ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ ಬೀದರ್ ಮಹಾನಗರ ಪಾಲಿಕೆ ಸದಸ್ಯ ಹಾಗೂ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಧರ ಹೊಸಳ್ಳಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ʼಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ವಿರುದ್ಧ ಶಶಿಧರ ಹೊಸಳ್ಳಿ ಅವರು ಅವಹೇಳನಕಾರಿ ಮಾತನಾಡಿರುವುದು ಅಕ್ಷಮ್ಯ ಅಪರಾಧ. ಅಂಥವರ ಬಗ್ಗೆ ಮಾತನಾಡುವಾಗ ಮೈ ಮೇಲೆ ಎಚ್ಚರವಿರಬೇಕುʼ ಎಂದರು.
ʼಈ ಭಾಗಕ್ಕೆ 371(ಜೆ) ವಿಧಿ ಜಾರಿಗೆ ತಂದವರು, ಬರೀ ರೈಲ್ವೆಯ ಸಮಯ ಬದಲಿಸಿ ಎಂದ ಮಾತ್ರಕ್ಕೆ ಹೊಸದೊಂದು ಬೀದರ್-ಯಶವಂತಪುರ ರೈಲ್ವೆ ಪ್ರಾರಂಭಿಸಿದವರು ಖರ್ಗೆ ಅವರು. ಅವರ ಬಗ್ಗೆ ಮಾತನಾಡುವಷ್ಟು ಶಶಿ ಹೊಸಳ್ಳಿ ದೊಡ್ಡವರಲ್ಲ. ಅವರಿಗೆ ಆ ಪಕ್ಷದ ಹಿರಿಯರು ಬುದ್ದಿವಾದ ಹೇಳಬೇಕು. ಇಂಥ ಮಾತುಗಳನ್ನು ಪುನಃ ಆಡದಂತೆ ಎಚರಿಕೆ ನೀಡಬೇಕುʼ ಎಂದು ಒತ್ತಾಯಿಸಿದರು.
ʼಶಶಿಧರ ಹೊಸಳ್ಳಿ ಅವರು ಈ ಹಿಂದೆ ಸಹ ರಾಜ್ಯದ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು. ಬಾಯಿಗೆ ಬಂದಂತೆ ಮಾತನಾಡುವುದು. ಆಮೇಲೆ ವಿಷಾದ ವ್ಯಕ್ತಪಡಿಸುವುದು ಶೋಭೆ ತರುವಂಥದ್ದಲ್ಲ. ಅವರ ಈ ನಡೆಯನ್ನು ಜಿಲ್ಲಾ ಕಾಂಗ್ರೆಸ್ ಪಕ್ಷ ಉಗ್ರವಾಗಿ ಖಂಡಿಸುತ್ತದೆʼ ಎಂದರು.
ಉಪರಾಷ್ಟ್ರಪತಿ ರಾಧಾಕೃಷ್ಣನ್ ಬಿಜೆಪಿಯಿಂದ ಹೊರಬಂದತಿಲ್ಲ: ಅರವಿಂದಕುಮಾರ ಅರಳಿ
ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವ ಮೂಲಕ ಬಿಜೆಪಿ ಪಕ್ಷದಲ್ಲಿದ್ದಂತೆ ತೋರುತ್ತಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಟೀಕಿಸಿದರು.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ʼಈಚೆಗೆ ಭಾಲ್ಕಿಯಲ್ಲಿ ನಡೆದ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಅವರ ಬಗ್ಗೆ ಮಾತನಾಡಿ ತಾನೋರ್ವ ಬಿಜೆಪಿಯಲ್ಲಿದ್ದಂತೆ ತೋರಿಸಿಕೊಂಡಿದ್ದಾರೆ. ದೇಶದ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಯಾವುದೇ ಪಕ್ಷದ ಪರವಾಗಿ ಮಾತನಾಡಬಾರದುʼ ಎಂದರು.
ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಶಶಿಧರ ಹೊಸಳ್ಳಿ ವಿರುದ್ಧ ರಾಜ್ಯ ಸರ್ಕಾರ ಸುಮೋಟೊ ಕೇಸ್ ದಾಖಲಿಸಬೇಕು. ಇಲ್ಲದಿದ್ದರೆ ನಮ್ಮ ಪಕ್ಷದ ಕಾರ್ಯಕರ್ತರು ಅವರ ವಿರುದ್ಧ ಠಾಣೆಯಲ್ಲಿ ಕೆಸ್ ದಾಖಲಿಸುತ್ತಾರೆ ಎಂದು ಅರವಿಂದ ಅರಳಿ ಹೇಳಿದರು.
ಮಹಾನಗರ ಪಾಲಿಕೆ ಅಧ್ಯಕ್ಷ ಮಹಮ್ಮದ್ ಗೌಸುದ್ದಿನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂಜಯ ಜಾಗಿರದಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ ಚಿಮಕೊಡೆ, ಮಾಜಿ ಹಿರಿಯ ಮುಖಂಡರಾದ ಮನ್ನಾನ್ ಸೇಠ್, ಎಸ್.ಸಿ ಮೋರ್ಚಾ ಅಧ್ಯಕ್ಷ ಸಂಜು ಡಿ.ಕೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಎಮ್.ಎ ಸಮಿ, ದತ್ತಾತ್ರಿ ಮೂಲಗೆ, ವಿನೋದ ಅಪ್ಪೆ, ಜಾರ್ಜ್ ಫರ್ನಾಂಡಿಸ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಕ್ಷಮೆಯಾಚಿಸಿದ ಶಶಿ ಹೊಸಳ್ಳಿ
ಕೆಲವು ದಿವಸಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಕೆಲವೊಂದು ಪದ ಬಳಿಸಿರುವ ಹಿನ್ನಲೆಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಬೀದರ ನಗರದಲ್ಲಿ ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಆವೇಶಭರಿತವಾಗಿ ಹೋರಾಟದ ಮುಂಚೂಣಿಯ ಸನ್ನಿವೇಶದಲ್ಲಿ ನಾನು ಕೆಲವು ಪದಗಳು ಬಳಸಿರುವುದು ತುಂಬಾ ವಿಷಾದಕರ ಸಂಗತಿಯಾಗಿದೆ ಎಂದು ಬಿಜೆಪಿ ನಗರ ಮಂಡಲದ ಅಧ್ಯಕ್ಷರೂ ಆದ ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಈ ವಿಚಾರವಾಗಿ ಕ್ಷಮೆ ಕೋರಿ, ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಕಾಂಗ್ರೆಸ್ ಮುಖಂಡರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಹೊಸಳ್ಳಿ ತಿಳಿಸಿದ್ದಾರೆ.





