ನಿಸರ್ಗದತ್ತವಾಗಿ ಉಚಿತವಾಗಿ ದೊರೆಯಬೇಕಾದ ನೀರು ಮುಂದೊಂದು ದಿನ ಹಾಲಿನ ದರಕ್ಕಿಂತಲೂ ದುಬಾರಿಯಾಗಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಆತಂಕ ವ್ಯಕ್ತಪಡಿಸಿದರು.
ಬೀದರ್ ನಗರದ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಂ ಯುವಾ ಹಾಗೂ ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ಗಳ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ನೀರು, ಪರಿಸರ, ಬರ: ನೆಲದಾಳದಲ್ಲಿ ಹರಿಯುವ ಇತಿಹಾಸ–ಬೀದರಿನ ಕರೇಜ್- ನೀರಿನ ಭವಿಷ್ಯಕ್ಕೆ ಭೂತಕಾಲದ ಪಾಠ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
“ಸುಮಾರು 30 ವರ್ಷಗಳ ಹಿಂದೆ ನೀರಿಗಾಗಿ ಕುಟುಂಬದ ಸದಸ್ಯರು ಮೂರ್ನಾಲ್ಕು ಕಿ.ಮೀ. ನಡೆದು ನೀರು ತರುವ ಪರಿಸ್ಥಿತಿ ಇತ್ತು. ಬಳಿಕ ಮನೆ-ಮನೆಗಳಲ್ಲಿ ತೆರೆದ ಬಾವಿ ಹಾಗೂ ಕೊಳವೆಬಾವಿಗಳು ನಿರ್ಮಾಣವಾದ ಪರಿಣಾಮ ನೀರು ಸುಲಭವಾಗಿ ದೊರೆಯುವಂತಾಯಿತು. ಆದರೆ, ಇದೀಗ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ನೀರಿನ ದುರ್ಬಳಕೆಯೂ ಹೆಚ್ಚಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಭವಿಷ್ಯದಲ್ಲಿ ತೀವ್ರ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ” ಎಂದು ಹೇಳಿದರು.
ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ ಪ್ಯಾಗೆ ಮಾತನಾಡಿ, “ಗಿಡ-ಮರಗಳನ್ನು ಬೆಳೆಸದೆ ಅರಣ್ಯ ನಾಶದಿಂದ ಪರಿಸರದ ಸಮತೋಲನ ಹದಗೆಡುತ್ತಿದೆ. ಇದರಿಂದ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಹಾಗೂ ಹವಾಮಾನ ವೈಪರೀತ್ಯ ಉಂಟಾಗಿ ಬರ ಪರಿಸ್ಥಿತಿ ಎದುರಾಗುತ್ತಿದೆ. ನೀರು, ಗಾಳಿ ಹಾಗೂ ಆಹಾರ ನಿಸರ್ಗದ ಅಮೂಲ್ಯ ಸಂಪತ್ತಾಗಿದ್ದು, ಅವುಗಳ ಮೇಲೆ ಮಾನವ ಬದುಕು ಅವಲಂಬಿತವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಬದುಕಿಗೆ ಅನಿವಾರ್ಯವಾದ ಗಾಳಿ, ನೀರು ಮತ್ತು ಆಹಾರವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಬರ, ಪ್ರವಾಹದಂತಹ ಪ್ರಕೃತಿ ವಿಕೋಪಗಳು ಮರುಕಳಿಸದಂತೆ ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಒಗ್ಗೂಡಿ ಬರಗಾಲ ತಡೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸಬೇಕು. ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಮರವನ್ನಾದರೂ ಬೆಳೆಸುವ ಸಂಕಲ್ಪ ಮಾಡಬೇಕು. ನೀರನ್ನು ಮಿತವಾಗಿ ಬಳಸುವ ಮೂಲಕ ನಿಸರ್ಗದ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಟೀಂ ಯುವಾ ಸಂಯೋಜ ವಿನಯಕುಮಾರ ಮಾಳಗೆ ‘ನೆಲದಾಳದಲ್ಲಿ ಹರಿಯುವ ಇತಿಹಾಸ: ಬೀದರಿನ ಕರೇಜ್-ನೀರಿನ ಭವಿಷ್ಯಕ್ಕೆ ಭೂತಕಾಲದ ಪಾಠ’ ವಿಷಯ ಕುರಿತು ಮಾತನಾಡಿ, “ಬಹಮನಿ ಸುಲ್ತಾನ್ ಅಹ್ಮದ್ ಶಾ ವಲಿ ಅವರು 1423ರಲ್ಲಿ ರಾಜಧಾನಿಯನ್ನು ಕಲಬುರಗಿಯಿಂದ ಬೀದರ್‌ಗೆ ಸ್ಥಳಾಂತರಿಸಿದ ಸಂದರ್ಭದಲ್ಲಿ ಪರ್ಷಿಯನ್ ತಂತ್ರಜ್ಞರ ಮೂಲಕ ಕರೇಜ್ (ಸುರಂಗಬಾವಿ) ನೀರಾವರಿ ವ್ಯವಸ್ಥೆಯನ್ನು ಬೀದರ್‌ಗೆ ಪರಿಚಯಿಸಿದರು” ಎಂದು ವಿವರಿಸಿದರು.
