ಗ್ರಾಮೀಣ ಭಾಗದ ಯಾವುದೇ ಸ್ಥಳದಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮುಖಾಂತರ ನೀರು ಸರಬರಾಜು, ಬೋರ್‌ವೆಲ್ ದುರಸ್ತಿ ಹಾಗೂ ಹೊಸ ನೀರಿನ ಮೂಲಗಳನ್ನು ಗುರುತಿಸುವ ಕಾರ್ಯ ತಕ್ಷಣ ಆರಂಭಿಸಬೇಕೆಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಗುಪ್ಪ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ, ಬೇಸಿಗೆಯ ಸಮಯದಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ʼಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ, ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲು ಬದ್ಧರಾಗಿರಬೇಕು. ನೀರೇ ಜೀವ, ನೀರಿಲ್ಲದೆ ಬದುಕು ಸಾಧ್ಯವಿಲ್ಲ. ಬೇಸಿಗೆಯಲ್ಲಿ ಗ್ರಾಮ, ಪಟ್ಟಣಗಳಲ್ಲಿ ನೀರಿನ ಕೊರತೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬಗೆಹರಿಸಬೇಕುʼ ಎಂದರು.
ಯಾವುದೇ ಗ್ರಾಮದಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಚಿತವಾಗಿಯೇ ನೀರಿನ ಮೂಲಗಳನ್ನು ಪರಿಶೀಲಿಸಿ, ಬೋರ್‌ವೆಲ್‌ಗಳ ದುರಸ್ತಿ ಕಾರ್ಯಗಳನ್ನು ತತ್‌ಕ್ಷಣ ಕೈಗೊಳ್ಳಬೇಕು. ಹಾಳಾಗಿರುವ ಮೋಟಾರ್‌ಗಳು, ಪೈಪ್‌ಲೈನ್‌ಗಳನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವ ವ್ಯವಸ್ಥೆ ತಕ್ಷಣ ಜಾರಿಗೆ ತರಬೇಕು. ಜನರಿಗೆ ನೀರು ಸಿಗದೇ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಬರಬಾರದು. ಇದು ನಮ್ಮೆಲ್ಲರ ಜವಾಬ್ದಾರಿʼ ಎಂದರು.
ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿ, ತಾಲೂಕಾಡಳಿತ ಮತ್ತು ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಾವು ಈ ಸಮಸ್ಯೆಯನ್ನು ಯಶಸ್ವಿಯಾಗಿ ಎದುರಿಸಬಹುದು. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ಮೂಲ ಸೌಕರ್ಯ ಕೊರತೆಯಾಗದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ : ಕಲಬುರಗಿ | ಕೌಟುಂಬಿಕ ಕಲಹ : ಪತ್ನಿ ಕೊಂದು ಮಗುವಿನೊಂದಿಗೆ ಬಾವಿಗೆ ಹಾರಿದ ಪತಿ
ʼನೀರು ವ್ಯರ್ಥ ಮಾಡಬೇಡಿ. ನೀರನ್ನು ಸಂರಕ್ಷಿಸಿ, ಜವಾಬ್ದಾರಿಯುತವಾಗಿ ಬಳಸಿ. ನಾವು ಎಲ್ಲರೂ ಸೇರಿ ನೀರನ್ನು ಉಳಿಸಿದರೆ, ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದುʼ ಎಂದರು.
ಈ ಸಂದರ್ಭದಲ್ಲಿ ಚಿಟ್ಟಗುಪ್ಪ ತಹಶೀಲ್ದಾರ್ ಮಂಜುನಾಥ ಪಾಂಚಾಳ, ಚಿಟಗುಪ್ಪ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಬಿರಾದಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.




