ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಅಕ್ಟೋಬರ್ 31ರಂದು 50 ಲಕ್ಷ ರೈತರೊಂದಿಗೆ ಬೆಳಗಾವಿ ಜಿಲ್ಲೆಯ ಹತ್ತರಗಿ ಟೋಲ್ ನಾಕಾ ಬಂದ್ ಮಾಡಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಎಚ್ಚರಿಕೆ ನೀಡಿದ್ದಾರೆ.
ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಸರ್ಕಲ್‌ನಿಂದ ಆರಂಭವಾದ ಕಬ್ಬು ಬೆಳೆಗಾರರ ಹೋರಾಟ, ಹತ್ತರಗಿ ಟೋಲ್ ನಾಕಾ ಬಂದ್ ಹಾಗೂ ಅಲ್ಲಿಂದ ಆರಂಭವಾದ ಪಾದಯಾತ್ರೆಯ ಮೂಲಕ ಮುಂದುವರಿದಿತ್ತು. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೇಡಿಕೆಗಳಿಗೆ ಅಂತಿಮ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಗುರ್ಲಾಪೂರ ಕ್ರಾಸ್‌ನಲ್ಲಿ ಆರಂಭವಾದ ಹೋರಾಟ ಗುರುವಾರ ಆರನೇ ದಿನಕ್ಕೆ ಕಾಲಿಟ್ಟಿದೆ.
ಗುರ್ಲಾಪೂರ ಕ್ರಾಸ್‌ನಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಮಾತನಾಡಿದ ಶಶಿಕಾಂತ ಗುರೂಜಿ, ಶುಕ್ರವಾರ ಸಂಜೆಯೊಳಗೆ ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್ 31ರಂದು 50 ಲಕ್ಷ ರೈತರೊಂದಿಗೆ ಹತ್ತರಗಿ ಟೋಲ್ ನಾಕಾ ಬಂದ್ ಮಾಡಲಾಗುವುದು ಎಂದು ತಿಳಿಸಿದರು.
“ಮುಂದೆ ಹೋರಾಟ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದನ್ನು ನನ್ನ ಮತ್ತು ಚೂನಪ್ಪ ಪೂಜೇರಿ ಅವರ ಮೇಲೆ ಬಿಡುವುದಿಲ್ಲ. ಜನರ ತೀರ್ಮಾನಕ್ಕೆ ಬಿಡುತ್ತೇವೆ. ನಮ್ಮ ಮನಸ್ಸಿನಲ್ಲಿ ಒಂದು ಅಂಕಿ-ಸಂಖ್ಯೆಯ ಅಂದಾಜು ಇತ್ತು. ಇಷ್ಟೊಂದು ಜನ ಬಂದರೆ ಹಿಂದೆ ಸರಿಯಬೇಕು ಎಂಬ ಲೆಕ್ಕಾಚಾರವನ್ನೂ ಮಾಡಿಕೊಂಡಿದ್ದೆವು” ಎಂದು ಶಶಿಕಾಂತ ಗುರೂಜಿ ಎಚ್ಚರಿಕೆ ನೀಡಿದ್ದಾರೆ.



