ನೆತ್ತಿಯ ಮೇಲೆ ಸೂರ್ಯ ಉರಿಯುತ್ತಿದ್ದ ಆ ಮಧ್ಯಾಹ್ನ, ವಾತಾವರಣದಲ್ಲಿ ವಿಚಿತ್ರವಾದ ಮೌನ ಆವರಿಸಿತ್ತು. ಮಹುವಾಡಿಹ್ ಗುಡ್ಡದಲ್ಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಬೈಕ್‌ನಲ್ಲಿ ಒಬ್ಬ ಹುಡುಗ ಮತ್ತು ಹುಡುಗಿ ಗುಡ್ಡಕ್ಕೆ ತೆರಳಿದ್ದರು. ಪ್ರಶಾಂತವಾದ ಗುಡ್ಡಗಾಡು ಪ್ರದೇಶಕ್ಕೆ ತಲುಪಲಿದ್ದ ಅವರಿಗೆ ತಮಗೆ ಮುಂದೆ ಕಾದಿರುವ ಅಪಾಯದ ಸುಳಿವೇ ಇರಲಿಲ್ಲ. ಅವರು ಗುಡ್ಡಕ್ಕೆ ಬರುತ್ತಿದ್ದಂತೆಯೇ ದಿಢೀರನೆ ಕೆಲವು ಪುಂಡ ಯುವಕರ ಗುಂಪೊಂದು ಅವರನ್ನು ಸುತ್ತುವರಿಯಿತು.
ಯಾವ ತಪ್ಪು ಮಾಡದ ಆ ಅಮಾಯಕರ ಮೇಲೆ ಆ ಪುಂಡರ ಗುಂಪು ಅನಗತ್ಯವಾಗಿ ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ಯುವಕರು ಅವರನ್ನು ಬಾಯಿಗೆ ಬಂದಂತೆ ನಿಂದಿಸಿ, ದೈಹಿಕ ಹಲ್ಲೆ ನಡೆಸಿ, ದೌರ್ಜನ್ಯವೆಸಗಿದ್ದಾರೆ. ಅಷ್ಟಕ್ಕೇ ಮುಗಿಯದೆ, ಅವರ ಬಳಿಯಿದ್ದ ಬೈಕ್‌ನ ಕೀಲಿಗಳನ್ನು ಕಸಿದುಕೊಂಡು, ಟೈರ್‌ಗಳನ್ನು ಪಂಕ್ಚರ್ ಮಾಡಿ, ಅವರು ಅಲ್ಲಿಂದ ಓಡಿಹೋಗದಂತೆ ತಡೆದು ನಿಲ್ಲಿಸಿದರು. ಈ ಘಟನೆ ನಡೆದದ್ದು ಬಿಹಾರದ ಗಯಾ ಜಿಲ್ಲೆಯ ಮಹುವಾಡಿಹ್ ಗ್ರಾಮದಲ್ಲಿ.
ಆ ಭಯಾನಕ ಕ್ಷಣಗಳಲ್ಲಿ, ಪುಂಡರ ಗುಂಪಿನಲ್ಲಿದ್ದ ಕೆಲವರು ಈ ಇಡೀ ದೌರ್ಜನ್ಯದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡರು. ಸಂತ್ರಸ್ತರು ಸಹಾಯಕ್ಕಾಗಿ ಅತ್ತಿತ್ತ ನೋಡಿದರೂ, ಆ ನಿರ್ಜನ ಪ್ರದೇಶದಲ್ಲಿ ಅವರಿಗೆ ಯಾರ ನೆರವೂ ಸಿಗಲಿಲ್ಲ. ಸ್ವಲ್ಪ ಸಮಯದ ನಂತರ ಆ ಯುವಕರ ಗುಂಪು ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಯಿತು.
ಆದರೆ, ಕ್ರೌರ್ಯ ಎಸಗಿದ ಪುಂಡರು ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದರು. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆ ದೃಶ್ಯಗಳು ಶೇರ್‌ಘಾಟಿ ಪೊಲೀಸರ ಗಮನಕ್ಕೂ ತಲುಪಿದವು.
