ಅಭಿವೃದ್ದಿ ಹೆಸರಿನಲ್ಲಿ ಬೇನಾಮಿ ಸಂಸ್ಥೆಯನ್ನು ಸ್ಥಾಪಿಸಿ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ ಜಮೀನನ್ನು ಕಸಿದುಕೊಂಡು ಕ್ಷೇತ್ರದ ಅನ್ನದಾತರಿಗೆ ಅನ್ಯಾಯ ಮಾಡಿ ಕೋಟಿ ಕೋಟಿ ರೂ ಲೂಟಿ ಮಾಡಿರುವ ಶಾಸಕ ಸುಬ್ಬಾರೆಡ್ಡಿ ರೈತರಿಗೆ ನ್ಯಾಯ ಓದಗಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಅಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಹಗರಣಗಳ ದಾಖಲೆಗಳನ್ನು ಬಿಡುಗಡೆ ಮಾಡಿ ಅನ್ಯಾಯಗೊಳಗಾಗಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ರೈತರಿಗೆ ನ್ಯಾಯ ಓದಗಿಸಿಕೊಡುವಂತೆ ಒತ್ತಾಯಿಸಿ ಮಾತನಾಡಿ, ಬಾಗೇಪಲ್ಲಿಯ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಈ ಕ್ಷೇತ್ರದ ಜನ ಮೂರು ಬಾರಿ ಅರ್ಶಿವಾಧ ಮಾಡಿರುವುದು ಭೂಹಗರಣ ಮಾಡುವ ಉದ್ಧೇಶಕ್ಕಲ್ಲ, ನಾನು ಸಮಾಜ ಸೇವಕ ಎಂದು ಬಿಂಬಿಸಿಕೊಳ್ಳುತ್ತಿರುವ ಶಾಸಕ ಸುಬ್ಬಾರೆಡ್ಡಿ ಪಾತಪಾಳ್ಯದ ಬಳಿಯ ಘಂಟ್ಲಮಲ್ಲಮ್ಮ ಕಣಿವೆ ಬಳಿ ಡ್ಯಾಂ ನಿರ್ಮಿಸುತ್ತೇನೆಂದು ಹೇಳಿ ತಲಾತಲಾಂತರಗಳಿಂದ ಕೃಷಿಯನ್ನೆ ನಂಭಿ ಜೀವನ ನಡೆಸುತ್ತಿದ್ದ ಆ ಭಾಗದ ರೈತರ ಜಮೀನುಗಳನ್ನು ತಮ್ಮ ಬೇನಾಮಿ ಸಂಸ್ಥೆ ಸಾಯಿ ಎಂಟರ್ ಪ್ರೈಸಸ್ ಮೂಲಕ ಫಲವತ್ತಾದ ಜಮೀನುಗಳನ್ನು 30 ರಿಂದ 35 ಲಕ್ಷಕ್ಕೆ ಖರೀಧಿಸಿ ಸರ್ಕಾರದಿಂದ 1 ಕೋಟಿ 20 ಲಕ್ಷ ರೂ ಪರಿಹಾರ ಹಣ ಪಡೆದುಕೊಂಡು ಆ ಭಾಗದ ಬಡ ರೈತರಿಗೆ ವಂಚನೆ ಮಾಡಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಹಾಕಿರುವ ಬಂಡವಾಳ ಹೊರತುಪಡಿಸಿ ಸರ್ಕಾರದಿಂದ ಎಷ್ಟು ಪರಿಹಾರ ಹಣ ಬರುತ್ತೋ ಅಷ್ಟು ಹಣವನ್ನು ರೈತರಿಗೆ ವಾಪಸ್ಸು ನೀಡಬೇಕು ಇಲ್ಲದಿದ್ದರೆ ನಾನು ತಪ್ಪಿತಸ್ಥ ಎಂದು