ಚಿಕ್ಕಮಗಳೂರು: ಹಜರತ್ ಬಾಬಾ ಬುಡನ್ ಅವರ ವಂಶಸ್ಥರಾದ ಸೈಯದ್ ಹುಸೇನ್ ಶಾ ಖಾದ್ರಿ (ನಾಸೀರ್ ಪಾಷಾ) ಅವರ ಪಾರ್ಥಿವ ಶರೀರವನ್ನು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಆವರಣದಲ್ಲಿ ಹಿಂದಿನ ರೂಢಿ–ಸಂಪ್ರದಾಯದಂತೆ ದಫನ್ ಮಾಡಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ನಿರಾಕರಿಸಿರುವ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳ ಕ್ರಮವನ್ನು SDPI ಚಿಕ್ಕಮಗಳೂರು ತೀವ್ರವಾಗಿ ಖಂಡಿಸುತ್ತದೆ.
ಇಸ್ಲಾಂ ಧರ್ಮದಲ್ಲಿ ಮೃತರ ದಫನ್ ಕಾರ್ಯವು ಅತ್ಯಂತ ಮಹತ್ವದ ಧಾರ್ಮಿಕ ಕರ್ತವ್ಯವಾಗಿದೆ. ಮೃತರ ಅಂತಿಮ ವಿಧಿವಿಧಾನಗಳನ್ನು ಕುಟುಂಬದ ಧಾರ್ಮಿಕ ಸಂಪ್ರದಾಯ ಮತ್ತು ನಂಬಿಕೆಗಳಿಗೆ ಅನುಗುಣವಾಗಿ ಗೌರವಯುತವಾಗಿ ನೆರವೇರಿಸುವುದು ಅತ್ಯಂತ ಸೂಕ್ಷ್ಮವಾದ ಧಾರ್ಮಿಕ ಹಾಗೂ ಮಾನವೀಯ ವಿಚಾರವಾಗಿದೆ.
ದರ್ಗಾ ಸಂಸ್ಥೆಯ ಆಡಳಿತ ಮತ್ತು ವಿಧಿವಿಧಾನಗಳಿಗೆ ಸಂಬಂಧಿಸಿದ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂಬ ಕಾರಣವನ್ನು ಮುಂದಿಟ್ಟು ದಫನ್‌ಗೆ ಅನುಮತಿ ನಿರಾಕರಿಸಲಾಗಿದೆ. ಆದರೆ ದರ್ಗಾ ಆವರಣದಲ್ಲಿ ದಫನ್ ಮಾಡಬಾರದು ಎಂದು ನ್ಯಾಯಾಲಯ ನಿರ್ದಿಷ್ಟವಾಗಿ ಆದೇಶಿಸಿರುವುದಾಗಿ ಅಧಿಕಾರಿಗಳ ಹಿಂಬರಹದಲ್ಲಿ ಹೇಳಲಾಗಿಲ್ಲ. ಹೀಗಿರುವಾಗ, ನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ ಎಂಬ ಕಾರಣವನ್ನು ಮಾತ್ರ ಆಧಾರವಾಗಿಸಿಕೊಂಡು ಅನುಮತಿ ನಿರಾಕರಿಸಿರುವುದು ಪ್ರಶ್ನಾರ್ಹವಾಗಿದೆ.
ನಂತರ ನಾಸೀರ್ ಪಾಷಾ ಅವರ ದಫನ್ ಬೇರೆ ಕಬರಸ್ತಾನದಲ್ಲಿ ನೆರವೇರಿದೆ. ಆದರೆ ದಫನ್ ಬೇರೆಡೆ ನಡೆದಿರುವುದರಿಂದ, ವಂಶಸ್ಥರು ಹಿಂದಿನ ರೂಢಿ–ಸಂಪ್ರದಾಯದಂತೆ ಸಲ್ಲಿಸಿದ್ದ ಮನವಿಯನ್ನು ನಿರಾಕರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಅನುಸರಿಸಿದ ಕ್ರಮ ಸರಿಯೇ ಎಂಬ ಪ್ರಶ್ನೆ ಉಳಿಯುತ್ತದೆ. ನ್ಯಾಯಾಲಯದ ವಿಚಾರಣೆಯನ್ನು ಗೌರವಿಸುವುದು ಅಗತ್ಯ. ಅದೇ ಸಂದರ್ಭದಲ್ಲಿ ಹಜರತ್ ಬಾಬಾ ಬುಡನ್ ಅವರ ವಂಶಸ್ಥರ ಧಾರ್ಮಿಕ ಭಾವನೆ, ರೂಢಿ–ಸಂಪ್ರದಾಯ ಹಾಗೂ ಧಾರ್ಮಿಕ ಹಕ್ಕುಗಳನ್ನೂ ಗೌರವಿಸುವುದು ಆಡಳಿತದ ಜವಾಬ್ದಾರಿಯಾಗಿದೆ.
ಇದನ್ನೂ ಓದಿದ್ದೀರಾ?ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್
ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ, ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಅಧಿಕಾರಿಗಳು ಹೆಚ್ಚು ಸಂವೇದನಾಶೀಲವಾಗಿ ಹಾಗೂ ಕಾನೂನುಬದ್ಧವಾಗಿ ನಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಸಂದರ್ಭಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕು ಎಂದು SDPI ಒತ್ತಾಯಿಸುತ್ತದೆ.




