ಬಿಜೆಪಿ ಮುಖಂಡರು ಪದೇ ಪದೇ ಅನಾವಶ್ಯಕ ಹೇಳಿಕೆಗಳನ್ನು ನೀಡುವ ಮೂಲಕ ನನಗೆ ಅವಮಾನ ಮಾಡುತ್ತಿದ್ದಾರೆ. ವೆಂಗಸಂದ್ರ ಗ್ರಾಮ ಠಾಣಾ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ತೀರ್ಪು ಬಂದರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಪ್ರಸ್ತುತ ಜಾಗದ ಸ್ವಾಧೀನದಲ್ಲಿರುವ ರೈತ ಚಂದ್ರಯ್ಯ ಸ್ಪಷ್ಟಪಡಿಸಿದ್ದಾರೆ.
ವೆಂಗಸಂದ್ರ ಗ್ರಾಮದ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದ ತಮ್ಮ ಜಾಗದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಹಿರಿಯರ ಕಾಲದಿಂದಲೂ ನಾವು ಕೃಷಿಕರಾಗಿದ್ದೇವೆ. ಪ್ರತಿನಿತ್ಯ ಚಡ್ಡಿ ಧರಿಸಿ ತೋಟದಲ್ಲಿ ಕೃಷಿ ಚಟುವಟಿಕೆ ಮಾಡುವುದು ನಮ್ಮ ರೂಢಿ. ಆದರೆ, ಬಿಜೆಪಿ ಕಾರ್ಯಕರ್ತರು ಯಾವುದೇ ಸಂಬಂಧವಿಲ್ಲದೆ ಕೇವಲ ರಾಜಕೀಯ ದ್ವೇಷದಿಂದ ನನ್ನನ್ನು ‘ಚಡ್ಡಿ ಚಂದ್ರಯ್ಯ’ ಎಂದು ಕರೆದು ಅವಮಾನಿಸುತ್ತಿದ್ದಾರೆ ಎಂದು ಚಂದ್ರಯ್ಯ ಅಳಲು ತೊಳೆದುಕೊಂಡರು.
ಈ ಜಾಗವು ಹಿರಿಯರ ಕಾಲದಿಂದಲೂ ನಮ್ಮ ಸ್ವಾಧೀನದಲ್ಲಿದೆ ಮತ್ತು ಕಾನೂನುಬದ್ಧವಾಗಿಯೇ ಇದನ್ನು ಪಡೆಯಲಾಗಿದೆ, ಈ ಜಾಗದ ಬಗ್ಗೆ ಈ ಹಿಂದೆ ತಕರಾರು ಬಂದಾಗ, ಅಂದಿನ ಬಿಜೆಪಿ ಶಾಸಕರಾಗಿದ್ದ ವೈ. ಸಂಪಂಗಿ ಅವರೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನಾತ್ಮಕವಾಗಿ ಜಾಗವನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದರು ಎಂದು ಚಂದ್ರಯ್ಯ ಹೇಳುತ್ತಾರೆ.
ಇದನ್ನು ಓದಿದ್ದೀರಾ..? ಮುಳಬಾಗಿಲು| ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಬಿ.ಎಲ್.ಓ ಗೆ ಮಾಹಿತಿ ನೀಡಿ ಸಹಿ ಮಾಡಿದ ಶಾಸಕ ಕೊತ್ತೂರು ಮಂಜುನಾಥ್ – ಈ ದಿನ.ಕಾಮ್
ನಾನು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವುದೇ ಬಿಜೆಪಿ ಕಾರ್ಯಕರ್ತರ ಕಣ್ಣು ಕೆಂಪಗಾಗಲು ಕಾರಣ. ಇದೇ ಕಾರಣಕ್ಕೆ ಪದೇಪದೇ ಜಾಗದ ಬಳಿ ಬಂದು ಹೇಳಿಕೆ ನೀಡುವುದು, ಇಲ್ಲಸಲ್ಲದ ಆರೋಪ ಮಾಡುವುದು ಹಾಗೂ ಹಾಲಿ ಶಾಸಕರ ಹೆಸರನ್ನು ಅನಾವಶ್ಯಕವಾಗಿ ಮಧ್ಯೆ ಎಳೆದು ತರುವ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ಈ ಜಾಗದ ಕುರಿತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ನ್ಯಾಯಾಲಯ ನೀಡುವ ಯಾವುದೇ ತೀರ್ಪಿಗೆ ನಾನು ತಲೆಬಾಗಲು ಸಿದ್ಧನಿದ್ದೇನೆ. ಅದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಅಶಾಂತಿ ನಿರ್ಮಿಸುವುದು ಮತ್ತು ಅನಾವಶ್ಯಕವಾಗಿ ವೈಯಕ್ತಿಕ ನಿಂದನೆ ಹೇಳಿಕೆಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಚಂದ್ರಯ್ಯ ಒತ್ತಾಯಿಸಿದ್ದಾರೆ.




