ಕಬ್ಬಿನ ದರ ನಿಗದಿಯಲ್ಲಿ ಹಾವೇರಿ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಬೇಕು. ಪ್ರತಿ ಟನ್‌ಗೆ ₹3600 ದರ ಕೊಡಿಸಬೇಕು. ಜಿಲ್ಲೆಯ ಸಕ್ಕರೆ ಸಚಿವರೇ ಬೆಲೆ ಕೊಡಿಸಲಾಗದಿದ್ದರೇ ರಾಜೀನಾಮೆ ಕೊಡಲಿ” ಎಂದು ಬಂಕಾಪುರ್ ಟೋಲ್ ಬಂದ್ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ಇಜಾರಿಲಕಮಾಪುರದ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಮನೆ ಎದುರು ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದ್ದ ರೈತರು ಅವಕಾಶ ಸಿಗದಿದ್ದಕ್ಕೆ ಹಾವೇರಿ ಜಿಲ್ಲೆಯ ಬಂಕಾಪುರ್ ಟೋಲ್ ಬಂದ್ ಮಾಡಿ ಧರಣಿ ನಡೆಸಿದರು.
ನ. 18ರಂದು ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸದ ಮುಂದೆ ಅಹೋರಾತ್ರಿ ಧರಣಿ ನಡೆಸಲು ರೈತರು ಕರೆ ನೀಡಿದ್ದರು. ಆದರೆ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಸಚಿವರ ಮನೆಯ ಸುತ್ತ 250 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (ಸೆಕ್ಷನ್ 163) ಜಾರಿ ಮಾಡಿ, ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿತ್ತು.
ಸಚಿವರ ಮನೆಯ ಸುತ್ತ ನಿಷೇಧಾಜ್ಞೆ ಮತ್ತು 400ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ ಇದ್ದ ಕಾರಣ, ರೈತರು ತಮ್ಮ ಹೋರಾಟದ ಸ್ಥಳವನ್ನು ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್‌ಗೇಟ್‌ಗೆ ಸ್ಥಳಾಂತರಿಸಿ ಧರಣಿ ನಡೆಸಿದರು.ಅಲ್ಲಿ ಜಮಾಯಿಸಿದ ನಾಲ್ಕರಿಂದ ಐದು ನೂರು ರೈತರು ರಾಷ್ಟ್ರೀಯ ಹೆದ್ದಾರಿ 48 (NH-48) ಅನ್ನು ಬಂದ್ ಮಾಡಿ, ಬಸ್ ಮತ್ತು ಲಾರಿಗಳ ಮುಂದೆ ಅಡ್ಡಮಲಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನೆಪ್ಪ ಪೂಜೇರಿ ಅವರು ಮಾತನಾಡಿ, “ಬೆಳಗಾವಿ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಕಬ್ಬಿಗೆ ಉತ್ತಮ ದರ ಘೋಷಣೆಯಾಗಿದೆ. ಆದರೆ, ಸಕ್ಕರೆ ಸಚಿವರು ನಮ್ಮದೇ ಜಿಲ್ಲೆಯವರಾಗಿದ್ದರೂ ಇಲ್ಲಿ ದರ ನಿಗದಿ ಮಾಡಲು ಮುಂದಾಗುತ್ತಿಲ್ಲ. ಕಾರ್ಖಾನೆಗಳು ಕಬ್ಬಿನ ರಿಕವರಿ ಲೆಕ್ಕದಲ್ಲಿ ರೈತರಿಗೆ ಮೊಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಕಬ್ಬು ಬೆಳೆಯಲು ಟನ್‌ಗೆ 4,500 ರಿಂದ 5,000 ರೂ. ಖರ್ಚಾಗುತ್ತದೆ. ಕಾರ್ಖಾನೆಗಳ ಮಾಲೀಕರು ಸ್ಥಳಕ್ಕೆ ಬಂದು 3,600 ರೂ. ದರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾಳೆ ಒಂದು ಲಕ್ಷ ರೈತರನ್ನು ಸೇರಿಸಿ ಉಗ್ರ ಹೋರಾಟ ನಡೆಸುತ್ತೇವೆ. ರೈತರಿಗೆ ನ್ಯಾಯ ಕೊಡಿಸಲು ಆಗದಿದ್ದರೆ ಸಕ್ಕರೆ ಸಚಿವರು ರಾಜೀನಾಮೆ ನೀಡಲಿ” ಎಂದು ವೇದಿಕೆಯಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.
ಸದ್ಯ ಬಂಕಾಪುರ ಟೋಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ರೈತರು ಧರಣಿ ಮುಂದುವರೆಸಿದ್ದಾರೆ.



