನಿಜಲಿಂಗ ರಗಟೆ ಆಶಯ ನುಡಿದ ಅವರು, ʼಕಾವ್ಯವು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಕಾವ್ಯವು ಕೇವಲ ವಾಕ್ಯವಲ್ಲ, ಅದು ಮನಸ್ಸನ್ನು ಮುದಗೊಳಿಸುವ ಅದ್ಭುತ ಮಂತ್ರ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವೇ ಕಾವ್ಯದ ಮೂಲ ಉದ್ದೇಶವಾಗಬೇಕುʼ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಚೆನ್ನಮ್ಮ ವಲ್ಲೆಪುರೆ ಮಾತನಾಡಿ, ʼಕವಿತೆ ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಭಾವನೆಗಳ ಪ್ರತಿಬಿಂಬವಾಗಿದ್ದು, ಜವಾಬ್ದಾರಿಯಿಂದ ಬರೆಯಬೇಕು. ಕವಿತೆ ದ್ವೇಷದ ನಡುವೆ ಪ್ರೀತಿಯನ್ನು ಹರಡಬೇಕು ಹಾಗೂ ಮಹಿಳೆಯರ ಶೋಷಣೆ ವಿರುದ್ಧ ಧ್ವನಿ ಎತ್ತುವ, ಅನ್ಯಾಯ, ಭ್ರಷ್ಟಾಚಾರವನ್ನು ಖಂಡಿಸುವ ಕಾವ್ಯ ಬರಬೇಕುʼ ಎಂದು ಕರೆ ನೀಡಿದರು.
ಗಾಯಕಿ ರೇಖಾ ಅಪ್ಪಾರಾವ ಸೌದಿ ಅವರು ಭಾವಗೀತೆಗಳನ್ನು ಹಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಪ್ರಾಧ್ಯಾಪಕ ರಾಮಚಂದ್ರ ಗಣಪೂರ ಅವರು ಕಾವ್ಯ ಕುರಿತ ಅನುಭವ ಹಂಚಿಕೊಂಡರು. ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಧನರಾಜ ಅಣಕಲ್, ಧನಲಕ್ಷ್ಮಿ ಪಾಟೀಲ, ಸ್ವರೂಪರಾಣಿ ನಾಗೂರೆ, ಪ್ರೇಮ ಅವನಾಶ, ಮಾಯಾದೇವಿ ಗೋಖಲೆ, ಸುಜಾತ ಹೊಸಮನಿ, ಎಸ್.ಬಿ.ಕುಚಬಾಳ, ಕುಸುಮ ಹತ್ಯಾಳ, ವೀರಶೆಟ್ಟಿ ಪಾಟೀಲ್, ಸುರೇಖಾ, ಅರವಿಂದ ಕುಲಕರ್ಣಿ, ಬಾಪುರಾವ ಮಡಕಿ ಅವರು ತಮ್ಮ ಸ್ವರಚಿತ ಕವಿತೆ ವಾಚಿಸಿದರು.
ಗೌರವ ಸನ್ಮಾನಕ್ಕೆ ಭಾಜನರಾದ ಎಂ.ಎಸ್. ಮನೋಹರ, ಇಂದುಮತಿ ಸುತಾರ, ಸಂಗಮೇಶ್ ಬಿರಾದರ, ಉಮಾಕಾಂತ ಮೀಸೆ, ದೇವದಾಸ ಚಿಮಕೋಡ, ವೀರಭದ್ರಪ್ಪ ಉಪ್ಪಿನ, ಹಣ್ಮು ಪಾಜಿ, ಸುಧಾಕರ ಪಾಟೀಲ್ ಮರಕಲ್, ನಾಗೇಂದ್ರ ದಂಡೆ, ಶಂಭುಲಿಂಗ ವಾಲ್ದೊಡ್ಡಿ, ಸೂರ್ಯಕಾಂತ ಕುಲಕರ್ಣಿ, ಸುಧಾಕರ ಪಾಟೀಲ್, ಅಶೋಕ್ ಬೂದಿಹಾಳ, ವಿಜಯಕುಮಾರ್ ಸೋನಾರೆ ಅವರನ್ನು ಸನ್ಮಾನಿಸಲಾಯಿತು.
ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರಾದ ಶಿವಕುಮಾರ ಪಾಂಚಾಳ, ಮಲ್ಲಿಕಾರ್ಜುನ್ ರಾಂಪುರೆ, ರಮೇಶ್ ಕೋಳಾರ್, ಚಂದ್ರಕಾಂತ್ ಪೂಜಾರಿ, ಗಂಗಮ್ಮ, ಶಿಲ್ಪಾ ಪಾಟೀಲ, ಮಹಾದೇವಿ ಹಾಗೂ ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಾಂಸ್ಕೃತಿಕ ಸಂಘದ ಮಹಿಳೆಯರು ಹಾಗೂ ಶಿವರಾಜ ಕಾಳಶೆಟ್ಟಿ, ಜಗನ್ನಾಥ ಯರನಳ್ಳಿ, ರೇವಣಪ್ಪ ಮೂಲಗೆ, ದಿಲೀಪ್ ಕುಮಾರ ಕಾಡವಾದ, ಅಂಕಿತಾ ಬಚ್ಚಣ್ಣ ಸೇರಿದಂತೆ ಅನೇಕ ಕಲಾವಿದರು ಸಂಗೀತ ಮನರಂಜನೆ ನಡೆಸಿಕೊಟ್ಟರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ ಹೊಸ 6 ಜಿಲ್ಲೆ, 12 ತಾಲೂಕು ರಚನೆಗೆ ಒತ್ತಾಯ
ಕಾರ್ಯಕ್ರಮದಲ್ಲಿ ಕುಮಾರಿ ಆಸ್ತಾ ಬಚ್ಚಣ್ಣ ಹಾಗೂ ಕುಮಾರಿ ಪ್ರಿಯಾಂಕಾ ಅವರು ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಮಹೇಶ್ ಬಚ್ಚಣ್ಣ ಸ್ವಾಗತಿಸಿದರು. ಶಿಲ್ಪಾ ಮಜಗೆ ಮತ್ತು ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಮಲ್ಲಿಕಾರ್ಜುನ ಸ್ವಾಮಿ ವಂದಿಸಿದರು.




