ಬಸವಣ್ಣ ಪ್ರಪಂಚದ ಸಾಂಸ್ಕೃತಿಕ ನಾಯಕ, ಅವರು ಬೋಧಿಸಿದ ತತ್ವಗಳು ಭಾರತೀಯ ಸಂವಿಧಾನದ ಉನ್ನತ ಮೌಲ್ಯಗಳಾಗಿ ರೂಪುಗೊಂಡಿವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಶಂಕರ ಎಂ ಬಿದರಿ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಭವನದಲ್ಲಿ ಬಸವೇಶ್ವರ ಅಧ್ಯಯನ ಪೀಠದಿಂದ ಹಮ್ಮಿಕೊಂಡಿದ್ದ ʼವಿಶ್ವಗುರು ಮತ್ತು ಸಾಂಸ್ಕೃತಿಕ ನಾಯಕ ಬಸವೇಶ್ವರರ 893ನೇ ಜಯಂತಿʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಸಮಾನತೆ, ಭ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆ ಎಂಬ ಮೂಲಭೂತ ತತ್ವಗಳನ್ನು ಅವರು 12ನೇ ಶತಮಾನದಲ್ಲಿಯೇ ಪ್ರತಿಪಾದಿಸಿದ್ದರು. ಇವು ಇಂದಿನ ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ. ಬಸವಣ್ಣನವರ ವಚನಗಳು ಕೇವಲ ಧಾರ್ಮಿಕ ಉಪದೇಶಗಳಲ್ಲ; ಅವು ಜೀವನಪಾಠಗಳಾಗಿವೆ. ‘ಕಾಯಕವೇ ಕೈಲಾಸ’ ಎಂಬ ಅವರ ಸಂದೇಶವು ಕೆಲಸದ ಗೌರವವನ್ನು ಎತ್ತಿಹಿಡಿಯುತ್ತದೆ. ಪ್ರತಿಯೊಬ್ಬರೂ ತಮ್ಮ ಪರಿಶ್ರಮದಿಂದ ಜೀವನ ನಡೆಸಬೇಕು ಮತ್ತು ಯಾವುದೇ ಕೆಲಸವನ್ನು ಹೀನ-ಶ್ರೇಷ್ಠತೆಗಳ ಅಳತೆಯಲ್ಲಿ ನೋಡುವುದನ್ನು ತೊರೆದು ಗೌರವದಿಂದ ಕಾಣಬೇಕು” ಎಂದು ಹೇಳಿದರು.
“ಶಿಕ್ಷಣವೆಂಬುದು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗಿರದೆ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗಬೇಕು. ಆತ್ಮವಿಶ್ವಾಸ, ಶಿಸ್ತಿನ ಜೀವನ, ಪರಿಶ್ರಮ ಮತ್ತು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯ. ಈ ಗುರಿ ಸಾಧನೆಗೆ ಮಹಿಳಾ ವಿವಿಯಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿರುವುದು ಸಂತಸದ ಸಂಗತಿ” ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ> ವಿಜಯಪುರ | ಮಹಿಳಾ ವಿವಿಯಲ್ಲಿ ಬಸವ ಅಧ್ಯಯನ ಪೀಠ ಇಲ್ಲದಿರುವುದು ದುಃಖಕರ: ಡಾ. ಶಶಿಕಾಂತ ಪಟ್ಟಣ
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ವಿ ಸಿ ನಾಗಠಾಣ ಮಾತನಾಡಿ, “ವಿದ್ಯಾರ್ಥಿನಿಯರು ಬಸವಣ್ಣರ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದ ಸೇವೆ ಮಾಡುವುದರ ಜತೆಗೆ ಅಕ್ಕಮಹಾದೇವಿಯ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ವಿಜಯಾ ಬಿ. ಕೋರಿಶೆಟ್ಟಿ ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ತತ್ವಗಳು ಕಾಲಾತೀತವಾಗಿದ್ದು, ಇಂದಿನ ಸಮಾಜಕ್ಕೂ ದಿಕ್ಕು ತೋರಿಸುತ್ತಿವೆ. ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸಲು ಅವರ ಚಿಂತನೆಗಳು ಮಾರ್ಗದರ್ಶಕವಾಗಿವೆ” ಎಂದು ಹೇಳಿದರು.
“ಮಹಿಳಾ ಸಬಲೀಕರಣದ ದೃಷ್ಟಿಯಿಂದ ಬಸವಣ್ಣ ಮತ್ತು ಅಕ್ಕಮಹಾದೇವಿಯವರ ಚಿಂತನೆಗಳು ಅತ್ಯಂತ ಮಹತ್ವದ್ದಾಗಿವೆ. ಅಕ್ಕಮಹಾದೇವಿಯವರು ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟಳೆಗಳನ್ನು ಪ್ರಶ್ನಿಸಿ ಮಹಿಳೆಯರಿಗೆ ಸ್ವಾತಂತ್ರ‍್ಯ ಮತ್ತು ಆತ್ಮಗೌರವದ ಹಕ್ಕುಗಳನ್ನು ಒತ್ತಿ ಹೇಳಿದ್ದಾರೆ. ಇಂತಹ ಮಹಾನ್ ಚಿಂತನೆಗಳನ್ನು ಇಂದಿನ ವಿದ್ಯಾರ್ಥಿನಿಯರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ಬದಲಾವಣೆ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಅವರು, ಬಸವಣ್ಣನವರ ಕುರಿತು ರಸಪ್ರಶ್ನೆ, ಚರ್ಚಾ ಸ್ಪರ್ಧೆ ಹಾಗೂ ವಚನ ವಾಚನ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಾದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ಬಿ ಎಲ್ ಲಕ್ಕಣ್ಣವರ, ಸಾಹಿತಿಗಳಾದ ಎಂ ಜಿ ಯಾದವಾಡ, ಕಾಶೀನಾಥ ಅಣ್ಣೇಪನ್ನವರ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಇದ್ದರು.




