ತಾಲ್ಲೂಕಿನ ಕಸಬಾ ಹೋಬಳಿಯ ವೈ. ಹುಣಸೇನಹಳ್ಳಿ ಗ್ರಾಮದ ಎಸ್‌ಆರ್‌ಇಟಿ ಪ್ರೌಢಶಾಲೆ ಆವರಣದಲ್ಲಿ ನಡೆದ ‘ಪ್ರಜಾಸೇವೆ ಆಂದೋಲನ–ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ಪ್ರಜಾಸೇವಾ ಆಂದೋಲನಗಳಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದ್ದರೂ, ಅರ್ಜಿಯ ಪ್ರಸ್ತುತ ಸ್ಥಿತಿ ಹಾಗೂ ಅದು ಯಾವ ಅಧಿಕಾರಿಯ ಬಳಿ ಇದೆ ಎಂಬ ಮಾಹಿತಿ ಸಾರ್ವಜನಿಕರಿಗೆ ಸಿಗುತ್ತಿರಲಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ಏಕೀಕೃತವಾಗಿ ಐಪಿಜಿಆರ್‌ಎಸ್ ತಂತ್ರಾಂಶದ ಮೂಲಕ ಅರ್ಜಿಗಳ ಸ್ಥಿತಿಯನ್ನು ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದರು.
ಅರ್ಜಿಗಳನ್ನು ಸ್ವೀಕರಿಸಿದ ಬಳಿಕ ಕೈಬರಹದ ಸ್ವೀಕೃತಿ ನೀಡುತ್ತಿರುವ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದರು. “ಕೈಬರಹದ ಸ್ವೀಕೃತಿ ನೀಡುವುದೇಕೆ? ಸಾರ್ವಜನಿಕರಿಗೆ ಐಪಿಜಿಆರ್‌ಎಸ್ ಸಂಖ್ಯೆ ನೀಡದಿರುವುದಕ್ಕೆ ಕಾರಣವೇನು?” ಎಂದು ಪ್ರಶ್ನಿಸಿದರು. ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಕಡ್ಡಾಯವಾಗಿ ಸ್ವೀಕೃತಿ ಪಡೆಯಬೇಕು. ಸರಿಯಾದ ರೀತಿಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಶೇ.100ರಷ್ಟು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಪ್ರಜಾಸೇವಾ ಆಂದೋಲನದ ಸಭೆಗಳನ್ನು ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಸೂಚಿಸಿದರು.
ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಸಭೆಗಳು ತೃಪ್ತಿಕರವಾಗಿದ್ದರೂ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮ ನಡೆಯದಿರುವುದು ಕಂಡುಬಂದಿದೆ. ಕರ್ತವ್ಯ ಲೋಪಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಶೇ.60ರಷ್ಟು ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದ್ದು, 1.53 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಮುಂದಿನ 10 ದಿನಗಳಲ್ಲಿ ₹74 ಕೋಟಿ ವಿಮಾ ಮೊತ್ತ ಪಾವತಿಯಾಗಲಿದೆ. ಜಾನುವಾರುಗಳಿಗೆ ಮೇವು ಒದಗಿಸುವ ಉದ್ದೇಶದಿಂದ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ 12 ಸಾವಿರ ಬಿತ್ತನೆ ಬೀಜ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ತಾಲ್ಲೂಕಿನ ಹೆಚ್.ಎನ್. ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಾಗೃತಿ ಮಳಿಗೆಗಳನ್ನು ತೆರೆಯಲಾಗಿತ್ತು. ಜಿಲ್ಲಾಧಿಕಾರಿ ಜಿ. ಪ್ರಭು ಅವರು ಸ್ವತಃ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ, ಅವುಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಇದನ್ನು ಓದಿದ್ದೀರಾ..?ಮಾಲೂರು | ನೈಸ್ ಟೋಲ್ ಅಕ್ರಮ – 7 ದಿನದಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗುತ್ತೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ತಹಶೀಲ್ದಾರ್ ಗಗನ ಸಿಂಧು, ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್., ಪೌರಾಯುಕ್ತೆ ಜಿ. ಅಮೃತ, ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.