“ಗುಡ್ಡದ ಬುಡದಲ್ಲಿರುವ ಅಂತರ್ಜಲವನ್ನು ಸ್ವಲ್ಪ ಇಳಿಜಾರಿನ ಸುರಂಗದ ಮೂಲಕ ಗುರುತ್ವಾಕರ್ಷಣೆಯ ಸಹಾಯದಿಂದ ಊರಿನವರೆಗೆ ಹರಿಸುವ ವ್ಯವಸ್ಥೆಯೇ ಕರೇಜ್. ಇದಕ್ಕೆ ಪಂಪ್ ಅಥವಾ ವಿದ್ಯುತ್ ಅಗತ್ಯವಿಲ್ಲ. ಸುಮಾರು 600 ವರ್ಷಗಳ ಹಿಂದೆಯೇ ಈ ವ್ಯವಸ್ಥೆಯ ಮೂಲಕ ಬೀದರ್ ನಗರಕ್ಕೆ ಕುಡಿಯುವ ನೀರು, ಕಟ್ಟಡ ನಿರ್ಮಾಣ, ಕೃಷಿ ಹಾಗೂ ಜಾನುವಾರುಗಳಿಗೆ ನೀರು ಪೂರೈಸಲಾಗುತ್ತಿತ್ತು” ಎಂದರು.
ಬೀದರ್ ನಗರ ಹಾಗೂ ಸುತ್ತಮುತ್ತಲಿನ ಹಲವು ಪ್ರದೇಶಗಳ ಕರೇಜ್‌ಗಳಲ್ಲಿ ಇಂದಿಗೂ ನೀರು ಹರಿಯುತ್ತಿದ್ದು, ಅವುಗಳ ಸಮರ್ಪಕ ಬಳಕೆ ಮತ್ತು ಸಂರಕ್ಷಣೆ ಅಗತ್ಯವಾಗಿದೆ. ಮನುಷ್ಯನ ಜೀವನಶೈಲಿಯ ಬದಲಾವಣೆ, ಕಾಡು-ಗುಡ್ಡಗಾಡು ಪ್ರದೇಶ ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಾಶದಿಂದ ಪದೇಪದೇ ಬರ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.
