2025ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸಂಘರ್ಷವನ್ನು ಸುಂಕ ಹೆಚ್ಚಿಸುವ ಬೆದರಿಕೆ ಹಾಕಿ ತಾವೇ ನಿಲ್ಲಿಸಿದ್ದು ಎಂಬ ತಮ್ಮ ಹಳೆಯ ಕತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಗುರುವಾರ ಪುನರುಚ್ಚರಿಸಿದ್ದಾರೆ. ಹಲವು ಜಾಗತಿಕ ಯುದ್ಧಗಳನ್ನು ನಿಲ್ಲಿಸುವಲ್ಲಿ ತಮ್ಮ ಪಾತ್ರ ಪ್ರಮುಖವಾದುದ್ದು ಎಂದು ಹೇಳಿಕೊಂಡಿದ್ದಾರೆ.
ತಮ್ಮ ಕಚೇರಿಯಲ್ಲಿ ನಡೆದ ಕಾರ್ಯನಿರ್ವಾಹಕ ಆದೇಶ ಸಹಿ ಮಾಡುವ ಕಾರ್ಯಕ್ರಮದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ನಾನು ಎಂಟು ಯುದ್ಧಗಳನ್ನು ಇತ್ಯರ್ಥಪಡಿಸಿದ್ದೇನೆ. ಬಹುತೇಕ ಪ್ರತಿಯೊಂದು ಸಂದರ್ಭದಲ್ಲೂ, ಆ ದೇಶದವರು ನನಗೆ ಧನ್ಯವಾದ ಹೇಳುವ ಪತ್ರಗಳನ್ನು ಕಳುಹಿಸಿದ್ದಾರೆ ಮತ್ತು ನೊಬೆಲ್ ಸಮಿತಿಗೆ ಪತ್ರಗಳನ್ನು ಕಳುಹಿಸಿದ್ದಾರೆ” ಎಂದು ಹೇಳಿದರು. ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದರು.
ಇದನ್ನು ಓದಿದ್ದೀರಾ? ಭಾರತ ಪಾಕಿಸ್ತಾನ ಕದನ ವಿರಾಮ | ಡೊನಾಲ್ಡ್ ಟ್ರಂಪ್ ನಿಜವಾದ ‘ವಾರ್ ರುಕ್ವಾ ದೀ ಪಾಪಾ’ ಎಂದ ನೆಟ್ಟಿಗರು
“ಭಾರತದೊಂದಿಗೆ ಯುದ್ಧವಾಗುವುದನ್ನು ತಪ್ಪಿಸಿ ನಾನು 30 ರಿಂದ 50 ಮಿಲಿಯನ್ (30ರಿಂದ 50 ಲಕ್ಷ) ಜೀವಗಳನ್ನು ಉಳಿಸಿದ್ದೇನೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದಾರೆ. ಆದರೆ ಯುದ್ಧ ನಡೆದಿದ್ದರೆ ಅದಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು. ಎರಡು ಪರಮಾಣು ರಾಷ್ಟ್ರಗಳು ಇಷ್ಟೊಂದು ಸಾವು ನೋವಿಗೆ ಮುಂದಾಗಿತ್ತು. 11 ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಸುಂಕ ಹೆಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿ ನಾನು ಯುದ್ಧ ನಿಲ್ಲಿಸಿದೆ. ಅವರು ಅಯ್ಯೋ ದಯವಿಟ್ಟು ಹಾಗೆ ಮಾಡಬೇಡಿ ಎಂದು ಉದ್ಘರಿಸಿದರು” ಎಂದು ಮತ್ತೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಕೀರ್ತಿಯನ್ನು ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಮೇ 10ರಂದು ಉಭಯ ದೇಶಗಳು ಪೂರ್ಣ ಮತ್ತು ತಕ್ಷಣದ ಕದನ ವಿರಾಮಒಪ್ಪಂದ ಮಾಡಿಕೊಂಡಿದೆ ಎಂದು ಮೊದಲು ತಾವೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದಾಗಿನಿಂದ ಈವರೆಗೆ 80ಕ್ಕೂ ಅಧಿಕ ಬಾರಿ ಈ ಹೇಳಿಕೆಯನ್ನೇ ಟ್ರಂಪ್ ನೀಡುತ್ತಾ ಬಂದಿದ್ದಾರೆ. ವಿದೇಶಾಂಗ ಸಚಿವಾಲಯ ಈ ಟ್ರಂಪ್ ಹೇಳಿಕೆಯನ್ನು ಅಲ್ಲಗಳೆಯುತ್ತಿದೆ. ಆದರೆ ಈವರೆಗೆ ಒಂದು ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಪ್ರಧಾನಿಯ ಮೌನವನ್ನು ವಿಪಕ್ಷಗಳು ಟೀಕಿಸಿವೆ, ಪ್ರಶ್ನಿಸಿವೆ.




