ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸ್ಮಶಾನದ ದಾರಿಗಳನ್ನು ಗುರುತಿಸಿ ತೆರವುಗೊಳಿಸುವುದರ ಜತೆಗೆ, ಸ್ಮಶಾನಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಮಂಗಳವಾರ ಎ.ಸಿ. ಕಚೇರಿಯ ತಹಶೀಲ್ದಾರ್ ನಾಗವೇಣಿ ಅವರಿಗೆ ಮನವಿ ಸಲ್ಲಿಸಿದರು.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಘನತೆಯಿಂದ ಬದುಕುವ ಹಕ್ಕು ನೀಡಿದೆ. ಆ ಘನತೆ ಸಾವಿನ ನಂತರವೂ ಉಳಿಯಬೇಕು. ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಗ್ರಾಮ ಪಂಚಾಯಿತಿಗಳು ಸ್ಮಶಾನಗಳ ನಿರ್ವಹಣೆಗೆ ಹೊಣೆಗಾರರಾಗಿದ್ದು, ಸರ್ಕಾರವು ಕುಡಿಯುವ ನೀರು, ವಿಶ್ರಾಂತಿ ಶೆಡ್ ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಒತ್ತಾಯಿಸಿದರು.
ಜಿಲ್ಲೆಯ ಹಲವು ಕಡೆ ಸ್ಮಶಾನಗಳಿದ್ದರೂ ಅಲ್ಲಿಗೆ ತೆರಳಲು ದಾರಿಗಳಿಲ್ಲ. ಕೆಲವೆಡೆ ಸ್ಮಶಾನದ ಜಾಗ ಮತ್ತು ದಾರಿಗಳನ್ನು ಒತ್ತುವರಿ ಮಾಡಲಾಗಿದೆ. ಈ ಕುರಿತು ದೂರು ನೀಡಿದರೂ ವರ್ಷಗಳಾದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಂದಾಯ ಹಾಗೂ ಸರ್ವೆ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದಿರುವುದೇಕೆ ಎಂದು ಪ್ರಶ್ನಿಸಿದರು.
ಹುಟ್ಟಿದ ಮನುಷ್ಯ ಕೊನೆಗೆ ಮಣ್ಣಾಗಲೇಬೇಕು ಎಂಬುದು ಪ್ರಕೃತಿಯ ನಿಯಮ. ಆದರೆ, ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಜಾಗವಿದ್ದರೂ ಅಲ್ಲಿಗೆ ಹೋಗಲು ದಾರಿಯಿಲ್ಲದಿದ್ದರೆ, ಕೊನೆಯ ವಿಧಿವಿಧಾನಗಳನ್ನು ಗೌರವಯುತವಾಗಿ ನೆರವೇರಿಸಲು ಸಾಧ್ಯವಾಗದಿದ್ದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಸಾವಿನ ನಂತರವೂ ನೆಮ್ಮದಿಗಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಸ್ಮಶಾನವೆಂದರೆ ಬದುಕಿನ ಎಲ್ಲ ಸಂಬಂಧಗಳನ್ನು ತೊರೆದು ಮಣ್ಣಿಗೆ ಮರಳುವ ಅಂತಿಮ ವಿಶ್ರಾಂತಿ ತಾಣ. ಅಂತಹ ಸ್ಥಳದಲ್ಲಿ ಮೂಲಸೌಕರ್ಯಗಳಿಲ್ಲದೆ, ಅಲ್ಲಿಗೆ ತೆರಳಲು ದಾರಿಯೂ ಇಲ್ಲದಿರುವುದು ದುರದೃಷ್ಟಕರ ಎಂದರು.
ಸ್ಮಶಾನದ ಜಾಗ ಹಾಗೂ ದಾರಿಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಒತ್ತುವರಿ ತೆರವುಗೊಳಿಸಬೇಕು. ಮೃತಪಟ್ಟವರ ಅಂತ್ಯಸಂಸ್ಕಾರ ಗೌರವಯುತವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ನಾಗವೇಣಿ ಅವರು, ಜಿಲ್ಲೆಯ ಸ್ಮಶಾನ ಭೂಮಿ ಮತ್ತು ದಾರಿಗಳ ಒತ್ತುವರಿ ಕುರಿತು ಬಂದಿರುವ ದೂರುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಎಲ್ಲ ತಾಲ್ಲೂಕು ದಂಡಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಭರವಸೆ ನೀಡಿದರು.
ಇದನ್ನು ಓದಿದ್ದೀರಾ..?ಶ್ರೀನಿವಾಸಪುರ| ತನ್ವೀರ್ ಸೇಠ್‌ಗೆ ಸಂಪುಟ ದರ್ಜೆ ಜವಾಬ್ದಾರಿ ನೀಡಬೇಕು : ಶಬ್ಬೀರ್ ಅಹ್ಮದ್
ಈ ಸಂದರ್ಭದಲ್ಲಿ ವಕ್ಕಲೇರಿ ಹನುಮಯ್ಯ, ರೈತ ಸಂಘದ ರಾಜ್ಯ ಮುಖಂಡ ಕಮದಟ್ಟಿ ಚಲಪತಿ, ಮಂಜುನಾಥ್, ಗಿರೀಶ್, ಪುತ್ತೇರಿ ರಾಜು, ಚಂದ್ರಪ್ಪ ಮತ್ತಿತರರು ಇದ್ದರು.