ವಿಷಯ ತಿಳಿಯುತ್ತಿದ್ದಂತೆಯೇ ಗಯಾ ಎಸ್‌ಎಸ್‌ಪಿ ಸುಶೀಲ್ ಕುಮಾರ್ ಅವರು ತಕ್ಷಣವೇ ತನಿಖೆಗೆ ಆದೇಶಿಸಿದರು. ಪೊಲೀಸ್ ಪಡೆ ಕ್ಷಿಪ್ರ ಕಾರ್ಯಾಚರಣೆಗೆ ಇಳಿದು, ಘಟನೆ ನಡೆದ ಸ್ಥಳದ ಸುತ್ತಮುತ್ತ ಶೋಧ ನಡೆಸಿದೆ. ವಿಡಿಯೋ ಆಧಾರದ ಮೇಲೆ ಘಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮುಖ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶೇರ್‌ಘಾಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಡಿಯೋದಲ್ಲಿದ್ದ ಇತರ ಯುವಕರ ಗುರುತು ಪತ್ತೆಹಚ್ಚಲು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ: ಪ್ರಜಾಪ್ರಭುತ್ವದ ಹಕ್ಕನ್ನೇ ಕಸಿಯುವ ಹುನ್ನಾರ!
ಈ ಘಟನೆಯು ಬಿಹಾರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸಾಲು ಸಾಲು ಅಮಾನವೀಯ ಘಟನೆಗಳ ಸರಣಿಯಲ್ಲಿ ಮತ್ತೊಂದು. ಇದೇ ಸೆಪ್ಟೆಂಬರ್ 19ರಂದು ಜಮುಯಿಯಲ್ಲಿ ಟ್ಯೂಷನ್ ತರಗತಿಯಿಂದ ಮನೆಗೆ ಹಿಂತಿರುಗುತ್ತಿದ್ದ 10ನೇ ತರಗತಿಯ ಬಾಲಕ ಮತ್ತು ಬಾಲಕಿಯನ್ನು ಪುಂಡರ ಗುಂಪೊಂದು ರಸ್ತೆಯಲ್ಲೇ ತಡೆದು ದೌರ್ಜನ್ಯ ಎಸಗಿತ್ತು. ಬಾಲಕಿ ಕೈ ಮುಗಿದು ‘ತಮಗೇನೂ ಮಾಡಬೇಡಿ’ ಎಂದು ಬೇಡಿಕೊಂಡರೂ ಲೆಕ್ಕಿಸದ ಪುಂಡರು, ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಎಳೆದೊಯ್ದು ದೌರ್ಜನ್ಯ ಎಸಗಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅದ ಬಳಿಕ, ಪೊಲೀಸರು ‘ಸುವೋ ಮೋಟೊ’ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದರು.
ಜಮುಯಿ ಘಟನೆಯ ಬೆನ್ನಲ್ಲೇ ಸಮಸ್ತೀಪುರದಲ್ಲಿಯೂ ಇದೇ ರೀತಿಯ ಆಘಾತಕಾರಿ ಘಟನೆ ನಡೆದಿತ್ತು. ಹಗಲು ಹೊತ್ತಿನಲ್ಲಿ, ರಸ್ತೆಯಲ್ಲಿ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ತಡೆದು ನಿಲ್ಲಿಸಿದ ಯುವಕರ ಗುಂಪು ಆಕೆಗೆ ಕಿರುಕುಳ ನೀಡಿ, ಹಲ್ಲೆ ನಡೆಸಿತು. ಬಿಎನ್‌ಸಿ ಮತ್ತು ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದಲ್ಲದೆ, ಬಾಂಕಾದ ಐತಿಹಾಸಿಕ ಪ್ರವಾಸಿ ತಾಣವಾದ ಮಂದಾರ ಗುಡ್ಡಗಾಡು ಪ್ರದೇಶಕ್ಕೆ ಭೇಟಿ ನೀಡಿದ್ದ ಯುವತಿಯೊಬ್ಬರಿಗೆ ಸುಮಾರು 6-7 ಯುವಕರ ಗುಂಪು ಕಿರುಕುಳ ನೀಡಿತ್ತು. ಬೌನ್ಸಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.



