ಅಪ್ರಾಪ್ತಯೊಬ್ಬಳ ಫೋಟೋಗಳನ್ನು ಮುಂದಿಟ್ಟುಕೊಂಡು ಐವರು ಯುವಕರು ಆಕೆಯ ಮೇಲೆ ನಿರಂತರವಾಗಿ ಬ್ಲಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಗಂಭೀರ ಆರೋಪವೊಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಕೇಳಿಬಂದಿದೆ. ಈ ದೌರ್ಜನ್ಯದ ಪರಿಣಾಮವಾಗಿ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಕೆಲ ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಡೀ ಪ್ರಕರಣ ಸದ್ಯ ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಮೂಡಿಗೆರೆ ತಾಲ್ಲೂಕಿನ ಠಾಣೆಯೊಂದರಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ಯುವಕರ ಪೈಕಿ ಕುಶಾ, ನಿತೇಶ್, ಸಚಿನ್ ಮತ್ತು ಚಂದ್ರಶೇಖರ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಪ್ರಕರಣದ ಮತ್ತೊಬ್ಬ ಆರೋಪಿ ಸುರೇಶ್ ಎಂಬಾತ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಈ ಪ್ರಕರಣದ ಪ್ರಮುಖ ಆರೋಪಿ ಈ ಹಿಂದೆಯೂ ಪೋಕ್ಸ ಪ್ರಕರಣವೊಂದರಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಎನ್ನುವ ಕರಾಳ ಸತ್ಯ ಬಯಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮುಂಗಾರುಪೂರ್ವ ಮಳೆ: ಮೆಸ್ಕಾಂಗೆ ಆಸ್ತಿಪಾಸ್ತಿ ಹಾನಿ
ವಿಷಯ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಯಾಮ್ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದಿದ್ದಾರೆ . ಸದ್ಯ ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ಹಾಗೂ ಪಿಎಸ್‌ಐ ಶ್ರೀನಾಥ್ ರೆಡ್ಡಿ ಅವರ ನೇತೃತ್ವದ ಪೊಲೀಸ್ ತಂಡ ಪ್ರಕರಣದ ಆಳವಾದ ತನಿಖೆಯನ್ನು ಕೈಗೆತ್ತಿಕೊಂಡು ಚುರುಕಿನಿಂದ ಮುಂದುವರೆಸಿದ್ದಾರೆ.





