ಕರ್ನಾಟಕದ ಕಿರೀಟ ಬೀದರ ಜಿಲ್ಲೆಯಾದರೆ, ಬೀದರ ಜಿಲ್ಲೆಯ ಶ್ರೀಮುಕುಟ ಔರಾದ (ಬಿ) ತಾಲ್ಲೂಕು. ಜಿಲ್ಲಾ ಕೇಂದ್ರದಿಂದ 42 ಕಿ,ಮೀ, ದೂರದಲ್ಲಿರುವ ಈ ತಾಲ್ಲೂಕು ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಗಳನ್ನು ಹಂಚಿಕೊಂಡಿದ್ದು, ಮರಾಠಿ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಇಂಥ ಈ ಗಡಿ ಭಾಗದಲ್ಲಿ ಗೋಪಾಲಸಿಂಗ್ ಠಾಕೂರ್ ಎನ್ನುವವರು ಹದಿನೈದು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ, ಕಾರಣ SIR ಮತ್ತು EVM- ಈ ಎರಡೂ ವಿಷಯಗಳು ಪ್ರಜಾಪ್ರಭುತ್ವದ ತತ್ವಗಳಿಗೆ ಗೊಳ್ಳಿ ( ಗೊರಲಿ ) ಹಿಡಿಸಿವೆ. ಇವುಗಳ ವಿರುದ್ಧ ಅವರ ಮೌನ ಹೋರಾಟ ಶುರುವಾಗಿದೆ.
ಗೋಪಾಲಸಿಂಗ್ ಅವರು ಶಿಕ್ಷಣವನ್ನು ಹೊಂದಿದವರಾಗಿದ್ದು, ಮೂರು ಮಕ್ಕಳು, ಮತ್ತು ಹೆಂಡತಿ, ಒಂದು ಸುಂದರ ಕುಟುಂಬ. ತಹಸೀಲ್ ಕರ‍್ಯಾಲಯದ ಮುಂದೆಯೇ ಝಿರಾಕ್ಷ್ ಅಂಗಡಿ ಇಟ್ಟು, ಗಂಡ ಹೆಂಡತಿ ಇರ್ವರು ಕಾಯಕ ಮಾಡುತ್ತಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಕ್ಷರಣೆ (ಎಸ್‌ಐಆರ್) ಈ ಬಗ್ಗೆ ಪತ್ರಿಕೆ, ಟೀವಿಯಲ್ಲಿ ಹರಿದಾಡುವ ವಿಷಯಗಳು, ಮರಣ ಹೊಂದಿದವರ ಹೆಸರು ಪಟ್ಟಿಯಲ್ಲಿದ್ದು, ಜೀವಂತವಾಗಿದ್ದವರ ಹೆಸರು ಮಾಯವಾಗಿರುವದು, ಒಂದೇ ಮನೆಯ ವಿಳಾಸದಲ್ಲಿ 40-50 ಹೆಸರುಗಳಿದ್ದದ್ದು ಹೀಗೆ ಇತ್ಯಾದಿ ಚರ್ಚೆಗಳು ಮತ್ತು ಮತದಾನಕ್ಕಾಗಿ EVM ಯಂತ್ರಗಳ ಬಳಕೆ. ಇದರಲ್ಲಿಯೂ ಸಹ ನೂರೆಂಟು ಲೋಪಗಳು. ಬಟನ್ ಒತ್ತಿದಾಗೆಲ್ಲ ಒಂದೇ ಪಕ್ಷಕ್ಕೆ ಮತ ಚಲಾವಣೆಯಾಗುವ ರೀತಿಯಲ್ಲಿ ಸೆಟಪ್ , ಹೀಗೆ ಏನೇನೋ ರೋಮರ್. ಅಂತೂ ಒಂದೇ ಪಕ್ಷ ಮೇಜಾರಿಟಿಯಾಗಿ ಹೆಚ್ಚಿನ ಮತದಾನ ಹೊಂದುವದು, ಈ ಯಂತ್ರಗಳು ಅಪನಂಬಿಕೆಯ ವಸ್ತುಗಳು. ಹೀಗಾಗಿ ಈ ಇವಿಎಂ ಮಶಿನ್ ಬೇಡ. ಬ್ಯಾಲೆಟ್ ಪೇಪರದಲ್ಲಿ ಮತದಾನವಾಗಲಿ ಎಂಬ ಬೇಡಿಕೆ ಅವರದು.
