ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.
ನನ್ನ ಕಡೆಗೆ ಕಣ್ಣು ಹಾಯಿಸಿದಾಗೆಲ್ಲ ರಿಝವಿಯ ಕಣ್ಣಲ್ಲಿ ಒಂದು ತುಂಟ ನಗೆ ಕುಣಿಯುತ್ತಿತ್ತು. ಆದರೆ ಆ ನಗೆಯನ್ನು ಗುರುತಿಸಿ ನಾನೆಲ್ಲಿ ‘ಏನಾಯ್ತು? ಯಾಕೆ ಈ ಪರಿ ಹುರುಪು?’ ಎಂದು ಕೇಳಿಬಿಡುತ್ತೇನೋ ಎಂದು ಹೆದರಿದವನಂತೆ ಪ್ರತಿ ಸಲ ಕೂಡಲೆ ದೃಷ್ಟಿ ಇನ್ನೊಂದೆಡೆಗೆ ಹಾಯಿಸಿ ನಿರ್ದೇಶನದ ವಿವರಗಳಲ್ಲಿ ಮಗ್ನನಾಗುತ್ತಿದ್ದ. ಒಮ್ಮೆ ಮಾತ್ರ ನಗೆಯನ್ನು ಸ್ವಿಚ್ ಆಫ್ ಮಾಡಿ, ಗಂಭೀರವಾಗಿ,
‘ಡಾಯಲೊಗ್ ರೆಡಿಯಾಯಿತೇನು? ಉರ್ದೂ ಬಹಳ ಕಠಿಣ ಅನಿಸಿದರೆ ಹೇಳರಿ ತಿದ್ಧತೇನೆ’ ಎಂದ.
ಇದು ರಿಝವಿಯ ಪದ್ಧತಿ: ಒಂದು ಮಹತ್ವದ ಸುದ್ದಿ ಹೇಳಬೇಕಾಗಿ ಬಂದರೆ ಅದಕ್ಕೆ ಅರ್ಥಪೂರ್ಣ ನೋಟದ, ಸೂಚ್ಯ ಮೌನದ, ‘ನನಗೆ ಯಾಕೆ ಬೇಕಾಗಿತ್ತೀ ರಗಳೆ’ ಎಂಬ ಉದ್ವೇಗದ ದೀರ್ಘ ಪೂರ್ವ ಪೀಠಿಕೆ ಕಟ್ಟಿ, ಆಮೇಲೆ ದಿಢೀರನೆ ಶಬ್ದಗಳ ನಡುವೆ, ವಾಕ್ಯಗಳ ನಡುವೆ ಕೂಡ, ಉಸಿರಿಗೂ ಎಡೆಬಿಡದೆ ಸುದ್ದಿ ಸುರಿದು ಬಿಡುತ್ತಾನೆ. ಶಿವರಾಮ ಕಾರಂತರಿಂದ ಮೊದಲನೇ ಪತ್ರ ಬಂದ ದಿನ ಅಂತೂ ಅವನ ಈ ನಗು-ನೋಟ-ಭ್ರುಕುಟಿಗಳ ಒಯ್ಯಾರ ತಲೆ ಕೆಡಿಸುವಷ್ಟು ವಿಪರೀತವಾಗಿತ್ತು. ಈ ಹೊತ್ತಿನ ಉತ್ಸಾಹಕ್ಕೆ ಕಾರಣವೇನು ಗೊತ್ತಾಗಬೇಕಾದರೆ ಕಾಯಬೇಕು, ಬೇರೆ ವಿಧಿ ಇರಲಿಲ್ಲ.
‘ಲಂಚ್ ಬ್ರೇಕ್’ ಹೊತ್ತಿಗೆ ಮನೆಯಿಂದಲೇ ಮಾಡಿಸಿಕೊಂಡು ಬಂದ ಮಟನ್ ದೋ ಪಿಯಾಝಾ ನನ್ನ ಮತ್ತು ಭೂಷಣನ ತಟ್ಟೆಯಲ್ಲಿ ಸುರಿಯುತ್ತ,
‘ತಗೊಳ್ಳಿರಿ, ಗಿರೀಶ್, ಸ್ವತಃ ನನ್ನ ಹೆಂಡತಿ ಮಾಡಿದ್ದು, ‘ಅಳಿದ ಮೇಲೆ’ಗೆ ಫೈನಾನ್ಸ ಸಿಕ್ಕಿತು. ಇನ್ನು ಕೆಲಸ ಶುರು. ಟಿಫಿನ್ ಕೆರಿಯರ್‌ನಲ್ಲಿ ಒಂದು ತುಂಡು ಉಳಿದರೂ ನನ್ನ ಹೆಂಡತಿ ಆಕಾಶ-ಪಾತಾಳ ಒಂದು ಮಾಡತಾಳೆ. ಭೂಷಣ್, ಈ ತುಂಡು-ನೋಡಿರಿ ನೀವು’ ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟ. ಆದರೆ ಇಂಥದ್ದೇನಾದರೂ ಹುಡುಗಾಟ ಮಾಡುತ್ತಾನೆ ಎಂದು ಅಪೇಕ್ಷಿಸುತ್ತಲೇ ಇದ್ದ ನಾನು ಫಸಗಿ ಬೀಳಲಿಲ್ಲ.
ಇದನ್ನು ಓದಿದ್ದೀರಾ?: ಅಗ್ರಹಾರ ಕೃಷ್ಣಮೂರ್ತಿ ಅವರ ಕತೆ | ಮನೋರಥ
‘ಕಂಗ್ರಾಚ್ಯುಲೇಶನ್ಸ್! ಮಾರ್ವಲ್ಲಸ್!’ ಎಂದು ಕೂಗಿದೆ. ರಿಝುವಿ ಖುಷಿಯಿಂದ ನಕ್ಕ.
‘ಕೆ.ಪಿ. ಪ್ರಾಡಕ್ಷನ್ಸ್ ಒಪ್ಪಿದ್ದಾರೆ. ಅಂದರೆ ಈಗ ಶೂಟಿಂಗ್ ವ್ಯವಸ್ಥೆಗೆ ಅಣಿಯಾಗಬೇಕು. ಮಜಾ ಅಂದರೆ ಈ ಹೊತ್ತೇ ಕಾರಂತರಿಂದಲೂ ಪತ್ರ ಬಂದಿದೆ. ಬಾ ಅಂತ. ಈ ಶೆಡ್ಯೂಲ್ ಮುಗಿದ ಗಳಿಗೆಗೆ ಶಾಲಿ-ಎಲ್ಲಿ ಅದು? -ಶಾ-‘
‘ಸಾಲಿಗ್ರಾಮ.’
‘ಹಾಂ, ಹೌದು, ಶಾಲಿಗ್ರಾಮಕ್ಕೆ ಹೋಗಿ ಬರತೇನೆ. ಕಾರಂತರು ಬಾ ಅಂದಿದ್ದಿಲ್ಲ. ನಾನೇ ಬರತೇನೆ ಅಂತ ಹೇಳಿದೆ.’
‘ರಿಝವೀಜಿ, ಕಾರಂತರು ಸುಲಭವಾಗಿ ತೃಪ್ತರಾಗುವ ವ್ಯಕ್ತಿಯಲ್ಲ. ನೀವು ಅಂದದಕ್ಕೆಲ್ಲ ಹೂಂ ಅಂತ ತಲೆದೂಗಿ ಬಿಡತಾರೆ ಅಂತ ತಿಳಕೋಬೇಡಿರಿ. ತಾನೇ ಸ್ಕ್ರಿಪ್ಟ್ ಬರೀತೇನೆ ಅಂದರೂ ಅನ್ನಬಹುದು.’
‘ಹಾಗ್ಯಾಕಂತೀರಿ? ಅವರಿಂದ ಮೂರು ಪತ್ರ ಬಂದಿದ್ದಾವೆ. ಒಂದರಲ್ಲೂ ಒಂದು ಕರಾರು ಹಾಕಿಲ್ಲ’ ಎಂದ ರಿಝವಿ ವಾದ ಗೆದ್ದವನಂತೆ. ‘ಅವರನ್ನ ಸಮಕ್ಷಮ ಕಂಡರೆ ಚಿತ್ರದಲ್ಲಿ ಅವರನ್ನ ಹೇಗೆ ಚಿತ್ರಿಸಬಹುದು ಅನ್ನೋದರದೊಂದು ಐಡಿಯಾ ಬರಬಹುದು ಅಂತ ಹೋಗತಿದ್ದೇನೆ ಅಷ್ಟೆ’ ಎಂದು ನಕ್ಕ.
‘ನಾನು ಅವರನ್ನ ಚೆನ್ನಾಗಿ ಬಲ್ಲೆ. ನೀವೇನೂ ಕಾಳಜಿ ಮಾಡಬೇಕಾಗಿಲ್ಲ’ ಎಂದೆ.
ರಿಝವಿಗೆ ಕಾರಂತರ ಮೇಲೆ ಎಷ್ಟು ಭಕ್ತಿ ಎಂದರೆ- ‘ಅಂಥಾ ಕಾದಂಬರಿ, ಜನಾಬ್! ಒಳಗಿನಿಂದ ಬರಬೇಕು!’ -ನನ್ನ ದನಿಯಲ್ಲೆಲ್ಲಾದರೂ ವ್ಯಂಗ್ಯದ ಸುಳಿವಿರಬಹುದೇನು ಎಂದು ಪರೀಕ್ಷಿಸುವವನಂತೆ ನನ್ನನ್ನೇ ದುರುಗುಟ್ಟಿ ನೋಡಿದ.
ರಿಝವಿಯ ಅಣ್ಣ (ಈಗ ಅವನ ಸಂವಾದ ಲೇಖಕ ಕೂಡ) ಸುಪ್ರಸಿದ್ದ ಭಾಷಾಂತರಕಾರ, ಯಾವುದೋ ಪ್ರಕಾಶಕನ ಸಲುವಾಗಿ ‘ಅಳಿದ ಮೇಲೆ’ ಕಾದಂಬರಿಯನ್ನು ಉರ್ದೂ ಭಾಷೆಗೆ ಅನುವಾದಿಸಿದ್ದ. ಅದನ್ನೋದಿದಂದಿನಿಂದ ರಿಝವಿಗೆ ಆ ಕಾದಂಬರಿಯ ಹುಚ್ಚು ಹಿಡಿದು ಬಿಟ್ಟಿತ್ತು.
ಇದನ್ನು ಓದಿದ್ದೀರಾ?: ಬಾ.ಹ. ರಮಾಕುಮಾರಿ ಅವರ ಕತೆ | ನಿಯೋಗ
‘ನಿಜವಾಗಿ ಕೇಳಿದರೆ ಫೀಚರ್ ಫಿಲ್ಮ್ ಆಗಬೇಕು, ಗಿರೀಶ್, ಎಂಥಾ ಅದ್ಭುತ ಕತೆ! ಆದರೆ ಹಿಂದಿಯಲ್ಲಿ ಯಾವ ಡಿಸ್ಟ್ರಿಬ್ಯೂಟರ್ ಬಡ್ಡಿಮಗನೂ ಅದನ್ನು ಮುಟ್ಟೋದಿಲ್ಲ. ಎಲ್ಲ ಅಸಂಸ್ಕೃತರು! ಆದ್ದರಿಂದ ಟೆಲಿಫಿಲ್ಮ್ ಮಾಡದೆ ಗತಿಯಿಲ್ಲ’ ಎಂದು ನಾಟಕೀಯವಾಗಿ ನಿಟ್ಟುಸಿರುಗರೆದ.
