ಮುಂಡಗೋಡ: 2026-27ನೇ ಸಾಲಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳಿಗೆ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ಮುಂಡಗೋಡಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀ ಕೃಷ್ಣಾ ಟಿ. ಕುಳೂರ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಂದು ಬಾಳೆ, ಅಂಗಾಂಶ ಬಾಳೆ, ಹೈಬ್ರಿಡ್ ತರಕಾರಿ, ಕಾಳುಮೆಣಸು, ಶುಂಠಿ, ಬಿಡಿ ಹೂವುಗಳು, ಪಪ್ಪಾಯ ಹಾಗೂ ಹಣ್ಣು ಬೆಳೆಗಳ ಪ್ರದೇಶ ವಿಸ್ತರಣೆಗೆ ಅವಕಾಶವಿದೆ.
ಅಲ್ಲದೆ, ತೋಟಗಾರಿಕೆ ಬೆಳೆಗಳಿಗೆ ಮಲ್ಚಿಂಗ್ ಹೊದಿಕೆ ಅಳವಡಿಕೆ, ವೀಡ್ ಮ್ಯಾಟ್, ನೀರು ಸಂಗ್ರಹಣಾ ಘಟಕ, ಪ್ರಾಥಮಿಕ ಸಂಸ್ಕರಣಾ ಘಟಕ ಮತ್ತು 20 HP ಗಿಂತ ಕಡಿಮೆ ಸಾಮರ್ಥ್ಯದ ಮಿನಿ ಟ್ರಾಕ್ಟರ್‌ಗಳ ಖರೀದಿಗೆ ಸಹಾಯಧನ ನೀಡಲಾಗುವುದು.
SMAM ಯೋಜನೆಯಡಿ ಯಂತ್ರೋಪಕರಣಗಳ ಖರೀದಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಘಟಕ ಅಳವಡಿಸಲು ಶೇ. 90 ರಷ್ಟು ಸಹಾಯಧನ ಲಭ್ಯವಿದೆ. ಇದರೊಂದಿಗೆ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ತಾಳೆ ಬೆಳೆ ಬೆಳೆಯಲು ಹಾಗೂ ರಾಜ್ಯವಲಯ ಯೋಜನೆಯಡಿ ಜೇನು ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ರೌಡಿ ಶೀಟರ್ ಜಮೀರ್ ಅಹ್ಮದ್ ಹತ್ಯೆ ಪ್ರಕರಣ; 24 ಗಂಟೆಯೊಳಗೆ ಐವರು ಹಂತಕರ ಬಂಧನ
ವಿಶೇಷವಾಗಿ ಧರ್ತಿ ಅಭಾ ಯೋಜನೆಯಡಿ ಪಟ್ಟಾ ಜಮೀನು ಹೊಂದಿರುವ ಪರಿಶಿಷ್ಟ ಪಂಗಡದ ರೈತರಿಗೆ ತರಕಾರಿ ಪ್ರದೇಶ ವಿಸ್ತರಣೆ ಮತ್ತು ಜೇನು ಸಾಕಾಣಿಕೆ ಉಪಕರಣಗಳಿಗೆ ವಿಶೇಷ ನೆರವು ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಎಲ್ಲಾ ವರ್ಗದ ರೈತರಿಗೂ ಈ ಯೋಜನೆಗಳಡಿ ಸಹಾಯಧನ ಪಡೆಯಲು ಅವಕಾಶವಿದೆ.
ಆಸಕ್ತ ರೈತರು ಅಗತ್ಯ ದಾಖಲೆಗಳೊಂದಿಗೆ ಮುಂಡಗೋಡ ತೋಟಗಾರಿಕೆ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಘಟಕಗಳ ಕಾಮಗಾರಿ ಪೂರ್ಣಗೊಂಡ ನಂತರವೇ ಸಹಾಯಧನವನ್ನು ಒದಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ಗ್ರಾಮ ಪಂಚಾಯತಿಯಲ್ಲಿರುವ ಕೃಷಿ ಸಖಿಯರನ್ನು ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು 15/05/2026 ಕೊನೆಯ ದಿನಾಂಕವಾಗಿರುತ್ತದೆ.





