ಜಿಲ್ಲೆಯಾದ್ಯಂತ ಜನಗಣತಿ-2027ರ ಕಾರ್ಯವನ್ನು ಯಶಸ್ವಿಯಾಗಿ ಹಾಗೂ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲೆಯ 120 ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ಎರಡು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಚಾಲನೆ ನೀಡಿದರು.
ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ನಡೆದ ಜನಗಣತಿ-2027ರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜನಗಣತಿ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಹಿಸಬೇಕಾದ ಜವಾಬ್ದಾರಿಗಳು, ಗಣತಿ ಪ್ರಕ್ರಿಯೆ, ಮಾಹಿತಿ ಸಂಗ್ರಹಣೆ ಹಾಗೂ ಕಾರ್ಯನಿರ್ವಹಣೆಯ ವಿಧಾನಗಳ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜನಗಣತಿ ಕಾರ್ಯವು ದೇಶದ ಅಭಿವೃದ್ಧಿ ಯೋಜನೆಗಳು ಹಾಗೂ ಆಡಳಿತಾತ್ಮಕ ನಿರ್ಧಾರಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಅಧಿಕಾರಿಗಳು ನಿಗದಿತ ಮಾರ್ಗಸೂಚಿ ಹಾಗೂ ಕಾಲಮಿತಿಯೊಳಗೆ ನಿಖರವಾಗಿ ಗಣತಿ ಕಾರ್ಯ ಪೂರ್ಣಗೊಳಿಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವ ಮೂಲಕ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಜನವರಿ 10ರಿಂದ 24ರವರೆಗೆ 15 ದಿನಗಳ ಕಾಲ ಸಾರ್ವಜನಿಕರಿಗೆ ಸ್ವಯಂ ಗಣತಿ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಈ ಅವಧಿಯಲ್ಲಿ ಸ್ವಯಂ ಗಣತಿ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಾಗುತ್ತದೆ. ಜನವರಿ 24ರಂದು ಪರಿಶೀಲನೆ ಕಾರ್ಯ ಕೈಗೊಳ್ಳಲಾಗುವುದು. ಬಳಿಕ ಜನವರಿ 25ರಿಂದ ಮನೆಮನೆಗೆ ತೆರಳಿ ಜನಸಂಖ್ಯಾ ಗಣತಿ ಕಾರ್ಯ ಆರಂಭಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಜನಗಣತಿ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಂತ ಅಗತ್ಯವಾಗಿದೆ. ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದರ ಜೊತೆಗೆ ಮನೆಮನೆಗೆ ಭೇಟಿ ನೀಡುವ ಗಣತಿದಾರರಿಗೆ ನಿಖರವಾದ ಮಾಹಿತಿ ನೀಡಬೇಕು. ಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸುವ ಮೂಲಕ ಜಿಲ್ಲೆಯಲ್ಲಿ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ ಡೊಂಬರ, ಸಂಪನ್ಮೂಲ ವ್ಯಕ್ತಿಗಳಾದ ಶ್ಯಾಮಕುಮಾರ ಎಸ್.ಬಿ., ಸುನೀಲಕುಮಾರ ಶರ್ಮಾ, ಟಿ.ಕೆ. ಶ್ರೀಧರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟು 120 ಜನರು ಪಾಲ್ಗೊಂಡಿದ್ದರು.




