“ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳು ಗ್ರಾಮಗಳಿಂದ ಕಾಲೇಜುಗಳಿಗೆ ದಿನನಿತ್ಯವೂ ಹಣ ಕೊಟ್ಟು ಬರುತ್ತಿದ್ದಾರೆ. ಶಾಲಾ-ಕಾಲೇಜ್ ಪ್ರಾರಂಭದ ಜೊತೆಗೆ ಹಾಸ್ಟೆಲ್ ಕೂಡ ಆರಂಭಿಸಬೇಕು” ಎಂದು ಎಸ್ಎಫ್ಐ ವಿದ್ಯಾರ್ಥಿಗಳು ಆಗ್ರಹಿಸದರು.
ಹಾವೇರಿ ಪಟ್ಟಣದ ಹಳ್ಳಿಕೇರಿ ಗುದ್ಲೆಪ್ಪ ಕಾಲೇಜು ಎದುರು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಕರ್ನಾಟಕ ರಾಜ್ಯ ಸಮಿತಿ ರಾಜ್ಯದಾದ್ಯಂತ ನೀಡಿರುವ ಹೋರಾಟದ ಕರೆಗೆ ಓಗೊಟ್ಟು ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಎಸ್ಎಫ್ಐ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಸಂಚಾಲಕ ಅರುಣ್ ನಾಗವತ್ ಮಾತನಾಡಿ, “ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ವಿದ್ಯಾರ್ಥಿಗಳು ಗ್ರಾಮಗಳಿಂದ ಕಾಲೇಜುಗಳಿಗೆ ದಿನನಿತ್ಯವೂ ಹಣ ಕೊಟ್ಟು ಬರುತ್ತಿದ್ದಾರೆ. ಒಂದಡೆ ಅನೇಕ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲ. ಅನೇಕ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಅರ್ಜಿ ಹಾಕಿ ಆಯ್ಕೆ ಪಟ್ಟಿಗಾಗಿ ಕಾಯುತ್ತಿದ್ದಾರ” ಎಂದರು.
“ವಿದ್ಯಾರ್ಥಿಗಳು ಅರ್ಜಿಗಳನ್ನು ಹಾಕಿದ್ದು, ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆಗೆ ವಿಳಂಬ ಮಾಡದೇ ಕೂಡಲೇ ಬಿಡುಗಡೆ ಮಾಡಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ವಸತಿ ಸೌಲಭ್ಯ ಒದಗಿಸಬೇಕು. ಅರ್ಜಿ ಹಾಕಿದ ದಾಖಲೆಗಳನ್ನು ಪರಿಶೀಲನೆ ನಡೆಸಿ ವಸತಿ ಸೌಲಭ್ಯ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ಹಾಸ್ಟೆಲ್ ಎದುರು ಪ್ರತಿಭಟನೆ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಎಸ್ಎಫ್ಐ ಮುಖಂಡ ರಾಘು ಅಂಗಡಿ ಮಾತನಾಡಿ, “ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಕಾಲೇಜುಗಳಿಗೆ ಹೋಗುವುದಕ್ಕೆ ಕಷ್ಟವಾಗುತ್ತಿದೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಮೆರಿಟ್ ಆಯ್ಕೆ ಕೈಬಿಟ್ಟು, ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೇಲ್ ವ್ಯವಸ್ಥೆ ಕೊಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮದುಶ್ರಿ ವಿ, ಪುಟ್ಟಮ್ಮ ಬಿ ಏನ್, ರಕ್ಷಿತಾ ಎಲ್ ಜಿ, ಹೊನ್ನಮ್ಮ ಎನ್, ನಿರ್ಮಲ ದಾಸರ್, ಕವಿತಾ ನಿರಲಗಿ, ರಕ್ಷಿತಾ ಲಮಾಣಿ, ರೋಜ ಮೊಡ್ಡಿ, ಸಿಂಧು ತಳವಾರ್, ಲೋಕೇಶ್ ಗೌಡ, ಪ್ರದೀಪ್ ಹೆಚ್ಟ್, ಚನ್ನವೀರಯ್ಯ ಪಿ, ಮಹಮದ್ ಟಕೆರ್, ವಿನಯ್ ದೊಡ್ಡಮನಿ, ಹರೀಶ್ ನಾಯಕ್, ಬೀರೇಶ್ ಹಾಲುವಾಗಲ್, ಜಯಂತ್ ದಾವಣಗೆರೆ, ನಿತೀಶ್ ಬಾರ್ಕಿ, ಕುಮಾರ್ ಚೌಡ್ಕಿ ಅನೇಕ ವಿದ್ಯಾರ್ಥಿಗಳು ಇದ್ದರು.