ನಾನು ರಿಝವಿಯನ್ನು ಮೊದಲು ಭೆಟ್ಟಿಯಾದದ್ದು 1990ರಲ್ಲಿ. ಆ ದಿನ ಸ್ಪಷ್ಟವಾಗಿ ನೆನಪಿದೆ, ಏಕೆಂದರೆ ಅದೇ ದಿನ ಟಾಯೋಟಾ ರಾಮರಥವನ್ನೇರಿ ಸೋಮನಾಥದಿಂದ ಅಯೋಧ್ಯೆಗೆ ಹೊರಟ ಎಲ್.ಕೆ. ಅದ್ವಾನಿಯನ್ನು ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ ಅಡಗಾಣಿಸಿ ನಿಲ್ಲಿಸಿದ್ದ.
ರಿಝವಿ ಬಂದದ್ದು ನನಗೊಂದು ಡಿಟೆಕ್ಟಿವ್ ಧಾರಾವಾಹಿಯಲ್ಲಿ ಪಾತ್ರ ಮಾಡು ಎಂದು ಕೇಳಿಕೊಳ್ಳಲಿಕ್ಕೆ. ಐದು ನಿಮಿಷದಲ್ಲೇ ನಾನು ಒಪ್ಪಿಗೆ ಕೊಟ್ಟು ಮಾತುಕತೆ ಮುಗಿಸಿ ಬಿಟ್ಟಿದ್ದರಿಂದ ಈತ ಈಗ ಹೋಗುತ್ತಾನೆ, ಇನ್ನೊಂದು ಐದು ನಿಮಿಷದಲ್ಲಿ ಹೋಗುತ್ತಾನೆ, ಅಂತ ನಾನು ಕಾಯ್ದರೆ, ರಿಝವಿ ಕುರ್ಚಿ ಬಿಟ್ಟು ಏಳವಲ್ಲ. ಬೇರೆ ಬೇರೆ ವಿಷಯಗಳ ಬಗ್ಗೆ ಮಾತಾಡಿದ. ಲಾಲೂ ಪ್ರಸಾದನನ್ನು ಕುರಿತು ‘ಹಿಂದುಳಿದ ಜಾತಿಯವರು- ಮುಸಲ್ಮಾನರು ಒಂದಾಗದಿದ್ದರೆ ಇಬ್ಬರಿಗೂ ಈ ದೇಶದಲ್ಲಿ ಉಳಿಗಾಲವಿಲ್ಲ. ಮೇಲು ವರ್ಗದ ಹಿಂದೂಗಳು ತಿಂದು ಹಾಕಿ ಬಿಡತಾರೆ’, ಎಂದ. ತನ್ನ ಕುಟುಂಬದವರು ಪಾಕಿಸ್ತಾನಕ್ಕೆ ಹೋಗೋಣ ಎಂದಾಗ ‘ಅಲ್ಲಿ ಹೋಗಿ ಯಾಕೆ ಒದಿಸಿಕೊಳ್ಳಬೇಕು?’ ಎಂದು ತಾನು ಬುದ್ಧಿ ಹೇಳಿದ್ದರ ಮೇಲೆ ವ್ಯಾಖ್ಯಾನ ಬಿಗಿದ. ಅದೇ ಪ್ರವಾಹದಲ್ಲಿ ಕನ್ನಡದ ಒಂದು ಕಾದಂಬರಿಯ ವಿಶ್ಲೇಷಣೆ ಆರಂಭವಾಯಿತು. ನನಗೆ ಅದರ ಉರ್ದೂ ಹೆಸರು ಗೊತ್ತಿಲ್ಲ. ಆತನಿಗೆ ಕನ್ನಡ ಹೆಸರು ಗೊತ್ತಿಲ್ಲ. ಆದರೆ ನಾನು ‘ಅಳಿದ ಮೇಲೆ’ ಕಾದಂಬರಿಯನ್ನು ಕೂಡಲೆ ಗುರುತು ಹಿಡಿದೆ. ರಿಝವಿಯ ಬಗ್ಗೆ ಕುತೂಹಲವುಂಟಾಯಿತು.
ಕಾರಂತರ ವಿಳಾಸವೇನು? ಅವರು ಒಪ್ಪಿಕೊಳ್ಳುತ್ತಾರೆಯೇ? ಅವರಿಗೆ ಎಷ್ಟು ರಾಯಲ್ಟಿ ಕೊಡಬೇಕು? ‘ಚಿತ್ರದಲ್ಲಿ ಕಾರಂತರ ಪಾರ್ಟು ನೀವು ಮಾಡಬೇಕು. ಯಶವಂತರಾಯರ ಪಾತ್ರಕ್ಕೆ ಅನಂತನಾಗ್’ ಎಂದು ಘೋಷಿಸಿ ತಾನು ಇಂದು ಬಂದಿರುವದಕ್ಕೆ ಆ ಡಿಟೆಕ್ಟಿವ್ ಧಾರಾವಾಹಿ ನೆಪ ಮಾತ್ರ, ‘ಅಳಿದ ಮೇಲೆ’ಯನ್ನು ಚರ್ಚಿಸುವದೇ ಮುಖ್ಯ ಉದ್ದೇಶವಾಗಿತ್ತು ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡ. ಆಗಿಂದಾಗ್ಗೆ ನನ್ನ ಕೈಯಿಂದ ಅನಂತ ನಾಗ್‌ಗೂ ಫೋನ್ ಮಾಡಿಸಿ, ಮಾತನಾಡಿಸಿ, ಒಪ್ಪಿಗೆ ಕೂಡ ಪಡೆದುಕೊಂಡ.
ಇಷ್ಟೆಲ್ಲಾ ಮಾತು ನಡೆದಾಗ ಶಿವರಾಮ ಕಾರಂತರು ಒಪ್ಪದಿದ್ದರೆ ಹೇಗೆ ಎಂಬ ಕಳವಳ ನಡು ನಡುವೆ ತಲೆಯೆತ್ತುತ್ತಲೇ ಇತ್ತು. ಕರ್ನಾಟಕದಲ್ಲಿ ಎಂದೂ ಕಾಲಿಡದಿದ್ದ ಕನ್ನಡ ಸಂಸ್ಕೃತಿ-ಸಾಹಿತ್ಯಗಳ ಗಂಧ-ಗಾಳಿಯಿಲ್ಲದ, ಉತ್ತರ ಪ್ರದೇಶದ ಯಾವುದೋ ಮೂಲೆ ಹಳ್ಳಿಯಿಂದ ಮುಂಬಯಿಗೆ ಬಂದು, ಇಲ್ಲಿ ತೃತೀಯ ದರ್ಜೆಯ ಹಿಂದೀ ಗಲ್ಲಾಪೆಟ್ಟಿಗೆ ಚಿತ್ರಗಳನ್ನು ನಿರ್ದೇಶಿಸಿ, ಹೊಟ್ಟೆ ಹೊರಕೊಳ್ಳುತ್ತಿದ್ದ ಈತನಿಗೆ ಚರ್ಚೆ-ಭೆಟ್ಟಿಯಿಲ್ಲದೆ ಕಾರಂತರು ಅನುಮತಿ ಕೊಡುತ್ತಾರೆ ಎಂದು ನಾನೂ ಎಣಿಸಿರಲಿಲ್ಲ.
ಇದನ್ನು ಓದಿದ್ದೀರಾ?: ಬರಗೂರು ರಾಮಚಂದ್ರಪ್ಪ ಅವರ ಕತೆ | ಕ್ಷಾಮ
ಆದರೆ ರಿಝವಿಯ ಪತ್ರದಲ್ಲಿ ಆತನ ಭಕ್ತಿಯ, ಆತಂಕದ ಕಾವು ಕಾರಂತರಿಗೆ ತಟ್ಟಿರಬೇಕು. ಒಪ್ಪಿಕೊಂಡುಬಿಟ್ಟರು. ರಿಝವಿಗೆ ಖುಷಿಯೋ ಖುಷಿ.
ಒಂದು ದಿನ ‘ಈ ಕಾದಂಬರಿಯನ್ನು ತೆಗೆದುಕೊಂಡು ನೀವು ಒಂದು ಕನ್ನಡ ‘ಕಲಾತ್ಮಕ’ ಫಿಲ್ಮ್ ಮಾಡಬಹುದಲ್ಲ. ಮಾಡತೇನೆ ಅಂದರೆ ನಾನು ಹೇಗಾದರೂ ಫೈನಾನ್ಸ್ ತೆಗೆಸಿ ಕೊಡತೇನೆ’ ಎಂದ.
ಆ ಪ್ರಶ್ನೆಗೆ ಉತ್ತರವೆಂಬಂತೆ ನಾನು, ‘ನನ್ನ ಗೆಳೆಯ ಬಿ.ವಿ. ಕಾರಂತರು ‘ಚೋಮನ ದುಡಿ’ ಮಾಡಿದ್ದಾರಲ್ಲ’ ಎಂದೆ.
‘ಓಹೋ! ನೋಡಿದ್ದೇನಲ್ಲ’ ಎಂದ.
ರಿಝವಿ ‘ಕಲಾತ್ಮಕ’ ಕನ್ನಡ ಚಿತ್ರಪಟಗಳನ್ನು ಒಂದೂ ಬಿಡದೆ ನೋಡಿಟ್ಟಿದ್ದ. ಅವುಗಳನ್ನು ಕುರಿತು ಟಿಪ್ಪಣಿಗಳನ್ನೂ ಮಾಡುತ್ತಿದ್ದ. ಆದರೆ ನಿಜವಾದ ಆಸಕ್ತಿ ಆ ಚಿತ್ರಪಟಗಳಲ್ಲಾಗಲಿ ಅವುಗಳ ಕಲಾತ್ಮಕತೆಯಲ್ಲಾಗಲಿ ಇರಲಿಲ್ಲ, ‘ಅಳಿದ ಮೇಲೆ’ಯ ಚಿತ್ರೀಕರಣಕ್ಕೆ ಪ್ರಯೋಜನಕಾರಿ ಆಗುವಂಥ ಅಂಶಗಳೇನಾದರೂ ಸಿಗುತ್ತವೆಯೇ ಎಂಬ ಹುಡುಕಾಟದಲ್ಲಿತ್ತು. ‘ಘಟಶ್ರಾದ್ಧ’ ನೋಡಿದ ದಿನವಂತೂ ಉತ್ಸಾಹದಿಂದಲೇ ಫೋನ್ ಮಾಡಿದ.
‘ಅಲ್ಲರೀ ಗಿರೀಶ್, ಬ್ರಾಹ್ಮಣರಲ್ಲಿ ವಿಧವೆಯರಿಗೆ ಮುಂಡನ ಮಾಡುತ್ತಿದ್ದರು. ಆದ್ದರಿಂದ ನಮ್ಮ ಚಿತ್ರದಲ್ಲಿ ಬರೋ ಇಬ್ಬರು ವಿಧವೆಯರ ತಲೆನೂ ಬೋಳಿಸಬೇಕು, ಅಂತ ಅನ್ನತ್ತಿದ್ದರಲ್ಲ. ನಾನು ಬೇಡ, ಆಗೋದಿಲ್ಲ, ನಮ್ಮ ಹಿಂದೀ ಆಡಿಯನ್ಸ್ ಅದನ್ನೆಲ್ಲ ಒಪೋದಿಲ್ಲ ಅಂದರೆ ನೀವು ಅಥೆಂಟಿಸಿಟಿ-ಅಥೆಂಟಿಸಿಟಿ ಅಂದಿರಿ. ಈಗ ನೋಡಿರಿ, ‘ಘಟಶ್ರಾದ್ಧ’ದಲ್ಲಿ ವಿಧವೆ ಹುಡುಗಿಗೆ ಕೂದಲು ಬೋಳಿಸಿಲ್ಲ ಏನೆನ್ನತೀರೀಗ?’