ಹೀಗೆ ಈ ಎರಡು ಬೇಡಿಕೆ–ಧ್ವನಿಯನ್ನು ದೇಶದ ಪ್ರಥಮ ಪ್ರಜೆ ರಾಷ್ರಪತಿಯವರಿಗೆ ಕೇಳಿಸಬೇಕು, ತಲುಪಿಸಬೇಕು ಎಂಬ ಕಾರಣದಿಂದ ತಹಶೀಲ್ದಾರ ಅವರಿಗೆ ಪತ್ರ ಸಲ್ಲಿಸಿ, ಇದನ್ನು ರಾಷ್ರಪತಿಯವರಿಗೆ ತಲುಪಿಸಬೇಕೆಂದು ಮನವಿ ಮಾಡಿ,
ರಾಷ್ರಪತಿಯವರಿಂದ ಉತ್ತರ ಬರುವವರೆಗೆ ನಿರಾಹಾರ ಉಪವಾಸ (ಕೇವಲ ನೀರು ಸೇವನೆ ಮಾತ್ರ ) ಸತ್ಯಾಗ್ರಹ ಮಾಡಬೇಕೆಂದು ಕೂತಿದ್ದಾರೆ. ಇಂದಿಗೆ ಹದಿನೈದು ದಿನ ಮುಗಿಸಿ 16 ದಿನದ ಹೋರಾಟ ಮುಂದುವರೆಸಿದ್ದಾರೆ. ಮಕ್ಕಳು ಸಂಸಾರ, ವ್ಯಾಪಾರ ವಹಿವಾಟಿನ ಎಲ್ಲ ಜವಾಬ್ದಾರಿಯನ್ನು ಹೆಂಡತಿಗೆ ಒಪ್ಪಿಸಿ ನಲವತ್ತೆಂಟು ವರ್ಷದ ಈ ಜೀವ ʼವೋಟ್ ಸತ್ಯಾಗ್ರಹʼ ಮಾಡುತ್ತಿದ್ದಾರೆ.
ನಮ್ಮ ಸಂವಿಧಾನ ನಮಗೆ ನೀಡಿದ ಆದ್ಯ ಹಕ್ಕುಗಳಲ್ಲಿ 18 ವರ್ಷ ಪೂರೈಸಿದ ಹೆಣ್ಣು ಗಂಡು ಎಲ್ಲರೂ ಮತದಾನಕ್ಕೆ ಅರ್ಹರು. ಆಯಾ ನಾಗರೀಕನ ಸ್ಥಳೀಯ ದಾಖಲೆಗಳ ಹಿನ್ನಲೆಯಲ್ಲಿ ಮತದಾನದ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮರಣ ಹೊಂದಿದ್ದರೆ, ವಲಸೆ ಹೋಗಿದ್ದರೆ ಆಗ ಪಟ್ಟಿಯಿಂದ ಹೆಸರು ತೆಗೆದು ಹಾಕುವದು, ಅದಕ್ಕಾಗಿ ಇರುವ ನಿಯಮಗಳನ್ನು ಅನುಸರಿಸುವದು ಅದೊಂದು ಕ್ರಮ. ಆದರೆ ಇತ್ತೀಚೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಅದೆಷ್ಟೊ ಹೆಸರುಗಳು ತೆಗೆಯಲ್ಪಟ್ಟಿದ್ದು, ಸೇರಿಸಲ್ಪಟ್ಟಿದ್ದು- ಒಟ್ಟು ಗೊಂದಲದಮಗೂಡು. ಇದನ್ನೇ ಸಭೆಗಳಲ್ಲಿ ಚರ್ಚೆಯ ವಿಷಯವನ್ನಾಗಿಸಿದರೆ ಹೊರತು ಯಾವ ಅಭಿವೃದ್ಧಿ ಕೆಲಸ ಕಾರ‍್ಯಗಳು ಯಾರಿಗೂ ಕಾಡಲಿಲ್ಲ.
