ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹಂಗಾಮಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ರಾಜ್ಯದ ವನ್ಯಜೀವಿ, ಪ್ರಾದೇಶಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 4,000ಕ್ಕೂ ಅಧಿಕ ಹಂಗಾಮಿ ನೌಕರರು ಕಳೆದ ನವೆಂಬರ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಸರ್ಕಾರದಿಂದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆ ಮತ್ತೆ ಮುಷ್ಕರ ಆರಂಭಿಸಲಾಗಿದೆ ಎಂದು ನೌಕರರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ವನ್ಯಜೀವಿ ಘಟಕಗಳ ದಿನಗೂಲಿ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಎ.ಎಂ. ನಾಗರಾಜು ಮಾತನಾಡಿ, “ಅರಣ್ಯ ಸಚಿವರು ಸ್ಪಂದಿಸಿದರೂ ಹಿರಿಯ ಅಧಿಕಾರಿಗಳಿಂದ ಪೂರಕ ಕ್ರಮಗಳಿಲ್ಲ. ಎರಡು ಬಾರಿ ಪ್ರತಿಭಟನೆ ನಡೆಸಿದರೂ ಬರೀ ಭರವಸೆ ಮಾತ್ರ ಸಿಕ್ಕಿದೆ. ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಈ ಬಾರಿ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ” ಎಂದು ಎಚ್ಚರಿಸಿದರು.
ಸಂಘದ ಉಪಾಧ್ಯಕ್ಷ ಎಸ್.ಎಸ್. ಹರೀಶ್ ಮಾತನಾಡಿ, “ಹಿಂದೆ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಹಂಗಾಮಿ ನೌಕರರಿಗೆ ವೇತನ ಮತ್ತು ಸೌಲಭ್ಯ ನೀಡಲಾಗುತ್ತಿತ್ತು. 2017ರಿಂದ ಟೆಂಡರ್ ಮೂಲಕ ಏಜೆನ್ಸಿಗಳಿಂದ ವೇತನ ನೀಡಲಾಗುತ್ತಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಸಂಬಳ ಸಿಗುವುದಿಲ್ಲ, ಸೌಲಭ್ಯಗಳೂ ದೊರಕುತ್ತಿಲ್ಲ. ಹೀಗಾಗಿ ಈ ವ್ಯವಸ್ಥೆಯನ್ನು ರದ್ದುಪಡಿಸಿ ನೇರವಾಗಿ ಇಲಾಖೆಯಿಂದಲೇ ವೇತನ ನೀಡಬೇಕು” ಎಂದು ಒತ್ತಾಯಿಸಿದರು.

ಇದಲ್ಲದೆ, “ಹಿಂದಿನ ಪ್ರತಿಭಟನೆ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರರು ಭರವಸೆ ನೀಡಿದ್ದರು. ಸಮಿತಿಯನ್ನೂ ರಚಿಸಿದರೂ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗಿಲ್ಲ. ಏಪ್ರಿಲ್ 1ರಿಂದ ಹೊಸ ಗುತ್ತಿಗೆ ಪ್ರಕ್ರಿಯೆ ಜಾರಿಗೆ ತರುವ ಸಿದ್ಧತೆ ನಡೆಯುತ್ತಿದೆ. ಇದರಿಂದ ನಮ್ಮ ಸಮಸ್ಯೆಗಳು ಪರಿಹಾರವಾಗುವುದಿಲ್ಲ” ಎಂದು ಹೇಳಿದರು.
ಬೇಸಿಗೆ ಅವಧಿಯಲ್ಲಿ ಅರಣ್ಯದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಅದರ ಹೊಣೆಗಾರಿಕೆ ಹಿರಿಯ ಅಧಿಕಾರಿಗಳ ಮೇಲಿದೆ ಎಂದು ನೌಕರರು ಎಚ್ಚರಿಸಿದರು.
ಹರೀಶ್ ಅವರು ತಿಳಿಸಿದಂತೆ, ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ದೂರವಾಣಿ ಮೂಲಕ ಸಂಪರ್ಕಿಸಿ ಮುಷ್ಕರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದು, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಆದರೆ, ಇದನ್ನು ಒಪ್ಪದ ನೌಕರರು ಸಚಿವರು ಸ್ಥಳಕ್ಕೆ ಭೇಟಿ ನೀಡಿ ಹಂಗಾಮಿ ನೌಕರರನ್ನು ಖಾಯಂಗೊಳಿಸುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಉರಿಬಿಸಿಲಿಗೆ ತತ್ತರ: 39° ತಾಪಮಾನ ದಾಖಲು, ಜನಜೀವನ ಅಸ್ತವ್ಯಸ್ತ
ಇತ್ತೀಚಿನ ವ್ಯವಸ್ಥೆಯಲ್ಲಿ ಗುತ್ತಿಗೆದಾರರ ಮೂಲಕ ವೇತನ ನೀಡಲಾಗುತ್ತಿರುವುದರಿಂದ ನೌಕರರನ್ನು ಇಲಾಖೆ ಸಿಬ್ಬಂದಿಯಂತೆ ಪರಿಗಣಿಸದೇ ಕೂಲಿ ಕಾರ್ಮಿಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇಎಸ್ಐ, ಪಿಎಫ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನೌಕರರು ಹಾಗೂ ಅವರ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು | ಚೆಲುವಾಂಬ ಆಸ್ಪತ್ರೆಯಲ್ಲಿ ಶಿಶುಗಳ ಸರಣಿ ಸಾವು: ವ್ಯವಸ್ಥೆಯ ವೈಫಲ್ಯವೇ?
ಪ್ರಸ್ತುತ ಸುಮಾರು 2,000ಕ್ಕೂ ಹೆಚ್ಚು ನೌಕರರು ಬಂಡೀಪುರದಲ್ಲಿ ಸೇರಿ ಪ್ರತಿಭಟನೆ ನಡೆಸುತ್ತಿರುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.




