ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಅತ್ಯಂತ ಮುಖ್ಯ ಎಂದು ಭಾರತ ಅಂಧರ ಕ್ರಿಕೆಟ್ ತಂಡದ ನಾಯಕಿ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ ದೀಪಿಕಾ ಟಿಸಿ ತಿಳಿಸಿದರು.
ಶಿರಾ ತಾಲ್ಲೂಕಿನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಎ ಒನ್ ಟೆಕ್ಸ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ದೀಪಿಕಾ ಟಿಸಿ ಅವರ ಸನ್ಮಾನ ಹಾಗೂ ಶಾಲಾ ಮಕ್ಕಳಿಗೆ ಕ್ರಿಕೆಟ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ಕ್ರಿಕೆಟ್ ಪಯಣದ ಅನುಭವಗಳು, ಕ್ರೀಡಾ ಕ್ಷೇತ್ರದಲ್ಲಿ ಎದುರಿಸಿದ ಸವಾಲುಗಳು ಹಾಗೂ ಸಾಧನೆಯ ಹಾದಿಯಲ್ಲಿ ಎದುರಾದ ಅಡೆತಡೆಗಳನ್ನು ಮೆಲುಕು ಹಾಕಿದ ಅವರು, ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ ಯಾವುದೇ ಸವಾಲನ್ನು ಮೆಟ್ಟಿ ನಿಂತು ಗುರಿ ತಲುಪಬಹುದು ಎಂಬ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಆನಂದ್ ತೋರ್ವಿ, “ಈ ಕಾರ್ಯಕ್ರಮ ಕೇವಲ ದೀಪಾವಳಿ ಆಚರಣೆಗೆ ಸೀಮಿತವಾಗದೆ, ಸಾಧನೆ, ಸ್ಫೂರ್ತಿ, ಸಮಾನತೆ ಮತ್ತು ಆತ್ಮವಿಶ್ವಾಸದ ಸಂದೇಶ ಸಾರುವುದರ ಜೊತೆಗೆ ಉದ್ಯೋಗಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ವೇದಿಕೆಯಾಗಿದೆ. ಮಕ್ಕಳಿಗೆ ಅಗತ್ಯವಾದ ಡೈಪರ್ ಹಾಗೂ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ತಮ ಗುಣಮಟ್ಟದಲ್ಲಿ ಒದಗಿಸಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ” ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಜನರಲ್ ಮ್ಯಾನೇಜರ್ ಪಾರ್ಥಸಾರಥಿ, ಸೇಲ್ಸ್ ಹೆಡ್ ಲೋಬೋ, ಸಿವಿಲ್ ಇಂಜಿನಿಯರ್ ಮಣಿಕಂಠ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