ಇನ್ನೊಂದು ಕಡೆ ಇವಿಎಂ ಯಂತ್ರಗಳು ಮತದಾನದ ಸಮಯದಲ್ಲಿ ಯಂತ್ರ ಕೆಟ್ಟು ಹೋಗುವದು, ಬಂದಾಗುವದು ಹೀಗೆ ಏನೇನೋ ಏನೇನೋ. ಒಟ್ಟಾಗಿ ಇದೆಲ್ಲ ಆಳುವ ಸರಕಾರ ತನಗೆ ತೋಚಿದಂತೆ ಮಾಡಿಕೊಂಡು, ತನ್ನ ಕುರ್ಚಿಯನ್ನು ಭದ್ರ ಪಡಿಸಿಕೊಳ್ಳುವದು–ಎಂದು ಮೇಲ್ನೋಟಕ್ಕೆ ಕಂಡು ಬರುವ ಅಂಶಗಳಾಗಿದ್ದವು. ಇವೆಲ್ಲವನ್ನು ಗಮನಿಸಿ, ರೋಸಿ ಹೋಗಿದ್ದ ಗೋಪಾಲಸಿಂಗರು ತಮಗೆ ತೋಚಿದ ರೀತಿಯಲ್ಲಿ ಪ್ರತಿಭಟನೆ ಎಂದು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇಶವನ್ನು ಮುನ್ನಡೆಸುವ ಮುಖವಾಡ ಧರಿಸಿರುವವರ ಬಗ್ಗೆ ಆಕ್ರೋಶ ಅವರ ಮಾತುಗಳಲ್ಲಿ ಕೇಳಿಬರುತ್ತಿದೆ. ಈ ಎಲ್ಲ ಅವರ ಪ್ರತಿಭಟನೆಯ ಗಂಟನ್ನು ಹೊತ್ತು, ಕಣ್ಣರಳಿಸಿ ಸುತ್ತಲು ಗಮನಿಸಿದರೆ, ಅಲ್ಲಿ ಅತಿ ಹೆಚ್ಚು ಕಂಡು ಬರುವದು ಜನರು. ನಮ್ಮ ಕುಟುಂಬ, ಆ ಜವಾಬ್ದಾರಿ ನಿರ್ವಹಿಸುವಲ್ಲಿಯೇ ಸೋತು ಸುಟ್ಟು ಹೋದವ. SIR ಮತ್ತು EVM ಬಗ್ಗೆ ತಲೆ ಕೆಡಿಸಿಕೊಳ್ಳುವದು ಅಸಾಧ್ಯ.
ಒಂದು ಸಮಯವಿತ್ತು, ದೇಶದ ಸ್ವಾತಂತ್ರ್ಯಕ್ಕಾಗಿ ಯಾವುದೋ ಒಂದು ಮೂಲೆಯಿಂದ ಮಹಾತ್ಮಾ ಗಾಂಧೀಜಿಯವರು ಒಂದು ಫರಮಾನ ಹೊರಡಿಸಿದರೆ, ಅದನ್ನು ಎಲ್ಲರೂ ಶಿರಸಾವಹಿಸಿ ಪಾಲಿಸುತ್ತಿದ್ದರು. ಆದರೆ ಈಗ ಅಂಥ ನಾಯಕರಿಲ್ಲವಲ್ಲ. ನಾಯಕನೆಂದು ಬಂದ ಬಿಳಿಟೋಪಿಯವರು ತಮ್ಮ ಸ್ವಾರ್ಥ ಸಾಧನೆಯಲ್ಲಿ ವ್ಯಸ್ಥ. ಹೀಗಿದ್ದಾಗ ಗೋಪಾಲಸಿಂಗರ ಈ ಹೋರಾಟ ವೈಯಕ್ತಿಕ ಸ್ವಾರ್ಥದ ಹೋರಾಟವಲ್ಲ, ಬದಲಾಗಿ 18 ವರ್ಷ ಪೂರೈಸಿದ ಎಲ್ಲ ನಾಗರೀಕರು ಗಂಭೀರವಾಗಿ ಗಮನಿಸುವ ವಿಷಯ.
