ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಅಂಚೆ ಮತಪತ್ರಗಳನ್ನು ತಿರುಚಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.
ಅಂಚೆ ಮತಪತ್ರಗಳ ಮರು ಎಣಿಕೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಸ್ಟ್ರ್ಯಾಂಗ್‌ರೂಮ್‌ನಲ್ಲಿ ಸಂರಕ್ಷಿಸಲಾದ ಬಾಕ್ಸ್ ಗಳನ್ನು ಪರಿಶೀಲಿಸಿದ ವೇಳೆ ಬೀಗ ಒಡೆದಿರುವುದು, ಟ್ರಂಕ್‌ಗಳನ್ನು ಮುರಿದಿರುವುದು ಕಂಡು ಬರುತ್ತದೆ. ನನಗೆ ಇದ್ದ ಅಂಚೆ ಮತಗಳಲ್ಲಿ ಮತ್ತೊಂದು ಗೆರೆ ಎಳೆಯುವ ಮೂಲಕ ಮತ ಅಮಾನ್ಯಗೊಳಿಸಲು ಸಂಚು ನಡೆದಿದೆ” ಎಂಬ ಗಂಭೀರ ಆರೋಪ ಮಾಡಿದ್ದಾರೆ.
“ಮತಪತ್ರದಲ್ಲಿ ಮತದಾರರು ಬಳಸಿದ ಪೆನ್ನುಗಳಿಗಿಂತ ಭಿನ್ನವಾದ ಆದರೆ ಒಂದೇ ಇಂಕಿನ ಪೆನ್ನನ್ನು ಬಳಸಿ ಗೆರೆ ಎಳೆಯಲಾಗಿದೆ. ನನಗೆ ಬಂದಿದ್ದ ಮತಗಳಲ್ಲಿ 158 ಅಮಾನ್ಯವಾಗಿವೆ. ಈ ಕೃತ್ಯವನ್ನು ಮೂರು ವರ್ಷಗಳ ಹಿಂದೆಯೇ ಮಾಡಲಾಗಿದೆ ಎಂದು ಆರೋಪಿಸಿದರು. ಮತಗಳನ್ನು ತಿರುಚಿರುವುದರ ವಿರುದ್ಧ ಡಿ.ಎನ್.ಜೀವರಾಜ್ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದೇವೆ” ಎಂದು ಹೇಳಿದರು.
“ಮತ ಎಣಿಕೆಯ ಪ್ರಕ್ರಿಯೆಗೆ ಕಾಂಗ್ರೆಸ್ ಏಜೆಂಟಾಗಿ ಕೆಲಸ ಮಾಡಿದ್ದ ಸುಧೀರ್‌ಕುಮಾರ್ ಮುರೋಳ್ಳಿ ಮಾತನಾಡಿ, 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನಿಂದ ನಾನು, ಬಿಜೆಪಿಯಿಂದ ಬಿ ಎ ಸತೀಶ್, ಜೆಡಿಎಸ್‌ನಿಂದ ಸುಧಾಕರ್ ಶೆಟ್ಟಿ, ಮತ ಏಜೆಂಟರಾಗಿ ಕೆಲಸ ಮಾಡಿದ್ದೆವು. ಆ ವೇಳೆ ಮಾನ್ಯವಾಗಿದ್ದ ಮತಗಳು ಈಗ ಅಮಾನ್ಯವಾಗಿವೆ. ಇದು ಹೇಗೆ ಸಾಧ್ಯ? ದೇಶದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಈ ರೀತಿಯಾಗಿರುವುದು ಇದೇ ಮೊದಲ ಬಾರಿ” ಎಂದು ಅಸಮಧಾನ ವ್ಯಕ್ತಪಡಿಸಿದರು.

“ಇಂತಹ ಗೊಂದಲಕೆ ಯಾರು ಹೊಣೆ? 2023ರ ಮತ ಎಣಿಕೆಯಲ್ಲಿ ಏಜೆಂಟ್ ಆಗಿದ್ದ ಸತೀಶ್ ಅವರು ಸರಿಯಾಗಿ ಗಮನಿಸದೇ ಸಹಿ ಹಾಕಿದ್ದರೇ? ಸತೀಶ್ ಈಗಲೂ ಬಿಜೆಪಿಯಲ್ಲಿದ್ದಾರೆ. ಈ ಮೊದಲು ಬಿಜೆಪಿಯಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈಗ ಡಿಸಿಸಿ ಸದಸ್ಯರಾಗಿದ್ದಾರೆ. ಆ ವೇಳೆ ಚುನಾವಣಾಧಿಕಾರಿಯಾಗಿ ವೇಧಮೂರ್ತಿ ಕೆಲಸ ಮಾಡಿದ್ದರು. ಇವರಿಂದ ಅಚಾತುರ್ಯ ನಡೆದಿರುವುದು ಸಾಬೀತಾದರೆ ಕಠಿಣ ಶಿಕ್ಷೆ ವಿಧಿಸಬೇಕು. ದೇಶದ ಚುನಾವಣ ಭವಿಷ್ಯದಲ್ಲಿ ಮುಂದೆಂದೂ ಇಂತಹ ಘಟನೆ ಸಂಭವಿಸಬಾರದು” ಎಂದು ಅಭಿಪ್ರಾಯಿಸಿದರು.
“ಮರು ಮತ ಎಣಿಕೆಯಲ್ಲಿ ಗಮನಿಸಿದ ಅಂಶಗಳ ಪ್ರಕಾರ ರಾಜೇಗೌಡ ಅವರಿಗೆ ಬಂದಿದ್ದ ಮತಗಳು ಮಾತ್ರ ಅಮಾನ್ಯಗೊಂಡಿವೆ. ಬಿಜೆಪಿಯ ಡಿ.ಎನ್.ಜೀವರಾಜ್, ಜೆಡಿಎಸ್‌ನ ಸುಧಾಕರ್ ಶೆಟ್ಟಿ ಇತರ ಅಭ್ಯರ್ಥಿಗಳಾದ ಕುಸುಮಾ ಹಾಗೂ ಇತರರಿಗೆ ಚಲಾವಣೆಯಾಗಿದ್ದ ಅಂಚೆ ಮತಗಳಲ್ಲಿ ಯಾವ ದ್ವಂದ್ವವೂ ಇಲ್ಲದೇ ಮಾನ್ಯಗೊಂಡಿವೆ.
ರಾಜೇಗೌಡರ ಮತಗಳು ಮಾತ್ರ ಅಮಾನ್ಯವಾಗಿರುವುದು ಅನುಮಾನಾಸ್ಪದವಾಗಿದೆ” ಎಂದು ಶಂಕೆ ವ್ಯಕ್ತಪಡಿಸಿದರು.
“ರಾಜೇಗೌಡರಿಗೆ ಬಂದಿದ್ದ ಅಂಚೆ ಮತಗಳಲ್ಲಿ ಬೇರೆ ಪೆನ್ ಬಳಸಿ ಹೆಚ್ಚಿನ ಗೆರೆ ಎಳೆಯಲಾಗಿದೆ. ಮತ ಪತ್ರಗಳನ್ನು ಅಮಾನ್ಯಗೊಳಿಸುವ ಷಡ್ಯಂತ್ರದಿಂದಲೇ ಈ ರೀತಿ ಮಾಡಿರುವುದು ಕಂಡು ಬರುತ್ತಿದೆ” ಎಂದು ಆರೋಪಿಸಿದರು.




