ಸಮಾಜ ಬದಲಾವಣೆಯಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿದೆ. ಪುಸ್ತಕ ಓದಿನಿಂದ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ದಲಿತ ಯೂನಿಟಿ ಮ್ಯೂಮೆಂಟ್ ಸಂಸ್ಥಾಪಕ ವಿನೋದ ರತ್ನಾಕರ್ ಹೇಳಿದರು.
ಬೀದರ್ ನಗರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತ ಸಮಿತಿ ಬೀದರ್ ಹಾಗೂ ಚಂದಾ ಎಜುಕೇಶನಲ್ ಸರ್ವಿಸ್ ಟ್ರಸ್ಟ್ ಸಹಯೋಗದಲ್ಲಿ ಯುವ ಚಿಂತಕ ದಿಲೀಪ ಚಂದಾ ಅವರ ಮನೆಯಲ್ಲಿ ಆಯೋಜಿಸಿದ ʼಮನೆಗೊಂದು ಗ್ರಂಥಾಲಯʼ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ʼಮೊಬೈಲ್ ಹಾಗೂ ಆಧುನಿಕ ತಂತ್ರಜ್ಞಾನದಿಂದ ಪುಸ್ತಕ ಓದುವ ಕಡಿಮೆಯಾಗುತ್ತಿದೆ. ಆದರೆ, ತಂತ್ರಜ್ಞಾನಕ್ಕಿಂತ ಪುಸ್ತಕ ಓದುವುದರಿಂದಲೇ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಮಕ್ಕಳು, ಯುವ ಸಮುದಾಯ ಹೆಚ್ಚು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕುʼ ಎಂದು ನುಡಿದರು.
ಉಪನ್ಯಾಸಕ ಸೂರ್ಯಕಾಂತ್ ಅಪ್ಪೆ ಮಾತನಾಡಿ, ʼಜ್ಞಾನವೃದ್ಧಿ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪುಸ್ತಕಗಳ ಪಾತ್ರ ಅಪಾರವಾಗಿದೆ. ಪ್ರತಿಯೊಂದು ಮನೆಯಲ್ಲಿಯೂ ಗ್ರಂಥಾಲಯ ನಿರ್ಮಿಸಿ ಓದುವ ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆʼ ಎಂದರು.

ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ಚಂದು ಪಡಶೆಟ್ಟಿ ಮಾತನಾಡಿ, ʼಪುಸ್ತಕಗಳು ನಮ್ಮ ಸಂಗಾತಿಗಳು, ಹೆಚ್ಚೆಚ್ಚು ಬಳಸಿದಂತೆ ಜ್ಞಾನಾರ್ಜನೆ ಹಾಗೂ ಮಾನಸಿಕ ನೆಮ್ಮದಿ ಸಾಧ್ಯ. ಪುಸ್ತಕ ಓದುವ ಹವ್ಯಾಸವನ್ನು ಸಾಮಾಜಿಕ ಜಾಲತಾಣಗಳು ಕಸಿದುಕೊಂಡಿರುವ ಈ ಕಾಲದಲ್ಲಿ ಓದುವ ಸಂಸ್ಕೃತಿ ಮತ್ತೆ ಹೆಚ್ಚಿಸಬೇಕಿದೆʼ ಎಂದು ತಿಳಿಸಿದರು.
ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಬಾಲಾಜಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ʼಪುಸ್ತಕ ಓದುವ ಆಸಕ್ತಿ ಕಡಿಮೆಯಾಗುತ್ತಿರುವ ಇಂದಿನ ಧಾವಂತದ ಬದುಕಿನಲ್ಲಿ ಮನೆಗೊಂದು ಪುಟ್ಟ ಗ್ರಂಥಾಲಯ ನಿರ್ಮಿಸಿ ಓದುವ ಸಂಸ್ಕೃತಿ ಉತ್ತೇಜಿಸುವುದು, ಮಕ್ಕಳು, ಯುವ ಜನರಲ್ಲಿ ಓದುವ ಆಸಕ್ತಿ ಬೆಳೆಸುವುದು ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆʼ ಎಂದರು.
ಇದನ್ನೂ ಓದಿ : ಮಲ್ಲಿಕಾರ್ಜುನ ಖರ್ಗೆ ಅವಹೇಳನ ಅಕ್ಷಮ್ಯ : ಬಿಜೆಪಿಯಿಂದ ಶಶಿ ಹೊಸಳ್ಳಿ ಉಚ್ಚಾಟನೆಗೆ ಕಾಂಗ್ರೆಸ್ ಆಗ್ರಹ
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಂಜುಕುಮಾರ್ ಸಿಂದೊಲ್, ದಿಲೀಪ್ ಚಂದಾ, ವೆಂಕಟೇಶ್ ಚಿನಕೇರಾ, ಚೇತನ್ ಕನಕ, ನೀಲಕಂಠ, ಭೀಮಾಶಂಕರ ಮತ್ತಿತರರು ಉಪಸ್ಥಿತರಿದ್ದರು.