ಆದರೆ ನನ್ನ ಉತ್ತರದಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ.
‘ಯಾವ ಸೀನಿಯರ್ ಹಿಂದಿ ತಾರೆ ತಲೆ ಬೋಳಿಸಿಕೊಂಡು ರೋಲ್ ಮಾಡತಾಳೆರೀ? ನಿಮ್ಮದೊಂದು!’ ಎಂದು ಫೋನ್ ಕೆಳಗಿಟ್ಟ.
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ
ಬ್ರಾಹ್ಮಣ ವಿಧವೆಯರು ಹೇಗಿರಬೇಕು ಎಂಬ ಪ್ರಶ್ನೆ ರಿಝವಿಗೆ ಕೇವಲ ತಾರೆಯರ ಒಪ್ಪಿಗೆಯ ಪ್ರಶ್ನೆಯಾಗಿರಲಿಲ್ಲ. ಅದು ಅವನ ಟೆಲಿ ಫಿಲ್ಮಿನ ಜೀವಾಳವಾಗಿತ್ತು. ಏಕೆಂದರೆ ಕಾದಂಬರಿಯ ಮಧ್ಯಬಿಂದುವನ್ನು ತಲುಪಿದೊಡನೆ ರಿಝವಿ ಕಳ್ಳುಸುಬಿನಲ್ಲಿ ಸಿಲುಕಿದವನಂತೆ ಮುಂದೆ ಹೋಗಲಾರದೆ ಅಲ್ಲೇ ಅಲ್ಲೇ ಆಳಕ್ಕಿಳಿಯುತ್ತಿದ್ದ.
‘ಎಂಥಾ ಅದ್ಭುತ ಸನ್ನಿವೇಶ! ಕಾರಂತರು ಆ ಹಳ್ಳಿಗೆ ಬರೋದು. ತನ್ನ ಮಿತ್ರರಾದ ಯಶವಂತರಾಯರ ಸಾಕುತಾಯಿಯನ್ನು ಕಾಣೋದು. ಆ ಹಣ್ಣು ಮುದುಕಿಯ ಆಸೆ ಪೂರೈಸಲಿಕ್ಕೆ ಗುಡಿಯ ಜೀರ್ಣೋದ್ಧಾರ ಮಾಡೋದು! ಅದರ ಪರಿಣಾಮವಾಗಿ ಒಂದೇ ಊರಿನಲ್ಲಿದ್ದರೂ ವೈರಿಗಳ ಹಾಗಿದ್ದ ಆ ಇಬ್ಬರು ಹಣ್ಣು ಮುದುಕಿಯರು ಒಂದಾಗೋದು-ಛೇ! ಛೇ! ಲಾಜವಾಬ್!’
ರಿಝವಿ ಗದ್ಗದನಾಗುತ್ತಾನೆ. ಇದನ್ನೇ ಅರ್ಧ ಡಝನ್ ಸಲ ಕೇಳಿ ದಣಿದ ನಾನೆಂದೆ:
‘ಅಲ್ಲರೀ, ರಿಝವೀಜೀ, ನೀವು ಹೇಳತಿರೋದು ಕಾದಂಬರಿಯ ಪೂರ್ವಾರ್ಧ ಅಷ್ಟೇ! ಇನ್ನೂ ಬೇಕಾದಷ್ಟು ಪಾತ್ರಗಳಿವೆ. ಕತೆಯಿದೆ. ಕಾರಂತರು ಯಶವಂತರಾಯರ ಹೆಂಡತಿ, ಮಕ್ಕಳು ಎಲ್ಲರನ್ನೂ ಭೆಟ್ಟಿಯಾಗತಾರೆ. ಆ ಭಾಗದ ಮಾತೇ ಎತ್ತೋದಿಲ್ಲಲ್ಲ ನೀವು!’
ರಿಝವಿ ನನ್ನ ಕಡೆಗೊಮ್ಮೆ ನೋಡಿ, ತಲೆ ಕೊಡವಿ, ‘ಅಬ್ದುಲ್-‘ ಎಂದು ಕರೆಯುತ್ತಾನೆ. ಕೂಡಲೆ ಪ್ರತ್ಯಕ್ಷನಾದ ಪ್ರಾಡಕ್ಷನ್ ಮ್ಯಾನೇಜರ್‌ನ ಕಿವಿಯಲ್ಲಿ ಏನೇನೋ ಉಸುರುತ್ತಾನೆ. ನಾನು, ಭೂಷಣ ಅಲ್ಲೆ ಇದ್ದೇವೆಂಬುದನ್ನು ಮರೆತಂತೆ ವರ್ತಿಸುತ್ತಾನೆ. ಆಮೇಲೆ ಭೂಷಣನತ್ತ ತಿರುಗಿ,
‘ನಿಮಗೆ ಗೊತ್ತೇನು ಆ ಕತೆ? ಯಶವಂತರಾವ್ ಅನ್ನೋ ವ್ಯಕ್ತಿ ಒಬ್ಬಂಟಿ ಬಾಳು ಬದುಕಿ ಆಪ್ತ ಮಿತ್ರರಿಲ್ಲದ ಸ್ಥಳದಲ್ಲಿ ಒಬ್ಬನೇ ಸಾಯುತ್ತಾನೆ. ತನ್ನ ಆಸ್ತಿಯ ವಿಲೇವಾರಿ ಮಾಡು ಎಂದು ಕಾರಂತರಿಗೆ ಕೇಳಿಕೊಂಡಿರತಾನೆ. ಕಾರಂತರು ಅವನ ನಿಕಟ ಮಿತ್ರರೇನಲ್ಲ- ಪರಿಚಯಸ್ಥರು. ಆದರೂ ಮನೆ ಬಿಟ್ಟು ಹೊರಟು, ಯಶವಂತರಾಯನ ಸಂಬಂಧಿಕರನ್ನು ಹುಡುಕತಾರೆ. ಹಳ್ಳಿಗೆ ಬಂದಾಗ ಅವನನ್ನು ಸಾಕಿದ ಮುದುಕಿ ಪಾರ್ವತಮ್ಮ-‘
ಕಳ್ಳಸುಬಿನತ್ತ ಮತ್ತೆ ಧಾವಿಸುತ್ತಿದ್ದ ರಿಝವಿಯನ್ನು ತಡೆಯಲಿಕ್ಕೆಂದು ನಾನು ಸಜ್ಜಾಗುತ್ತಿದ್ದುದನ್ನು ಕಂಡು, ರಿಝುವಿ ತನ್ನ ಬ್ಯಾಗಿನಿಂದ ಒಂದು ಸ್ಕ್ರಿಪ್ಟ್ ತೆಗೆದು ಭೂಷಣ್ ಎದುರಿಗೆ ಚಾಚುತ್ತಾನೆ.
ಇದನ್ನು ಓದಿದ್ದೀರಾ?: ಡಿ.ಆರ್. ನಾಗರಾಜ್ ಅವರ ಕತೆ | ನಗರದೇವಿಯ ದರ್ಶನ
‘ಗ್ರಾಫ್ ನೋಡಿರಿ. ಆರಂಭದಲ್ಲಿ ಯಶವಂತರಾಯ ಸತ್ತಿದ್ದಾನೆ. ಏಕಾಕಿ. ಆಸುಪಾಸಿನಲ್ಲಿ ಯಾರೂ ಸಂಬಂಧಿಕರಿಲ್ಲ. ಆದರೆ ಕಾರಂತರ ಹೆಣಗಾಟದಿಂದ, ಆ ವಿಧವೆಯ ಸಮಾಧಾನಕ್ಕಾಗಿ, ಒಂದು ಮಂದಿರದ ಪುನರುಜ್ಜೀವನವಾಗುತ್ತದೆ. ಉಳಿದ ಪಾತ್ರಗಳನ್ನು, ಸರಿ, ಎಲ್ಲಾದರೂ ಅಡ್ಜಸ್ಟ ಮಾಡೋಣಂತೆ. ಆದರೆ ಚಿತ್ರಪಟದ ಕೇಂದ್ರ ಸಂಕೇತ ಅದು, ಭೂಷಣ್, ಗುಡಿಯ ಪುನರುದ್ಧಾರ! ಮನುಷ್ಯನ ಸ್ಪಿರೀಚ್ಯುಯಲ್ ಜಾಗೃತಿಗೆ ಸಿಂಬಲ್.’
ಆ ಮೇಲೆ ನನ್ನ ಮೇಲೆ ಎರಗುತ್ತಾನೆ.
‘ನಮ್ಮ ಫಿಲ್ಮನ ಕೊನೆಯ ದೃಶ್ಯ. ಇಮ್ಯಾಜಿನ್ ಮಾಡಿರಿ. ಮುರುಕಲು ಗುಡಿಯ ಪುನರುದ್ಧಾರ ನಡೆದಿದೆ. ಇಬ್ಬರು ಮುದುಕಿಯರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಿದ್ದಾರೆ. ನೀವು ಅಂದರೆ ಕಾರಂತರು- ಊರು ಬಿಟ್ಟು ಹೊರಟವರು ನಿಂತು ಹೊರಳಿ ನೋಡತೀರಿ. ನಿಮ್ಮ ಮಿತ್ರ ಯಶವಂತರಾವ್ ನಾಸ್ತಿಕ. ನೀವೂ ನಾಸ್ತಿಕರು. ಆದರೆ ನಿಮ್ಮ ಜೀವನದ ಕೃತಾರ್ಥತೆ ಇರೋದು ಆ ಮಂದಿರದ ಪುನರ್ಜನ್ಮದಲ್ಲಿ! ನಿಮ್ಮ ಕಣ್ಣಲ್ಲಿ ನೀರು, ತೀರಿ ಹೋದ ಮಿತ್ರನ ಬಯಕೆ ಈಡೇರಿಸಿ ಕೃತಕೃತ್ಯನಾದೆ ಎಂಬ ತೃಪ್ತಿ! ಏನೆನಿಸುತದೆ ಭೂಷಣ್‌ಜಿ? ಹೇಗಿದೆ ಕ್ರೈಮ್ಯಾಕ್ಸ್?’
‘ನಿಮಗೆ ನಿಜವಾಗಿಯೂ ನನ್ನ ಅಭಿಪ್ರಾಯ ಬೇಕಾಗಿದ್ದರೆ ಹೇಳತೇನೆ’ ಭೂಷಣ ಯಾವ ನಟನಾದರೂ ಕೊಡುವ ಉತ್ತರವನ್ನೇ ಕೊಡುತ್ತಾನೆ. ‘ನೀವು ಈ ಸಲನೂ ಎಂದಿನ ಹಾಗೆ ದುಡ್ಡುಕೊಡದಿದ್ದರೂ ಅಡ್ಡಿಯಿಲ್ಲ. ಯಶವಂತರಾಯನ ಪಾತ್ರಕ್ಕೆ ಯೋಗ್ಯ ನಟ- ನಾನೇ!’
