- ಮಾರ್ಚ್ 31ರ ಒಳಗೆ ಅರ್ಹ ಸಾಧಕರ ಮಾಹಿತಿ ತಿಳಿಸುವಂತೆ ಪ್ರಕಟಣೆ
- ಏಪ್ರಿಲ್ 14ರಂದು ‘ಅಂಬೇಡ್ಕರ್ ಹಬ್ಬ’ ಕಾರ್ಯಕ್ರಮ ಆಯೋಜನೆ
ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದ ಪ್ರಯುಕ್ತ ಅಂಬೇಡ್ಕರ್ ಶತಮಾನೋತ್ಸವ ಸಮಿತಿ ಟ್ರಸ್ಟ್ ‘ಬೋಧಿವೃಕ್ಷ’ ಮತ್ತು ‘ಬೋಧಿವರ್ಧನ’ ಪ್ರಶಸ್ತಿ ನೀಡುತ್ತಿದೆ. ಈ ಕುರಿತಾಗಿ ಅರ್ಹ ಸಾಧಕರನ್ನು ಗುರುತಿಸಿಕೊಡುವಂತೆ ಸಮಿತಿ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ಬೆಂಗಳೂರಿನ ಸ್ಪೂರ್ತಿಧಾಮವನ್ನು ನಿರ್ವಹಿಸುತ್ತಿರುವ ‘ಅಂಬೇಡ್ಕರ್ ಶತಮಾನೋತ್ಸವ ಸಮಿತಿ’ಯು ಏಪ್ರಿಲ್ 14ರಂದು ‘ಅಂಬೇಡ್ಕರ್ ಹಬ್ಬ’ ಎನ್ನುವ ಕಾರ್ಯಕ್ರಮ ನಡೆಸುತ್ತದೆ. ಈ ಸಂದರ್ಭದಲ್ಲಿ ಸಮುದಾಯದ ಒಳಿತಾಗಿ ಕಾರ್ಯ ನಿರ್ವಹಿಸಿರುವ ಸಾಧಕರನ್ನು ಗುರುತಿಸಿ ಕೊಡುವಂತೆ ಸಮಿತಿ ಕೇಳಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಮಿತಿ, “ಹಲವು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಹಬ್ಬವನ್ನಾಗಿ ಸ್ಫೂರ್ತಿಧಾಮ ಆಚರಿಸಿಕೊಂಡು ಬರುತ್ತಿದೆ. ಇದೇ ಸಂದರ್ಭದಲ್ಲಿ ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ಒಂದು ‘ಬೋಧಿವೃಕ್ಷ’ ಮತ್ತು ಐದು ‘ಬೋಧಿವರ್ಧನ’ ಪ್ರಶಸ್ತಿಗಳನ್ನು ನೀಡುತ್ತಿದೆ. ‘ಬೋಧಿವೃಕ್ಷ’ ಪ್ರಶಸ್ತಿಗೆ ಒಂದು ಲಕ್ಷ ರೂ. ನಗದು ಮತ್ತು ‘ಬೋಧಿವರ್ಧನ’ ಪ್ರಶಸ್ತಿಗೆ ತಲಾ ಇಪ್ಪತೈದು ಸಾವಿರ ರೂ. ನಿಗದಿಯಾಗಿದೆ” ಎಂದು ತಿಳಿಸಿದೆ.
“ಆರ್ಥಿಕ, ಸಾಮಾಜಿಕ, ರಾಜಕೀಯ ಅಥವಾ ಶೈಕ್ಷಣಿಕ ಬಂಡವಾಳವಿಲ್ಲದೆ ತಳಸ್ತರದವರ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಗೌರವ ಕೊಡುವ ನಿಟ್ಟಿನಲ್ಲಿ ನಾವು ಈ ಪ್ರಶಸ್ತಿಗಳನ್ನು ನೀಡುತ್ತಿದ್ದೇವೆ. ಸಮುದಾಯದ ಪರ ಕೆಲಸ ಮಾಡಿರುವವರು ನಿಮಗೆ ತಿಳಿದಿದ್ದರೆ ದಯವಿಟ್ಟು ನಮಗೆ ಪೂರ್ಣ ಮಾಹಿತಿ ನೀಡಿ” ಎಂದು ಮನವಿ ಮಾಡಿಕೊಂಡಿದೆ.
ಮಾರ್ಚ್ 31ರ ಒಳಗೆ ಪ್ರಶಸ್ತಿಗೆ ಅರ್ಹ ಸಾಧಕರ ಮಾಹಿತಿ ನೀಡುವಂತೆ ಸಮಿತಿ ಮನವಿ ಮಾಡಿಕೊಂಡಿದೆ.
ಮಾಹಿತಿ ಸಲ್ಲಿಸುವ ವಿಳಾಸ
ಸ್ಫೂರ್ತಿಧಾಮ
ಅಂಜನಾನಗರ, ಮಾಗಡಿ ರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು- 560 091
ಇಮೇಲ್: [email protected]
ದೂರವಾಣಿ: +91 91088 30438 | +91 91088 30437