- ಕೇವಲ ರಾಜಕಾರಣಕ್ಕಾಗಿ ಎನ್‍ಇಪಿ ರದ್ದು ಮಾಡುವುದು ಅಪರಾಧ
- ‘ಶಿಕ್ಷಣ ಸಂಸ್ಥೆಗಳ ಜೊತೆಗೂಡಿ ಬಿಜೆಪಿ ಆಂದೋಲನ ಮಾಡಲಿದೆ’
ನಮ್ಮ ಮಕ್ಕಳ ಭವಿಷ್ಯವನ್ನು ಕಡೆಗಣಿಸಿ ಕೇವಲ ರಾಜಕಾರಣಕ್ಕಾಗಿ ಎನ್‍ಇಪಿ ರದ್ದು ಮಾಡುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಇವತ್ತಿನ ಕಾಲಘಟ್ಟಕ್ಕೆ ಅನುಗುಣವಾಗಿ ನೂತನ ಶಿಕ್ಷಣ ನೀತಿಯನ್ನು (ಎನ್‍ಇಪಿ) ರೂಪಿಸಲಾಗಿದೆ. ಎನ್‍ಇಪಿ ಕರಡಿಗೆ ಸಿದ್ದರಾಮಯ್ಯನವರ 2013-18ರ ಅವಧಿಯ ಸರಕಾರ ಒಪ್ಪಿಗೆ ಕೊಟ್ಟಿತ್ತು. ಅದರ ನೇತೃತ್ವವನ್ನು ಕಸ್ತೂರಿರಂಗನ್ ಅವರು ವಹಿಸಿದ್ದರು. ಕರ್ನಾಟಕದ ಶಿಕ್ಷಣ ನೀತಿ ರಚಿಸಿದ್ದ ಕಸ್ತೂರಿರಂಗನ್ ಅವರೇ ಇಡೀ ದೇಶದ ಎನ್‍ಇಪಿ ಮಾಡಿದ್ದಾರೆ” ಎಂದು ವಿವರಿಸಿದರು.
“ಇದು ಮಕ್ಕಳ ಭವಿಷ್ಯದ ಬಗ್ಗೆ ಚೆಲ್ಲಾಟ ಎಂದು ಆಕ್ಷೇಪಿಸಿದರು. ಇಡೀ ದೇಶದಲ್ಲಿ ಇರುವ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ಇಲ್ಲದಿದ್ದರೆ ನಮ್ಮ ಮಕ್ಕಳು ಪೈಪೋಟಿ ಮಾಡುವುದು ಹೇಗೆ? ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬಹಳ ದೊಡ್ಡ ಹಿನ್ನಡೆ ಆಗಲಿದೆ. ಸಿದ್ದರಾಮಯ್ಯನವರು ರಾಜಕೀಯ ಕಾಮಾಲೆ ಕಣ್ಣಿನಿಂದ ನೋಡದೆ ಮಕ್ಕಳ ಉಜ್ವಲ ಭವಿಷ್ಯವನ್ನು ನೋಡಬೇಕು. ಈ ವಿಚಾರವನ್ನು ಪುನರ್ ವಿಮರ್ಶೆ ಮಾಡಬೇಕು. ಇಲ್ಲವಾದರೆ ಪಾಲಕರು, ಶಿಕ್ಷಣ ಸಂಸ್ಥೆಗಳ ಜೊತೆಗೂಡಿ ಬಿಜೆಪಿ ದೊಡ್ಡ ಆಂದೋಲನ ಮಾಡುವುದು ಅನಿವಾರ್ಯವಾಗಲಿದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಿಯೇ ತೀರುವೆ: ಡಿಕೆ ಶಿವಕುಮಾರ್
“ಸಿದ್ದರಾಮಯ್ಯನವರು ನಮ್ಮ ಅಧಿಕಾರ ಅವಧಿಯ ಕಾಮಗಾರಿಗಳ ತನಿಖೆ ಮಾಡುವುದಾಗಿ ಹೇಳಿ ಮೂರು ತಿಂಗಳಾಗಿದೆ. ಹಲವು ವರದಿಗಳು ಬಂದಿದ್ದು, ಅದರಲ್ಲಿ ಏನೂ ಇಲ್ಲವೆಂದು ಗೊತ್ತಾಗಿ ಪುನರ್ ತನಿಖೆ ಮಾಡುತ್ತಿದ್ದಾರೆ. ರಾಜಕೀಯಪ್ರೇರಿತ ತನಿಖೆಗಳು ನಡೆಯುತ್ತಿವೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಕೊಡಲಿ. ತನಿಖೆ ಹೆಸರಿನಲ್ಲಿ ತಿಂಗಳುಗಟ್ಟಲೇ ಬಾರ್ಗೇನ್ ಮಾಡಲು ಉಪಯೋಗ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
“ಬಿಜೆಪಿಗೆ ಮತ ಕೊಡುವವರು ರಾಕ್ಷಸರು ಎಂಬ ಸುರ್ಜೇವಾಲಾರ ಹೇಳಿಕೆ ಅತ್ಯಂತ ಖಂಡನೀಯ. ದೇಶದ ನಾಗರಿಕರಿಗೆ ಮಾಡಿದ ಈ ಅವಮಾನವನ್ನು ಪ್ರತಿಯೊಬ್ಬ ನಾಗರಿಕರೂ ಖಂಡಿಸಬೇಕು. ಕಾಂಗ್ರೆಸ್ ಏನು ಸ್ವಚ್ಛವಾಗಿ ತೊಳೆದ ಮುತ್ತೇ? ಅಲ್ಲಿ ಎಲ್ಲರೂ ಹರಿಶ್ಚಂದ್ರರೇ ಇದ್ದಾರಾ? 75 ವರ್ಷದ ಟ್ರ್ಯಾಕ್ ರೆಕಾರ್ಡ್ ಪರಿಶೀಲಿಸಿದರೆ ಅತ್ಯಂತ ಭ್ರಷ್ಟ, ಜನವಿರೋಧಿ ಸರ್ಕಾರ ನಾವು ನೋಡಿದ್ದೇವೆ” ಎಂದರು.