ದೇಶದ ಪ್ರಜಾಪ್ರಭುತ್ವದ ಪ್ರಮುಖ ಸ್ವಾಯತ್ತ ಅಂಗವೆಂದು ನಾವು ಈವರೆಗೆ ನಂಬಿಕೊಂಡು ಬಂದಿರುವ ಚುನಾವಣಾ ಆಯೋಗವು (ಇಸಿಐ) ಸದ್ಯ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದೆ. ಹಲವು ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಇಸಿ ರಾಜೀನಾಮೆಗೆ ಇಷ್ಟೊಂದು ದೊಡ್ಡ ಮಟ್ಟದ ರಾಜಕೀಯ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಹೆದರಿರುವ ಗ್ಯಾನೇಶ್ ಕುಮಾರ್ ಅವರು ಛತ್ತೀಸ್‌ಗಢ ಪ್ರವಾಸವನ್ನು ದಿಢೀರ್ ರದ್ದು ಮಾಡಿಕೊಂಡಿದ್ದಾರೆ.
ಆಕ್ಟೋಬರ್ 7 ಮತ್ತು 8ರಂದು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮತ್ತು ಆಯೋಗದ ಉನ್ನತ ಅಧಿಕಾರಿಗಳ ತಂಡ ಛತ್ತೀಸ್‌ಗಢಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಬೇಕಿತ್ತು. ದಂತೇವಾಡದ ದಂತೇಶ್ವರಿ ಮಾತಾ ದೇವಾಲಯ, ಕವರ್ಧಾದ ಭೋರಮ್‌ದೇವ್ ಮತ್ತು ಬಸ್ತಾರ್‌ನ ಚಿತ್ರಕೂಟ ಜಲಪಾತ ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಇದೀಗ “ಅನಿವಾರ್ಯ ತಾಂತ್ರಿಕ ಮತ್ತು ಕಾರ್ಯಾಚರಣೆಯ ಕಾರಣಗಳಿಂದಾಗಿ ಮುಖ್ಯ ಚುನಾವಣಾ ಆಯುಕ್ತರ ಛತ್ತೀಸ್‌ಗಢ ಭೇಟಿಯನ್ನು ಮುಂದೂಡಲಾಗಿದೆ” ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ.
ಇದನ್ನೂ ಓದಿ: ಸೆ.25ಕ್ಕೆ ಚುನಾವಣಾ ಕಚೇರಿಗಳಿಗೆ ಕಾಂಗ್ರೆಸ್ ಮುತ್ತಿಗೆ: ಸಿಇಸಿ ಗ್ಯಾನೇಶ್ ಕುಮಾರ್ ಬಂಧನ, ವಜಾಕ್ಕೆ ಆಗ್ರಹ
ವಿಪಕ್ಷಗಳ ಒಕ್ಕೂಟ ನಡೆಸುತ್ತಿರುವ ನಿರಂತರ ಪ್ರತಿಭಟನೆಗಳು, ರಾಯ್‌ಪುರದಲ್ಲಿ ಎದುರಾಗಬಹುದಾಗಿದ್ದ ಕಪ್ಪು ಬಟ್ಟೆ ಪ್ರದರ್ಶನ ಪ್ರತಿಭಟನೆಯ ಭೀತಿಯಿಂದಾಗಿ ಈ ಪ್ರವಾಸವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ದೆಹಲಿಯಲ್ಲಿ ನಡೆದ ತೀವ್ರ ಸ್ವರೂಪದ ಧರಣಿಯ ಬಿಸಿಯೇ ಈ ಭೇಟಿ ರದ್ದಾಗಲು ಪ್ರಮುಖ ಕಾರಣವೆಂಬುದು ಸ್ಪಷ್ಟವಾಗುತ್ತಿದೆ.
ದೇಶದ ಸಂಸದೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಇಸಿ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಪಕ್ಷಗಳು ಹಟಕ್ಕೆ ಬಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಸಂಸತ್ತಿನಲ್ಲೂ ದೂರು ನೀಡಿ, ಬೀದಿಗಿಳಿದು ಹೋರಾಟ ನಡೆಸಿವೆ. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಕ್ರಮ ನಡೆದಿದೆ. ಲಕ್ಷಾಂತರ ಅರ್ಹ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಆರೋಪಿಸಿವೆ. ಮುಖ್ಯ ಚುನಾವಣಾ ಆಯುಕ್ತರು ಈ ಅಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಲಾಗಿದೆ.
ದೆಹಲಿಯ ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಲು ಯತ್ನಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಂಸದರು ಮತ್ತು 250ಕ್ಕೂ ಹೆಚ್ಚು ಕಾರ್ಯಕರ್ತರನ್ನು ದೆಹಲಿ ಪೊಲೀಸರು ರಾತ್ರೋರಾತ್ರಿ ವಶಕ್ಕೆ ಪಡೆದಿದ್ದರು. ರಾಜಕೀಯ ನಾಯಕರು ಸಿಇಸಿ ವಿರುದ್ಧ 8 ಗಂಟೆಗಳ ಕಾಲ ಧರಣಿ ನಡೆಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಘಟನೆ ಎಂದರೆ ತಪ್ಪಾಗಲಾರದು.
ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಮಾಜಿ ಮುಖ್ಯ ಚುನಾವಣಾ ಆಯುಕ್ತರುಗಳಾದ ಎಸ್.ವೈ. ಖುರೇಷಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಮುಂತಾದವರು ಇತ್ತೀಚಿನ ನಿರ್ಧಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, “ಆಯೋಗವು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ” ಎಂದು ಎಚ್ಚರಿಸಿದ್ದಾರೆ.




