ಚಿಕ್ಕಮಗಳೂರಿನ ಆಯ್ದ ತಾಲೂಕುಗಳಲ್ಲಿ ಉಪಗ್ರಹ ಆಧಾರಿತ ಬೆಳೆ ಸಮೀಕ್ಷೆ ನಡೆಸಲು ಕೃಷಿ ಇಲಾಖೆ ತೀರ್ಮಾನಿಸಿದೆ. ಸರ್ಕಾರದ ಸಬ್ಸಿಡಿ, ಬೆಳೆ ವಿಮೆ, ವಿಮೆ ಪರಿಹಾರ ಸೇರಿದಂತೆ ಇನ್ನಿತರ ಯೋಜನೆಗಳ ದುರುಪಯೋಗವನ್ನು ತಪ್ಪಿಸಲು ಈ ಸ್ಯಾಟಲೈಟ್ ಸರ್ವೆ ಯೋಜನೆಯನ್ನು ಇಲಾಖೆ ಕೈಗೆತ್ತಿಕೊಂಡಿದೆ.
ಕರ್ನಾಟಕ ರಾಜ್ಯ ದೂರಸಂವೇದಿ ಕೇಂದ್ರ ಮತ್ತು ಇಸ್ರೋದ ನೆರವಿನೊಂದಿಗೆ ಈ ಸಮೀಕ್ಷೆ ಕಾರ್ಯರೂಪಕ್ಕೆ ಬರಲಿದ್ದು, ಈ ವರ್ಷ ಚಿಕ್ಕಮಗಳೂರು ಜಿಲ್ಲೆಯ ಕೆಲವು ತಾಲೂಕುಗಳನ್ನು ಸರ್ವೆ ಮಾಡಲಾಗುತ್ತದೆ.
ಸ್ಯಾಟಲೈಟ್ ತೆಗೆಯುವ ಫೋಟೋಗಳಿಂದ ಬೆಳೆ ಪ್ರಕಾರ, ಮಳೆಯಿಂದ ಉಂಟಾದ ಹಾನಿ, ಕೀಟಬಾಧೆ, ಪ್ರವಾಹ ಸಂದರ್ಭದಲ್ಲಿ ಒದಗಬಹುದಾದ ನಷ್ಟವನ್ನು ಮುಂಚಿತವಾಗಿಯೇ ಪತ್ತೆ ಮಾಡಬಹುದು. ಆದರೆ, ಮಿಶ್ರ ಬೆಳೆಗಳ ಪತ್ತೆ ಕಷ್ಟಸಾಧ್ಯವಾದರಿಂದ ಪ್ರಮುಖ ಬೆಳೆಗಳಿಗೆ ಕ್ರಾಪ್ ಸಿಗ್ನೇಚರ್ ವಿಧಾನ ಅಳವಡಿಸಲಾಗುತ್ತದೆ.
“ನೈಜ ಮಾಹಿತಿ ನೀಡದೆ ಇಲಾಖೆಯ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಬೆಳೆ ಸಮೀಕ್ಷೆಯನ್ನು ಸದ್ಯ ಮೊಬೈಲ್ ಆಪ್‌ಗಳ ಮೂಲಕ ನಡೆಸಲಾಗುತ್ತಿತ್ತು. ತಪ್ಪು ಮಾಹಿತಿಗಳಿಂದ ಕೃಷಿ ಇಲಾಖೆ ಮತ್ತು ರೈತರು ತೊಂದರೆಗೊಳಗಾಗುತ್ತಾರೆ. ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಬೆಳೆ ಹಾನಿಯ ಕುರಿತಾದ ನಿಜ ಚಿತ್ರಣ ಲಭ್ಯವಾಗುತ್ತಿಲ್ಲ. ಆದ್ದರಿಂದ ಉಪಗ್ರಹ, ಡ್ರೋನ್ ಆಧಾರಿತ ಬೆಳೆ ಸಮೀಕ್ಷೆ ನಡೆಸಿ” ಎಂದು ರೈತರು ಈ ಹಿಂದೆ ಒತ್ತಾಯಿಸಿದ್ದರು.