ರಿಝವಿ ಜೋರಾಗಿ ನಕ್ಕ. ಅದೇ ಸಿಗ್ನಲ್ ಎಂಬಂತೆ ಸಹನಿರ್ದೇಶಕನೊಬ್ಬ ಬಂದು, ‘ಲೈಟಿಂಗ್ ರೆಡಿ’ ಎಂದ. ರಿಝವಿ ‘ಅಳಿದ ಮೇಲೆ’ಯ ಸ್ಕ್ರಿಪ್ಪನ್ನು ಬ್ಯಾಗಿಗೆ ಸೇರಿಸುತ್ತ ‘ಮೊದಲನೇ ಶಾಟ್ ನಿಮ್ಮದು, ಭೂಷಣ್ ಜೀ’ ಎನ್ನುತ್ತ ಅದೇ ಉಸಿರಿನಲ್ಲಿ ಆ ಸಹನಿರ್ದೇಶಕನೊಡನೆ ಮಾತನಾಡುತ್ತ ಹೊರಟು ಹೋದ.
ಇದನ್ನು ಓದಿದ್ದೀರಾ?: ಗೀತಾ ನಾಗಭೂಷಣ ಅವರ ಕತೆ | ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ…
‘ಬಹಳ ಮಾತಾಡತಾನೆ’ ಎಂದು ಗೊಣಗಿದ ಭೂಷಣ್, ‘ನಾನು ಈತನ ಚಿತ್ರಪಟಗಳಲ್ಲಿ ಪಾರ್ಟು ಮಾಡಲಿಕ್ಕೆ ಕಾರಣ ಒಂದೇ: ಅವನ ಹೆಂಡತಿ ದಿನಾಲು ಮನೆಯಲ್ಲೇ ಮಾಡಿ ಕಳಿಸುವ ನಾನ್‌ವೆಜ್ ಪಲ್ಯ!’ ಎಂದು ಮೇಕಪ್ ರೂಮಿಗೆ ಹೊರಟುಹೋದ.
ಇದಾದ ಹದಿನೈದು ದಿನಗಳಲ್ಲೇ ರಿಝುವಿ ತೀರಿಕೊಂಡ.
ನಾನು ಸಿಂಗಾಪೂರಕ್ಕೆ ಚಿತ್ರೀಕರಣಕ್ಕೆ ಹೋಗಿದ್ದೆ. ಆ ಚಿತ್ರದ ನಿರ್ಮಾಪಕ ‘ಚಿತ್ರೀಕರಣ ಕಾಶ್ಮೀರದಲ್ಲೇ ಆಗಬೇಕಿತ್ತು ಸರ್. ಆದರೆ ಇದ್ದಾರಲ್ಲ ಟೆರರಿಸ್ಟ್ ಕಶ್ಮೀರಿ ಗೂಂಡಾಗಳು! ಅವರ ಕಾರಣದಿಂದಾಗಿ ಸ್ವಿಜರ್ಲೆಂಡಿಗೆ ಹೋಗು, ಸಿಂಗಾಪೂರಕ್ಕೆ ಹೋಗು! ಅವರಿಗೆ ಸರಿಯಾಗಿ ಬುದ್ಧಿ ಕಲಿಸೋ ಸರ್ಕಾರ ಬೇಕು ಈ ದೇಶಕ್ಕೆ’ ಎಂದು ತನ್ನ ಚಿತ್ರಪಟವನ್ನು ಕುಲಗೆಡಿಸಲೆಂದೇ ಈ ಉಗ್ರಗಾಮಿಗಳು ಹೊಂಚು ಹಾಕಿರುವರೆಂದು ಸೂಚಿಸಿ ಕೊನೆಗೆ, ‘ನಮ್ಮ ಸ್ಟಾರ್‍ಸಿಗೂ ಅದೇ ಬೇಕು! ಸ್ವಿಜರ್ಲೆಂಡ್! ಸಿಂಗಾಪೂರ! ಇಂಡಸ್ಟ್ರಿಯ ಚಿಂತೆ ಯಾರಿಗಿದೆ?’ ಎಂದು ಈ ಸ್ಟಾರ್ಸ್‌ಗಳ ರಗಳೆ ಒಂದು ಇರದಿದ್ದರೆ ಕಶ್ಮೀರಿಗಳನ್ನೆಲ್ಲ ಸದೆಬಡಿಯಬಹುದಾಗಿತ್ತು ಎಂದು ಗೋಗರೆಯುತ್ತ ಸಿಂಗಾಪೂರಕ್ಕೆ ಕರೆದುಕೊಂಡು ಹೋಗಿದ್ದ.
ಮರಳಿ ಬಂದಾಗ ಎಲ್ಲೆಡೆ ಅಯೋಧ್ಯೆಯ ಗದ್ದಲ ಹಬ್ಬಿತ್ತು. ರಾಜಕೀಯ ಒಳಸುದ್ದಿಗಳ ಬಣ್ಣ ಬದಲಾವಣೆಗಳನ್ನೇ ಬಲ್ಲ ಅನಂತನಾಗ್‌ಗೆ ಫೋನ್ ಮಾಡಿದೆ. ಆದರೆ ಅನಂತ ಹೇಳಿದ ಸುದ್ದಿಯೇ ಬೇರೆ.
‘ರಿಝವಿ ಬೆಂಗಳೂರಿಗೆ ಬಂದು ನನ್ನನ್ನು ಭೆಟ್ಟಿಯಾದ. ಅಡ್ವಾನ್ಸ್ ಹಣ ಕೊಟ್ಟ. ನಾನ್‌ಸ್ಟಾಪ್ ಮಾತಾಡಿದ. ಅದೇ ರಾತ್ರಿ ಶಿವರಾಮ ಕಾರಂತರನ್ನು ಕಾಣಲಿಕ್ಕೆಂತ ಬಸ್ಸಿನಿಂದ ಉಡುಪಿಗೆ ಹೊರಟ. ಮುಲ್ಕಿಯ ಬಳಿಯೆಲ್ಲೊ ಅಪಘಾತವಾಯಿತಂತೆ. ತಲೆಯ ಮೇಲೆ ಟ್ರಂಕು ಬಿದ್ದು ಸತ್ತನಂತೆ. ಇಡಿಯ ಬಸ್ಸಿನಲ್ಲಿ ಸತ್ತವ ಅವನೊಬ್ಬನೇ. ಮೂರು ದಿನ ಹೆಣ ಅಲ್ಲೇ ಇತ್ತಂತೆ!’
ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ
ಆವತ್ತು ಸಂಜೆ ರಿಝವಿಯ ಮನೆಗೆ ಹೋದೆ. ಬಾಂದ್ರಾದಿಂದ ಪಾಲಿಹಿಲ್‌ಗೆ ಹೋಗುವಾಗ ಮೂಲೆಯ ಗಲ್ಲಿಯೊಂದರಲ್ಲಿ ಹಳೆಯ ಮನೆ ರಿಝಿವಿ ಹತ್ತೊಂಬತ್ತುನೂರ ಅರವತ್ತರ ಸುಮಾರಿಗೆ ಮುಂಬಯಿಗೆ ಬಂದಾಗ ಬಾಡಿಗೆಗೆ ಹಿಡದದ್ದು. ಈಗ ಆ ಆಸ್ತಿಯ ಬೆಲೆ ಗಗನಕ್ಕೇರಿದೆ. ಆದರೂ ಆ ಮನೆಯನ್ನು ಖಾಲಿ ಮಾಡಿದರೆ ಅದರ ಬದಲಾಗಿ ಒಂದು ಪ್ರಶಸ್ತ ಫ್ಲಾಟ್ ನಿಮಗೆ ಪುಕ್ಕಟೆ ಕೊಡಿಸುತ್ತೇನೆ ಎಂದು ದುಂಬಾಲು ಬಿದ್ದಿರುವ ಮನೆ ಮಾಲೀಕನ ಮನವಿಯನ್ನು ರಿಝವಿ ತಳ್ಳಿ ಹಾಕುತ್ತಲೇ ಇದ್ದ.
‘ಮನೆ ಅಂದರೆ ಮನೆಯಾಗಿರಬೇಕು, ಫ್ಲಾಟ್ ಅಲ್ಲ’ ಎಂದು ವಾದಿಸುತ್ತಿದ್ದ.
ರಿಝವಿಯ ಹೆಂಡತಿ ಪಡಸಾಲೆಯಲ್ಲಿ ಬಂದು ಸೋಫಾದ ಮೂಲೆಗಂಟಿ ಕೂತಳು. ಮಾತನಾಡಲಿಲ್ಲ. ಕಣ್ಣೀರು ಧಾರಾಕಾರವಾಗಿ ಹರಿಯುತ್ತಿದ್ದರೂ ಬಿಕ್ಕಲಿಲ್ಲ.
ಮಗಳೆಲ್ಲೋ ಹೊರಗೆ ಹೋಗಿರಬೇಕು.
ರಿಝವಿಯ ಮಗ, ಯಾಕೂಬ್ ಹಸನ್, ವಯಸ್ಸು ಇಪ್ಪತ್ತು ಇಪ್ಪತ್ತೆರಡು ಇರಬೇಕು. ಒಂದು ಚೊಂಬು ನೀರು ತಂದಿಟ್ಟು ಎಲ್ಲ ವಿವರಗಳನ್ನು ಹೇಳಿದ.
ಅಪಘಾತದಲ್ಲಿ ರಿಝುವಿ ಸತ್ತ. ಅವನ ಪರ್ಸಿನಲ್ಲಿ ಅವನ ವಿಳಾಸ ಓದಿ, ಮುಲ್ಕಿಯ ಪೊಲೀಸರು ಮುಂಬಯಿ ಪೊಲೀಸರನ್ನು ಸಂಪರ್ಕಿಸಿದರು. ಅವರು ಮನೆಯವರನ್ನು ಸಂಪರ್ಕಿಸಿದಾಗ ರಿಝವಿಯ ಅಣ್ಣ- ‘ಅಳಿದ ಮೇಲೆ’ಯನ್ನು ಭಾಷಾಂತರಿಸಿದವ- ಉಡುಪಿಗೆ ಹೊರಟ. ಅಷ್ಟರಲ್ಲಿ ಮುಲ್ಕಿಯ ಮುಸಲ್ಮಾನರು ಬಂದು, ‘ಯಾರೋ ಮುಸಲ್ಮಾನ ಸತ್ತಿದ್ದಾನಂತೆ. ನಮಗೆ ಶವವನ್ನು ಕೊಟ್ಟರೆ ನಾವು ದಫನ್ ಮಾಡಿ ಬಿಡುತ್ತೇವೆ’ ಎಂದು ಕೇಳಿಕೊಂಡಿದ್ದರಂತೆ. ಆದರೆ ಅಣ್ಣ ಬಂದು ತಲುಪುವ ತನಕ ಪೊಲೀಸರೂ ಏನೂ ಮಾಡುವ ಹಾಗಿರಲಿಲ್ಲ. ಅಂತೂ ಮೂರು ದಿನ ಹೆಣ ಅನಾಥವಾಗಿ ಕೊಳೀತಿತ್ತಂತೆ. ಮುಲ್ಕಿಯ ತನಕ ಹೋದ ಅಣ್ಣನೂ ಕಾರಂತರನ್ನು ಕಾಣದೆ ಮರಳಿದ್ದ.
ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ
ಯಾಕೂಬ್ ನಿಧಾನವಾಗಿ ಮಾತನಾಡುತ್ತಿದ್ದ. ಅವನ ಮಾತಿನಲ್ಲಿ ತಂದೆಯಂತೆ ಗಡಿಬಿಡಿಯಿಲ್ಲ. ಶಬ್ದಗಳ ಮೇಲಾಟವಿಲ್ಲ. ಅವನ ರೂಪ ಕೂಡ ತಾಯಿಯಂತೆ. ದುಂಡಗಿನ ಮುಖ, ಅಗಲ ಬಾಯಿ. ರಿಝವಿಯ ಹಾಗೆ ಕುಳ್ಳನಲ್ಲ.
