ಚಳಗೇರಿ ಗ್ರಾಮದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಗ್ರಾಮ ಅಭಿವೃದ್ಧಿ ಸಮಿತಿ ಚಳಗೇರಿ ಹಾಗೂ ಲೊಯೋಲಾ ವಿಕಾಸ ಕೇಂದ್ರ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 18ರಂದು ಉಚಿತ ಮೊಣಕಾಲು ಮತ್ತು ಮೂಳೆ ಸಂಬಂಧಿತ ಕಾಯಿಲೆಗಳ ಚಿಕಿತ್ಸಾ ಶಿಬಿರ ನಡೆಯಿತು.
ಚಳಗೇರಿ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ನಡೆದ ಶಿಬಿರಕ್ಕೆ ವೈದ್ಯಾಧಿಕಾರಿ ಡಾ. ಯೋಗೇಶ್ ಮಡಗಾಂವಕರ್, ಡಾ. ಮಲ್ಲಿಕಾರ್ಜುನ ಸೇರಿದಂತೆ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಯೋಗೇಶ್ ಮಡಗಾಂವಕರ್, ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವತಿಯಿಂದ ವಯೋಮಿತ್ರ ಕಾರ್ಯಕ್ರಮದಡಿ ಲೊಯೋಲಾ ವಿಕಾಸ ಕೇಂದ್ರದ ಸಹಕಾರದೊಂದಿಗೆ ಶಿಬಿರ ಆಯೋಜಿಸಲಾಗಿದೆ. ಮುಂಡಗೋಡ ತಾಲೂಕು ಆಸ್ಪತ್ರೆಯ ಪಕ್ಕದಲ್ಲಿಯೇ ತಾಲೂಕು ಆಯುರ್ವೇದ ಆಸ್ಪತ್ರೆ ಇದ್ದು, ಸಾರ್ವಜನಿಕರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಸಂಚಾರ ಪೊಲೀಸ್ ಠಾಣೆಯ ಮೂವರು ಹೆಡ್ ಕಾನ್ಸ್ಟೇಬಲ್ಗಳು ಅಮಾನತು
ರೋಗಗಳು ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುಂಚಿತವಾಗಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದು ಮುಖ್ಯ. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಗಳನ್ನು ಸೇವಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಔಷಧಗಳ ಮಾಹಿತಿಯನ್ನು ಪರಿಶೀಲಿಸದೆ ಬಳಸುವುದರಿಂದ ಅಡ್ಡಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಔಷಧ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೊಯೋಲಾ ವಿಕಾಸ ಕೇಂದ್ರದ ಕಾರ್ಯಕರ್ತ ಫಾದರ್ ಅನಿಲ್ ಡಿಸೋಜಾ, ಕಳೆದ 45 ವರ್ಷಗಳಿಂದ ಮುಂಡಗೋಡ ತಾಲೂಕಿನ 63 ಗ್ರಾಮಗಳಲ್ಲಿ ಸಂಸ್ಥೆ ಸಮಾಜ ಸೇವೆ ಮಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 30 ಗ್ರಾಮಗಳಲ್ಲಿ ಗ್ರಾಮ ಅಭಿವೃದ್ಧಿ ಸಮಿತಿಗಳನ್ನು ರಚಿಸಿ, ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.
ಶಿಕ್ಷಣ, ಆರೋಗ್ಯ, ಪರಿಸರ, ಉದ್ಯೋಗ, ಉತ್ತಮ ಆಡಳಿತ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ಸರ್ಕಾರಿ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ. ಇದರ ಭಾಗವಾಗಿ ಚಳಗೇರಿಯಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಚಳಗೇರಿ ಗ್ರಾಮದ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು 103 ಮಂದಿ ಭಾಗವಹಿಸಿ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸೆ, ಔಷಧ ಹಾಗೂ ಆರೋಗ್ಯ ಸಲಹೆಗಳನ್ನು ಪಡೆದುಕೊಂಡರು. ಆಯುಷ್ ಇಲಾಖೆಯ ಸಿಬ್ಬಂದಿ ಔಷಧ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ರಾಮು ತೋರತ್, ಖಜಾಂಚಿಗಳಾದ ಭೈರು ಜೋರೆ, ಮಹಿಳಾ ಸಂಘದ ಸದಸ್ಯೆ ದೊಂಡುಬಾಯಿ ಪಟ್ಕಾರೆ, ಸಿ. ಐಶ್ವರ್ಯಾ ಬೆತಾನಿಯಾ ಸಂಸ್ಥೆ ಮಂಗಳೂರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.ನಕಲುಬಾಯಿ ಕೊಕರೆ ಕಾರ್ಯಕ್ರಮ ನಿರೂಪಿಸಿದರು. ಭರಮಣ್ಣ ಚಕ್ರಸಾಲಿ ಸ್ವಾಗತಿಸಿದರು. ತೇಜಸ್ವಿನಿ ಬೇಗೂರು ವಂದಿಸಿದರು.




