ಬೀದರ್ ಜಿಲ್ಲೆಯ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಪ್ರಮುಖ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಿಎಂ ಅವರು ಜುಲೈ 6 ರಂದು ಬೀದರ್ ಜಿಲ್ಲೆಗೆ ಆಗಮಿಸಿದ ವೇಳೆ ಸಲ್ಲಿಸಿದ ಮನವಿಯಲ್ಲಿ, “ಜಿಲ್ಲೆಯ ರೈತರ ಜೀವನಾಡಿಯಾಗಿದ್ದ ಬೀದರ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್‌ಕೆ)ಯನ್ನು ಮರುಪ್ರಾರಂಭಿಸಬೇಕು. ಕಾರಂಜಾ ಜಲಾನಯನ ಪ್ರದೇಶದ ಮುಳುಗಡೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಬೇಕು. ರೈತರ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಾಂಜ್ರಾ ನದಿಯ ಮೇಲೆ ಇನ್ನೂ 2 ರಿಂದ 3 ಸೇತುವೆ-ಕಂ-ಬ್ಯಾರೇಜ್‌ಗಳನ್ನು ನಿರ್ಮಿಸಬೇಕು” ಎಂದು ಮನವಿ ಮಾಡಿದ್ದಾರೆ.
ಬೀದರ_ಔರಾದ್ ಹೆದ್ದಾರಿಯಲ್ಲಿ ಜನವಾಡ ಸಮೀಪ ಇರುವ ಕೃಷಿ ಡಿಪ್ಲೊಮಾ ಕಾಲೇಜು ಮೇಲ್ದರ್ಜೆಗೇರಿಸಿ ಬಿಎಸ್ಸಿ ಕೃಷಿ ಕಾಲೇಜಾಗಿ ಅಭಿವೃದ್ಧಿಪಡಿಸಬೇಕು. ಇದಕ್ಕೆ ಅಗತ್ಯವಾದ ಮೂಲಸೌಕರ್ಯಗಳು ಈಗಾಗಲೇ ಲಭ್ಯವಿರುವುದರಿಂದ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಬೀದರ–ಬೆಂಗಳೂರು ಮಾರ್ಗದಲ್ಲಿ ‘ಅಂಬಾರಿ ಉತ್ಸವ’ ಮಾದರಿಯ ಸಾರಿಗೆ ಬಸ್ ಸೇವೆ ಕಲ್ಪಿಸಬೇಕು. ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ಎಲ್ಲಾ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದಿದ್ದಾರೆ.
ಐತಿಹಾಸಿಕ ಪರಂಪರೆಯ ಸಂಕೇತವಾಗಿರುವ ಬೀದರ ಕರೇಜ್ (ಸುರಂಗ ಬಾವಿ) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು. ಭಾಲ್ಕಿ ತಾಲೂಕಿನ ಕಾರಂಜಾ ಜಲಾಶಯದ ಕೆಳಭಾಗದಲ್ಲಿ ಮೈಸೂರಿನ ಬೃಂದಾವನ ಉದ್ಯಾನವನ ಮಾದರಿಯಲ್ಲಿ ಆಕರ್ಷಕ ಉದ್ಯಾನವನ ನಿರ್ಮಿಸಬೇಕು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುವುದರ ಜೊತೆಗೆ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಸಲ್ಲಿಸಿದ ಮನವಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಬೀದರ್ | ಜವಾಹರ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೇಲಿನ ಎಲ್ಲ ಬೇಡಿಕೆಗಳನ್ನು ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅರವಿಂದಕುಮಾರ ಅರಳಿ ಅವರು ಮನವಿ ಮಾಡಿದ್ದಾರೆ.