‘ಅಂಕಲ್, ನಿಮ್ಮಿಂದ ಒಂದು ಸಹಾಯವಾಗಬೇಕಾಗಿತ್ತು’ ಎಂದ. ‘ಈ ಫಿಲ್ಮ್‌ಗಾಗಿ ಕೆ.ಪಿ. ಪ್ರೊಡಕ್ಷನ್‌ನವರು ಫೈನಾನ್ಸ್ ಕೊಡಲು ಒಪ್ಪಿದ್ದಾರೆ. ಅವರಿಂದ ಅಪ್ಪ ಒಂದು ಲಕ್ಷ ರೂಪಾಯಿ ಅಡ್ವಾನ್ಸ್ ತಗೊಂಡಿದ್ದ. ಅದನ್ನು ಎಲ್ಲರಿಗೂ ಹಂಚಿ ಬಿಟ್ಟಿದ್ದಾನೆ. ಈಗ ನಾವು ಫಿಲ್ಮ್ ಹೇಗಾದರೂ ಮಾಡಿ ಮುಗಿಸಲೇಬೇಕು.’
ರಿಝವಿಯಾಗಿದ್ದರೆ ಇಷ್ಟು ಸ್ಪಷ್ಟವಾಗಿ, ಸಂಕ್ಷಿಪ್ತವಾಗಿ, ನಿಧಾನವಾಗಿ ವಿಷಯವನ್ನು ವಿವರಿಸುತ್ತಿರಲಿಲ್ಲ ಅನಿಸಿತು. ಅವನ ಕೊಂಕು ನಗೆ, ವ್ಯಂಗ್ಯ ಯಾವುದೂ ಮಗನಿಗೆ ಬಂದಿರಲಿಲ್ಲ. ಏಕೋ ಮನಸ್ಸು ವಿಷಣ್ಣವಾಯಿತು.
‘ಬಜೆಟ್ ಎಷ್ಟು ಅಂತ ಅಗ್ರೀಮೆಂಟ್ ಆಗಿತ್ತು?’ ಎಂದು ಕೇಳಿದೆ.
‘ತೋರಿಸತೇನೆ’ ಎಂದು ಯಾಕೂಬ್ ಎದ್ದು ಒಳಗೆ ಹೋದ.
ಒಮ್ಮೆಲೆ ರಿಝವಿಯ ಹೆಂಡತಿ ಮಾತನಾಡಲಾರಂಭಿಸಿದಳು.
‘ಮಗಳು ಮದುವೆಗೆ ಬೆಳೆದು ನಿಂತಿದ್ದಾಳೆ. ಅವಳ ಮದುವೆ ಮಾಡಿ ಬಿಡೋಣ ಅಂತ ಬೆನ್ನು ಹತ್ತಿದ್ದೆ. ಆದರೆ ಇವರು ಈ ಕನ್ನಡ ಕತೆಯ ಪಿಕ್ಚರ್ ಆದರೆ ಅದರಿಂದಲೇ ಮದುವೆಯ ಖರ್ಚು ಹೊರಡತದೆ, ಆದ್ದರಿಂದ ಅದನ್ನು ಮೊದಲು ಮಾಡಿ ಮುಗಿಸತೇನೆ ಅಂತ ಅಂದರು. ಮೂವತ್ತು ವರ್ಷದಿಂದ ಈ ಇಂಡಸ್ಟ್ರಿಯಲ್ಲಿ ದುಡಿದು ಗಳಿಸಿದ್ದೇನು? ಏನೋ ಮನೆ ನಡೀತು. ಆದರೆ ಮಗಳ ಮದುವೆಗೆ ಬೇಕಾದಷ್ಟನ್ನೂ ಉಳಿಸಲಿಲ್ಲ. ಈಗ ಪಿಕ್ಟರ್ ಒಂದಾಗಲಿ- ಬೇಕಾದಷ್ಟು ಉಳಿಸಬಹುದು ಅನ್ನುತ್ತಿದ್ದರು’ ಎಂದು ಸುಮ್ಮನಾದಳು. ಆಮೇಲೆ ತಡೆದು ‘ಯಾವಾಗಲೂ ಇಂಥದೇ ಮಾತು ಕೇಳಿ ಕೇಳಿ ಆಸೆನೇ ಸತ್ತು ಹೋಗಿತ್ತು. ಈಗ ಅವರೇ ಹೋದರು’ ಎಂದಳು.
ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ
‘ಭಾಬೀಜೀ, ನನ್ನಿಂದಾದಷ್ಟು ಮಾಡತೇನೆ’ ಅಂದೆ.
ಯಾಕೂಬ್ ಫೈಲು ತಂದುಕೊಟ್ಟ. ಅದರಲ್ಲಿಯ ಲೆಕ್ಕವನ್ನು ನೋಡಿ ನಾನು ದಿಗಿಲಾದೆ. ಎರಡು ಗಂಟೆಗಳ ಟೆಲಿಫಿಲ್ಮ್. ಹದಿನಾರು ಮಿಲಿಮೀಟರ್ ನೆಗೆಟಿವ್ ಮೇಲೆ ಚಿತ್ರೀಕರಿಸಬೇಕಾದದ್ದು, ಅದನ್ನು ಹನ್ನೊಂದು ಲಕ್ಷ ರುಪಾಯಿಗಳಲ್ಲಿ ಮುಗಿಸಿಕೊಡುತ್ತೇನೆ ಎಂದು ರಿಝವಿ ಒಪ್ಪಿಕೊಂಡಿದ್ದ.
ಎಲ್ಲೋ ಏನೋ ತಪ್ಪಿರಬೇಕೆಂದು ಮತ್ತೆ ಮತ್ತೆ ಪುಟ ತಿರುವಿ ನೋಡಿದೆ. ಇನ್ನೆಲ್ಲಾದರೂ ಇನ್ನೇನಾದರೂ ಜೋಡಣೆ ಇರಬಹುದೇನೋ ಎಂದು ಹುಡುಕಾಡಿದೆ. ಊಂಹೂಂ. ಅಲ್ಲದೆ ಇಷ್ಟಕ್ಕೆಲ್ಲ ಒಪ್ಪಿದ್ದಲ್ಲದೆ ಎರಡು ಹಾಡುಗಳನ್ನೂ ಸೇರಿಸುತ್ತೇನೆ ಎಂದು ಮಾತು ಕೊಟ್ಟಿದ್ದ.
‘ಯಾಕೂಬ್, ಕೆ.ಪಿ. ಪ್ರೊಡಕ್ಷನ್ಸ್‌ದವರನ್ನು ಒಮ್ಮೆ ಮಾತಾಡಿಸೋಣ’ ಎಂದೆ.
‘ನಾನು ಅವರ ನಂಬರ್ ಕೊಡತೇನೆ. ನಾನೂ ಬರಬೇಕೇನು? ನನಗೆ ಅದರಲ್ಲೇನೂ ತಿಳಿಯೋದಿಲ್ಲ. ಅಪ್ಪ ನನಗೆ ಶೂಟಿಂಗ್‌ನ ಹತ್ತಿರ ಹಾಯಗೊಡತಿರಲಿಲ್ಲ’ ಎಂದ.
‘ಈಗಲಾದರೂ ಕಲಿ’ ಎಂದೆ.
ರಿಝವಿಯ ಹೆಂಡತಿ ಕಣ್ಣೆತ್ತಿ ಮಗನ ಕಡೆಗೆ ನೋಡಿದಳು.
‘ನಿಮಗೇನೂ ಅಭ್ಯಂತರವಿಲ್ಲ ತಾನೆ?’ ಎಂದು ಕೇಳಿದೆ.
‘ರುಖ್ಸಾನಾ ಮದುವೆ ಆಗಬೇಕಲ್ಲ. ಇದೊಂದು ಸಲ ಆಗಲಿ’ ಎಂದಳು.
‘ಅಂಕಲ್, ಕಾದಂಬರಿ ಬರೆದವರಿಗೂ ತಿಳಿಸಬೇಕಲ್ಲ.’
‘ಅದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದೆ.
ಅದೇ ದಿನ ಶಿವರಾಮ ಕಾರಂತರಿಗೆ ಫೋನ್ ಮಾಡಿದೆ. ಅವರು ‘ನನಗೇನೂ ಅಭ್ಯಂತರವಿಲ್ಲ. ಅನುಮತಿ ಕೊಟ್ಟು ಬಿಟ್ಟಿದ್ದೇನೆ. ಈಗ ರಿಝವಿ ಕುಟುಂಬದ ಪರವಾಗಿ ಯಾರಾದರೂ ಅದನ್ನು ನಿರ್ದೇಶಿಸಬಹುದು’ ಎಂದರು.
ಇದನ್ನು ಓದಿದ್ದೀರಾ?: ಅಮರೇಶ ನುಗಡೋಣಿ ಅವರ ಕತೆ | ತಮಂಧದ ಕೇಡು
ಆಮೇಲೆ ಕೆ.ಪಿ. ಪ್ರೊಡಕ್ಷನ್‌ದವರೊಡನೆ ಭೆಟ್ಟಿಯ ಸಮಯ ನಿಗದಿ ಮಾಡಿಕೊಂಡೆ.
ಜೀವನ ಕಲೆಯನ್ನು ಅನುಕರಿಸಲಾರಂಭಿಸಿತ್ತು. ಯಶವಂತರಾಯನ ಹಾಗೆ ರಿಝವಿ ಕೂಡ ಆಪ್ತಮಿತ್ರರಿಂದ ದೂರ ಒಬ್ಬಂಟಿ ಸತ್ತಿದ್ದ. ಒಬ್ಬ ವಿಧವೆಯ ಮನೋರಥ ಪೂರ್ತಿ ಆಗಬೇಕಾಗಿತ್ತು. ವಾಸ್ತವದಲ್ಲೇ ನಾನು ಶಿವರಾಮ ಕಾರಂತರ ಪಾತ್ರ ನಿರ್ವಹಿಸಲಾರಂಭಿಸಿದ್ದೆ.
ಇಪ್ಪತ್ತೈದು, ಐವತ್ತು, ಎಪ್ಪತ್ತೈದು ವಾರಗಳ ವಿಜಯೋತ್ಸವವನ್ನು ಘೋಷಿಸುತ್ತ ಬಂಗಾರ, ಬೆಳ್ಳಿ ಗಿಲೀಟಿನ ಹಿಂದೆ ಅಡಗಿರುವ ಪ್ಲಾಸ್ಟಿಕ್ ಟ್ರೋಫಿಗಳು. ಅರ್ಧನಗ್ನ ನಾಯಕ- ನಾಯಕಿಯರ ಪೋಸ್ಟರುಗಳ ನಡುವೆ ಕಾವಿ ಹಿನ್ನೆಲೆಯ ಮೇಲೆ ಬರೆದಿರುವ ದೊಡ್ಡ ಓಂಕಾರ. ಅದನ್ನು ಸೀಳಿ ಹೋಗುವ ತ್ರಿಶೂಲ. ಅದರ ಕೆಳಗೆ ‘ಗರ್ವಸೆ ಕಹೋ ಹಮ್ ಹಿಂದೂ ಹೈಂ’ ಎಂಬ ಸಾಲು.
ಇದೆಲ್ಲ ಯಾಕೂಬನ ಲಕ್ಷ್ಯಕ್ಕೆ ಬಂತೋ ಇಲ್ಲವೋ ಗೊತ್ತಾಗಲಿಲ್ಲ.
