ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ವಕೀಲ ಬರೀದ್ ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸ್ಪರ್ಧೆಯ ಕುರಿತು ಪ್ರಮುಖ ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ತಾವು ನಾಮಪತ್ರ ಸಲ್ಲಿಕೆ ಮಾಡಿದ್ದು,ಆ ನಾಮಪತ್ರವು ಸಫಲವಾಗಿ ಅಂಗೀಕಾರಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸಂವಿಧಾನದಲ್ಲಿ ಪದವೀಧರರು ಹಾಗೂ ಶಿಕ್ಷಕರ ಧ್ವನಿಯನ್ನು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಎತ್ತಲು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲು ಈ ಕ್ಷೇತ್ರಗಳನ್ನು ರಚಿಸಲಾಗಿದೆ. ಆದರೆ,ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಇಲ್ಲದೆ ನಡೆಯುವ ಈ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಬುದ್ಧಿವಂತ ಮತದಾರರು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು ಚಿದಾನಂದ ಗೌಡ ಹಾಗೂ ಡಿ.ಟಿ. ಶ್ರೀನಿವಾಸ್ ಮುಂತಾದವರು ಗೆದ್ದ ನಂತರ ಪದವೀಧರರ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಆಲಿಸಲು ಅಥವಾ ಈ ಭಾಗಕ್ಕೆ ಬರಲು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಚುನಾವಣೆಯಲ್ಲಿ ಬಂಡವಾಳಶಾಹಿಗಳು ಹಣ ಹೂಡಿಕೆ ಮಾಡಿ ಗೆದ್ದು,ನಂತರ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ.ತಾವು ಕಳೆದ 10 ವರ್ಷಗಳಿಂದ ವಕೀಲ ವೃತ್ತಿಯಲ್ಲಿ ನಿರತರಾಗಿದ್ದು,ಯಾವುದೇ ಬಂಡವಾಳ ಹೂಡಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಬಂದಿಲ್ಲ,ಬದಲಿಗೆ ಪದವೀಧರರ ನಿಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಏಕೈಕ ಉದ್ದೇಶದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ವಕೀಲ ಬರೀದ್ ಸ್ಪಷ್ಟಪಡಿಸಿದ್ದಾರೆ.
ಈ ಕ್ಷೇತ್ರದಲ್ಲಿ ಸೇವೆ ಮಾಡುವ ಒಳ್ಳೆಯ ಉದ್ದೇಶದಿಂದ ನಿಮ್ಮ ಮುಂದೆ ಬಂದಿದ್ದೇನೆ. ಐದು ಜಿಲ್ಲೆಗಳ ವ್ಯಾಪ್ತಿಯ ಪದವೀಧರ ಮತದಾರರು ನನ್ನ ಉದ್ದೇಶವನ್ನು ಪರಿಗಣಿಸಿ ಮತ ನೀಡಬೇಕು. ನನ್ನನ್ನು ಆಯ್ಕೆ ಮಾಡಿ ಕಳುಹಿಸಿದರೆ ನಾನು ನಿಮ್ಮ ನಿಜವಾದ ಧ್ವನಿಯಾಗಿ ಕೆಲಸ ಮಾಡುತ್ತೇನೆ”ಎಂದು ಬರೀದ್ ಭರವಸೆ ನೀಡಿದರು.
ಪಕ್ಷಗಳ ಹೊಂದಾಣಿಕೆಯ ರಾಜಕಾರಣವನ್ನು ಖಂಡಿಸಿದ ಅವರು,ಕೆಪಿಎಸ್ಸಿ ಹಗರಣಗಳಂತಹ ಪ್ರಮುಖ ವಿಚಾರಗಳಲ್ಲಿ ಪ್ರಮುಖ ಪಕ್ಷಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಿವೆ ಎಂದು ಆರೋಪಿಸಿದರು.
ಮೇಲ್ಮನೆಗೆ ವಿಧಾನಪರಿಷತ್ ಯಾವುದೇ ಸರ್ಕಾರವನ್ನು ರಚಿಸುವ ಅಥವಾ ಕೆಡವಿಸುವ ಶಕ್ತಿ ಇಲ್ಲದಿದ್ದರೂ, ಜನಸಾಮಾನ್ಯರ ಹಾಗೂ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗಲು ಒಬ್ಬ ಸ್ವತಂತ್ರ ಮನೋಭಾವದ ಪ್ರತಿನಿಧಿಯ ಅಗತ್ಯವಿದೆ.
ಪದವೀಧರರ ಕುಂದುಕೊರತೆಗಳನ್ನು ಆಲಿಸಲು ಸೂಕ್ತ ವೇದಿಕೆ ಅಥವಾ ಡಿಜಿಟಲ್ ಸಂಪರ್ಕ ವ್ಯವಸ್ಥೆ ಇಲ್ಲದಿರುವುದನ್ನು ಅವರು ಬೆಟ್ಟು ಮಾಡಿದರು.ಅಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಕೆಲವೇ ತಿಂಗಳ ಸಂಬಳ ನೀಡುವುದು, ಪಿಎಫ್ ಹಾಗೂ ಇಎಸ್ಐ ಸೌಲಭ್ಯಗಳನ್ನು ನೀಡದಿರುವಂತಹ ಗಂಭೀರ ಸಮಸ್ಯೆಗಳನ್ನು ಎತ್ತಿ ತೋರಿಸಿದ ಅವರು,ಹಿಂದಿನ ಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತಲು ವಿಫಲರಾಗಿದ್ದಾರೆ ಎಂದು ತಿಳಿಸಿದರು.
ರಾಜಕೀಯಕ್ಕೆ ಸ್ವಂತ ಲಾಭಕ್ಕಾಗಿ ಬಂದಿಲ್ಲವೆಂದು ಸ್ಪಷ್ಟಪಡಿಸಿದ ಬರೀದ್,ತಾವು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆಸ್ತಿ ವಿವರಗಳನ್ನು ಪಾರದರ್ಶಕವಾಗಿ ನೀಡಿದ್ದು,ಅಧಿಕಾರಕ್ಕೆ ಬಂದ ಮೇಲೆಯೂ ಅಷ್ಟೇ ಪ್ರಾಮಾಣಿಕತೆಯಿಂದ ಇರುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ..?ಬಾಗೇಪಲ್ಲಿ | ದೆಹಲಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಪಿಐಎಂ ಬೆಂಬಲ
ನಾಮಪತ್ರ ವಾಪಸ್ ಪಡೆಯುವ ಸಮಯ ಮುಗಿದಿದ್ದು, ತಮಗೆ ಎಷ್ಟೇ ಒತ್ತಡಗಳಿದ್ದರೂ ಸ್ಪರ್ಧೆಯಲ್ಲಿ ಮುಂದುವರಿಯುವುದಾಗಿ ಹಾಗೂ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಹಲವು ಪದವೀದಾರರು,ವಕೀಲರು ಭಾಗವಹಿಸಿದ್ದರು




