‘ಲವ್ ಜಿಹಾದ್’ ಕುರಿತು ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಚರ್ಚೆ, ಪ್ರಚಾರ ಮತ್ತು ವಾಸ್ತವಾಂಶಗಳನ್ನು ದಾಖಲೆಗಳ ಮೂಲಕ ಪರಿಶೀಲಿಸುವ ಉದ್ದೇಶದಿಂದ ‘ಲವ್ ಜಿಹಾದ್ ಮತ್ತು ಮತಾಂತರ (ಪ್ರಚಾರ ಮತ್ತು ವಾಸ್ತವ)’ ಕೃತಿ ರಚಿಸಲಾಗಿದೆ ಎಂದು ಲೇಖಕ ಎಂ.ಜಿ. ಹೆಗಡೆ ಹೇಳಿದರು.
ನಗರದ ಪುರಭವನದಲ್ಲಿ ಮಂಗಳವಾರ ಸಂಜೆ ಕ್ರಿಯಾ ಮಾಧ್ಯಮ, ಬೆಂಗಳೂರು ಪ್ರಕಟಿಸಿರುವ ಲವ್ ಜಿಹಾದ್ ಮತ್ತು ಮತಾಂತರ ಕೃತಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲವ್ ಜಿಹಾದ್’ ಕುರಿತು ಕಳೆದ ಹತ್ತು ವರ್ಷಗಳಲ್ಲಿ ನಡೆದಿರುವ ಘಟನೆಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿ, ರಾಜ್ಯದ 14 ಜಿಲ್ಲೆಗಳ ಸುಮಾರು 350 ಪೊಲೀಸ್ ಠಾಣೆಗಳು ಹಾಗೂ ಗೃಹ ಇಲಾಖೆಯಿಂದ ಆರ್‌ಟಿಐ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಹಲವು ಪೊಲೀಸ್ ಠಾಣೆಗಳಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ ‘ಲವ್ ಜಿಹಾದ್’ ಹೆಸರಿನಲ್ಲಿ ಯಾವುದೇ ದೂರು ದಾಖಲಾಗಿರುವ ಬಗ್ಗೆ ಸ್ಪಷ್ಟ ದಾಖಲೆಗಳು ದೊರಕಿಲ್ಲ ಎಂದು ಅವರು ತಿಳಿಸಿದರು.
ಭರತ್ ಶೆಟ್ಟಿ ಹಾಗೂ ವೇದವ್ಯಾಸ ಕಾಮತ್ ಅವರು ಈ ಕುರಿತು ದೂರು ನೀಡಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಆರ್‌ಟಿಐ ಮೂಲಕ ಮಾಹಿತಿ ಕೇಳಿದಾಗ, ಕೆಲವೆಡೆ ‘ರಹಸ್ಯ’ ಎಂಬ ಉತ್ತರ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಮಿಷನರ್ ಕಚೇರಿ, ಉಡುಪಿ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮಾಹಿತಿ ಪಡೆಯಲು ಹಲವು ಹಂತಗಳಲ್ಲಿ ಪ್ರಯತ್ನಿಸಬೇಕಾಯಿತು ಎಂದು ಹೇಳಿದರು.