ಗೋದಾವರಿ ಜಲಾನಯನ ಪ್ರದೇಶದ ಭಾಗವಾಗಿರುವ ಬೀದರ್‌ಗೆ ಬಚಾವತ್ ತೀರ್ಪಿನ ಅನ್ವಯ ದೊರೆಯಬೇಕಾದ ನೀರಿನ ಪಾಲನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವೈಜ್ಞಾನಿಕವಾಗಿ ನೀರಿನ ನಿರ್ವಹಣೆ ಮಾಡಿದರೆ ಕೃಷಿ ಹಾಗೂ ವಲಸೆ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಟೀಂ ಯುವಾ ಜಿಲ್ಲೆಯಲ್ಲಿ 250ಕ್ಕೂ ಹೆಚ್ಚು ಬಾವಿಗಳನ್ನು ದಾಖಲಿಸಿದ್ದು, ಜಿಲ್ಲಾಡಳಿತದ ಸಹಯೋಗದಲ್ಲಿ 110ಕ್ಕೂ ಹೆಚ್ಚು ಕೆರೆ-ಟ್ಯಾಂಕ್‌ಗಳ ಹೂಳೆತ್ತುವ ಕಾರ್ಯ ಕೈಗೊಂಡಿದೆ. 2016ರಲ್ಲಿ ನೌಬಾದ್ ಕರೇಜ್ ಪುನಶ್ಚೇತನದಲ್ಲೂ ಸಂಸ್ಥೆ ಪ್ರಮುಖ ಪಾತ್ರ ವಹಿಸಿದ್ದು, ಈ ಕಾರ್ಯಕ್ಕಾಗಿ 2016ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಾರ್ಥ ಪಿಯು ಕಾಲೇಜಿನ ಪ್ರಾಂಶುಪಾಲ ಏಕನಾಥ ಸುಣಗಾರ ಮಾತನಾಡಿ, “ನೀರಿನ ಸದ್ಬಳಕೆ ಹಾಗೂ ಸಂರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಮಳೆಗಾಲದಲ್ಲಿಯೂ ಅನೇಕ ಕಡೆ ನೀರಿನ ಸಮಸ್ಯೆ ಎದುರಾಗುತ್ತಿರುವುದು ಆತಂಕಕಾರಿ ಸಂಗತಿ. ನೀರಿನ ಬಳಕೆಯ ಕುರಿತು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಿ, ಜನರಲ್ಲಿ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ” ಎಂದು ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್ ಪ್ರಾಸ್ತಾವಿಕವಾಗಿ ಮಾತನಾಡಿ, “ಜಿಲ್ಲೆಯ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಶಿಕ್ಷಣ, ಆರೋಗ್ಯ, ಪರಿಸರ, ಉದ್ಯೋಗ ಮತ್ತು ಸಂವಿಧಾನದ ಮಹತ್ವದ ಕುರಿತು ಅರಿವು ಮೂಡಿಸಲು ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಯೋಜನೆ ರೂಪಿಸಲಾಗುವುದು” ಎಂದರು.
ಕರ್ನಾಟಕ ಪಶುವೈದ್ಯಕೀಯ ಮಹಾವಿದ್ಯಾಲಯದ ನಿವೃತ್ತ ಸಹಾಯಕ ರಿಜಿಸ್ಟ್ರಾರ್ ಕಂಟೆಪ್ಪಾ ಪೂಜಾರಿ ಪರಿಸರ ಗೀತೆ ಹಾಡಿದರು. ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ ವಿದ್ಯಾರ್ಥಿಗಳಿಗೆ ನೀರು, ಬರ ಹಾಗೂ ಪರಿಸರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ವಿತರಿಸಿದರು.
ಇದನ್ನೂ ಓದಿ : ಬಸವಕಲ್ಯಾಣ | ಅಲ್ಲಮ ಜಗತ್ತಿನ ಶ್ರೇಷ್ಠ ಅನುಭಾವಿ
ಕೃಷಿ ವಿಜ್ಞಾನಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ, ಬುದ್ಧ ಬೆಳಕು ಟ್ರಸ್ಟ್ ಕಾರ್ಯದರ್ಶಿ ಕಲ್ಪನಾ ಗೋರನಾಳಕರ್, ಟೀಂ ಯುವಾ ಸದಸ್ಯರಾದ ಶ್ರೀಧರ ಸೋಮನೋರ, ಹರ್ಷವರ್ಧನ ರಾಠೋಡ, ವಿಶಾಲ ಪಾಟೀಲ್, ಪತ್ರಕರ್ತ ಬಾಲಾಜಿ ಕುಂಬಾರ, ವಿಜಯಕುಮಾರ, ಅಮರ ಅಲ್ಲಾಪೂರ, ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




