ಬೀದರ್ ನಗರದ ಶಹಾಪುರ ಗೇಟ್ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಚರಂಡಿಯಿಂದಾಗಿ ಕೊಳಚೆ ನೀರು ಸಾರ್ವಜನಿಕ ರಸ್ತೆಯಲ್ಲೇ ಸಂಗ್ರಹವಾಗುತ್ತಿದ್ದು, ತೀವ್ರ ದುರ್ವಾಸನೆಯಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಕಳೆದ ವರ್ಷ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 100 ಮೀಟರ್ ಉದ್ದದ ಚರಂಡಿ ನಿರ್ಮಿಸಲಾಗಿದೆ. ಆದರೆ, ಚರಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಸಾರ್ವಜನಿಕರು ಬಳಸಿದ ನೀರು ಉತ್ತರ -ದಕ್ಷಿಣ ದಿಕ್ಕಿಗೆ ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಪರಿಣಾಮವಾಗಿ ಕೊಳಚೆ ನೀರು ಶಂಕರ್ ಪಾಸ್ಟರ್ ಅವರ ಮನೆಯ ಎದುರಿನ ಸಿಸಿ ರಸ್ತೆಯಲ್ಲೇ ನಿಂತು ದುರ್ವಾಸನೆ ಬೀರುತ್ತಿದೆ ಎಂದು ದೂರಿದ್ದಾರೆ.
ಈ ಕುರಿತು ಈ ಹಿಂದೆ ನಗರ ಪಾಲಿಕೆ ಸದಸ್ಯರು, ಸಹಾಯಕ ಎಂಜಿನಿಯರ್ (ಎಇ), ಕಿರಿಯ ಎಂಜಿನಿಯರ್ (ಜೆಇ), ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಹಾಗೂ ನೈರ್ಮಲ್ಯ ನಿರೀಕ್ಷಕರಿಗೆ ದೂರು ಸಲ್ಲಿಸಲಾಗಿತ್ತು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಈವರೆಗೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಬಳಿಕ ಅಧಿಕಾರಿಗಳು ದೂರವಾಣಿ ಕರೆಗಳಿಗೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲಿ ಕೊಳಚೆ ನೀರು ನಿಂತಿರುವುದರಿಂದ ಜನರು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ಸಂಚರಿಸುವಾಗ ಕೊಳಚೆ ನೀರು ಪಾದಚಾರಿಗಳ ಮೇಲೆ ಸಿಡಿಯುತ್ತಿದೆ. ಅಲ್ಲದೆ, ಇದೇ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿರುವುದರಿಂದ ಕೊಳಚೆ ನೀರು ಕುಡಿಯುವ ನೀರಿನಲ್ಲಿ ಮಿಶ್ರಣವಾಗುವ ಆತಂಕವೂ ಸಾರ್ವಜನಿಕರನ್ನು ಕಾಡುತ್ತಿದೆ.
ದುರ್ವಾಸನೆಯ ಜೊತೆಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಣ್ಣ ಕಪ್ಪೆಗಳು, ಕ್ರಿಮಿ-ಕೀಟಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ವಿಶೇಷವಾಗಿ ಶಾಲಾ ಮಕ್ಕಳು, ವೃದ್ಧರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅವೈಜ್ಞಾನಿಕ ಚರಂಡಿಯನ್ನು ತಕ್ಷಣ ದುರಸ್ತಿಗೊಳಿಸಿ, ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆ ನಿವಾಸಿ ಶಂಕರ ಪಾಸ್ಟರ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬೀದರ್ | ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಗೆ ಆಗ್ರಹ: ನಾಳೆ ಡಿಸಿ ಕಚೇರಿ ಮುತ್ತಿಗೆ