‘ಬಜೆಟ್ಟನ್ನು ಹೆಚ್ಚು ಮಾಡುವ ಪ್ರಶ್ನೆಯೇ ಇಲ್ಲ. ಇಂಪಾಸಿಬಲ್!’ ಕೆ.ಪಿ. ಪ್ರೊಡಕ್ಷನ್‌ನ ಕೈಲಾಶ್ ಪ್ರಸಾದ್ ತನ್ನ ಅಸಹಾಯಕತೆಯನ್ನು ಅಂಡರ್‌ಲೈನ್ ಮಾಡುವಂತೆ ತನ್ನ ಎರಡೂ ಕೈಗಳನ್ನು ಅಗಲವಾಗಿ ಚಾಚಿದ.
‘ಹನ್ನೊಂದು ಲಕ್ಷದಲ್ಲಿ ಫಿಲ್ಮ್ ಮಾಡಲಿಕ್ಕೆ ಸಾಧ್ಯವಿಲ್ಲದಿದ್ದರೆ ರಿಝವಿ ಒಪ್ಪಿಕೊಂಡದ್ದಾದರೂ ಯಾಕೆ?’
ಯಾಕೂಬ್ ದೀನನಾಗಿ ನನ್ನ ಕಡೆಗೆ ನೋಡಿದ.
ನಾನು ‘ನನಗೆ ಗೊತ್ತಿಲ್ಲ’ ಎಂದೆ. ಆದರೆ ನನಗೆ ಗೊತ್ತಾಗಿತ್ತು.
ಇದನ್ನು ಓದಿದ್ದೀರಾ?: ವಿವೇಕ ಶಾನಭಾಗ ಅವರ ಕತೆ | ಲಂಗರು
ಈ ಧೂರ್ತ ವಿತ್ತ ಪ್ರವೀಣನ ಜೊತೆಗೆ ಮಾತನಾಡುತ್ತಿದ್ದಂತೆ ಮೆಲ್ಲನೆ ವಸ್ತುಸ್ಥಿತಿ ಸ್ಪಷ್ಟವಾಗಹತ್ತಿತ್ತು. ಇಂಥ ಸಣ್ಣ ಬಜೆಟ್ಟಿನಲ್ಲಿ ಚಿತ್ರಪಟ ನಿರ್ಮಿಸುವುದು ಅಸಾಧ್ಯ ಎಂದು ಗೊತ್ತಿದ್ದೂ ರಿಝುವಿ ಒಪ್ಪಿಕೊಂಡಿದ್ದ. ಏಕೆಂದರೆ ಹೇಗಾದರೂ ಮಾಡಿ, ಏನಾದರೂ ಮಾಡಿ ‘ಅಳಿದ ಮೇಲೆ’ ಚಿತ್ರೀಕರಿಸಲೇಬೇಕಾಗಿತ್ತು. ಈ ಜಿದ್ದಿಗಾಗಿ ಮಗಳ ಮದುವೆ ಮುಂದೂಡಿದ್ದ. ಮದುವೆಯ ಖರ್ಚು ಆ ಟೆಲಿಫಿಲ್ಮ್‌ನಿಂದ ಹೊರಡುತ್ತದೆ ಎಂದು ಹೆಂಡತಿಗೆ ಸುಳ್ಳು ಹೇಳಿದ್ದ. ರಿಝವಿಯ ಉತ್ಸಾಹ ನೋಡಿ ಇವ ಯಾವ ಬಜೆಟ್ಟಿಗಾದರೂ ಒಪ್ಪುತ್ತಾನೆ ಎಂದು ಕಂಡುಕೊಂಡ ಕೈಲಾಶ್ ಪ್ರಸಾದ್ ಬಜೆಟ್ಟನ್ನು ಇನ್ನಷ್ಟು ಮೊಟಕುಗೊಳಿಸಿದ್ದ. ಈ ಸಾಹಸಕ್ಕೆ ಕೈಹಾಕಿದ್ದರೆ ರಿಝವಿ ಇನ್ನೂ ಮೂರು-ನಾಲ್ಕು ಲಕ್ಷದ ಸಾಲ ಕೊರಳಿಗೆ ಕಟ್ಟಿಕೊಳ್ಳುತ್ತಿದ್ದ. ವೈಯಕ್ತಿಕ ಸಾಲ. ಅಂದರೆ ಮಗಳ ಮದುವೆ ಇನ್ನೂ ಮುಂದೆ ಬೀಳುತ್ತಿತ್ತು. ಇನ್ನಷ್ಟು ತೊಡಕಿನದಾಗುತ್ತಿತ್ತು.
ನಾನು ಎದ್ದೆ.
‘ಹನ್ನೊಂದರಲ್ಲಿ ಫಿಲ್ಮ್ ಆಗೋದಿಲ್ಲ. ಕ್ಷಮಿಸಬೇಕು. ನಾವು ಬರುತ್ತೇವೆ. ನಡಿ, ಯಾಕೂಬ್’ ಎಂದೆ.
‘ಹಾಗಾದರೆ ಅಡ್ವಾನ್ಸ್?’
‘ಅದನ್ನು ರಿಝವಿ ತಿಂದಿಲ್ಲ. ಎಲ್ಲರಿಗೂ ಹಂಚಿಬಿಟ್ಟಿದ್ದಾರೆ. ನನಗೂ ಕೊಟ್ಟಿದ್ದಾರೆ. ಚಿತ್ರಪಟದ ನಿರ್ಮಿತಿಯೊಂದಿಗೆ ಅದು ಪ್ರಯೋಜನಕ್ಕೆ ಬರುತ್ತದೆ. ಇಲ್ಲದಿದ್ದರೆ ಹೋಯ್ತು. ವಿಚಾರ ಮಾಡಿ ಹೇಳಿರಿ. ಹದಿನೆಂಟರಲ್ಲಾದರೆ ನಾನೇ ಮಾಡಿ ಕೊಡಬಲ್ಲೆ.’
ನಾನು ಹದಿನಾರು ಅನ್ನಬಹುದಾಗಿತ್ತು. ಆದರೆ ಮದುವೆಯ ಖರ್ಚಿಗೆ ಅಂತ ಎರಡು ಲಕ್ಷ ಸೇರಿಸಿದ್ದೆ. ಅಲ್ಲದೆ ಚೌಕಾಶಿ ಇಲ್ಲೇ ಮುಗಿದಿಲ್ಲ ಅಂತ ನನಗೆ ಗೊತ್ತಿತ್ತು.
ಯಾಕೂಬ್ ದಿಗಿಲಾಗಿದ್ದ. ನಮ್ಮಿಂದ ಕೈಲಾಶ್ ಪ್ರಸಾದನಿಗೆ ಅನ್ಯಾಯವಾಗುತ್ತಿದೆ ಎಂದು ವಿಹ್ವಲನಾಗಿದ್ದ. ಬೀದಿಗಿಳಿದಾಗ ನಾನು ಸ್ಕ್ರಿಪ್ಟ್ ಹಾಗೂ ಬಜೆಟ್ ಅವನ ಕೈಯಲ್ಲಿಟ್ಟು ಹೇಳಿದೆ:
‘ಆ ಖದೀಮ ಒಪ್ಪಿಕೊಂಡರೆ ಸರಿ, ಇಲ್ಲದಿದ್ದರೆ ನಿನ್ನ ಅಕ್ಕನ ಮದುವೆಗೆ ಬೇರೆಯೆಲ್ಲಾದರೂ ಹಣದ ವ್ಯವಸ್ಥೆ ಮಾಡು. ಹನ್ನೊಂದರಲ್ಲಿ ಫಿಲ್ಮ್ ಮುಗಿಸುವ ಮೂರ್ಖತನಕ್ಕೆ ಬೀಳಬೇಡ!’
ಇದನ್ನು ಓದಿದ್ದೀರಾ?: ಉಮಾ ರಾವ್ ಅವರ ಕತೆ | ಅಗಸ್ತ್ಯ
ನಾನು ಟ್ಯಾಕ್ಸಿ ಹಿಡಿದು ಮನೆಗೆ ಹೊರಟೆ.
ರಿಝವಿ ಮೂರ್ಖನಲ್ಲ ನನಗೆ ಗೊತ್ತಿತ್ತು. ಅಂದಾಗ ಇಂಥ ನಂಬಲಾಗದ ವ್ಯಾಪಾರಕ್ಕೆ ಇಳಿದ ವ್ಯಕ್ತಿಗೆ ಏನೆಂದು ಕರೆಯಬೇಕು? ಹುಂಬ? ಹುಚ್ಚ? ಕನ್ನಡದಲ್ಲಿ ಬಹುಶಃ ಅದಕ್ಕೆ ಯೋಗ್ಯ ಶಬ್ದವಿಲ್ಲ. ಅರಬ್ಬಿ ಭಾಷೆಯಲ್ಲಿದೆ. ಮಜನೂ! ಒಂದು ಕಾದಂಬರಿಯ ಅರವತ್ತು ಪುಟಗಳಿಗೆ ಭ್ರಾಂತನಾದ ಮಜನೂ.
ಆರು ಡಿಸೆಂಬರ್. ಅಯೋಧ್ಯೆಯಲ್ಲಿ ಬಾಬರೀ ಮಸೀದಿ ಕೆಡವಲಾಯಿತು.
ಮಾರನೇ ದಿನ ಭೂಷಣ ಫೋನ್ ಮಾಡಿದ. ‘ಒಳ್ಳೇದಾಯ್ತು. ಅವರಿಗೆ ಹಾಗೇ ಬುದ್ದಿ ಕಲಿಸಬೇಕು. ಇಲ್ಲದಿದ್ದರೆ ಕಲಿಯೋದಿಲ್ಲ ಅವರು’ ಎಂದ.
ನನ್ನ ಕುಟುಂಬದವರು, ನೆಂಟರಿಷ್ಟರು, ಮಿತ್ರರು ಎಲ್ಲ ಹೌದೆಂದು ತಲೆದೂಗುತ್ತಿದ್ದರು. ತನ್ನ ಹಿಂಸೆಗೇ ನಿಗುರಿ ವೀರ್ಯಸ್ಖಲನ ಮಾಡಿಕೊಂಡಿತ್ತು ನನ್ನ ಪರಿಸರ.
ಸುಮಾರು ಒಂದು ವಾರದ ನಂತರ.
ಮುಂಜಾನೆ ಚಹ ಕುಡಿಯುತ್ತಿರುವಾಗಲೇ ಯಾಕೂಬ್ ರಿಝವಿಯ ಫೋನ್ ಬಂತು.
‘ಅಂಕಲ್, ನೀವು ಇನ್ನೊಂದು ಅರ್ಧ ಗಂಟೆ ಮನೆಯಲ್ಲಿದ್ದೀರಲ್ಲೇನು?’
‘ಇದ್ದೇನಲ್ಲ. ಈ ಹೊತ್ತು ಮಧ್ಯಾಹ್ನದ ಶೂಟಿಂಗ್ ಶಿಫ್ಟ್….’
‘ಹಾಗಾದರೆ ಬಂದೇ ಬಿಟ್ಟೆ. ಅರ್ಧ ಗಂಟೆಯೊಳಗೆ.’
‘ಏನಾಯ್ತು? ಫೋನ್ ಮೇಲೇ ಹೇಳಲ್ಲ.’
ಯಾಕೂಬ್ ಫೋನ್ ಕೆಳಗಿಟ್ಟಿದ್ದ.