‘ಲವ್ ಜಿಹಾದ್’ ಎಂಬ ಪದಕ್ಕೆ ಪೊಲೀಸ್ ದಾಖಲೆಗಳಲ್ಲಿ ನಿರ್ದಿಷ್ಟವಾದ ಆಧಾರವಿಲ್ಲ. ಪ್ರಚೋದನಕಾರಿ ಭಾಷಣ ಮಾಡುವವರು ಈ ಕುರಿತು ಮಾತನಾಡುತ್ತಿದ್ದರೂ, ಅದನ್ನು ಆಧರಿಸಿ ಒಂದೇ ಒಂದು ದೂರು ನೀಡದಿರುವುದು ಗಮನಾರ್ಹ. ಕೇರಳದಲ್ಲಿ ನಡೆದ ಪ್ರೀತಿಯ ವಿವಾಹವೊಂದಕ್ಕೆ ಸಂಬಂಧಿಸಿದಂತೆ ‘ಲವ್ ಜಿಹಾದ್’ ಎಂಬ ಪದ ಬಳಕೆಗೆ ಬಂದಿದ್ದು, ನಂತರ ಅದು ವ್ಯಾಪಕವಾಗಿ ಪ್ರಚಾರಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮದ ಹೆಸರಿನಲ್ಲಿ ಅಥವಾ ಮತೀಯವಾದದ ಹೆಸರಿನಲ್ಲಿ ಯಾರೂ ಕ್ರಿಮಿನಲ್ ಆಗಬಾರದು. ಭಾರತ ಮುಸ್ಲಿಂ ರಾಷ್ಟ್ರವಾಗಲಿದೆ ಎಂಬ ರೀತಿಯ ಸುಳ್ಳು ಪ್ರಚಾರಗಳನ್ನು ಮಾಡಲಾಗುತ್ತಿದೆ. ಇಂತಹ ವಿಚಾರಗಳ ಕುರಿತು ಮುಕ್ತವಾಗಿ ಚರ್ಚಿಸಲು ತಾವು ಸಿದ್ಧರಿದ್ದು, ಪುಸ್ತಕದ ವಿಚಾರವಾಗಿ ಯಾರೇ ಆಗಲಿ ಸಾರ್ವಜನಿಕ ಚರ್ಚೆಗೆ ಬರಬಹುದು. ಯಾವುದೇ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ಧ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಂ.ಜಿ. ಹೆಗಡೆ ಶ್ರಮಪಟ್ಟು ಕೃತಿಯನ್ನು ರಚಿಸಿದ್ದು, ಇದು ವಿಶಿಷ್ಟವಾದ ಪುಸ್ತಕವಾಗಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಈ ಕೃತಿ ಅಡಿಗಲ್ಲಾಗಲಿ ಎಂದು ಹಾರೈಸಿದರು.
ಲೌಕಿಕ ಜಗತ್ತಿನಲ್ಲಿ ಸತ್ಯವನ್ನು ನೋಡುವ ದೃಷ್ಟಿಕೋನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ನಾವು ಯಾವ ಸ್ಥಳದಲ್ಲಿ ನಿಂತು, ಯಾವ ದೃಷ್ಟಿಕೋನದಿಂದ ವಿಷಯವನ್ನು ನೋಡುತ್ತೇವೆ ಎಂಬುದರ ಆಧಾರದಲ್ಲಿ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ಭಾರತದ ಪರಂಪರೆಯಲ್ಲಿ ಪರ-ವಿರೋಧದ ಚರ್ಚೆಗಳಿಗೆ ಅವಕಾಶವಿದೆ. ಯಾವುದೇ ವಿಚಾರವನ್ನು ಸಮಸ್ಯೆಯಾಗಿ ಸೃಷ್ಟಿಸುವ ಬದಲು ಅದರ ವಾಸ್ತವಾಂಶವನ್ನು ಅರಿಯುವ ಪ್ರಯತ್ನ ನಡೆಯಬೇಕು ಎಂದು ಅವರು ಹೇಳಿದರು.

ವಕೀಲರು ಹಾಗೂ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಎಂ.ಜಿ. ಹೆಗಡೆ ಅವರು ವಿವಿಧ ದಾಖಲೆಗಳನ್ನು ಸಂಗ್ರಹಿಸಿ ‘ಲವ್ ಜಿಹಾದ್ ಮತ್ತು ಮತಾಂತರ’ ಕೃತಿಯನ್ನು ರಚಿಸಿದ್ದಾರೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ ಸಂದರ್ಭದಲ್ಲಿ ‘ಲವ್ ಜಿಹಾದ್’ ಹೆಸರಿನಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂಬ ಒಂದೇ ರೀತಿಯ ಉತ್ತರಗಳು ದೊರೆತಿವೆ ಎಂದರು.
