ಮುಂಬರುವ ಜನವರಿಯಿಂದಲೇ ಬಿಸಿಲಿನ ತೀವ್ರತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ, ಕೋಲಾರ ನಗರದ 35 ವಾರ್ಡ್‌ಗಳಲ್ಲೂ ನೀರಿನ ಅಭಾವ ಉಂಟಾಗದಂತೆ ಅಧಿಕಾರಿಗಳು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಸಮಸ್ಯೆ ಎದುರಾದ ನಂತರ ಕೊಳವೆಬಾವಿ ಕೊರೆಸಲು, ಟೆಂಡರ್ ಕರೆಯಲು ಹಾಗೂ ಅನುದಾನಕ್ಕಾಗಿ ಕಾಯುತ್ತಾ ಕಾಲಹರಣ ಮಾಡಬಾರದು. ಅಗತ್ಯವಿರುವ ಕಡೆ ತಕ್ಷಣವೇ ಕ್ರಮ ಕೈಗೊಂಡು ಜನರಿಗೆ ನೀರು ಪೂರೈಸಬೇಕು. ಯಾವುದೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಕಂಡುಬಂದರೂ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಹಣಕಾಸಿನ ನೆರವು ನೀಡಲು ಸಿದ್ಧವಿದ್ದೇವೆ. ಅನುದಾನದ ಕೊರತೆಯಿದ್ದರೆ ಮುಕ್ತವಾಗಿ ತಿಳಿಸಿ, ಹಣ ಬಿಡುಗಡೆ ಮಾಡಿಸುತ್ತೇವೆ. ರಾಜಕಾಲುವೆಗಳ ಅಭಿವೃದ್ಧಿಗೆ ₹100 ಕೋಟಿ ನೀಡಿರುವಾಗ ಜನರ ಜೀವನಾಡಿಯಾದ ಕುಡಿಯುವ ನೀರಿಗೆ ಅನುದಾನ ನೀಡಲು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನೀರಿನ ತುರ್ತು ಕಾಮಗಾರಿಗಳಿಗೆ ಲಭ್ಯವಿರುವ ಟಾಸ್ಕ್‌ಫೋರ್ಸ್ ಅನುದಾನದಲ್ಲಿ ₹87 ಲಕ್ಷವನ್ನು ಕೂಡಲೇ ನಗರಸಭೆಗೆ ಬಿಡುಗಡೆ ಮಾಡಿದ್ದು ಕಾಮಗಾರಿಗಳನ್ನು ಆರಂಭಿಸಬೇಕು ಎಂದು ತಿಳಿಸಿದರು.
ಯರಗೋಳು ಜಲಾಶಯದ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಪಂಪ್‌ಹೌಸ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ನಗರದ ಕೊಳವೆಬಾವಿಗಳ ಸ್ಥಿತಿಗತಿ ಪರಿಶೀಲಿಸಿ, ದುರಸ್ತಿಯಲ್ಲಿರುವ ಪಂಪ್‌ಗಳು ಹಾಗೂ ಬತ್ತಿಹೋಗಿರುವ ಕೊಳವೆಬಾವಿಗಳ ಪುನಶ್ಚೇತನಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಭಾಗಗಳಲ್ಲಿ ಅಗತ್ಯಬಿದ್ದರೆ ರೈತರಿಂದ ನೀರು ಖರೀದಿಸಿ ಪೂರೈಸಬಹುದು. ಆದರೆ ನಗರ ಪ್ರದೇಶದಲ್ಲಿ ಅಂತಹ ವ್ಯವಸ್ಥೆ ಸಾಧ್ಯವಿಲ್ಲ. ಆದ್ದರಿಂದ ನಗರಸಭೆ ಅಧಿಕಾರಿಗಳು ನೀರಿನ ನಿರ್ವಹಣೆಗೆ ಸಮರ್ಪಕ ಯೋಜನೆ ರೂಪಿಸಬೇಕು ಎಂದರು.
ನಗರದ ಮತ್ತೊಂದು ಪ್ರಮುಖ ಸಮಸ್ಯೆಯಾಗಿರುವ ಒಳಚರಂಡಿ ವ್ಯವಸ್ಥೆ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಸುಮಾರು 30 ವರ್ಷಗಳಿಂದ ಸಮರ್ಪಕವಾಗಿ ಸ್ವಚ್ಛಗೊಳಿಸದ ಪರಿಣಾಮ 269 ಕಿ.ಮೀ. ಉದ್ದದ ಒಳಚರಂಡಿ ಮಾರ್ಗಗಳಲ್ಲಿ ಹೂಳು ತುಂಬಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಮಳೆ ಬಂದಾಗ ಕೊಳಚೆ ನೀರು ಮನೆಗಳಿಗೆ ನುಗ್ಗುವ ಆತಂಕವಿದೆ. ಮುಂದಿನ ಮೂರು ತಿಂಗಳೊಳಗೆ ಹೂಳೆತ್ತುವ ಕಾರ್ಯಕ್ಕೆ ಯೋಜನೆ ರೂಪಿಸಿ, ತಕ್ಷಣವೇ ಸ್ವಚ್ಛತಾ ಕಾರ್ಯ ಆರಂಭಿಸಬೇಕು ಎಂದು ಸೂಚಿಸಿದರು.
ನಗರದ ಮನೆಮನೆಗೆ ಕಸ ಸಂಗ್ರಹಿಸುವ ವಾಹನಗಳು ನಿಗದಿತ ಸಮಯಕ್ಕೆ ತೆರಳುತ್ತಿಲ್ಲ ಎಂಬ ದೂರುಗಳಿದ್ದು, ಎಲ್ಲ ವಾರ್ಡ್‌ಗಳಿಗೂ ವಾಹನಗಳು ಸರಿಯಾಗಿ ಸಂಚರಿಸುವಂತೆ ವೇಳಾಪಟ್ಟಿ ರೂಪಿಸಬೇಕು. ಯುಜಿಡಿ ಸಮಸ್ಯೆ, ರಸ್ತೆ ದುರಸ್ತಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಧಿಕಾರಿಗಳು ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವ ಬದಲು ಸ್ಥಳಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ನಗರದಾದ್ಯಂತ ಸಿಸಿ ಟಿವಿಗಳನ್ನು ಅಳವಡಿಸಿ ಅದನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ ನಿತ್ಯ ಪರಿಶೀಲನೆ ಮಾಡಬೇಕು ಕಳ್ಳತನ ಮತ್ತು ಕಸ ಹಾಕುವರ ಬಗ್ಗೆ ನಿಗಾ ವಹಿಸಲು ಸಾಧ್ಯವಾಗುತ್ತದೆ ಜೊತೆಗೆ ಸುಮಾರು 52 ಕೋಟಿ ವೆಚ್ಚದಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ಕ್ರಮ ವಹಿಸಲಾಗಿದೆ ಅಭಿವೃದ್ಧಿಗೆ ಮೊದಲು ಆಧ್ಯತೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ..?ದೇವನಹಳ್ಳಿ | ಸರ್ಕಾರದ ವತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಹಾಗೂ ವಿಶ್ವವಿದ್ಯಾಲಯ ಸ್ಥಾಪಿಸಲು ಒತ್ತಾಯ
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ವೈ. ಶಿವಕುಮಾರ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಎಚ್.ಸಿ. ಜಗದೀಶ್, ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರ, ಡಿವೈಎಸ್ಪಿ ಕೃಷ್ಣಪ್ಪ ಸೇರಿದಂತೆ ನಗರಾಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