ಈ ಕ್ಷೇತ್ರದ ಜನರ ಮುಂದೆ ಒಪ್ಪಿಕೊಳ್ಳಬೇಕೆಂದು ಶಾಸಕ ಸುಬ್ಬಾರೆಡ್ಡಿ ಸವಾಲ್ ಹಾಕಿದ್ದಾರೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಗುಂಟೆ ಸರ್ಕಾರಿ ಜಮೀನು ಮಾಡಿಕೊಂಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದ ಶಾಸಕ ಸುಬ್ಬಾರೆಡ್ಡಿ ವಿರುದ್ದ ಹೋರಾಟಗಾರ ಸಂದೇಶ್ ದಾಖಲೆ ಬಿಡುಗಡೆ ಮಾಡುತ್ತಿದ್ದಂತೆ ಗುಡಿಬಂಡೆ ತಾಲೂಕಿನ ಸೋಮಲಾಪುರ ಗ್ರಾಮದ ಬಳಿ ಒತ್ತುವರಿ ಮಾಡಿಕೊಂಡಿದ್ದ ನೂರಾರು ಎಕರೆ ಸರ್ಕಾರಿ ಜಮೀನಿನ ಕಾಂಪೌಂಡನ್ನು ನೆಲಸಮಗೊಳಿಸಿದ ಅಧಿಕಾರಿಗಳು ಒತ್ತುವರಿಯನ್ನು ಹೇಗೆ ತೆರವು ಮಾಡಿದರೂ, ಸರ್ಕಾರಿ ಜಮೀನಿನ ಒತ್ತುವರಿಗೆ ಕುಮ್ಮಕ್ಕು ನೀಡಿದ್ದ ಅಧಿಕಾರಿಗಳ ವಿರುದ್ದ ಇದುವರೆಗೂ ಏಕೆ ಪ್ರಕರಣ ದಾಖಲು ಆಗಿಲ್ಲ ? ಎಂದು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದೇವೆ. ಶಾಸಕ ಸುಬ್ಬಾರೆಡ್ಡಿ ಆಡಳಿತರೂಡ ಕಾಂಗ್ರೆಸ್ ಶಾಸಕರು ಆಗಿರುವುದಕ್ಕೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಸೇರಿ ಎಲ್ಲ ಅಧಿಕಾರಿಗಳು ಶಾಸಕರ ಏಜೆಂಟುಗಳಂತೆ ವರ್ತನೆ ಮಾಡುತ್ತಿದ್ದಾರೆಂದು ಆದಿಕಾರಿಗಳ ವಿರುದ್ದ ಹರಿಹಾಯ್ದರು.
ಆ.19 ರಂದು ಶಾಸಕರ ವಿರುದ್ದ ಹೋರಾಟಕ್ಕೆ ಕರೆ:
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಸುಬ್ಬಾರೆಡ್ಡಿಯ ದೌರ್ಜನ್ಯ ಹಾಗೂ ದಬ್ಬಾಳಿಕೆಯಿಂದ ಜಮೀನು ಕಳೆದುಕೊಂಡಿರುವ ರೈತರ ರಕ್ಷಣೆಗಾಗಿ ಆ.19 ರಂದು ಶಾಸಕ ಸುಬ್ಬಾರೆಡ್ಡಿ ಭೂಹಗರಣಗಳ ವಿರುದ್ದ ಎನ್‌ಡಿಎವತಿಯಿಂದ ಬೃಹತ್ ಹೋರಾಟ ನಡೆಸುತ್ತಿದ್ದು, ಕೂಲಿ ಕಾರ್ಮಿಕರು, ರೈತರು, ಪ್ರಗತಿಪರ ಹೋರಾಟಗಾರು ರೈತಪರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.
