ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ, ಗುಡುಗು, ಮಿಂಚು ಸಂಭವಿಸಿದ್ದು, ವಿವಿಧೆಡೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ್ದಾರೆ. ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಅವಧಿಯ ಮಳೆಯು ಒಣಹವೆಯಿಂದ ಕಂಗಾಲಾಗಿದ್ದ ಜನರಿಗೆ ತಂಪೆರೆದಿದೆಯಾದರೂ, ಸಾರ್ವಜನಿಕ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ.
ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಮುಂಗಾರು ಪೂರ್ವ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಿತ್ತೂರು ಕರ್ನಾಟಕದ ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಹುತೇಕ ಕಡೆ ಮರಗಳು, ವಿದ್ಯುತ್ ಕಂಬಗಳು ಉರುಳಿವೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದ ಭಟ್ಕಳ, ಹೊನ್ನಾವರದಲ್ಲಿ ವ್ಯಾಪಕ ಮಳೆಯಾಯಿತು. ಘಟ್ಟದ ಮೇಲಿನ ದಾಂಡೇಲಿ, ಜೊಯಿಡಾ, ಮುಂಡಗೋಡ ಸೇರಿ ಹಲವೆಡೆ ಗುಡುಗು ಸಹಿತ ಮಳೆ ಸುರಿಯಿತು.
ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ಮತ್ತು ಹೊನ್ನಾವರದಲ್ಲಿ ಗುಡುಗು ಸಹಿತ ತೀವ್ರ ಮಳೆಯಾಗಿದೆ. ಹೊನ್ನಾವರದ ಅಪ್ಸರಕೊಂಡ ಬೀಚ್ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವಿನಾಯಕ ಖಾರ್ವಿ(38) ಎಂಬ ಮೀನುಗಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬೀಚ್‌ನಲ್ಲಿದ್ದ ಇಬ್ಬರು ಪ್ರವಾಸಿಗರಿಗೂ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ. ಭಟ್ಕಳ ತಾಲೂಕಿನ ಮುಡಶಿರಾಲಿಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ 35 ವರ್ಷದ ವ್ಯಕ್ತಿಯ ಮೇಲೆ ವಿದ್ಯುತ್ ಕಂಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಂಡೇಲಿ, ಜೊಯಿಡಾ ಮತ್ತು ಮುಂಡಗೋಡಿನಲ್ಲಿ ಭಾರಿ ಮಳೆಯಾಗಿದ್ದು, ಮರ ಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಭತ್ತ, ಪಪ್ಪಾಯಿ ಮತ್ತು ಅಡಕೆ ಸೇರಿದಂತೆ ಸುಮಾರು 622 ಎಕರೆ ಭೂಮಿಯಲ್ಲಿ ಬೆಳೆನಷ್ಟ ಸಂಭವಿಸಿದ್ದು, ₹1.41 ಕೋಟಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆ ಬಳಿಯ ರಾಘವೇಂದ್ರಸ್ವಾಮಿ ದೇವಸ್ಥಾನ ಜಲಾವೃತಗೊಂಡಿದೆ. ರಿಪ್ಪನ್‌ಪೇಟೆಯ ಸರ್ಕಾರಿ ಪಿಯು ಕಾಲೇಜಿನ ಸಭಾಂಗಣದ ಮೇಲ್ಛಾವಣಿಯ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ.
ಗದಗ-ಬೆಟಗೇರಿ ಮತ್ತು ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ಮರಗಳು ಉರುಳಿ ಬಿದ್ದು ಮನೆ ಮುಂದೆ ನಿಲ್ಲಿಸಿದ್ದ ಹಲವು ಬೈಕ್ ಹಾಗೂ ಕಾರುಗಳು ಜಖಂಗೊಂಡಿವೆ. ಗದಗ ತಾಲೂಕಿನ ಕುರ್ತಕೋಟಿ, ಶಿಗೋಟಿ, ದುಂದೂರು ಮತ್ತು ಹುಲಕೋಟಿ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಗಜೇಂದ್ರಗಡ-ನರೇಗಲ್ ರಸ್ತೆಯ ಗದ್ದಿಹಾಳ್ ಹಳ್ಳದ ಬಳಿ ಪವನ ವಿದ್ಯುತ್ ಗೋಪುರ(ವಿಂಡ್ ಟರ್ಬೈನ್ ಟವರ್) ರಸ್ತೆಗೆ ಉರುಳಿ ಬಿದ್ದಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು.
ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಸಂಜೆ 4 ಗಂಟೆಯಿಂದ ಆರಂಭವಾದ ಮಳೆ ಎರಡು ಗಂಟೆಗಳ ಕಾಲ ಸತತವಾಗಿ ಸುರಿದಿದ್ದು, ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಜಯಶ್ರೀ ಶಿರಸಂಗಿ(29) ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಧಾರವಾಡದ ಹೊರವಲಯದ ಕೆಳಗೇರಿ ಗ್ರಾಮದಲ್ಲಿ ನಡೆದಿದೆ. ಇವರ ಪತಿ ಹನುಮಂತಪ್ಪ ಶಿರಸಂಗಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯ ಇಂದಿರಾ ಗ್ಲಾಸ್ ಹೌಸ್ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಚರಂಡಿ ನೀರು ಅಂಗಡಿ-ಮುಂಗಟ್ಟು ಹಾಗೂ ಮನೆಗಳಿಗೆ ನುಗ್ಗಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ ಶನಿವಾರ ಉತ್ತಮ ಮಳೆಯಾಯಿತು. ರಾಯಚೂರು ಜಿಲ್ಲೆಯ ಮುದಗಲ್ ಹೊರವಲಯದಲ್ಲಿ ಸಿಡಿಲು ತಾಗಿ ಬಣವಿ ಸುಟ್ಟರೆ, ಕನ್ನಾಪುರ ಹಟ್ಟಿ ಗ್ರಾಮದಲ್ಲಿ ವಿದ್ಯುತ್ ಕಂಬಗಳು, ಮರಗಳು ಬಿದ್ದಿವೆ. ಯಾದಗಿರಿ ಜಿಲ್ಲೆ ಕೆಂಭಾವಿಯಲ್ಲಿ ಆಲಿಕಲ್ಲು ಮಳೆಯಾಗಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಕ್ರೀಡಾಂಗಣದ ಗ್ಯಾಲರಿಯ ಒಂದು ಭಾಗ ಬಿರುಗಾಳಿ ಮಳೆಗೆ ಕುಸಿದು ಬಿದ್ದಿದೆ. ಅಫಜಲಪುರ ತಾಲೂಕಿನಲ್ಲಿಯೂ ಮಳೆಯಾಗಿದ್ದು, ಮಾಶಾಳ ಗ್ರಾಮದಲ್ಲಿ ಹುಲುಸಾಗಿ ಬಂದಿದ್ದ ಬಾಳೆ ಬೆಳೆ ನೆಲ್ಲಕ್ಕುರುಳಿದ ಪರಿಣಾಮ, ʼಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಬೆಳೆ ಬಿರುಗಾಳಿ ಹೊಡೆತಕ್ಕೆ ನೆಲಕ್ಕುರುಳಿ ಅಪಾರ ನಷ್ಟ ಉಂಟಾಗಿದೆʼ ಎಂದು ರೈತ ಬಸಣ್ಣ ಸಣದಾನಿ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿದ್ದೀರಾ? ಉತ್ತರ ಕನ್ನಡ | 2 ದಿನ ಗಾಳಿ-ಮಿಂಚು ಸಹಿತ ಮಳೆ ಎಚ್ಚರಿಕೆ: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ
ಕೊಪ್ಪಳ ಜಿಲ್ಲೆ ಯಲಬುರ್ಗಾ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.