ಇದನ್ನು ಓದಿದ್ದೀರಾ?: ಬಿ.ಟಿ. ಜಾಹ್ನವಿ ಅವರ ಕತೆ | ದೂಪ್ದಳ್ಳಿ ಸೆಕ್ಸಿ ದುರುಗ
ಇಪ್ಪತ್ತು ನಿಮಿಷದೊಳಗೆ ಬಾಗಿಲ ಗಂಟೆಯಾಯಿತು. ಬಾಗಿಲಲ್ಲಿ ಕ್ಷಣ ಮಾತ್ರ ರಿಝವಿಯೇ ನಿಂತಂತೆ ಅನಿಸಿತು.
‘ಬಾ ಬಾ ಕೂತುಕೋ’ ಎಂದು ಹೇಳುತ್ತಿರುವಾಗಲೇ ಒಂದು ಪ್ರಶ್ನೆ ಕಾಡುತ್ತಿತ್ತು. ಹಿಂದಿನ ಸಲ ಯಾಕೂಬ್‌ಗೂ ಅವನ ತಂದೆಗೂ ಯಾವುದೇ ಸಾಮ್ಯ ಕಂಡಿರಲಿಲ್ಲ. ಈ ಸಲ ಮಾತ್ರ ನನಗೆ ಯಾಕೆ ರಿಝವಿಯ ನೆನಪಾಗಬೇಕು?
‘ಏನು ವಿಶೇಷ?’ ಎಂದೆ.
‘ತಡೀರಿ, ಅಂಕಲ್. ಮೊದಲು ಸಿಹಿ ತಗೊಳ್ಳಿರಿ. ಆಮೇಲೆ ಸುದ್ದಿ!’ ಎಂದು, ಹ್ಯಾಂಡ್ ಬ್ಯಾಗಿನಿಂದ ಒಂದು ಮಿಠಾಯಿಯ ಪೆಟ್ಟಿಗೆ ತೆಗೆದ. ನಗುತ್ತ ನನ್ನ ಕಡೆಗೆ ನೋಡಿದ. ಕೂಡಲೆ ನಾನು ಆ ತುಂಟ ನಗೆಯ ಗುರುತು ಹಿಡಿದೆ. ಕೇಳಿದ ಪ್ರಶ್ನೆ ತಪ್ಪಿಸಿ ಇನ್ನೊಂದೇನೋ ಹೇಳುವುದು- ಅದೂ ರಿಝವಿಯ ಟ್ರೇಡ್ ಮಾರ್ಕ್!
‘ಮಿಠಾಯಿ ಯಾಕೆ?’
‘ಅವ್ವ ನಿಮಗಾಗಿ ಕಳಿಸಿದ್ದಾಳೆ. ಇದು ಒಂದು ವಿಶಿಷ್ಟ ಪದ್ಧತಿಯ ಹೈದರಿಬಾದೀ ಮಿಠಾಯಿ. ಶಾಹೀ ಟುಕಡಾ. ನೀವು ಮೊದಲು ಅದನ್ನು ತಿಂದು ಆಮೇಲೆ ಏನು ಬೇಕೋ ಅದನ್ನ ಚರ್ಚಿಸಬಹುದು ಅಂತ ಕರಾರು ಹಾಕಿದ್ದಾಳೆ.’
ಶಾಹೀ ಟುಕಡಾ ಸವಿಯುತ್ತ ನಾನು ಕೇಳಿದೆ, ‘ಏನು, ಅಕ್ಕನ ಲಗ್ನ ನಿಶ್ಚಯವಾಯಿತೇನು?’
‘ಇಲ್ಲ. ಆದರೆ ನಿಶ್ಚಯವಾಗತದೆ ಅನ್ನೋದು ನಿಶ್ಚಯವಾಯಿತು.’
‘ಅಂದರೆ?’
‘ಅಂಕಲ್, ಕೆ.ಪಿ. ಪ್ರೊಡಕ್ಷನ್ಸ್ ನವರು ‘ಅಳಿದ ಮೇಲೆ’ಗಾಗಿ ಹದಿನೇಳು ಲಕ್ಷ ಕೊಡಲಿಕ್ಕೊಪ್ಪಿಕೊಂಡಿದ್ದಾರೆ. ನಿನ್ನೆ ಸಂಜೆ ಫೋನ್ ಬಂತು.’
ಇದನ್ನು ಓದಿದ್ದಿರಾ?: ಜಯಶ್ರೀ ದಿವಾಕರ್ ಅವರ ಕತೆ | ನೆಲೆ ಕಾಣದ ನೆರಳು
ಶಬ್ದಗಳ ಮೇಲೆ ಶಬ್ದ ನುಗ್ಗುತ್ತ ಹರಿದು ಬಂದವು.
ನಾನು ಉತ್ತರ ಕೊಡಲಿಲ್ಲ.
‘ಆದಷ್ಟು ಬೇಗ ಶುರು ಮಾಡಿ ಬಿಡಿ ಅಂತಂದರು.’
‘ಯಾಕೂಬ್, ‘ಅಳಿದ ಮೇಲೆ’ ಈಗಂತೂ ಸಾಧ್ಯವಿಲ್ಲ’ ಎಂದೆ.
ತಂದೆಯಂತೆ ಮಗ, ನಾನೇನು ಹೇಳುತ್ತಿದ್ದೇನೆಂಬುದನ್ನು ಲೆಕ್ಕಿಸದೆ ಮುಂದಕ್ಕೆ ನುಗ್ಗಿದ.
‘ನಿಮ್ಮ ಒಟ್ಟೂ ಕಮಿಟ್‌ಮೆಂಟೇನು ಅಂತ ಹೇಳಿಬಿಟ್ಟರೆ-‘
‘ಯಾಕೂಬ್, ಸಾರಿ, ನಾನು ಈ ಟೆಲಿಫಿಲ್ಮ್ ಮಾಡಲಿಕ್ಕೊಲ್ಲೆ.’
ಈ ಸಲ ಮಾತು ಮುಟ್ಟಿತು. ತಬ್ಬಿಬ್ಬಾದ. ಬೆಚ್ಚಿ, ಇನ್ನೂವರೆಗೆ ನಿಂತಿದ್ದವನು ಕುರ್ಚಿಯ ಮೇಲೆ ಕೂತ. ನಕ್ಕರೆ ಅಡಚಣೆಗಳೆಲ್ಲ ಇಲ್ಲವಾಗಿ ಬಿಡಬಹುದೇನೋ ಎಂಬಂತೆ ನನ್ನನ್ನು ನೋಡಿ ಅರ್ಧ ನಗೆ ನಕ್ಕ.
‘ಯಾಕೆ, ಅಂಕಲ್? ನೀವೇ ಒಪ್ಪಿಕೊಂಡಿದ್ದಿರಲ್ಲ. ಅವರು ಹದಿನೇಳು ಅನ್ನತ್ತಿದ್ದಾರೆ. ಆದರೆ ಹದಿನೆಂಟೇ ಆಗಬೇಕು, ಅಂತಿದ್ದರೆ….’
ಅವನ ಧ್ವನಿ ನಿಧಾನವಾಗಿತ್ತು. ಉತ್ಕರ್ಷದ ಹೊಸ್ತಿಲಲ್ಲಿ ನಿಂತು ಭವಿಷತ್ತಿನ ಕತೆ ಕೇಳಿ ಕೇಳಿ ದಣಿದ ಅವನ ತಾಯಿಯ ದನಿಯಂತೆ.
ಇವನಿಗೆ ಏನಂತ ಹೇಳಲಿ? ಪ್ರಯತ್ನ ಮಾಡಿದೆ.
‘ನೋಡು, ನಿನ್ನ ತಂದೆ ಈ ಕತೆಗೆ ಮಾರು ಹೋದದ್ದು ಒಂದೇ ಕಾರಣಕ್ಕಾಗಿ. ಚಿತ್ರಪಟದ ಕೊನೆಗೆ ಪುನರ್ಜನ್ಮ ತಾಳಿ ಬರುವ ಮಂದಿರಕ್ಕಾಗಿ ಅದು ಅವನಿಗೆ ಮಾನವೀಯತೆಯ ಪ್ರತೀಕವಾಗಿತ್ತು. ಆದರೆ ಈಗ… ‘ಮಂದಿರ ಕಟ್ಟೋದು’ ‘ಮಂದಿರದ ಪುನರುತ್ಥಾನ’ ಎಂಬ ನುಡಿಕಟ್ಟಿನ ಅರ್ಥನೇ ಬದಲಾಗಿದೆ. ವಿಷಪೂರಿತವಾಗಿದೆ.’
‘ಅಂದರೆ?’
ಇದನ್ನು ಓದಿದ್ದೀರಾ?: ನೇಮಿಚಂದ್ರ ಅವರ ಕತೆ | ಹೊಸ ಹುಟ್ಟು
ಯಾಕೂಬ್ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದನೋ ಅಥವಾ ತನ್ನದೇ ಬೇರೆ ಯಾವುದೋ ಯೋಚನೆಯಲ್ಲಿ ತೊಡಗಿದ್ದನೋ ಗೊತ್ತಾಗಲಿಲ್ಲ.
‘ಬಾಬರೀ ಮಸೀದಿಯನ್ನು ಕೆಡವಿದ ದುರುಳರು ಈಗ ಆ ಸ್ಥಾನದಲ್ಲಿ ಮಂದಿರ ಕಟ್ಟಬೇಕೆನ್ನುತ್ತಿದ್ದಾರೆ. ಗೊತ್ತಿಲ್ಲೇನು?’
‘ಅದು ಯಾರಿಗೆ ಗೊತ್ತಿಲ್ಲ, ಅಂಕಲ್?’ ಯಾಕೂಬ್ ನಕ್ಕ. ‘ಅದಕ್ಕೂ ನಿಮಗೂ ಏನು ಸಂಬಂಧ?’
ನಾನು ಎದ್ದು ಕಿಟಕಿಯ ಹತ್ತಿರ ಹೋಗಿ ಹೊರಗೆ ನೋಡಿದೆ. ಕೂಡಲೆ ಹಾಗೆ ಮಾಡಬಾರದಿತ್ತು ಅನಿಸಿತು. ಪ್ರತಿಯೊಂದು ಟೆಲಿವಿಜನ್ ಧಾರಾವಾಹಿಯಲ್ಲಿ ವಯಸ್ಸಿನಲ್ಲಿ ಹಿರಿಯ ವ್ಯಕ್ತಿ ಭಾಷಣ ಬಿಗಿಯಬೇಕೆಂದಾಗ ಎದ್ದು ಹೋಗಿ ಕಿಡಕಿಯಿಂದ ಹೊರಗೆ ನೋಡುತ್ತಾನೆ.
‘ಅದಕ್ಕೂ ಎಲ್ಲದಕ್ಕೂ ಸಂಬಂಧ ಬರತದೆ. ಅಯೋಧ್ಯೆಯಲ್ಲಿ ನಡೆದ ಬರ್ಬರತೆಯಿಂದ ಮಂದಿರ ನಿರ್ಮಾಣದ ಕಲ್ಪನೆನೇ ಭ್ರಷ್ಟವಾಗಿಬಿಟ್ಟಿದೆ. ಬಾಬರೀ ಮಸೀದಿಯ ಉಧ್ವಸ್ತ ಅಡಿಗಲ್ಲಿನ ಮೇಲೊಂದು ಅನಾಥ ಶವ ಬಿದ್ದುಕೊಂಡಿದೆ. ಹಿಂದೂ ಸಂಸ್ಕೃತಿಯದು’ ಎಂದು ಆರಂಭಿಸಿದೆ.