ಇದನ್ನು ಪ್ರತಿಯೊಬ್ಬರೂ ಗಮನಿಸಿ, ದೇಶದ ರಾಷ್ಟ್ರಪತಿಗಳಿಗೆ ಈ SIR ಮತ್ತು EVM ಕುರಿತು ಮಾತನಾಡುವದಾಗಬೇಕ ಎಂದರೆ, ಮೊದಲು ಗೋಪಾಲಸಿಂಗರ ಅಹವಾಲನ್ನು ರಾಷ್ಟ್ರಪತಿಗಳಿಗೆ ತಲುಪಿಸುವದಾಗಬೇಕು. ಇದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿ. ಇತ್ತಿಚೆಗೆ ಹೆಚ್ಚಿನ ಪ್ರಮಾಣದ ಮಾಧ್ಯಮಗಳೆಲ್ಲ ಒಂದೇ ಪಕ್ಷದ ಗುಣಗಾನದಲ್ಲಿ ತೊಡಗಿವೆ. ಅವರಿಗೆ ಪ್ರಜೆಗಳ ಸಮಸ್ಯೆ ತಿಳಿಸಿ, ನಾವು ಇರುವದು ಪ್ರಜಾಪ್ರಭುತ್ವದ ನೆಲದಲ್ಲಿ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ನಾಯಕ ನಮಗೆ ಬೇಕೇ ಹೊರತು, ತನಗಾಗಿ ತನ್ನ ಸ್ನೇಹಿತರಿಗಾಗಿ ಇರುವ ಶೋಕಿಲಾಲ ಬೇಕಿಲ್ಲವೆಂದು ಹೇಳುವ ಧೈರ್ಯ ತಂದುಕೊಳ್ಳಬೇಕಾಗಿದೆ.
ಇದನ್ನೂ ಓದಿ : ಬೀದರ್ | ರಾಷ್ಟ್ರೀಯ ಹೆದ್ದಾರಿಯಲ್ಲಿ ತಂಗುದಾಣ ಕೊರತೆ : ರಸ್ತೆ ಬದಿಯಲ್ಲೆ ಬಸ್‌ಗೆ ಕಾಯುವ ಸ್ಥಿತಿ
ಇಂದಿನ ಸರ್ವಾಧಿಕಾರಿ ಧೋರಣೆ ವ್ಯವಸ್ಥೆ ಮತ್ತು ಅಧಿಕಾರಶಾಯಿಯ ವಿರೋಧಕ್ಕೆ ಪ್ರತಿ ಹಳ್ಳಿಯಲ್ಲಿ ಗೋಪಾಲಸಿಂಗರಂಥ ಜೀವಗಳು ಹುಟ್ಟಬೇಕಾಗಿದೆ. ಬಿಳಿಯರನ್ನು ಓಡಿಸಲು ಆಗ ಸತ್ಯಾಗ್ರಹ ಅಸ್ತ್ರವಾಗಿದ್ದರೆ, ನಮ್ಮ ನಡುವೆಯೇ ಬಿಳಿಯರಂಥ ಮನಸ್ಸನ್ನು ಹೊಂದಿರುವವರಿಗೂ ಸಹ ಹೊರಗೆ ದೂಡಬೇಕಾಗಿದೆ. ಇದನ್ನು ಅರ್ಥೈಸಿಕೊಂಡು ನಾವೆಲ್ಲರೂ ಗೋಪಾಲಸಿಂಗರ ಸತ್ಯಾಗ್ರಹಕ್ಕೆ ಕೈ ಜೋಡಿಸೋಣ ಮತ್ತು ಸಂವಿಧಾನದ ಆಶಯಗಳನ್ನು ಪೂರ್ತಿಗೊಳಿಸೋಣ.

ರಜಿಯಾ ಬಳಬಟ್ಟಿ
ಹಿರಿಯ ಸಾಹಿತಿ, ಲೇಖಕರು