ಸಂಸದರ ಅಭಿವೃದ್ದಿಗೆ ಶಾಸಕರ ಅಡ್ಡಿ:
ಚೇಳೂರು ತಾಲೂಕಿನ ಪುಲಗಲ್ ಗ್ರಾಮ ಆಂಧ್ರಪ್ರದೇಶದ ಗಡಿಯಲ್ಲಿದ್ದು ಗಡಿಭಾಗದ ಜನರಿಗೆ ಆರೋಗ್ಯ ಸೇವೆಗಳು ಓದಗಿಸುವ ನಿಟ್ಟಿನಲ್ಲಿ ಸಂಸದ ಡಾ.ಕೆ.ಸುಧಾಕರ್ ಅಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುಧಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ, ವೈಧ್ಯರ ನೇಮಕ ಮಾಡಿ ಆರೋಗ್ಯ ಸೇವೆಗಳಿಗೆ ಸಕಲ ಸಿದ್ದತೆಗಳು ನಡೆಯುತ್ತಿದ್ದರೇ ಕಟ್ಟಡ ಕಾಮಗಾರಿ ನಡೆಯದಂತೆ ಶಾಸಕರು ಹಾಗೂ ಅವರ ಬೆಂಬಲಿಗರು ಗುತ್ತಿಗೇದಾರನಿಗೆ ಅಡ್ಡಿಪಡಿಸಿ ಬಡಜನತೆಗೆ ಆರೋಗ್ಯ ಸೇವೆಗಳು ಸಿಗದಂತೆ ಮಾಡಿದ್ದಾರೆ. ಅಭಿವೃದ್ದಿಯ ಹರಿಕಾರ, ಸಮಾಜಸೇವೆಯೇ ನನ್ನ ಉದ್ದೇಶ ಎಂದು ವೇದಿಕೆ ಬಾಷಣಗಳಲ್ಲಿ ಬೊಬ್ಬೆಹೊಡೆಯುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಈ ಭಾಗದ ಸಂಸದ ಡಾ.ಕೆ.ಸುಧಾಕರ್‌ರವರ ಅಭಿವೃದ್ದಿ ಕೆಲಸಗಳಿಗೆ ಏಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಯುವ ಜನತಾದಳ ಅಧ್ಯಕ್ಷ ಎಸ್.ಆರ್.ಲಕ್ಷ್ಮೀನಾರಾಯಣ ಶಾಸಕರನ್ನು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸೊಸೈಟಿ ಅದ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ, ಮುಖಂಡರಾದ ಆ.ನ.ಮೂರ್ತಿ, ಎಸ್.ಆರ್.ಲಕ್ಷ್ಮೀನಾರಾಯಣ,ಎಂ.ಬಿ.ಎಲ್.ನರಸಿಂಹಯ್ಯ, ಕೆ.ಟಿ.ವೀರಾಂಜನೇಯ, ಸುನೀಲ್‌ರೆಡ್ಡಿ, ಗಣೇಶ್‌ರೆಡ್ಡಿ, ಕಡೇಹಳ್ಳಿ ಬಾಬುರೆಡ್ಡಿ, ಸುದರ್ಶನ್‌ನಾಯ್ಡು, ಅಶ್ವತ್ಥರೆಡ್ಡಿ, ಆನಂದ, ಮಲ್ಲಿಕಾರ್ಜುನ, ಈಶ್ವರಪ್ಪ, ಆರ್.ವಿ.ವೆಂಕಟರಾಮರೆಡ್ಡಿ, ಮದ್ದಿರೆಡ್ಡಿ ಮತ್ತಿತರರು ಇದ್ದರು.
ಇದನ್ನು ಓದಿದ್ದೀರಾ..?ಆರ್‌ಟಿಒ ಕಚೇರಿಗಳಲ್ಲಿ ಬೋಗಸ್ ವಾಹನ ನೋಂದಣಿ ಮತ್ತು ಡಿಎಲ್ ಅಕ್ರಮ: ಸೈಯದ್ ಮಾಲಿಕ್ ಆರೋಪ
ಪೋಟೊ ಶೀರ್ಷಿಕೆ: ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಎನ್‌ಡಿಎ ಮುಖಂಡ ಹರಿನಾಥರೆಡ್ಡಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯ ಭೂಹಗರಣದ ದಾಖಲೆಗಳನ್ನು ಬಿಡುಗಡೆಗೊಳಿಸಿದರು.




