ರಸ್ತೆಯಲ್ಲಿ ಸಂಚರಿಸುವಾಗ ವಿದ್ಯಾರ್ಥಿಗಳು ಎಡಬದಿಯಿಂದ ನಡೆದು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಸವಕಲ್ಯಾಣ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕ ವಿಜಯಕುಮಾರ ಉಮರ್ಗೆ ಹೇಳಿದರು.
ಹುಲಸೂರು ಪಟ್ಟಣದ ಇಕ್ಬಾಲ್ ಪಟೇಲ್ ಪಿಯು ಕಾಲೇಜಿನಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಬಸವಕಲ್ಯಾಣ, ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆ ಹಾಗೂ ಕಾಳೆ ಮೋಟಾರು ವಾಹನ ತರಬೇತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ಸಂಚಾರ ಚಿಹ್ನೆಗಳ ಅರಿವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುವಕರೇ ಬಲಿಯಾಗುತ್ತಿದ್ದು, ಅನೇಕರು ಅಂಗವಿಕಲರಾಗುತ್ತಿದ್ದಾರೆ. ಆದ್ದರಿಂದ ವಾಹನ ಚಲಾಯಿಸುವಾಗ ಸಂಚಾರ ಚಿಹ್ನೆಗಳನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ದ್ವಿಚಕ್ರ ವಾಹನ ಸವಾರಿ ಮಾಡುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
“18 ವರ್ಷ ಪೂರೈಸಿದ ನಂತರವೇ ಚಾಲನಾ ಪರವಾನಗಿ ಪಡೆದು ವಾಹನ ಚಲಾಯಿಸಬೇಕು. ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವುದು ಕಾನೂನುಬಾಹಿರವಾಗಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಹುಲಸೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪಂಡಿತ್ ಮಾತನಾಡಿ, “ವಿದ್ಯಾರ್ಥಿಗಳು ಅತಿವೇಗದಲ್ಲಿ ಬೈಕ್ ಚಲಾಯಿಸಬಾರದು ಹಾಗೂ ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಪ್ರಯಾಣಿಸಬಾರದು” ಎಂದು ಸೂಚಿಸಿದರು.
ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಫಯಾಜ್ ಪಟೇಲ್ ಮಾತನಾಡಿ, “ವಾಹನ ಚಲಾಯಿಸುವ ವೇಳೆ ಮೊಬೈಲ್ ಫೋನ್, ಬ್ಲೂಟೂತ್ ಮತ್ತು ಹೆಡ್‌ಫೋನ್ ಬಳಕೆ ಮಾಡಬಾರದು. ವಾಹನದ ದಾಖಲೆಗಳನ್ನು ಸದಾ ಹೊಂದಿರಬೇಕು ಮತ್ತು ಅವುಗಳನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕು” ಎಂದು ಹೇಳಿದರು.
ಕಾಳೆ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯ ಪ್ರಶಾಂತ್ ಕಾಳೆ ಮಾತನಾಡಿ, “ಮದುವೆ ಹಾಗೂ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಹೆಲ್ಮೆಟ್‌ಗಳನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ
ಕಾರ್ಯಕ್ರಮದಲ್ಲಿ ಇಕ್ಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಸಬಿಯಾ ಫಯಾಜ್ ಪಟೇಲ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಲಕ್ಷ್ಮಣ ಎ. ಸೂರ್ಯವಂಶಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