‘ಲವ್ ಜಿಹಾದ್’ ಎಂಬ ಶಬ್ದವನ್ನು ಸೃಷ್ಟಿಸಿರುವುದಕ್ಕೆ ಯಾವುದೇ ಆಧಾರವಿಲ್ಲ ಎಂಬುದನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ. ಸಮಾಜದಲ್ಲಿ ಎಲ್ಲರನ್ನೂ ಒಳಗೊಂಡ ಲಿಬರಲ್ ಮೈಂಡ್‌ಸೆಟ್ ಬೆಳೆಸಿಕೊಳ್ಳುವ ಅಗತ್ಯವಿದೆ. ಎಲ್ಲ ಸಮುದಾಯಗಳಿಗೂ, ಎಲ್ಲ ತಂದೆ-ತಾಯಿಗಳಿಗೂ ಅನುಕೂಲವಾಗುವಂತಹ ಪ್ರಗತಿಪರ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಅವರು ಹೇಳಿದರು.
ಮತಾಂತರ ಮತ್ತು ‘ಲವ್ ಜಿಹಾದ್’ ಎಂಬ ಶಬ್ದಗಳ ಕುರಿತಾಗಿ ಸಾಂಸ್ಕೃತಿಕ ಹಾಗೂ ವೈಚಾರಿಕ ಪ್ರತಿರೋಧಗಳು ಅಗತ್ಯ. ಆ ನಿಟ್ಟಿನಲ್ಲಿ ಈ ಕೃತಿ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ ಹಾಗೂ ವಕೀಲ ಯಶವಂತ ಮರೋಳಿ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್, ಡಾ. ರಾಜಾರಾಮ್ ಉಪ್ಪಿನಂಗಡಿ, ಪುಸ್ತಕ ಬಿಡುಗಡೆ ಸಮಿತಿ ಉಪಾಧ್ಯಕ್ಷೆ ಮಂಜುಳಾ ನಾಯಕ್, ಗಣೇಶ್ ಪೂಜಾರಿ, ಚಿತ್ತರಂಜನ್ ಶೆಟ್ಟಿ ಬೊಂಡಾಳ, ಪಿ.ಎ. ರಹೀಮ್ ಬಂಟ್ವಾಳ ಹಾಗೂ ಪ್ರದೀಪ್ ಬೇಲಾಡಿ ಉಪಸ್ಥಿತರಿದ್ದರು.
‘ಶರಸೇತು ಬಂಧ’ ಯಕ್ಷಗಾನ ತಾಳಮದ್ದಳೆ
ಕಾರ್ಯಕ್ರಮದ ಅಂಗವಾಗಿ ‘ಶರಸೇತು ಬಂಧ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್ಟ, ಮದ್ದಳೆ ವಾದಕರಾಗಿ ರವಿರಾಜ್ ಜೈನ್ ಕಾರ್ಕಳ ಹಾಗೂ ಚೆಂಡೆ ವಾದಕರಾಗಿ ಎಂ. ದೇವಾನಂದ ಭಟ್ಟ ಬೆಳುವಾಯಿ ಭಾಗವಹಿಸಿದರು. ಅರ್ಜುನನಾಗಿ ದಿನೇಶ ಶೆಟ್ಟಿ ಕಾವಳಕಟ್ಟೆ, ಹನುಮಂತನಾಗಿ ಜಬ್ಬಾರ್ ಸಮೋ ಸಂಪಾಜೆ ಹಾಗೂ ವೃದ್ಧ ವಿಪ್ರರಾಗಿ ಎಂ.ಜಿ. ಹೆಗಡೆ ಪಾತ್ರ ನಿರ್ವಹಿಸಿದರು.
ಎಂ.ಜಿ. ಹೆಗಡೆ ಸ್ನೇಹಿತರ ಬಳಗ ಕಾರ್ಯಕ್ರಮ ಆಯೋಜಿಸಿತ್ತು. ರವಿಪೂಜಾರಿ ಸೂರಿಂಜೆ ಸ್ವಾಗತಿಸಿದರು. ರಮೇಶ್ ಕೋಟೆ ಕಾರ್ಯಕ್ರಮ ನಿರೂಪಿಸಿದರು.





