ಕಲ್ಲು ಹೊಡೆದು ಜೀವನ ಸಾಗಿಸುವ ಬಡ ಕಲ್ಲು ಕುಟುಕರಿಗೆ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡದೆ, ಆದಾಯ ತೆರಿಗೆ ಪಾವತಿಸುವ ಹಾಗೂ ಆರ್ಥಿಕವಾಗಿ ಸಬಲರಾಗಿರುವ ಶ್ರೀಮಂತ ಕುಟುಂಬಗಳಿಗೆ ಗುತ್ತಿಗೆ ನೀಡಲಾಗಿದೆ. ಈ ಅಕ್ರಮಕ್ಕೆ ಸಹಕರಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಹಾಗೂ ಸಿಐಡಿ ತನಿಖೆ ನಡೆಸಬೇಕು ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಅಥವಾ ಗಾಂಧಿವನದ ಬಳಿ ಅನಿರ್ದಿಷ್ಟ ಅವಧಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಬೋವಿ ಸಮಾಜದ ಮುಖಂಡ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ನುಕ್ಕನಹಳ್ಳಿ ಶ್ರೀನಿವಾಸ್ ತಿಳಿಸಿದರು
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳನ್ನು ಉಲ್ಲಂಘಿಸಿ ಅರ್ಹ ಬಡ ಫಲಾನುಭವಿಗಳನ್ನು ಕಡೆಗಣಿಸಲಾಗಿದೆ. ಸುಮಾರು 150 ಅರ್ಜಿಗಳನ್ನು ತಿರಸ್ಕರಿಸಿ, ಕಲ್ಲು ಹೊಡೆಯುವ ವೃತ್ತಿಯನ್ನೇ ಮಾಡದ ನಾಲ್ವರು ಶ್ರೀಮಂತರಿಗೆ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಮಾಲೂರು ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದ ಆನಂದ್ ಕುಮಾರ್ ಆದಾಯ ತೆರಿಗೆ ಪಾವತಿಸುತ್ತಿದ್ದರೂ, ಅವರ ತಾಯಿ ಮತ್ತು ಪತ್ನಿಯ ಹೆಸರಿನಲ್ಲಿ ಕಲ್ಲು ಗಣಿ ಗುತ್ತಿಗೆ ಮಂಜೂರು ಮಾಡಲಾಗಿದೆ. ಅರ್ಜಿ ಸಲ್ಲಿಸುವಾಗ ಒಂದು ವಿಳಾಸ ನೀಡಿ, ನಂತರ ಮತ್ತೊಂದು ವಿಳಾಸದ ಮೂಲಕ ಫಲಾನುಭವಿಗಳಾಗಿರುವ ಆರೋಪವಿದೆ. ಒಂದೇ ಕುಟುಂಬಕ್ಕೆ ಆರು ಎಕರೆ 24 ಗುಂಟೆ ಪ್ರದೇಶದಲ್ಲಿ ಗುತ್ತಿಗೆ ನೀಡಲಾಗಿದೆ. ಇದೇ ರೀತಿ ಎಪಿಎಲ್ ಪಡಿತರ ಚೀಟಿ ಹೊಂದಿರುವ ರಾಜಪ್ಪ ದಾನವಳ್ಳಿ ಅವರಿಗೂ ಗುತ್ತಿಗೆ ಮಂಜೂರು ಮಾಡಲಾಗಿದೆ ಎಂದು ದೂರಿದರು.
ಕಲ್ಲು ಕುಟುಕರಿಗೆ ನೀಡಬೇಕಿದ್ದ ಸೌಲಭ್ಯಗಳನ್ನು ಬಡವರ ಹೆಸರಿನಲ್ಲಿ ಅರ್ಜಿ ಪಡೆದು ಶ್ರೀಮಂತರು ಹಾಗೂ ಪ್ರಭಾವಿಗಳಿಗೆ ನೀಡಲಾಗಿದೆ. ಬಿಪಿಎಲ್ ಕುಟುಂಬಗಳು, ನೈಜ ಕಲ್ಲು ಕುಟುಕರು ಮತ್ತು ದುಡಿಯುವ ವರ್ಗದವರಿಗೆ ಆದ್ಯತೆ ನೀಡಬೇಕಿದ್ದ ಅಧಿಕಾರಿಗಳು ನಿಯಮಗಳನ್ನು ಸಡಿಲಗೊಳಿಸಿ ಸಂಘ-ಸಂಸ್ಥೆಗಳಿಗೂ ಗುತ್ತಿಗೆ ನೀಡಿರುವುದು ಸರಿಯಲ್ಲ. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಆನಂದ್ ಕುಮಾರ್, ರಾಜಪ್ಪ, ಎನ್. ಮಂಜುನಾಥ್ ಹಾಗೂ ಟಿ.ಸಿ. ದೇವರಾಜ್ ಅವರಿಗೆ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದಂತೆ ನೀಡಿರುವ ಅಧಿಸೂಚನೆ ಮತ್ತು ಅನುಮೋದನೆಗಳನ್ನು ರದ್ದುಪಡಿಸಬೇಕು. ಸೆ.24ರಂದು ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ನಿರ್ಣಯವನ್ನು ಮರುಪರಿಶೀಲಿಸಿ ಮೂಲ ದಾಖಲೆಗಳನ್ನು ಪರಿಶೀಲಿಸಬೇಕು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಕೋದಂಡರಾಮಯ್ಯ, ಸೂಪರಿಂಟೆಂಡೆಂಟ್ ಅನಿಲ್ ಹಾಗೂ ಸಹಾಯಕ ಎಂಜಿನಿಯರ್ ಹರೀಶ್ ಅವರ ಪಾತ್ರದ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ರಜೆಯ ಮೇಲೆ ತೆರಳಿರುವುದರಿಂದ ಸಮಸ್ಯೆ ಬಗೆಹರಿದಂತಾಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆ ನಡೆಸಬೇಕು. ಲೋಕಾಯುಕ್ತ ಮತ್ತು ಸಿಐಡಿ ತನಿಖೆಗೆ ಸರ್ಕಾರ ಮುಂದಾಗದಿದ್ದರೆ ಗಾಂಧಿವನ ಅಥವಾ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಪತ್ರಿಕಾಗೋಷ್ಠಿಯಲ್ಲಿ ಸಮತಾ ಸೈನಿಕ ದಳದ ರಾಜ್ಯ ಸಂಚಾಲಕ ಹನುಮಂತಪ್ಪ, ಮುಖಂಡರಾದ ತಾರಕ್ ಮಂಜು, ದೇವರಾಜ್, ಶಫಿ ತಲಗುಂದ, ದಾನವಳ್ಳಿ ಚನ್ನಕೇಶವ, ಸಪ್ನ ಅಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