ಮೆಲೊಡ್ರಾಮಾಟಿಕ್ ಆಗದೆ ಮುಂದೆ ಹೇಗೆ ಸಾಗಬೇಕೆಂದು ತಿಳಿಯದೆ ನಾನು ನನ್ನ ಮಾತು ಮೊಟಕುಗೊಳಿಸಿಬಿಟ್ಟೆ.
‘ನನ್ನಿಂದಂತೂ ಸಾಧ್ಯವಿಲ್ಲ’ ಎಂದೆ. ಯಾಕೂಬ್ ನೋಡುತ್ತ ಕುಳಿತ.
ನಾನೂ ರಿಝವಿಯಂತೆ ಮಾತನಾಡುತ್ತಿದ್ದೇನೆ, ಮುಖ್ಯ ವಿಷಯ ಬಿಟ್ಟು ಗುಡ್ಡ ಸುತ್ತಿ ಬರುತ್ತಿದ್ದೇನೆ ಅನಿಸಿತು. ಬಾಬರೀ ಮಸೀದಿಯ ವಿನಾಶದಂಥ ಘಟನೆ ಎಂದೂ ಒಬ್ಬಂಟಿಯಾಗಿ ನಿಲ್ಲುವುದಿಲ್ಲ. ಅದು ಪಿಡುಗಿನಂತೆ ನಮ್ಮ ಸಂಸ್ಕೃತಿಯ ಪ್ರತಿ ಅಂಶವನ್ನು ಕಲುಷಿತಗೊಳಿಸುತ್ತದೆ. ಮೂವತ್ತೆರಡು ವರ್ಷಗಳ ಹಿಂದೆಯೇ ಬರೆದ ಒಂದು ಕನ್ನಡ ಸಾಹಿತ್ಯ ಕೃತಿಯನ್ನು ಕೂಡ- ಇತ್ಯಾದಿ.
‘ಅಂಕಲ್’ ಯಾಕೂಬ್ ಆರಂಭಿಸಿದ. ನಿಂತ. ‘ನಾನು ಹೇಳಬಾರದು ಅಂತಿದ್ದೆ. ಹೇಳತೀನಿ. ಈ ಫಿಲ್ಮ್ ಆದರೆ ನನ್ನ ಅಕ್ಕನ ಮದುವೆ ಆಗತದೆ. ನೀವು ಈ ಚಿತ್ರಪಟವನ್ನು ಡೈರೆಕ್ಟ್ ಮಾಡಲಿಕ್ಕೆ ಒಪ್ಪಿಕೊಂಡಿದ್ದೀರಿ, ಅದಕ್ಕಾಗಿ… ನಾನು ಹೇಳಬಾರದು… ಆದರೆ ನಮ್ಮ ಇಡೀ ಕುಟುಂಬ ಎಷ್ಟು ಆಭಾರಿಯಾಗಿದೆ ಹೇಳೋದು ಕಷ್ಟ.’
ಒಂದು ಗಳಿಗೆ ತಡೆದು, ‘ನಮಗೆ ಈಗ ನೀವೇ ಗತಿ’ ಎಂದ.
ಇದನ್ನು ಓದಿದ್ದೀರಾ?: ಜಯಂತ ಕಾಯ್ಕಿಣಿ ಅವರ ಕತೆ | ಅಮೃತಬಳ್ಳಿ ಕಷಾಯ
ಇವನಿಗೆ ಹೇಗೆ ತಿಳಿಸಿ ಹೇಳಲಿ? ನಾಳೆ ಈ ಚಿತ್ರ ಟೆಲಿವಿಜನ್ ಮೇಲೆ ಬಂದಾಗ ಪ್ರೇಕ್ಷಕರಿಗೆ ರಿಝವಿಯ ಮಗಳ ಮದುವೆಯ ಸಂದರ್ಭವನ್ನು ಯಾರು ವಿವರಿಸುತ್ತಾರೆ? ಎಲ್ಲರಿಗೂ ಕಾಣಿಸೋದು ನಾನು ಒಂದು ಅಮೋಘ ಕನ್ನಡ ಕಾದಂಬರಿಯನ್ನು ಒಂದು ಲಜ್ಜಾಸ್ಪದ ಘಟನೆಯ ಹೆಗ್ಗಳಿಕೆಗಾಗಿ ಬಳಸುತ್ತಿದ್ದೇನೆ ಅನ್ನೋದಷ್ಟೇ.
‘ಬಾಬರೀ ಮಸೀದಿ ಮಾತ್ರ ಅಳಿದು ಹೋಗಿಲ್ಲ ಯಾಕೂಬ್. ಅದರ ಜೊತೆಗೆ ನಿನ್ನ ತಂದೆಯ ಕನಸೂ ಅಳಿದು ಹೋಗಿದೆ’ ಎಂದು ಹೇಳಬೇಕಾಗಿತ್ತು, ಹೇಳಲಾರದೆ ನಿಂತೆ, ಕಿಡಕಿಯ ಹೊರಗೆ ನೋಡುತ್ತ.
ದೀರ್ಘ ಮೌನ.
‘ನಿಮ್ಮ ಮರ್ಜಿ’ ಎನ್ನುತ್ತ ಯಾಕೂಬ್ ಎದ್ದ. ‘ನಿಮಗೆ ಮನಸ್ಸು ಇಲ್ಲದಿರುವಾಗ ನಾನು ಒತ್ತಾಯ ಮಾಡುವುದೂ ತಪ್ಪಾಗತದೆ.’
ನಾನು ಹೇಳಿದ್ದನ್ನೇ ಎಷ್ಟು ಸಲ ಹೇಳಲಿ? ಅಥವಾ ಹೇಳದೆ ಇದ್ದುದನ್ನೇ ಎಷ್ಟು ಸಲ ಹೇಳಲಿ? ‘ಸರಿ, ಬರತೇನೆ’ ಎಂದು ಬಾಗಿಲ ಕಡೆಗೆ ಹೋದ.
ಮಿಠಾಯಿಯ ಪೆಟ್ಟಿಗೆ ಮೇಜಿನ ಮೇಲೆ ಇತ್ತು ಅದರ ಪಕ್ಕದಲ್ಲೇ ‘ಅಳಿದ ಮೇಲೆ’ ಟೆಲಿಫಿಲ್ಮನ ಚಿತ್ರಕತೆ ಬಿದ್ದಿತ್ತು.
‘ಯಾಕೂಬ್, ಅದನ್ನು ತಗೊಂಡು ಹೋಗು’ ಎಂದು ಆ ಕಡೆ ಬೆರಳು ಮಾಡಿದೆ.
‘ಅದನ್ನು ಅವ್ವ ನಿಮಗಾಗಿ ಅಂತ ಸ್ಪೆಶಲ್ಲಾಗಿ ಕಳಿಸಿದ್ದಾಳೆ’ ಎಂದ.
ನಾನು ತಬ್ಬಿಬ್ಬಾಗಿ ‘ಮಿಠಾಯಿ ಅಲ್ವ, ಚಿತ್ರಕತೆ’ ಎಂದೆ.
ಯಾಕೂಬ್ ನನ್ನ ಕಡೆಗೆ ನೋಡಿದ. ಕ್ಷಣ ಮಾತ್ರ ಅವನ ಕಣ್ಣಲ್ಲಿ ಒಂದು ನಗೆ ಮಿಂಚಿದಂತಾಯಿತು.
‘ಬೇಡ, ಅಂಕಲ್. ಅದರಿಂದಾದರೂ ನಮಗೇನು ಪ್ರಯೋಜನ? ಬರತೇನೆ’ ಎಂದ. ಹೊರಟುಹೋದ.

ಗಿರೀಶ್ ಕಾರ್ನಾಡ್(1938-2019): ಮೇ 19ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ. ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಪ್ರಾಥಮಿಕ ಶಿಕ್ಷಣ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ. ಆ ಬಳಿಕ Rhodes scholorship ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಆಕ್ಸ್‌ಫರ್ಡ್ ಡಿಬೇಟ್ ಕ್ಲಬ್‌ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಆಕ್ಸ್‌ಫರ್ಡ್‌ನಿಂದ ಬಂದವರು ಮದ್ರಾಸ್‌ನಲ್ಲಿ ನೌಕರಿಯಲ್ಲಿದ್ದು ಧಾರವಾಡಕ್ಕೆ ವಾಪಸಾಗಿ ರಂಗಭೂಮಿಯಲ್ಲಿ ತೊಡಗಿಕೊಂಡರು. ಪ್ರಕಟಿತ ಕೃತಿಗಳು: ಮಾ ನಿಷಾಧ- ಏಕಾಂಕ ನಾಟಕ, ಯಯಾತಿ, ತುಘಲಕ್, ಹಯವದನ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ಒಡಕಲು ಬಿಂಬ, ಮದುವೆ ಅಲ್ಬಂ, ಫ್ಲಾವರ್ಸ್, ಬೆಂದ ಕಾಳು ಆನ್ ಟೋಸ್ಟ್ (ನಾಟಕಗಳು). ಚಿತ್ರರಂಗದಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಯು.ಆರ್. ಅನಂತಮೂರ್ತಿಯವರ ವಿವಾದಾತ್ಮಕ ಕಾದಂಬರಿ ‘ಸಂಸ್ಕಾರ’ವನ್ನು ಚಲನಚಿತ್ರವನ್ನಾಗಿ ಮಾಡಿದ್ದಲ್ಲದೇ, ಆ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಚಿತ್ರ ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ತಂದುಕೊಟ್ಟಿತು. ಆ ನಂತರ ಎಸ್.ಎಲ್. ಭೈರಪ್ಪನವರ ‘ವಂಶವೃಕ್ಷ’ ಕಾದಂಬರಿಯನ್ನು ಆಧರಿಸಿ, ಬಿ.ವಿ. ಕಾರಂತರ ಜೊತೆಗೂಡಿ ‘ವಂಶವೃಕ್ಷ’ ಚಿತ್ರವನ್ನು ನಿರ್ದೇಶಿಸಿದರು. ಇದು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪುರಸ್ಕಾರ ಪಡೆಯಿತು. ಮುಂದೆ ‘ತಬ್ಬಲಿಯು ನೀನಾದೆ ಮಗನೆ’, ‘ಕಾಡು’, ‘ಒಂದಾನೊಂದು ಕಾಲದಲ್ಲಿ’ ಚಿತ್ರಗಳನ್ನು ನಿರ್ದೇಶಿಸಿದರು. ನಂತರ ‘ಉತ್ಸವ್’, ‘ಗೋಧೂಳಿ’ ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು. ರಾಷ್ಟ್ರಕವಿ ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಕಾದಂಬರಿಯನ್ನು ಆಧರಿಸಿ ಚಿತ್ರ ನಿರ್ದೇಶಿಸಿದರು. ಈ ಚಿತ್ರ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಇದಲ್ಲದೆ ‘ಕನಕ ಪುರಂದರ’, ‘ದ.ರಾ.ಬೇಂದ್ರೆ’ ಹಾಗೂ ‘ಸೂಫಿ ಪಂಥ’ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು ‘ಚೆಲುವಿ’ ಕಿರುಚಿತ್ರ ನಿರ್ದೇಶಿಸಿದರು. ಇವರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ. ಇಂಗ್ಲೆಂಡ್‌ನಲ್ಲಿ ನೆಹರೂ ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. 10.6.2019ರಂದು ಬೆಂಗಳೂರಿನಲ್ಲಿ ನಿಧನರಾದರು.





